Udayavani | Jul 16, 2012
ಅವನ ಅಪ್ಪ ಸ್ತ್ರೀಮೋಹಿ. ಅವಳನ್ನು ದಿಟ್ಟಿಸಿ ನೋಡುತ್ತಾ ಕೂತಿರುತ್ತಾನೆ. ಎಲ್ಲರೂ ಮುಜುಗರಗೊಳ್ಳುವಂತೆ ಕಾಮುಕತೆಯಿಂದ ನೋಡುತ್ತಾನೆ. ಕೊನೆಗೆ ಅನಿವಾರ್ಯವಾಗಿ ಅವರಿಬ್ಬರೂ ಮದುವೆ ಆಗಬೇಕಾಗುತ್ತದೆ. ಅವಳಿಗೋ ಮನೆಯಲ್ಲಿರುವುದಕ್ಕೆ ಕಿಂಚಿತ್ತೂ ಇಷ್ಟವಿಲ್ಲ. ಯಾವಾಗ ಅವನ ಸಂಗದಿಂದ ಪಾರಾಗುತ್ತೇನೋ ಎಂದು ಕಾಯುತ್ತಿರುತ್ತಾಳೆ. ಅವನು ತನ್ನನ್ನು ಮನೆಯಿಂದ ಹೊರಹಾಕಲಿ ಎನ್ನುವ ಕಾರಣಕ್ಕೆ ಸಾಕಷ್ಟು ತೊಂದರೆ ಮಾಡುತ್ತಾಳೆ. ಆದರೆ ಅವಳ ಸೌಂದರ್ಯಕ್ಕೆ ಮರುಳಾದ ಅವನು ಅವಳು ಮಾಡಿದ ತಪ್ಪುಗಳನ್ನೆಲ್ಲ ಸಹಿಸಿಕೊಳ್ಳುತ್ತಾನೆ.
ಆ ಸಂಬಂಧದಲ್ಲಿ ಹುಟ್ಟಿದ ಕೊನೆಯ ಮಗ ಅವನು. ಮೊದಲು ಹುಟ್ಟಿದ ಮಕ್ಕಳೆಲ್ಲ ಅವಳ ನಿರ್ಲಕ್ಷ್ಯದಿಂದ ಪ್ರಾಣ ಕಳಕೊಂಡಿದ್ದಾರೆ. ಇವನು ಹುಟ್ಟುತ್ತಿದ್ದಂತೆ ಮಾತಿಗೆ ಮಾತು ಬೆಳೆದು ಅವಳು ಮನೆ ಬಿಟ್ಟು ಹೋಗುತ್ತಾಳೆ. ಹೋಗುವಾಗ ಮಗನನ್ನೂ ಕರೆದುಕೊಂಡು ಹೋಗುತ್ತಾಳೆ. ಪ್ರಾಥಮಿಕ ವಿದ್ಯಾಭ್ಯಾಸ ಕಲಿಸುತ್ತಾಳೆ. ಕೊನೆಗೊಂದು ದಿನ ಮಗನನ್ನು ತಂದು ಗಂಡನ ಕೈಗೆ ಕೊಟ್ಟು ಮತ್ತೆ ತನ್ನ ಸುಖವನ್ನು ಹುಡುಕಿಕೊಂಡು ಹೊರಟು ಬಿಡುತ್ತಾಳೆ.
