Monday, May 20, 2013
Last Updated: 10:11:53 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಲಾತಪಸ್ವಿ ರಾಧಾಕೃಷ್ಣ ತಂತ್ರಿಗಳು
      • ವಿ| ಡಾ| ರಶ್ಮಿ ಕಲ್ಕೂರ | Jul 20, 2012

        1959ನೇ ಇಸವಿ. ಬೆಂಗಳೂರಿನ ಪುಟ್ಟಣ್ಣ ಚೆಟ್ಟಿಯಾರ್‌ ಸಭಾಗೃಹ ರಂಗಮಂಟಪವನ್ನು ಸಿದ್ಧಗೊಳಿಸಿ ಕಾಯುತ್ತಿತ್ತು. ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯು ಪ್ರಾರಂಭಗೊಳ್ಳಲು ಕೆಲವು ಕ್ಷಣಗಳಿರಬೇಕಷ್ಟೆ. ಶ್ರುತಿ ಸಿದ್ಧಗೊಳಿಸುತ್ತಿರುವ ಮೃದಂಗಕಾರರು, ಶಿಷ್ಯಂದಿರಿಗಾಗಿ ನಟ್ಟುವಾಂಗದಲ್ಲಿ ನಿರ್ದೇಶಿಸಲು ಅಣಿಯಾಗಿ ಬಂದಿರುವ ಗುರುಗಳು, ಫ‌ಲಿತಾಂಶದ ನಿರೀಕ್ಷೆಯಿಂದ ಆತಂಕಿತರಾದ ಪೋಷಕರು, ಹುರುಪಿ ನಿಂದ-ಸಣ್ಣದಾದ ಭಯದಿಂದ ತಯಾರಾದ ನೃತ್ಯಪಟುಗಳು. ನೃತ್ಯ ಸ್ಪರ್ಧೆ ಆರಂಭಗೊಂಡು ಸಾಂಗವಾಗಿ ಮುನ್ನಡೆಯುತ್ತಿದೆ. ಅಷ್ಟರಲ್ಲಿ ಹೊಳೆವ ಕಂಗಳ, ಆಕರ್ಷಕ ಮೈಕಟ್ಟಿನ ಆದರೆ, ಬರಿಯ ಖಾದಿ ಬೈರಾಸನ್ನೇ ಕಚ್ಚೆ-ಶಲ್ಯವಾಗಿ ತೊಟ್ಟು ಬಂದಿರುವ ಯುವ ನೃತ್ಯಗಾರ ಓರ್ವ ರಂಗವನ್ನೇರುತ್ತಾನೆ. ಕುತೂಹಲದ ಎಲ್ಲ ಕಣ್ಣುಗಳೂ ಅವನಲ್ಲೇ ನೆಟ್ಟಿವೆ. ತನಗೆ ತಾನೇ ಶ್ರುತಿ ಹಿಡಿದು ಹಾಡಲು ಆರಂಭಿಸಿ, ಜತಿ ಇತ್ಯಾದಿಗಳನ್ನೂ ತಾಳಬದ್ಧವಾಗಿ ತಾನೇ ಹಾಡಿಕೊಂಡು ಯಾರೂ ನಿರೀಕ್ಷಿಸದ ರೀತಿಯಲ್ಲಿ ಅತ್ಯದ್ಭುತವಾಗಿ ರಂಗದ ಮೇಲೆ ಮೈನವಿರೇಳಿಸುವಂತೆ "ಶಿವತಾಂಡವ' ನರ್ತಿಸುತ್ತಾನೆ. ತನ್ನ ವಿಶಿಷ್ಟ ಅಂಗಹಾರಗಳು, ಪರಿಪೂರ್ಣ ಮುದ್ರೆ ಗಳು, ಭಾವ ತುಂಬಿದ ಕಂಗಳು, ಸು#ಟವಾದ ಅಭಿನಯದಿಂದ ಸಭೆಯನ್ನು ಮಂತ್ರಮುಗ್ಧಗೊಳಿಸು ತ್ತಾನೆ. ಇಡಿಯ ಸಭೆಯಲ್ಲಿ ಹರ್ಷದ ಕರತಾಡನ, ಮಿಂಚಿನ ಸಂಚಾರ. ಆ ಸುಂದರ, ಅದ್ವಿತೀಯ ಕಲಾವಿದ ಆ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿ.

