Thursday, May 23, 2013
Last Updated: 1:57:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿಲ್ಸನ್‌ ಅವರ ನಾರೀ ಪ್ರಣೀತ ತಾಣ
    • ಕಲಾಕೃತಿಗಳ ಸೊಗಸು ಹೆಚ್ಚಿಸುವಲ್ಲಿ ನಿಪುಣರಾದ ಕಾಸರಗೋಡು ಕೈಯಾರಿನ ಕಲಾವಿದ ವಿಲ್ಸನ್‌ .

      • ದಿನೇಶ್‌ ಹೊಳ್ಳ | Jul 20, 2012

        ಪ್ರಕೃತಿಯ ನೀಲ, ಹಸಿರು, ಕಂದು, ಹಳದಿ ಬಣ್ಣಗಳ ಒಂದು ಭಿನ್ನ ಪ್ರಕಾರದ ಕುಂಚ ತೀಡುವಿಕೆಯಲ್ಲೇ ಕಲಾಕೃತಿಗಳ ಸೊಗಸು ಹೆಚ್ಚಿಸುವಲ್ಲಿ ನಿಪುಣರಾದ ಕಾಸರಗೋಡು ಕೈಯಾರಿನ ಕಲಾವಿದ ವಿಲ್ಸನ್‌ ಡಿ'ಸೋಜಾ ತಮ್ಮ ಕಲಾಕೃತಿಗಳಲ್ಲಿ ನಾರೀ ಲಾಲಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಸ್ತ್ರೀ ಸಂವೇದನಾ ಸಂಕೀರ್ಣತೆಯನ್ನು ಸಾಕಾರಗೊಳಿಸಿದ್ದಾರೆ. ಮಹಿಳೆಯೆಂದರೆ ಪ್ರಕೃತಿ ಎನ್ನುವ ಧ್ಯೇಯ- ಧೋರಣೆಯನ್ನಿಟ್ಟುಕೊಂಡಿರುವ ಇವರು ಪ್ರಕೃತಿಯ ವಿವಿಧ ನೆಲೆಗಳನ್ನು ಮಹಿಳೆಯ ಹಾವಭಾವಕ್ಕೆ ತುಲನಾತ್ಮಕವಾಗಿ ಸಂಯೋಜಿಸುತ್ತಾ ಒಂದು ಭಿನ್ನ ಪರಿಕಲ್ಪನೆಯಲ್ಲಿ ಚಿತ್ರ ರಚಿಸುತ್ತಾರೆ. ಮಂಗಳೂರಿನ ಆರ್ಕಿಡ್‌ ಕಲಾಗ್ಯಾಲರಿಯಲ್ಲಿ ಇವರು ರಚಿಸಿದ ಕಲಾಕೃತಿಗಳ ಪ್ರದರ್ಶನಕ್ಕೆ ಇಟ್ಟ "ನಾರೀ ಪ್ರಣೀತ ತಾಣ' ಎಂಬ ಶೀರ್ಷಿಕೆಯೇ ಪ್ರದರ್ಶನದ ಹೂರಣವನ್ನು ಬಿಚ್ಚಿಡುವಂತಿತ್ತು.

        ತೈಲ ವರ್ಣದ 26 ಕಲಾಕೃತಿಗಳು ಪ್ರದರ್ಶನದ ಒಂದೊಂದು ಆಯಾಮದಿಂದ ಮಗದೊಂದು ಆಯಾಮಕ್ಕೆ ವೀಕ್ಷಕರನ್ನು ಒಯ್ಯುವಂತಿದ್ದವು. ಆಭರಣ, ವಸ್ತ್ರ ರಹಿತ ಮಹಿಳೆಯು ಯೋಚನಾ ಭಂಗಿಯಲ್ಲಿ ಕುಳಿತಿರುವ ಕಲಾಕೃತಿಯು ನಿಸರ್ಗದ ಮುಗ್ಧತೆ ಹಾಗೂ ಸೌಮ್ಯತೆಯ ಅಂಶಗಳನ್ನು ಪ್ರತಿಪಾದಿಸುತ್ತಿತ್ತು. "ಮಳೆಗಾಲದ ಕ್ಷಣ' ಕಲಾಕೃತಿ  ಆಕರ್ಷಕವಾಗಿತ್ತು. ಜಳಕದ ಪುಳಕ ರೂಪವನ್ನು ಬರೀ ಭಾವನೆಗಳ ಬಿಂಬದಲ್ಲೇ ಪ್ರಚುರಪಡಿಸಿದ್ದರು. ನೃತ್ಯದ ಹರುಷವನ್ನು "ಡ್ಯಾನ್ಸ್‌ ಎಂಡ್‌ ರಿಜಾçಸ್‌' ಎಂಬ ಕೃತಿಯಲ್ಲಿ ಕೇವಲ ರೇಖೆಗಳ ವಯ್ನಾರದಲ್ಲೇ ಚಿತ್ರಿಸಿದ್ದರು. ಮೀನುಗಾರ ಮಹಿಳೆಯ ಚಿತ್ರಣ, ಕಳೆದು ಹೋಗಿರುವ ಲೋಕದಿಂದ ಮರಳುವ "ಅಲೆಮಾರಿ' ಕೃತಿ ಆಕರ್ಷಕವಾಗಿದ್ದವು.