ಮನೆಯಲ್ಲಿ ತಂದೆ ಮಗ ಇಬ್ಬರೇ. ಮಗನೂ ವಯಸ್ಸಿಗೆ ಬಂದಿದ್ದಾನೆ. ಏಕಾಂಗಿ ಅಪ್ಪನಿಗೆ ಮತ್ತದೇ ಹೆಣ್ಣಿನ ಹುಚ್ಚು. ಅವನ ಕಣ್ಣಿಗೆ ಅದೇ ಹೊತ್ತಿಗೆ ಮತ್ತೂಬ್ಬಳು ಸುಂದರಿ ಬೀಳುತ್ತಾಳೆ. ಅವಳ ಬೆನ್ನು ಬೀಳುತ್ತಾನೆ. ಅವಳಿಗೆ ಈ ವಯೋವೃದ್ಧನ ಬಗ್ಗೆ ಅಂಥ ಆಸಕ್ತಿಯೇನಿಲ್ಲ. ಆದರೆ ಇವನ ಅಪಾರ ಆಸ್ತಿ, ಅಧಿಕಾರ ಅನುಭವಿಸುವ ಆಸೆ. ಮದುವೆಗೆ ಒಪ್ಪಬೇಕಾದರೆ ಆಸ್ತಿಯೆಲ್ಲ ನನ್ನದಾಗಬೇಕು ಅನ್ನುತ್ತಾಳೆ. ನಿನಗೊಬ್ಬ ಮಗನಿದ್ದಾನೆ. ಕಾನೂನು ಪ್ರಕಾರ ಆಸ್ತಿ ಅವನಿಗೆ ಸೇರುತ್ತದೆ. ಹಾಗಿರುವಾಗ ನಾನೇಕೆ ಮದುವೆ ಆಗಲಿ ಅನ್ನುತ್ತಾಳೆ. ಆಕೆಯ ವಿರಹದಲ್ಲಿ ಕೊರಗುತ್ತಾ ಕೂತ ಅಪ್ಪನಿಗೆ ಮಗ ಸಾಂತ್ವನ ಹೇಳುತ್ತಾನೆ.
"ಈಗೇನು, ನಿನಗೆ ಅವಳನ್ನು ಮದುವೆ ಆಗಬೇಕು. ಅಷ್ಟೇ ತಾನೇ. ಆಸ್ತಿಯನ್ನು ಅವಳ ಹೆಸರಿಗೇ ಬರೆದುಕೊಡು' ಅನ್ನುತ್ತಾನೆ. "ಪಿತ್ರಾರ್ಜಿತ ಆಸ್ತಿ, ನಿಮ್ಮ ಮಗ ಬೇಡ ಅಂದರೂ ನಿನ್ನ ಮೊಮ್ಮಕ್ಕಳು ಬೇಡ ಅನ್ನಲಿಕ್ಕಿಲ್ಲ ' ಅಂತ ಅವಳು ಮತ್ತೆ ತಕರಾರು ತೆಗೆಯುತ್ತಾಳೆ. ಇವನು ಅದಕ್ಕೂ ಪರಿಹಾರ ಸೂಚಿಸುತ್ತಾನೆ. "ನಾನು ಮದುವೆ ಆಗುವುದಿಲ್ಲ, ಆಸ್ತಿಯೆಲ್ಲ ನಿನ್ನದೇ' ಅಂತ ಹೇಳಿ ಅವಳನ್ನು ಒಪ್ಪಿಸಿ, ಆ ಹೆಣ್ಣನ್ನು ಚಿಕ್ಕಮ್ಮನಾಗಿ ಸ್ವೀಕರಿಸುತ್ತಾನೆ.
ಅಪ್ಪನ ಎರಡನೆಯ ಸಂಸಾರವಾದರೂ ಸುಖವಾಗಿತ್ತಾ? ಅದೂ ಇಲ್ಲ. ಮತ್ತೂಂದಷ್ಟು ಹೆಣ್ಣಿನ ಬೆನ್ನು ಹತ್ತುವ ಅವನಿಗೆ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಮೊದಲ ಮಗ ತನ್ನ ಷೋಕಿಗೆ ಬಲಿಯಾಗುತ್ತಾನೆ. ಎರಡನೆಯ ಮಗನಿಗೋ ಅಪ್ಪನದೇ ಚಾಳಿ. ಹೆಣ್ಣಿನ ಹಿಂದೆ ಬಿದ್ದ ಅವನು ತನ್ನ ಆರೋಗ್ಯ, ಯೌವನ, ವೀರ್ಯವಂತಿಕೆ ಎಲ್ಲವನ್ನೂ ಕಳಕೊಂಡು ಕೂರುತ್ತಾನೆ. ಚಿಕ್ಕಮ್ಮ ಮಗನ ಸ್ಥಿತಿ ಹೀಗಾಯಿತಲ್ಲ ಎಂದು ಕೊರಗುತ್ತಾಳೆ. ನನ್ನ ಮಗನಿಗೆ, ನಿನ್ನ ತಮ್ಮನಿಗೊಂದು ಮದುವೆ ಮಾಡು ಅಂತ ಅವನಲ್ಲಿ ಕೇಳಿಕೊಳ್ಳುತ್ತಾಳೆ. ಆ ಹೊತ್ತಿಗಾಗಲೇ ಅವಳು ಗಂಡನನ್ನು ಕಳಕೊಂಡು ಹುಮ್ಮಸ್ಸು ಕಳೆದುಕೊಂಡು ಕೂತಿದ್ದಾಳೆ. ರಾಜ್ಯದ ಆಸೆ ಹೊರಟು ಹೋಗಿದೆ. ಮೊಮ್ಮಕ್ಕಳನ್ನು ನೋಡುವ ಆಸೆ ಮೊಳೆತಿದೆ.
ಇವನು ತನ್ನ ರೋಗಿಷ್ಟ, ವ್ಯಾಮೋಹಿ ತಮ್ಮನಿಗೆ ಹುಡುಗಿ ಹುಡುಕಲು ಹೊರಡುತ್ತಾನೆ. ಯಾರೂ ಹೆಣ್ಣು ಕೊಡಲು ಒಪ್ಪದೇ ಇದ್ದಾಗ, ಒತ್ತಾಯದಿಂದ ಇಬ್ಬರು ಹೆಣ್ಣುಗಳನ್ನು ತಂದು ಅವನಿಗೆ ಮದುವೆ ಮಾಡುತ್ತಾನೆ. ಒಬ್ಬನೇ ಸಿಗದಂಥ ಹೊತ್ತಲ್ಲಿ ಇಬ್ಬರು ಹೆಂಡಿರು. ಅವರು ಬಂದ ಮೇಲೂ ತಮ್ಮನ ಹುಚ್ಚು ಬಿಡುವುದಿಲ್ಲ. ಅವನು ಕಾಯಿಲೆಯಿಂದ ಸತ್ತೇ ಹೋಗುತ್ತಾನೆ. ತಾನೇ ಕೈಯಾರೆ ತಂದು ಕಟ್ಟಿದ ಇಬ್ಬರು ಸುಂದರಿಯರು ವಿಧವೆಯರಾಗಿ ಕೂತಿದ್ದಾರೆ. ಅವರ ಕೈಲಿ ಇಡೀ ಆಸ್ತಿ. ತನ್ನದಲ್ಲದ ಆಸ್ತಿಯನ್ನು ಅವನು ನೋಡಿಕೊಳ್ಳಬೇಕು. ಮದುವೆಯಿಲ್ಲ, ಆಸ್ತಿಯಿಲ್ಲ. ಆದರೆ ಎಲ್ಲ ಜವಾಬ್ದಾರಿಯೂ ಅವನದೇ.
ನಿಮಗೆ ಈಗಾಗಲೇ ಈತ ಯಾರೆಂದು ಹೊಳೆದಿರಬಹುದು. ಹೀಗೆ ತನ್ನನ್ನು ಕಳೆದುಕೊಳ್ಳುತ್ತಾ ಹೋದವನ ಹೆಸರು ದೇವವ್ರತ. ಅವನ ಅಪ್ಪನ ಹೆಸರು ಶಂತನು. ತಾಯಿಯ ಹೆಸರು ಗಂಗೆ. ಚಿಕ್ಕಮ್ಮನ ಹೆಸರು ಸತ್ಯವತಿ. ಅವಳ ಮಕ್ಕಳಲ್ಲಿ ಒಬ್ಬ ವಿಚಿತ್ರವೀರ್ಯ. ಅವನ ಇಬ್ಬರು ಹೆಂಡಿರು ಅಂಬಿಕೆ ಮತ್ತು ಅಂಬಾಲಿಕೆ.
ಹೀಗೊಂದು ಸೂತ್ರವೇ ಇಲ್ಲದ ಸಂಸಾರವನ್ನು ಸಂಭಾಳಿಸುತ್ತಾ ಸಾಗುವ ಭೀಷ° ತನ್ನ ವಿಚಿತ್ರವಾದ ಸಂಯಮದಿಂದ ಆಪ್ತನಾಗುತ್ತಾ ಹೋಗುತ್ತಾನೆ. ತನ್ನ ತಮ್ಮ ಮಕ್ಕಳಿಲ್ಲದೇ ಸತ್ತಾಗ ಅವನು ಇಡೀ ರಾಜ್ಯದ ಅಧಿಕಾರವನ್ನು ಕೈಗೆ ಎತ್ತಿಕೊಳ್ಳಬಹುದಾಗಿತ್ತು. ಅಷ್ಟು ಹೊತ್ತಿಗಾಗಲೇ ಅವನಿಗೆ ಅದರ ನಿರರ್ಥಕತೆ ಗೊತ್ತಾಗಿತ್ತೆಂದು ಕಾಣುತ್ತದೆ. ರಾಜ್ಯವನ್ನು ಆಳುವುದು ಎಂದರೆ ತನ್ನ ಮೋಹವನ್ನು, ಸಣ್ಣ ಸಣ್ಣ ಆಶೆಗಳನ್ನು ತƒಪ್ತಿಪಡಿಸಿಕೊಳ್ಳುವುದು. ಕಂಡ ಕಂಡ ಹೆಣ್ಣುಗಳನ್ನು ಮನೆಗೆ ತಂದು ಭೋಗಿಸುವುದು. ಕೊನೆಗೆ ಗುಹ್ಯರೋಗದಿಂದ ಸಾಯುವುದು ಎಂಬುದು ಅವನಿಗೆ ಅರ್ಥವಾದಂತೆ ವರ್ತಿಸುತ್ತಾನೆ ದೇವವ್ರತ. ಅವನ ಆ ಕಟು ನಿರ್ಧಾರದಿಂದಲೇ ಅವನನ್ನು ಭೀಷ್ಮ ಎಂದು ಕರೆಯುತ್ತಾರೆ.
ಸತ್ಯವತಿಯ ಅಧಿಕಾರದ ದಾಹ ಎಲ್ಲಿಯ ತನಕ ಮುಂದುವರಿಯುತ್ತದೆ ಅನ್ನುವುದನ್ನೂ ಈ ಕತೆ ಹೇಳುತ್ತದೆ. ತನ್ನ ವಿಧವೆ ಸೊಸೆಯರಿಗೆ ಗಂಡನಾಗಿ ಅವರ ಮಕ್ಕಳಿಗೆ ತಂದೆಯಾಗು ಎಂದು ಅವಳು ಭೀಷ್ಮನನ್ನು ಕೇಳಿಕೊಳ್ಳುತ್ತಾಳೆ. ಭೀಷ್ಮ ನಿರಾಕರಿಸಿದಾಗ ಅವಳು ತನ್ನ ಮೊದಲ ಮಗನನ್ನು ಕರೆಸುತ್ತಾಳೆ. ಅವನ ಹೆಸರು ವೇದವ್ಯಾಸ.
-2-
ಪುಟ್ಟ ಮಕ್ಕಳಿಗೆ ಮಹಾಭಾರತದ ಕತೆ ಹೇಳುವುದು ಎಷ್ಟು ಕಷ್ಟ ಮತ್ತು ಆ ಕಾಲದಿಂದ ಇಲ್ಲಿಯ ತನಕ ನಾವೆಷ್ಟು ಬದಲಾಗಿದ್ದೇವೆ. ಶಂತನುವಿನ ಎರಡನೆಯ ಹೆಂಡತಿಯಾಗಿ ಬರುವ ಸತ್ಯವತಿಯ ಮೂಲ ಹೆಸರು ಕಾಳಿ. ಆಕೆ ಬೆಸ್ತನ ಮಗಳು. ಮೀನುಗಾರರ ಹುಡುಗಿ. ಹೀಗಾಗಿ ಅವಳಿಗೆ ಮತ್ಸ್ಯಗಂಧಿ ಎಂದು ಹೆಸರು. ಅವಳು ದೋಣಿ ನಡೆಸುತ್ತಿದ್ದ ದಿನಗಳಲ್ಲಿ ಪರಾಶರ ಎಂಬ ಋಷಿ ಅವಳ ದೋಣಿಯೇರುತ್ತಾನೆ. ಅವಳನ್ನು ಮೋಹಿಸುತ್ತಾನೆ. ಅವರಿಬ್ಬರ ಸಮಾಗಮ ಆಗುತ್ತದೆ. ಆಕೆಯನ್ನು ಅವನು ಯೋಜನಗಂಧಿಯಾಗು ಎಂದು ಹರಸಿ ಹೋಗುತ್ತಾನೆ.
ಆ ಸಂಬಂಧಕ್ಕೆ ಹುಟ್ಟಿದವನು ವೇದವ್ಯಾಸ. ಯೋಜನಗಂಧಿ ನಂತರ ಶಂತನುವನ್ನು ಮದುವೆಯಾಗಿ ಸತ್ಯವತಿಯಾಗಿ ಹಸ್ತಿನಾಪುರದ ರಾಣಿಯೂ ಆಗುತ್ತಾಳೆ. ಅವಳ ವಿಧವೆ ಸೊಸೆಯಂದಿರಿಗೆ ಮಕ್ಕಳು ಬೇಕು ಅಂದಾಗ ಅವಳಿಗೆ ನೆನಪಾಗುವುದು ತನ್ನ ಪೂರ್ವಾಶ್ರಮದ ಮಗ ವೇದವ್ಯಾಸ. ಅವನನ್ನು ಕರೆಸಿ, ತನ್ನ ಸೊಸೆಯಂದಿರಿಗೆ ಪುತ್ರದಾನ ಮಾಡು ಎಂದು ಕೇಳಿಕೊಳ್ಳುತ್ತಾಳೆ. ವೇದವ್ಯಾಸ ಅದಕ್ಕೆ ಒಪ್ಪದೇ ಇದ್ದಾಗ ಒತ್ತಾಯಿಸಿ ಒಪ್ಪಿಸುತ್ತಾಳೆ.
ಇಲ್ಲಿಯ ವಿಚಿತ್ರ ಗಮನಿಸಿ. ಅಣ್ಣನಿಂದ ತನ್ನ ತಮ್ಮಂದಿರ ಹೆಂಡತಿಯರು ಮಕ್ಕಳನ್ನು ಪಡೆಯುತ್ತಾರೆ. ವೇದವ್ಯಾಸ ಕಾಡು ಜೀವಿ. ಅವನು ನೋಡುವುದಕ್ಕೆ ಭಯಂಕರವಾಗಿ ಕಾಣುತ್ತಿದ್ದುದರಿಂದ ಸತ್ಯವತಿ, ತನ್ನ ಸೊಸೆಯಂದಿರಿಗೆ ನಿಮ್ಮಲ್ಲಿಗೆ ಬರುವವನು ಭೀಷ್ಮ ಎಂದು ಸುಳ್ಳು ಹೇಳುತ್ತಾಳೆ. ಹೀಗೆ ತಾನೇ ಹೆಣೆದ ವಂಚನೆ, ಆತ್ಮವಂಚನೆ ಮತ್ತು ಸುಳ್ಳುಗಳ ಬಲೆಯಲ್ಲಿ ತಾನೇ ಸಿಲುಕಿಕೊಳ್ಳುತ್ತಾಳೆ. ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಧƒತರಾಷ್ಟ್ರ, ಪಾಂಡು ಜನಿಸುತ್ತಾರೆ. ಅವರ ಮಕ್ಕಳು ಪಾಂಡವ ಕೌರವರಾಗಿ ಕಲಹ ಮುಂದುವರಿಯುತ್ತದೆ.
ಇದನ್ನು ಸರಳವಾಗಿ ಹೇಳುವುದು ಹೇಗೆ? ಭೀಷ್ಮನಿಗೂ ಕೌರವನಿಗೂ ಸಂಬಂಧವೇನು ಎಂದು ಥಟ್ಟನೆ ಕೇಳಿದರೆ ತಾತ- ಮೊಮ್ಮಗ ಎಂದು ಹೇಳಿಬಿಡಬಹುದು. ಅದು ಹೇಗೆ ಎಂದು ಹುಡುಕುತ್ತಾ ಹೊರಟರೆ ಈ ಕತೆಗಳನ್ನೆಲ್ಲ ಹೇಳಬೇಕಾಗುತ್ತದೆ. ವಿವರಿಸುತ್ತಾ ಹೋದ ಹಾಗೆ ಎಲ್ಲವೂ ಗೋಜಲಾಗುತ್ತಾ ಹೋಗುತ್ತದೆ. ಸತ್ಯವತಿಯ ಮೊದಲ ಮಗ ವೇದವ್ಯಾಸ ಪಾಂಡವ ಕೌರವರ ನಿಜವಾದ ಅಜ್ಜ. ಭೀಷ್ಮ ಸಂಬಂಧಗಳನ್ನೆಲ್ಲ ಕಳಚಿಕೊಂಡವನು. ಅವನ ಮೊಮ್ಮಕ್ಕಳು ಅನ್ನುವುದು ಕೂಡ ಒಂದು ಸುಳ್ಳು. ವೇದವ್ಯಾಸ ಮಹಾಭಾರತದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡು ತನ್ನ ಮಕ್ಕಳನ್ನು ಯಾವತ್ತೂ ಪೊರೆಯುವುದಕ್ಕೇ ಬರುವುದಿಲ್ಲ. ಆ ಕೆಲಸವನ್ನು ಮಾಡುವವನು ಭೀಷ್ಮ.
ತಾನು ಎಲ್ಲದರಿಂದ ದೂರ ಉಳಿಯುತ್ತೇನೆ ಎಂದು ನಿರ್ಧಾರ ಮಾಡಿದ ಭೀಷ್ಮ, ಹಾಗೆ ನಿರ್ಧಾರ ಮಾಡದೆಯೂ ದೂರ ಉಳಿದ ವೇದವ್ಯಾಸ. ಇವರಿಬ್ಬರ ಪೈಕಿ ಯಾತನೆ ಅನುಭವಿಸಿದ್ದು, ಯುದ್ಧಕ್ಕೆ ಇಳಿದದ್ದು ಭೀಷ್ಮನೇ. ನಿಷ್ಕಾಮ ಕರ್ಮಕ್ಕೆ ಭೀಷ್ಮನಿಗಿಂತ ಒಳ್ಳೆಯ ಉದಾಹರಣೆ ಬೇಕಿಲ್ಲ. ತನಗೇನೂ ಬೇಡ, ರಾಜ್ಯ ಬೇಡ, ಮದುವೆ ಬೇಡ ಎಂದ ಭೀಷ್ಮ ರಾಜ್ಯಕ್ಕಾಗಿ, ಮೊಮ್ಮಕ್ಕಳಿಗಾಗಿ ಕಾದಾಡಿದ. ಕೊನೆಯ ತನಕವೂ ಅವಮಾನ ಎದುರಿಸಿದ. ಕೌರವರ ದ್ರೋಹಕ್ಕೆ ಸಾಕ್ಷಿಯಾದ. ಪಾಂಡವರಿಗಾಗಿ ಪರಿತಪಿಸಿದ.
ಇಚ್ಛಾಮರಣಿ ಅನ್ನುವುದು ವರವೋ ಶಾಪವೋ ಗೊತ್ತಿಲ್ಲದೇ ಅನ್ನದ ಋಣದ ಮಾತಾಡಿದ. ಅತ್ಯಂತ ಶ್ರೀಮಂತನಾಗಿದ್ದವನು ಕ್ರಮೇಣ, ತನ್ನ ಚಿಕ್ಕಮ್ಮನ ಅಧಿಕಾರದ ದಾಹದ ಸುಳಿಗೆ ಸಿಕ್ಕಿಬಿದ್ದ.
ಭೀಷ್ಮನ ಪಾತ್ರದ ಔನ್ನತ್ಯ ಮತ್ತು ಸತ್ಯವತಿಯ ತೀವ್ರತೆ ಎರಡೂ ನಮ್ಮನ್ನು ಬೆಚ್ಚಿಬೀಳಿಸುತ್ತದೆ.
ಸತ್ಯವತಿಯ ಜೀವನದ ದಾರಿಯನ್ನು ಗಮನಿಸುತ್ತಾ ಬನ್ನಿ. ಬೆಸ್ತನ ಮಗಳಾಗಿದ್ದವಳು ಕ್ರಮೇಣ ಅರಸೊತ್ತಿಗೆಯನ್ನೇರಿ, ಇಡೀ ಹಸ್ತಿನಾಪುರವನ್ನು ನಿಭಾಯಿಸುವಂತಾಗಿದ್ದು ಒಂದು ಕತೆ. ಆ ಅಧಿಕಾರವೇ ಅವಳನ್ನು ನಿರಂತರವಾಗಿ ದುಃಖಕ್ಕೆ ಕೆಡಹುತ್ತಾ ಹೋದದ್ದು ಮತ್ತೂಂದು ವ್ಯಥೆ. ಅಂಬಿಕೆ ಮತ್ತು ಅಂಬಾಲಿಕೆಯ ಜೊತೆ ಕಾಡಿಗೆ ಹೊರಡುವ ಹೊತ್ತಿಗೆ ಅವಳಿಗೆ ಇಬ್ಬರು ಮೂವರು ಮೊಮ್ಮಕ್ಕಳು. ಪಾಂಡು, ಧƒತರಾಷ್ಟ್ರ ಮತ್ತು ವಿದುರ. ಮೊದಲ ಇಬ್ಬರು ರಾಜಪುತ್ರರು. ಮತ್ತೂಬ್ಬ ದಾಸೀ ಪುತ್ರ. ಅಪ್ಪ ಒಬ್ಬನೇ ಆಗಿದ್ದರೂ ಇಬ್ಬರು ಕ್ಷತ್ರಿಯರು. ಒಬ್ಬ ಶೂದ್ರ. ವರ್ಣಾಶ್ರಮವನ್ನು ನೋಡಿದರೆ ಈ ಕ್ಷತ್ರಿಯರ ಅಪ್ಪ ವೇದವ್ಯಾಸ ಬ್ರಾಹ್ಮಣ. ಮಕ್ಕಳು ಮಾತ್ರ ಕ್ಷತ್ರಿಯರು.
ಔರಸ ಪುತ್ರ ಮತ್ತು ಕಾನೀನ ಪುತ್ರ ಎಂಬ ವ್ಯತ್ಯಾಸವೂ ಮಹಾಭಾರತದಲ್ಲಿ ಬರುತ್ತದೆ. ಭೀಷ್ಮ ಔರಸಪುತ್ರನಾದರೆ, ವೇದವ್ಯಾಸ ಕಾನೀನ ಪುತ್ರ. ತಾಯಿಯಿಂದಲೇ ಬೆಳೆಯುತ್ತಾ ಹೋದ ವಂಶ ಅದು. ಅಲ್ಲಿ ತಾಯಿ ಮಾತ್ರ ಸದ್ಗುಣ. ತಂದೆ ನಿರ್ಗುಣ. ನಿರಾಕಾರ.
ಈ ಕತೆಯನ್ನೆಲ್ಲ ಸರಳವಾಗಿ ಮಕ್ಕಳಿಗೆ ಹೇಗೆ ಹೇಳಬೇಕು ಎನ್ನುವುದನ್ನು ಯೋಚಿಸುತ್ತಾ ಕೂತೆ. ಈ ಕಾಲದ ಮಕ್ಕಳು ಕತೆಯನ್ನು ಅಷ್ಟು ಸರಳವಾಗಿ ಸ್ವೀಕರಿಸುವುದಿಲ್ಲ. ಭೀಷ್ಮನ ಇಚ್ಛಾಮರಣ ಅವನನ್ನು ಸಾಯುವುದಕ್ಕೆ ಬಿಡಲಿಲ್ಲವೋ ಅಥವಾ ಅವನ ಮೋಹವೋ? ಸಂಸಾರದಿಂದ ಅಧಿಕಾರದಿಂದ ದೂರವೇ ಉಳಿಯ ಬಯಸಿ ದೇವವ್ರತನೆಂಬ ಯುವಕ ಭೀಷ್ಮನೆಂಬ ವೃದ್ಧನಾದ ಪವಾಡದಲ್ಲೇ ಇಡೀ ಗೀತೆಯ ಸಾರವೂ ಅಡಗಿದೆಯಾ ಎಂದು ಅಚ್ಚರಿಯಾಗುತ್ತದೆ.