        ಅದೇ ಮಿಂಚಿನ ಬೆಳಕು ನನ್ನೂರಲ್ಲೂ ಪ್ರತಿಫ‌ಲಿ ಸಿತ್ತು. ಆ ತರುಣ ನೃತ್ಯಪಟುವೇ ಉಡುಪಿಯ ಕುಂಜಿಬೆಟ್ಟು ರಾಧಾಕೃಷ್ಣ ತಂತ್ರಿ. ಮುಂದೆ ನೃತ್ಯಗುರು ವಾಗಿ, ಉಡುಪಿಯಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ ಎಂಬ ಕನಸಿನ ಕಲೆಯ ಅರಮನೆ ಕಟ್ಟಿದವರು.

        12 ವರ್ಷಗಳ ಶಿಷ್ಯತ್ವ, ಸಮಕಾಲೀನ ನೃತ್ಯಗುರು ಗಳಿಗೆ ತಂತ್ರಿಯವರ ವಿದ್ವತ್ತಿನಲ್ಲಿದ್ದ ಅಭಿಮಾನ, ಸಮಾಜದಲ್ಲಿ ಓರ್ವ ಸಾಮಾನ್ಯನೂ ಅವರಿಗೆ ತೋರಿಸುತ್ತಿದ್ದ ಅತೀವ ಗೌರವ, ಅವರೊಂದಿಗೆ ನನಗಿದ್ದ ವೈಯಕ್ತಿಕ, ಆತ್ಮೀಯ ಒಡನಾಟ -ಇವಿಷ್ಟೇ ಅಂತಹ ಮೇರು ನಾಟ್ಯಾಚಾರ್ಯರ ಬಗ್ಗೆ ಬರೆ ಯಲು ನನಗಿರುವ ಅರ್ಹತೆ ಎಂದು ತಿಳಿಯುತ್ತೇನೆ.

        ಅದ್ಭುತ, ಅಭಿಜಾತ ಕಲಾವಿದ ಉಡುಪಿಯ ರಾಧಾಕೃಷ್ಣ ತಂತ್ರಿ 1935ರ ಜೂ.17ರಂದು ಉಡುಪಿಯ ಕುಂಜಿಬೆಟ್ಟಿನ ಸಂಪ್ರದಾಯಸ್ಥ ಬಡ ಕುಟುಂಬವೊಂದರಲ್ಲಿ ಪದ್ಮನಾಭ ತಂತ್ರಿ, ಭಾಗೀರಥಿ ಅಮ್ಮನವರ ಪುತ್ರರಾಗಿ ಜನಿಸಿದರು. ಕಲೆಯೆಡೆಗೆ ಏನು ಸೆಳೆತವೋ, ಕಲೆಯ ಬೆಳಕನ್ನರಸುತ್ತಾ ತಬಲಾ ದಾಸಭಟ್ಟರಲ್ಲಿ ಲಯದ ಬೋಲ್‌ಗ‌ಳೊಂದಿಗೆ ಮೊದಲಡಿ ಇಟ್ಟರು. ಉಡುಪಿಯ ನಾರ್ತ್‌ ಹೈಸ್ಕೂಲಿ ನಲ್ಲಿ ಎಸೆಸೆಲ್ಸಿವರೆಗೆ ಶಿಕ್ಷಣ ಪಡೆದು, ಮುಂದೆ ಕಲೆ ಯೆಡೆಗಿನ ಅತೀವ ತುಡಿತದಿಂದಾಗಿ ಬೆಂಗಳೂರು ತಲುಪಿದರು. ನಾಟ್ಯಾಚಾರ್ಯ ವಿ. ಸಿ. ಲೋಕಯ್ಯ ಅವರಲ್ಲಿ ಪ್ರಾಥಮಿಕ ಹಂತದ ಭರತನಾಟ್ಯ ಅಭ್ಯಾಸ ವನ್ನು ನಡೆಸಿ, ಜನಾರ್ದನ ಅವರಿಂದ ಕಥಕ್‌ ಮತ್ತು ಜಾನಪದ ನೃತ್ಯಗಳನ್ನು ಕಲಿತರು.