        ವಿಲ್ಸನ್‌ ಅವರ ನಿರಂತರ ಕುಂಚದ ಒಡನಾಟ, ವಿಚಾರ ಮಂಥನದ ಒಳನೋಟ, ಅನುಭವಗಳ ಅನುಸಂಧಾನ ಇವೆಲ್ಲವೂ ಮೇಳೈಸಿ ವಿಶಿಷ್ಟ ಕಲಾಕೃತಿಗಳು ಮೂಡಿವೆ. ಕಡು ಹಾಗೂ ತಿಳಿ ಬಣ್ಣಗಳ ತೀಡುವಿಕೆಯ ನಡುವೆ ರೇಖೆಗಳಲ್ಲಿ ನೀಡುವ ಅಲಂಕೃತ ರೂಪವು ಕೃತಿಯ ಅರ್ಥವಂತಿಕೆಯನ್ನು ವೃದ್ಧಿಸುವಂತಿವೆ. ಭೂಮಿ ಹಾಗೂ ಆಗಸದ ವರ್ಣಗಳು ಸಮ್ಮಿಳಿತವಾಗಿದ್ದು ಕೆಲವು ಕಡೆ ಈ ಎರಡು ಬಣ್ಣಗಳ ಘರ್ಷಣೆಗಳೇ ಒಂದು ವಿಶೇಷ ಅರ್ಥವನ್ನು ಹುಟ್ಟಿಸುವಂತಿವೆ. ಮಣ್ಣಿನ ಬೇಗುದಿಯನ್ನು ಹೆಣ್ಣಿನ ಭಾವ ರೂಪದಲ್ಲಿ ಸಾಂಕೇತಿಕವಾಗಿ ಕೃತಿ ರೂಪಕ್ಕಿಳಿಸಿ ಮಣ್ಣಿಗೂ ಹೆಣ್ಣಿಗೂ ಒಂದು ಸಂಬಂಧವನ್ನು ಕಲ್ಪಿಸಿರು ವುದು ಕೆಲವು ಕಲಾಕೃತಿಗಳಲ್ಲಿ ಸ್ಪಷ್ಟವಾಗುತ್ತವೆ.
        ಚಿತ್ರ ಕಲಾವಿದನೊಬ್ಬ ಗೀತ ರಚನಕಾರನ ಯಾವ ಗೀತೆಗಳಿಂದ ಪ್ರೇರಿತನಾಗಿ ಕಲಾಕೃತಿಗಳನ್ನು ರಚಿಸಬಲ್ಲನೋ ಅದೇ ಹಿರಿಯ, ಪ್ರಸಿದ್ಧ ಗೀತ ರಚನೆಕಾರ ಗುಲ್ಜಾರ್‌ ಅವರು ವಿಲ್ಸನ್‌ ಅವರ ಚಿತ್ರ ಕಲಾ ಪ್ರದರ್ಶನವನ್ನು ಉದ್ಘಾಟಿಸಿದ್ದು ನಿಜಕ್ಕೂ ಇದೊಂದು ಹಿರಿ-ಕಿರಿಯ ಕಲಾವಿದರಿಬ್ಬರ ಸಂಗಮಕ್ಕೆ ಸಾಕ್ಷಿ  ಸನ್ನಿವೇಶವಾಗಿತ್ತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus