ಪ್ರೊ| ಅನಂತಪದ್ಮನಾಭ ರಾವ್ | Jul 20, 2012
ಮಂಗಳೂರಿನ ಸಂಗೀತ ಪರಿಷತ್ (ರಿ.) ಇದರ ವಾರ್ಷಿಕ ಮಹಾಸಭೆಯ ಅಂಗವಾಗಿ, ಭಾರತೀಯ ವಿದ್ಯಾಭವನ, ಮಂಗಳೂರು ಹಾಗೂ ವಿಶ್ವವಿದ್ಯಾನಿಲಯ ಕಾಲೇಜುಗಳ ಸಹಭಾಗಿತ್ವದಲ್ಲಿ ಮತ್ತು ಪಿ. ಎಸ್. ಆರ್. ಸಿಲ್ಕ್ನವರ ಪ್ರಾಯೋಜಕತ್ವದಲ್ಲಿ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಹೆಮ್ಮಿಗೆ ಎಸ್. ಪ್ರಶಾಂತ್, ಬೆಂಗಳೂರು ಇವರ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ ಹಲವು ಅಂಶಗಳಿಂದ ಜನಮಾನಸದಲ್ಲಿ ಸ್ಥಿರಾಯುವಾಗಿದೆ.
ಮೂಲತಃ ವಿದ್ವಾನ್ ಕೆ. ವಿ. ನಾರಾಯಣ ಸ್ವಾಮಿಯವರ ಶಿಷ್ಯರಾಗಿದ್ದು, ಇನ್ನೂ ಹಲವು ಗುರುಗಳ ಪ್ರಭಾವಕ್ಕೊಳಗಾಗಿದ್ದರೂ, ಪ್ರಶಾಂತ್ ಅವರು ಮೂಲಗುರುಗಳನ್ನು ಮೀರಿಸುವ ಶಿಷ್ಯರಾಗಿ ಮೂಡಿಬರುವ ರೀತಿಯಲ್ಲಿ ಕಛೇರಿಯನ್ನು ನೀಡಿದರು. ಅವರು ಪಟ್ಟಿ ಮೆಲಿಯಂ ವಿರಚಿತ ವೆರಿಬೋನಿ ಇನ್ನೆ$Øàರವಿ ವರ್ಣಂ (ಅಟ್ಟತಾಳ) ನಿಂದ ಪ್ರಾರಂಭಿಸಿ, ತ್ಯಾಗರಾಜರ ಕೃತಿ ರಾರಾಮಯಿಂಟಿಯನ್ನು ರಾಗ ಸಾವೇರಿ, ಆದಿ ತಾಳದಲ್ಲಿ ಸೊಗಸಾಗಿ ಮೂಡಿಸಿ ಕಛೇರಿಗೆ ಕಳೆ ನೀಡುತ್ತಾ ಬಂದರು. ತ್ಯಾಗರಾಜರ ಮಹಾನ್ ಹಾಗೂ ಜನಪ್ರಿಯ ಎಂದರೋ ಮಹಾನುಭಾವನಲು ಕೃತಿಯನ್ನು ರಾಗ ಶ್ರೀ- ಆದಿತಾಳದಲ್ಲಿ ಮನಮುಟ್ಟುವಂತೆ ವಿಸ್ತರಿಸಿ ತನ್ನ ಸ್ವಂತಿಕೆ ಮೆರೆದರು. ಜನ್ಮದಾತವಾಗಿ ಬಂದ ಉತ್ತಮ ಶಾರೀರವನ್ನು ಬಳಸಿಕೊಂಡು ಕಛೇರಿಯನ್ನು ವಿಸ್ತರಿಸುತ್ತಾ ಮುತ್ತುಸ್ವಾಮಿ ದೀಕ್ಷಿತರ ಹರಿಹರ ಕೃತಿಯನ್ನು ರಾಗ ವಸಂತ, ಖಂಡ ಏಕತಾಳದಲ್ಲಿ ಪ್ರಸ್ತುತಪಡಿಸಿ ಕಛೇರಿಗೆ ಇನ್ನಷ್ಟು ಕಳೆ ಏರಿಸಿದರು. ತ್ಯಾಗರಾಜರ ಇನ್ನೊಂದು ಕೃತಿ ರಾಜರತ್ನ ಮಾಲಿಕ -ರೀತಿಗೌಳ ರಾಗ ಹಾಗೂ ರೂಪಕ ತಾಳದಲ್ಲಿ ಮೂಡಿಸಿ ವಿದ್ಯುತ್ ಸಂಚಾರ ಉಂಟು ಮಾಡಿದರು. ತ್ಯಾಗರಾಜರ ಮತ್ತೂಂದು ಕೃತಿ ರಾಮಾಭಿರಾಮ ರಮಣೀಯ ನಾಮ ಕೃತಿಯನ್ನು ದರ್ಬಾರ್ ರಾಗ ಹಾಗೂ ರೂಪಕ ತಾಳದಲ್ಲಿ ಎತ್ತಿಕೊಂಡು ತನ್ನಲ್ಲಿರುವ ಸೃಜನಶೀಲತೆಯನ್ನು ಮನದಟ್ಟು ಮಾಡಿದರು. ಪ್ರತೀ ಬಾರಿ ಹಾಡಿದಾಗಲೂ ತ್ರಿಚಿಯ ಟಿ. ಕೆ.ವಿ. ರಾಮಾನುಜಾಚಾರ್ಯಲು ಅವರ ವಿದ್ವತ್‌ಪೂರ್ಣ ವಯಲಿನ್ ಸಾಥ್ ಮುಖ್ಯ ಗಾಯಕರನ್ನು ಇನ್ನಷ್ಟು ಎತ್ತರಕ್ಕೆ ಅನಾವರಣಗೊಳ್ಳಲು ಹುರಿದುಂಬಿಸುವಂತಿತ್ತು.