        ಆರ್ಥಿಕ ದುಸ್ಥಿತಿಯನ್ನು ಹೆಗಲಿಗೇರಿಸಿಕೊಂಡೇ ಜ್ಞಾನದಾಹದ ಬೆನ್ನೇರಿ ತಂತ್ರಿಯವರು ಹೈದರಾಬಾದ್‌ ರೈಲು ಹತ್ತಿದರು. ಅಲ್ಲಿಂದ ಹೊಸತೊಂದು ಪರ್ವ.

        ಹೈದರಾಬಾದಿನ ಅಸಾಮಾನ್ಯ ಕಲಾವಿದ ನಾಟ್ಯಾಚಾರ್ಯ ಡಾ| ನಟರಾಜ ರಾಮಕೃಷ್ಣರಲ್ಲಿ ಶಿಷ್ಯತ್ವ ಪ್ರಾಪ್ತಿಯಾಗುತ್ತಲೇ ನೃತ್ಯ ಸಾಹಿತ್ಯದ ಸೂಕ್ಷಾತಿ ಸೂಕ್ಷ್ಮ ವಿಚಾರಗಳನ್ನು ಅವರಲ್ಲಿ ಅಧ್ಯಯನ ನಡೆಸಿ, ಗುರುಗಳ ನಿರ್ದೇಶನದಲ್ಲಿ "ಶ್ರೀನಿವಾಸ ಕಲ್ಯಾಣ', "ಕುಮಾರ ಸಂಭವ' ಇತ್ಯಾದಿ ನೃತ್ಯ ರೂಪಕಗಳನ್ನು ಸಹಪಾಠಿಗಳೊಂದಿಗೆ ಪ್ರದರ್ಶಿಸಿ ಜನಮನ್ನಣೆ ಪಡೆದರು. ಆಸ್ಥಾನ ನರ್ತನ ಬಹು ಪ್ರಶಂಸೆಗೆ ಪಾತ್ರವಾಗಿದ್ದ ಆ ದಿನಗಳಲ್ಲಿ ಮಡಿವಂತ ಕುಟುಂಬದಿಂದ ಬಂದಿದ್ದ ರಾಧಾಕೃಷ್ಣರು ಬೊಬ್ಬಿಲಿ ಸಂಸ್ಥಾನದ ಆಸ್ಥಾನ ನರ್ತಕಿ ಜೀವರತ್ನಮ್ಮ ಎಂಬವರಲ್ಲಿ ಆಸ್ಥಾನ ನರ್ತನ ಕ್ರಮಗಳನ್ನು ಆಳವಾಗಿ ಅಭ್ಯಾಸ ಮಾಡಿ ಕಲೆಯ ಇನ್ನೊಂದು ಮಜಲನ್ನು ಏರುವ ಪ್ರಯತ್ನ ಮಾಡಿದರು.

        1963ರಲ್ಲಿ ದಿಲ್ಲಿಯಲ್ಲಿ ನಡೆದ ಅಖೀಲ ಭಾರತ ನೃತ್ಯ ಸ್ಪರ್ಧೆಯಲ್ಲಿ ದೇಶಾದ್ಯಂತ ದಿಂದ ಬಂದ 20 ಆಯ್ದ ನೃತ್ಯಪಟುಗಳಲ್ಲಿ ತಂತ್ರಿ ಯವರ ನೃತ್ಯ ಪ್ರದರ್ಶನ ಬಹು ಪ್ರಶಂಸೆಗೆ ಪಾತ್ರವಾಗಿ, ಅಂದಿನ ಕೇಂದ್ರ ಸಚಿವರಾಗಿದ್ದ ವೈ. ಬಿ. ಚೌಹಾನ್‌ರಿಂದ ವಿಶೇಷ ಬಹುಮಾನವನ್ನೂ ಪಡೆದರು.

        ಹೀಗೆ ಉಡುಪಿಯ ಕಲೆಯ ಬೆಳಕೊಂದು ಕಲಾದಿಗಂತದಲ್ಲಿ ಬೆಳಗಿದ ವೈಖರಿಗೆ ಸಾಂಸ್ಕೃತಿಕ ಲೋಕವೇ ಮುದಗೊಳ್ಳುತ್ತದೆ.

        ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪ್ರತಿ ವರ್ಷದಂತೆ ಆ ವರ್ಷವೂ "ಮಹಾಕವಿ ಕಾಳಿದಾಸ್‌ ಸಮ್ಮೇಳನ್‌' ಜರಗಿತ್ತು. ಗುರುಗಳೊಂದಿಗೆ ತೆರಳಿದ ತಂತ್ರಿಯವರು ತನ್ನ ಸಂಗಡಿಗರೊಂದಿಗೆ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಕಾಳಿದಾಸ ವಿರಚಿತ "ಕುಮಾರ ಸಂಭವ' ನೃತ್ಯರೂಪಕ ಪ್ರದರ್ಶಿಸಿದರು, ಶಾಶ್ವತ ಫ‌ಲಕ ತಮ್ಮದಾಗಿಸಿಕೊಂಡರು. ವೈಯಕ್ತಿಕ ವಿಭಾಗದಲ್ಲಿ ಕಲಾವಿದ ರಾಧಾಕೃಷ್ಣರಿಗೆ ಬಂಗಾರದ ಕಲಶ ಪ್ರಶಸ್ತಿಯೂ ದೊರೆಯಿತು. ಅದು ಆ ಕಾಲದ ಪ್ರತಿಷ್ಠಿತ ನೃತ್ಯ ಸ್ಪರ್ಧೆ, ವರ್ಷದಲ್ಲಿ ಒಬ್ಬರಿಗೆ ಮಾತ್ರ ದೊರೆಯುವ ಬಂಗಾರದ ಕಲಶ ನಟರಾಜ ರಾಮಕೃಷ್ಣರ ನೆಚ್ಚಿನ ಶಿಷ್ಯ ರಾಧಾಕೃಷ್ಣರ ಮಡಿಲಲ್ಲಿತ್ತು.

        1963ರಲ್ಲಿ ದಿಲ್ಲಿಯಲ್ಲಿ ರಾಷ್ಟ್ರಪತಿ ಡಾ| ಎಸ್‌. ರಾಧಾಕೃಷ್ಣನ್‌ ಸಮ್ಮುಖದಲ್ಲಿ ನಡೆದ ನೃತ್ಯ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನದಲ್ಲಿ ನಟರಾಜ ರಾಮಕೃಷ್ಣರ ಶಿಷ್ಯವರ್ಗದಲ್ಲಿ ರಾಧಾಕೃಷ್ಣ ತಂತ್ರಿಗಳು ಪ್ರಮುಖರು. ವೈಯಕ್ತಿಕವಾಗಿ "ಮಂಡೂಕ ಶಬ್ದಂ', "ಸಪ್ತತಾಂಡವ' ನೃತ್ಯಗಳಿಗಾಗಿ ಪಂ| ಬಿರ್ಜು ಮಹಾರಾಜ್‌, ಡಾ| ಬಾಲಮುರಳೀಕೃಷ್ಣ, ಕಮಲಾ ಲಕ್ಷ್ಮಣ್‌ರಂತಹ ಸುಪ್ರಸಿದ್ಧ ಕಲಾವಿದರ ಸಮಕ್ಷಮದಲ್ಲಿ ಸ್ವೀಕರಿಸಿದ ಸಮ್ಮಾನ ಕಲಾಜೀವನದ ಅವಿಸ್ಮರಣೀಯ ದಿನ ಎಂದು ಸ್ಮರಿಸುತ್ತ ತಂತ್ರಿಯವರು ಭಾವಪರವಶರಾಗುತ್ತಿದ್ದರು.

        ಪರಿಪೂರ್ಣ ಕಲಾವಿದರಾಗಿ ರೂಪುಗೊಂಡ ತಂತ್ರಿಯವರು ತನ್ನೂರಿನ ಸೆಳೆತ, ತಾನು ಕಲಿತದ್ದನ್ನು ತನ್ನವರೊಂದಿಗೆ ಹಂಚಿಕೊಳ್ಳುವ ಉಮೇದಿನೊಂದಿಗೆ 1965ರಲ್ಲಿ ಉಡುಪಿಗೆ ಮರಳಿದರು. ಶ್ರೀಕೃಷ್ಣ ಮಠ, ಮಂಗಳೂರಿನ ಡಾನ್‌ಬಾಸ್ಕೋ ಹಾಲ್‌ನಲ್ಲಿ ನೃತ್ಯ ಪ್ರದರ್ಶನ ನೀಡಿದರು. ಬಳಿಕ ಉಡುಪಿಯಲ್ಲಿ ನೃತ್ಯ ತರಗತಿಗಳನ್ನೂ ಆರಂಭಿಸಿದರು. ಆದರೆ ಆಗಿನ ದಿನಗಳಲ್ಲಿ ಸಾರ್ವಜನಿಕ ರಲ್ಲಿ ನೃತ್ಯದ ಬಗೆಗಿದ್ದ ಅನಾದರ ತಂತ್ರಿ ಯವರನ್ನು ದಿವ್ಯ ವೈರಾಗ್ಯಕ್ಕೆ ನೂಕಿತು.

        1967ರಲ್ಲಿ ಬೆಂಗಳೂರಿನ ಪ್ರೇಮಾ ಅವರೊಂದಿಗೆ ದಾಂಪತ್ಯ ಜೀವನಕ್ಕಡಿ ಯಿಟ್ಟರು. ಪತ್ನಿಯೂ ಸಂಗೀತ ಕಲಾವಿದೆಯೇ. ಲಯ-ಹೆಜ್ಜೆ ಗಳಲ್ಲೇ ಮುಳುಗಿದ್ದ ತನು-ಮನಗಳನ್ನು ತೊರೆದು, ಸ್ಟೈನ್‌ಲೆಸ್‌ ಸ್ಟೀಲ್‌ ವ್ಯಾಪಾರದಲ್ಲಿ ತೊಡಗಿ ಕೊಂಡರು. ಆದರೆ ವ್ಯವಹಾರದಲ್ಲಾದ ಸೋಲು, ಸಂಸಾರ ನಿರ್ವಹಣೆಯಲ್ಲಿನ ಕಷ್ಟ ತಂತ್ರಿಗಳನ್ನು 20 ವರ್ಷಗಳ ಅನಂತರ ಮತ್ತೆ ನಾಟ್ಯದೆಡೆಗೆ ತಿರುಗಿಸಿತು.

        1990ರಲ್ಲಿ ಪತ್ನಿ ಪ್ರೇಮಾ ತಂತ್ರಿ ಹಾಗೂ ಪುತ್ರಿ ವೀಣಾರೊಂದಿಗೆ ಉಡುಪಿಯಲ್ಲಿ  "ರಾಧಾಕೃಷ್ಣ ನೃತ್ಯ ನಿಕೇತನ'ವನ್ನು ಸ್ಥಾಪಿಸಿದರು. ನರ್ತನಕ್ಕಾಗಿ ಅತೀವ ತುಡಿತ, ಕಲಿಸುವ ಆಸ್ಥೆ, ವಿಭಿನ್ನ ರಂಗ ಪ್ರಯೋಗಗಳು, ರಂಗಪರಿಕರ, ಸೂಕ್ತ ಹಿನ್ನೆಲೆ ವ್ಯವಸ್ಥೆ, ಕಲ್ಪನಾ ಲೋಕದಲ್ಲಿ ಮೂಡಿಸುತ್ತಿದ್ದ-ರಂಗದಲ್ಲಿ ಚಿತ್ರಿಸುತ್ತಿದ್ದ ಕಥಾನಕಗಳೆಲ್ಲವೂ ಅವರ ಮುಂದಿನ ಜೀವನದ ಯಶೋಗಾಥೆಯೇ ಸರಿ. ಉಡುಪಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಟ್ಯ ತರಗತಿ ಗಳನ್ನು ಆರಂಭಿಸಿ ಇಲ್ಲಿನ ಸಾಂಸ್ಕೃತಿಕ ಪರಿಸರದಲ್ಲಿ ಹೊಸ ಶಿಷ್ಯ ಸಮೂಹವನ್ನೂ ಕಲಾಭಿಮಾನಿ ಬಳಗವನ್ನೂ ಸೃಷ್ಟಿಸಲು ಮೊದಲುಗೊಂಡರು.

        ಜರ್ಮನ್‌ನಲ್ಲಿ ನೃತ್ಯ ಪ್ರಾತ್ಯಕ್ಷಿಕೆ ಹಾಗೂ ಸರಣಿ ಕಾರ್ಯಕ್ರಮಗಳಿಗೂ ಆಹ್ವಾನಿತರಾಗಿ ದೇಶದ ಪ್ರತಿಷ್ಠೆಯನ್ನು ಬೆಳಗಿಸಿದರು. ಮುಂಬಯಿ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಹಾಗೂ ರಾಜ್ಯದ ಹಲವಾರು ಬೃಹತ್‌ ವೇದಿಕೆಗಳಲ್ಲಿ ತಮ್ಮ ಶಿಷ್ಯ ಗಡಣದ ಜತೆ ಕಾರ್ಯಕ್ರಮ ನೀಡಿದರು. ಅಮೆರಿಕ, ಆಸ್ಟ್ರೇಲಿಯಾಗಳಿಂದ ನೃತ್ಯಾಸಕ್ತ ವಿದ್ಯಾರ್ಥಿಗಳೂ ತಂತ್ರಿಗಳನ್ನು ಅರಸಿ ಬಂದರು.

        ಮನಸ್ಸು, ಮಾತು, ದೇಹಗಳಲ್ಲಿ ತುಂಬಿ ತುಳುಕುವ ಸ್ನೇಹಾಮೃತವನ್ನು ಹಿಡಿದುಕೊಂಡವರಂತೆ ಆತ್ಮೀಯ ಭಾವ ತಂತ್ರಿಗಳಿಗೆ ಶಿಷ್ಯರೆಡೆಯಿತ್ತು. ಅಭ್ಯಾಸ ಸಮಯದಲ್ಲಿ ತಾನೆಣಿಸಿದಂತೆ ಸಂಯೋಜಿತ ವಾಗುತ್ತಿರುವ ನೃತ್ಯ ರೂಪುಗೊಳ್ಳದಿದ್ದರೆ, ಗುರುಗಳು ತುಂಬಾ ವೇದನೆ ಅನುಭವಿಸುತ್ತಿದ್ದುದನ್ನು ನಾನು ಗಮನಿಸುತ್ತಿದ್ದೆ. ಸಣ್ಣ, ಸಣ್ಣ ವಿಷಯಗಳಿಗೂ ಸಿಟ್ಟಾಗುತ್ತಿದ್ದರು. ಕೆಲವು ಗಂಟೆಗಳ ಇಲ್ಲವೆ ಕೆಲವು ದಿನಗಳ ಮೌನಕ್ಕೆ ಶರಣಾಗುತ್ತಿದ್ದರು. ಅವರ ಮನದ ಚಿತ್ತಾರಗಳು ಹೆಜ್ಜೆಯಾಗಿ, ಗೆಜ್ಜೆಯೊಡನೆ ದನಿಯಾಗಲೇ ಬೇಕೆಂಬ ಛಲ ಅವರಲ್ಲಿತ್ತು.

        ಕರ್ನಾಟಕ ಸರಕಾರ ನಡೆಸುವ ಭರತನಾಟ್ಯ, ಕೂಚುಪುಡಿ ಪರೀಕ್ಷೆಗಳಲ್ಲಿ ಇವರ ಶಿಷ್ಯರು ರಾಜ್ಯಕ್ಕೇ ಪ್ರಥಮರಾಗುತ್ತಿದ್ದು, ತನ್ನ ವಿದ್ಯಾರ್ಥಿಗಳಿಗಾಗಿ ಚಿಣ್ಣರುತ್ಸವ, ಯುವ ನೃತ್ಯೋತ್ಸವ, ನೃತ್ಯಾರ್ಪಣ, ರಂಗ ಪ್ರವೇಶಗಳಂತಹ ವಿಭಿನ್ನ ಕಾರ್ಯಕ್ರಮ ಯೋಜಿಸಿ ವೇದಿಕೆ ಸೃಷ್ಟಿಸಿದರು.

        "ದಶಾವತಾರಂ', "ಮಂಡೂಕ ಶಬ್ದಂ',  "ಪಂಚಮುಖೀ ಶಬ್ದಂ', "ನಾಗನೃತ್ಯ', "ಮಯೂರ ನೃತ್ಯ', "ಶ್ರೀಕೃಷ್ಣ ದರ್ಶನ', "ವಿಶ್ವರೂಪದರ್ಶನ', "ಲಕ್ಷ್ಮೀ ಅಷ್ಟಕ', "ಲಕ್ಷ್ಮೀನಾರಾಯಣ', "ನವರಸಶಿವಂ', "ರಾಸ ಕ್ರೀಡೆ', "ಲಯಗತಿ', "ವಂದೇ ಮಾತರಂ', "ಶ್ರೀರಾಮಾಯಣ', "ಭೃಗು ಮಹರ್ಷಿ ಗರ್ವಭಂಗ', "ದಕ್ಷಯಜ್ಞ', "ನವಗ್ರಹ', "ಸೂರ್ಯ ನಮಸ್ಕಾರ', "ಅರ್ಧನಾರೀಶ್ವರ', "ರಂಗವಲ್ಲೀ ನೃತ್ಯ' ಹೀಗೆ ಒಂದನ್ನೊಂದು ಮೀರಿಸುವ ಕಲಾಸೃಷ್ಟಿಯಲ್ಲಿ ಕಲಾತಪಸ್ವಿ ತಂತ್ರಿಗಳು ತೊಡಗಿದರು.

        "ಭರತಮುನಿ ಜಯಂತ್ಯುತ್ಸವ' ಎಂಬ ಅದ್ಭುತ ಕಲಾವೈಭವದ ಉತ್ಸವವನ್ನು 2000ನೇ ಇಸವಿಯಲ್ಲಿ ಶ್ರೀಕೃಷ್ಣ ಮಠದ ಸಹಕಾರದೊಂದಿಗೆ ರೂಪಿಸಿದರು. ಅವರ ಇಳಿ ವಯಸ್ಸಿನ ಹುಮ್ಮಸ್ಸಿಗೆ ಪ್ರಶಸ್ತಿಗಳ ಮಹಾಪೂರವೇ ಅವರನ್ನರಸಿ ಬಂದಿತ್ತು. 2006ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರಿನ ನೃತ್ಯ ಕಲಾ ಪರಿಷತ್‌ನಿಂದ "ನೃತ್ಯ ಕಲಾಸಿಂಧು', "ನಾಟ್ಯ ಕಲಾಪ್ರಪೂರ್ಣ', "ನೃತ್ಯ ಕಲಾಭೂಷಣ', ಉಡುಪಿ ನಗರಸಭೆಯಿಂದ "ಸುವರ್ಣ ಕರ್ನಾಟಕ ಪುರಸ್ಕಾರ', ಶ್ರೀ ಪೇಜಾವರ ಮಠದಿಂದ "ಶ್ರೀರಾಮ ವಿಠuಲ' ಪ್ರಶಸ್ತಿ, ಶ್ರೀಮತಿ ಡಾ| ವಸುಂಧರಾ ದೊರೈಸ್ವಾಮಿ ಇವರಿಂದ ಸಮ್ಮಾನ ಹೀಗೆ ಅವರಿಗೆ ಸಂದ ಗೌರವಗಳು ಅಸಂಖ್ಯ.

