ಉಪಾಧ್ಯಾಯ ಮೂಡುಬೆಳ್ಳೆ | Jul 20, 2012
ನಾಗ ದೇವನ ಪೂಜೆ ಅತ್ಯಂತ ಕಲಾತ್ಮಕವಾದದ್ದು ಎಂದರೆ ತಪ್ಪಾಗಲಾರದು. ನಾಗ ಕಲಾ ಪೋಷಕ ದೇವನಾಗಿದ್ದಾನೆ. ಅತನ ಪೂಜೆಯಲ್ಲಿ ಎಲ್ಲಾ ಲಲಿತಕಲೆಗಳ ಸಂಗಮವಿರುತ್ತದೆ. ನಾಡಹಬ್ಬದ ಸಡಗರವಿರುತ್ತದೆ. ಹಲವು ಕಸುಬುದಾರರಿಗೆ ಉದ್ಯೋಗವಿರುತ್ತದೆ. ನಾಗಾರಾಧನೆ ಯಲ್ಲಿ ವಿವಿಧ ಬಣ್ಣಗಳು, ವಿವಿಧ ಬಣ್ಣದ ಹೂವುಗಳು, ವಿವಿಧ ಬಣ್ಣದ ಫಲವಸ್ತುಗಳು, ವಿವಿಧ ಆಲಂಕಾರಿಕ ಸಾಮಗ್ರಿಗಳು, ವೈವಿಧ್ಯಮಯ ದೀಪಗಳು ಉಪಯೋಗವಾಗುವಂತೆ ವಿವಿಧ ವಾದ್ಯಸಂಗೀತಗಾರರು, ನೃತ್ಯಗಾರರು, ಕುಶಲಕರ್ಮಿಗಳು, ಅಲಂಕಾರಕಾರರು, ದೀಪಾಲಂಕಾರರು, ಡಮರುಮೇಳದವರು, ನಾಗಪಾತ್ರಿಗಳು, ಅರ್ಚಕ ವೃಂದ, ಹೀಗೆ... ಸಾವಿರಾರು ಮಂದಿಗೆ, ಹಲವಾರು ಪಂಗಡಗಳಿಗೆ ಉದ್ಯೋಗ ದೊರಕುತ್ತದೆ. ಹೀಗೆ ನಾಗರಾಜ ವಿವಿಧ ವರ್ಗದ ಕಲಾವಿದರನ್ನು-ಉದ್ಯೋಗಿಗಳನ್ನು ಸಲಹುವ ಕಲಾಪೋಷಕ ದೇವನಾಗಿದ್ದಾನೆ. ಅವನದ್ದು ಹಲವು ವರ್ಣಗಳಿಂದ ಕೂಡಿದ ಕಲಾತ್ಮಕ ಪೂಜೆ. ಕಲೆಯೊಂದಿಗೆ ಭಕ್ತಿಭಾವ ಬೆರೆಯುವ ಪೂಜೆ. ಅಂತಹ ವಿಶೇಷ ಆಕರ್ಷಣೆ ನಾಗನಲ್ಲಿದೆ.
ನಾಗನ ದೇಹವೇ ಒಂದು ಸುಂದರ ಕಲಾಕೃತಿ! ಷೋಡಶಿಯರ ಜಡೆಯಂತೆ ತಲೆಯ ಭಾಗ ಮಾತ್ರ ಅಗಲವಾಗಿದ್ದು, ಕೆಳಗೆ ಬರುತ್ತಿದ್ದಂತೆ ಸಪುರವಾಗಿ ಬಳುಕುವ ರೀತಿ, ಹಳದಿ ವರ್ಣದಿಂದ ಮಿರುಗುವ ದೇಹ! ವಕ್ರರೇಖೋಪಾದಿಯಲ್ಲಿ ನಿಧಾನವಾಗಿ ಚಲಿಸುವ ಪರಿ! ಇವನ್ನೆಲ್ಲಾ ನೋಡುವುದೇ ಒಂದು ಚೆಂದ! ನಾಗ ಮನೆಯ ಹತ್ತಿರ ಸುಳಿದಾಡಿದರೆ "ಒಳ್ಳೆಯದು ಬಂತು' ಎನ್ನುತ್ತಾರೆ. ಅಂದರೆ ಆತ ನಮಗೆ ಒಳ್ಳೆಯದನ್ನು ಮಾಡುವವ ಎಂಬರ್ಥ. ನಾಗ ಸಿರಿವಂತಿಕೆಯ ಸ್ವರೂಪ. ಆತನ ಮೈಬಣ್ಣ ಹಳದಿಯೂ ಶ್ರೀಮಂತ ವರ್ಣ. ಆತನ ಪೂಜೆಯಲ್ಲೂ ಹಳದಿ ಬಣ್ಣದ ಅರಶಿಣದ ಬಳಕೆ ಅಧಿಕ. ಆತನಿಗೆ ಪ್ರಿಯವಾದ ಹೂವುಗಳಾದ ಕೇದಿಗೆ-ಸಂಪಿಗೆಗಳೂ ಹಳದಿ ವರ್ಣದವೇ. ಆತನನ್ನು ನಿಧಿಸ್ವಾಧೀನಕಾರಕ ಎನ್ನುತ್ತಾರೆ. ನಿಧಿಯ ಬಣ್ಣವೂ ಹಳದಿಯೇ. ನಾಗನನ್ನು ತಮ್ಮ ಜೊತೆಗೆ ಸೇರಿಸದ ದೇವತೆಗಳಿಲ್ಲ. ಅವರ ಕಿರೀಟದಲ್ಲಿ, ಆಭರಣಗಳಲ್ಲಿ, ಆಯುಧಗಳ ರೂಪದಲ್ಲಿ ನಾಗ ಸೇರಿಕೊಂಡಿದ್ದಾನೆ. ಕಲಾವಿದರಿಗಂತೂ ನಾಗನ ಬಳುಕು ದೇಹ ವಿನ್ಯಾಸಕ್ಕೆ ಬೇಕೇ ಬೇಕು.
ಹಬ್ಬಗಳಲ್ಲಿ ಮೊದಲ ಹಬ್ಬ ನಾಗರಪಂಚಮಿ. ಅಲ್ಲಿಂದ ಆರಂಭವಾಗಿ ಜನಪದರು ನಿರಂತರವಾಗಿ ನಾಗನ ವಿವಿಧ ಪ್ರಕಾರದ ಪೂಜೆಗಳನ್ನು ವರ್ಷವಿಡೀ ನಡೆಸುತ್ತಾರೆ. ನಾಗನ ತನು-ತಂಬಿಲ ಪೂಜೆ ಸದಾಕಾಲ ನಡೆಯುತ್ತಿರುತ್ತದೆ. ಬೇಸಗೆ ಕಾಲದಲ್ಲಿ ಪರವೂರಿನ ಜನ ಊರಿಗೆ ಬರುವಾಗ ನಾಗನಿಗೆ ವಿಶೇಷ ಪೂಜೆಗಳು ಜರಗುತ್ತವೆ. ಅವುಗಳಲ್ಲಿ ಆಶ್ಲೇಷಾ ಬಲಿ ಪೂಜೆ ವಿಶೇಷ. ಇದರೊಂದಿಗೆ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ನಾಗಸಂದರ್ಶನ, ತನುತರ್ಪಣ ಮಂಡಲ ಹಾಗೂ ವಿಶೇಷವಾಗಿ ನಾಗಮಂಡಲ - ಬ್ರಹ್ಮಮಂಡಲ - ಡಕ್ಕೆಬಲಿ ಸೇವೆಗಳು ಇವೆ. ನಾಗಪೂಜೆಯ ಮೇರುತ್ವವನ್ನು ನಾಗಮಂಡಲದ ಚಪ್ಪರದಲ್ಲಿ ಕಾಣಬಹುದು. ರಾಶಿ ರಾಶಿ ಹಿಂಗಾರ, ಹೂ, ಅಡಿಕೆ, ಸೀಯಾಳ, ತಳಿರು, ತೋರಣ, ವಿದ್ಯುದ್ದೀಪಗಳಿಂದ ಕಂಗೊಳಿಸುವ ದೃಶ್ಯ ದೇವಲೋಕದ ಸೌಂದರ್ಯವನ್ನು ಧರೆಗಿಳಿಸಿದಂತಿರು ತ್ತದೆ! ಇವೆಲ್ಲದರ ಹಿಂದೆ ಕಲಾತ್ಮಕತೆ ಇದೆ. ಜನಪದ ಕಲೆಯ ವಿಶೇಷ ಆರಾಧನೆಯಿದೆ. ಹಾಗಾಗಿ ನಾಗನಿಗೆ ಕಲಾವಿದರು ತುಂಬಾ ಹತ್ತಿರದವರು. ಹೊಸದಾಗಿ ಒಂದು ನಾಗಬನ ಕಟ್ಟಿಸಿದರೆ ಸಾಕು. ಅದರ ಸುತ್ತು ಪಾಗಾರದ ತುಂಬೆಲ್ಲಾ ನಾಗರಹಾವಿನ ಚಿತ್ರ ಬರೆಯುವಂತೆ ಕಲಾವಿದರನ್ನು ಕರೆಸುತ್ತಾರೆ. ಮಧ್ಯೆ ನಾಗನ ಗುಂಡದ ಮೇಲಾºಗದಲ್ಲಿ ಮೂರು ಹೆಡೆ-ಐದು ಹೆಡೆ- ಏಳುಹೆಡೆ- ಒಂಬತ್ತು ಹೆಡೆಯ ನಾಗನ ಚಿತ್ರವನ್ನು ಬರೆಸುತ್ತಾರೆ. ನಾಗಪ್ರತಿಷ್ಠೆಗೆ ಬಳಸುವ ನಾಗಶಿಲೆಯನ್ನು ಕೆತ್ತುವ ಶಿಲ್ಪಿ ಗಳೂ ವಿಶೇಷ ಕಲಾವಂತಿಕೆಯನ್ನು ತೋರುತ್ತಾರೆ. ನಾಗ- ನಾಗಯಕ್ಷಿ-ನಾಗಕನ್ನಿಕೆ-ನಾಗಕುಲ-ತಂಬೂರಿ ನಾಗ ಇತ್ಯಾದಿ ಕೆತ್ತನೆಗಳನ್ನು ಮಾಡುತ್ತಾರೆ. ನಾಗಪ್ರತಿಷ್ಠೆಯ ದಿನ ನಡೆಯುವ ಧಾರ್ಮಿಕ ಪೂಜೆಗಳು ಸಹಾ ಪಂಚವರ್ಣದ ಚಿತ್ರಗಳ ಮೂಲಕವೇ ನಡೆಯುತ್ತವೆ. ಅಲ್ಲಿ ವಾಸ್ತು ಮಂಡಲ, ರಾಕ್ಷೋಘ್ನ ಮಂಡಲ, ಚಕ್ರಾಬj ಮಂಡಲ, ಅಧಿವಾಸ ಮಂಡಲ ಇತ್ಯಾದಿ ಗಳು ರೇಖಾಗಣಿತದ ರೀತ್ಯಾ ಪ್ರಮಾಣಬದ್ಧ ಚಿತ್ರಗಳಾಗಿರುತ್ತವೆ. ಮರುದಿನ ನಡೆಯುವ ಆಶ್ಲೇಷಾ ಬಲಿಗೆ ದೊಡ್ಡ ಪ್ರಮಾಣದ ಮಂಡಲವನ್ನು ಪುರೋಹಿತರು ಪಂಚವರ್ಣಗಳಿಂದ ಬಹುಸುಂದರವಾಗಿ ಬರೆಯುತ್ತಾರೆ. ಆ ಮಂಡಲಕ್ಕೆ ಹೂವುಗಳ ವಿಶೇಷ ಅಲಂಕಾರವನ್ನು ಮಾಡುತ್ತಾರೆ.
ಒಟ್ಟಿನಲ್ಲಿ ನಾಗಾರಾಧನೆ ಇಡಿಯಾಗಿ ಲಲಿತಕಲೆಗಳ ಸಂಗಮವಾಗಿ ತೋರುತ್ತದೆ.