ಗಾಯನದ ಮುಖ್ಯ ರಾಗವಾಗಿ, ಇಡೀ ಕಛೇರಿಗೆ ಕಳಶಪ್ರಾಯವಾಗಿ ಮೋಹನ ರಾಗದಲ್ಲಿ ತ್ಯಾಗರಾಜರ ಕೃತಿ ನನ್ನು ಪಲಿಂಪ ನೀಂ ನಡೆಚಿ ಪೊ ರಾಮವನ್ನು ಆಲಾಪನೆಯೊಂದಿಗೆ ಕೈಗೆತ್ತಿಕೊಂಡು ನೆರವಲ್ ಹಾಗೂ ಚಿಟ್ಟೆ ಸ್ವರದೊಂದಿಗೆ ಅಲಂಕರಿಸಿದರು. ಮೃದಂಗವಾದಕರಾದ ಬೆಂಗಳೂರಿನ ಶ್ರೀನಿವಾಸ್ ಹಾಗೂ ಶ್ರೇಷ್ಠ ಘಟಂ ವಾದಕ, ಸುಧೀಂದ್ರರ ಶಿಷ್ಯರಾದ ಫಣೀಂದ್ರರ ವಿಶಿಷ್ಟ ದೀರ್ಘ ತನಿ ಆವರ್ತನವು ಇಡೀ ಶ್ರೋತೃ ವರ್ಗವನ್ನು ಸಮ್ಮೊàಹನಗೊಳಿಸಿತು. ಬೆಂಗಳೂರು ನಾಗರತ್ನಂ ರಚಿಸಿದ ಜಾವಳಿ ಮಾತಾಡಬಾರದೇ ಅನ್ನು ಖಮಾಸ್ ರಾಗದಲ್ಲಿ ಮತ್ತು ಮಿಶ್ರ ಛಾಪು ತಾಳದಲ್ಲಿ ವಿ| ಪ್ರಶಾಂತ್ ಅವರು ಹಾಡಿ ಕೇಳುಗರ ಮನಸೂರೆಗೊಂಡರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ವಚನವನ್ನು ಭಾಗೇಶ್ರೀ ರಾಗದಲ್ಲಿ ಅಳವಡಿಸಿ ಹಾಡಿ ತನ್ನ ಶಾಸ್ತ್ರೀಯತೆಯ ಛಾಪನ್ನು ಸ್ಪಷ್ಟಪಡಿಸಿದರು. ಕೊನೆಯಲ್ಲಿ ಸ್ವಾತಿ ತಿರುನಾಳ್ ವಿರಚಿತ ತಿಲ್ಲಾನವನ್ನು ರಾಗ ಧನಶ್ರೀ ಹಾಗೂ ಆದಿತಾಳದಲ್ಲಿ ಮೂಡಿಸಿ ಕಛೇರಿಗೆ ಮಂಗಳ ಹಾಡಿದರು.
ಪ್ರಶಾಂತ್ ಅವರ ಹಾಡುಗಾರಿಕೆ ಶುದ್ಧವಾಗಿದ್ದು, ಸಂಪ್ರದಾಯ ಹಾಗೂ ಶಾಸ್ತ್ರೀಯ ಘನತೆವೆತ್ತಂತಿತ್ತು. ಮತ್ತು ಬಹಳ ಸಮಯದ ಅನಂತರ ಮಂಗಳೂರಿನ ಜನತೆಗೆ ಗುರು ಕೆ.ವಿ. ನಾರಾಯಣ ಸ್ವಾಮಿ ಪರಂಪರೆ ಯನ್ನು ಹೃದಯಂಗಮವಾಗಿ ಉಣಿಸಿದೆ.
ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯ ವಿರುದ್ಧ ಕೇಳಿ ಬರುತ್ತಿರುವ ಹಲವು ಅಪಸ್ವರಗಳ ಮಧ್ಯೆ ಪ್ರಶಾಂತ್ ಅವರ ಕಛೇರಿ ಅವೆಲ್ಲವನ್ನು ಗೌಣವಾಗಿಸಿ ಶ್ರೋತೃಗಳ ಮನದಾಳದಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಲ್ಲುದು ಎಂಬುದಕ್ಕೆ ಅಂದು ನೆರೆದ ಸಾಕಷ್ಟು ಸಂಖ್ಯೆಯ ಶ್ರೋತೃಗಳು ಕೊನೆ ತನಕ ಉಳಿದುದೇ ಸಾಕ್ಷಿ.