        ತನ್ನ ವಿದ್ಯಾರ್ಥಿಗಳೆಂದರೆ ಅವರಿಗೆ ಎಲ್ಲಿಲ್ಲದ ಮಮತೆ. 75ರ ಇಳಿವಯಸ್ಸಿನಲ್ಲೂ ಎಲ್ಲಾ ವಿಧದ ಚಾರಿ, ನರ್ತನಗಳನ್ನೂ ಸ್ವತಃ ನರ್ತಿಸಿ ತೋರಿಸು ತ್ತಿದ್ದರು. ಅಧ್ಯಯನ, ಅಧ್ಯಾಪನಗಳಲ್ಲಿ ಕೊಂಚವೂ ರಾಜಿಯಿರಲಿಲ್ಲ. ನಿಷ್ಠೆ, ಪ್ರಾಮಾಣಿಕತೆ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿತ್ತು. ಕಲೆಯೆಡೆಗೆ ತೀವ್ರ ಹಪಹಪಿಕೆ, ನಿರಂತರ ಹೊಸ ಸಾಧ್ಯತೆಗಳ ಶೋಧ, ಮಗುವಿನಂಥ ನಿರ್ಮಲ ಮನಸ್ಸು, ಹೃದಯ ವೈಶಾಲ್ಯ, ಅನುಕಂಪ ಇವು ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ಕಂಡ ನನಗೆ ಅನುಭವವಾಗಿದೆ.

        ಇಂಥದ್ದೊಂದು ನಾಟ್ಯ ನಕ್ಷತ್ರ ನಾಟ್ಯದರಮನೆಯ ಮೂಲ ಪಂಚಾಂಗದಿಂದ ಶಿಖರದ ಹೊನ್ನ ಮಕುಟದ ವರೆಗೆ ಪಯಣಿಸಿ ಜು.17, 2007ರಂದು ಇಹ ಲೋಕದ ಪಯಣ ಮುಗಿಸಿ, ಕಲೆಯ ಬಾನಲ್ಲಿ ಧ್ರುವ ತಾರೆಯಾಯಿತು. ಆದರೆ ಅವರು ಬೆಳಗಿಸಿದ ನೃತ್ಯ ನಂದಾದೀಪ ಸದಾ ಬೆಳಗುತ್ತಿದೆ, ಕಳೆದೈದು ವಸಂತಗಳಿಂದಲೂ ನನ್ನ "ಮಾಸ್ಟರ್‌'ರ ನೃತ್ಯ ಶಾಲೆ ಯಿಂದ ಗುರುಪುತ್ರಿ, ನೃತ್ಯ ವಿದುಷಿ ವೀಣಾ ಎಂ. ಸಾಮಗರ ನಿರ್ದೇಶನದಲ್ಲಿ ನರ್ತನದ ಹೆಜ್ಜೆಯ ದನಿ ಅವಿರತವಾಗಿ ಕೇಳಿಸುತ್ತಿದೆ. ಅದಕ್ಕಾಗಿ ನಾನು ಆಭಾರಿ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus