ಯೋಗೀಶ ರಾವ್, ಚಿಗುರುಪಾದೆ | Jul 20, 2012
ಅದೊಂದು ಪುಟ್ಟ ಗ್ಯಾರೇಜ್. ಗ್ಯಾರೇಜ್‌ನ ಮಹಡಿಯಲ್ಲಿ ಮನೆ ನಿರ್ಮಾಣ ಮಾಡಿ ಗೃಹಪ್ರವೇಶ ಸಮಾರಂಭ. ಈ ಸಮಾರಂಭವನ್ನು ಸ್ಮರಣಾರ್ಹಗೊಳಿಸುವ ದೃಷ್ಟಿಯಿಂದ ಔತಣಕ್ಕೂ ಮೊದಲು ಹಮ್ಮಿಕೊಂಡದ್ದು ನೃತ್ಯ ವೈವಿಧ್ಯ ಕಾರ್ಯಕ್ರಮ. ಶೀರ್ಷಿಕೆ "ನಾಟ್ಯೋಲ್ಲಾಸಂ 2012'. ನಡೆಸಿಕೊಟ್ಟವರು ಅಂತರ್ ರಾಜ್ಯ ಮಟ್ಟದಲ್ಲಿ ನಿರಂತರ ನಾಟ್ಯ ಕಾರ್ಯಕ್ರಮ ಗಳನ್ನು ನೀಡುತ್ತಾ ಬರುತ್ತಿರುವ "ನಾಟ್ಯ ನಿಲಯಂ' ಮಂಜೇಶ್ವರ ತಂಡ. ರೂವಾರಿ ನಾಟ್ಯ ಗುರು ಬಾಲಕೃಷ್ಣ ಮಂಜೇಶ್ವರ. ಸಂದರ್ಭ ಕಾಸರಗೋಡಿನ ಸತ್ಯಸಾಯಿ ರಾವ್-ಶ್ರೀದೇವಿ ದಂಪತಿ. ತಮ್ಮ ನೂತನ ಗೃಹ "ಶ್ರೀಪತಿ'ಯ ಗೃಹಪ್ರವೇಶ ಸಮಾರಂಭ 22-6-2012. ಅತೀ ಪುಟ್ಟ ವೇದಿಕೆಯಲ್ಲಿ ಲಭ್ಯ ಸ್ಥಳಾವಕಾಶವನ್ನು ಬಳಸಿ ಆಹ್ವಾನಿತ ಸುಮಾರು 200 ಪ್ರೇಕ್ಷಕರ ಮುಂದೆ ಅದ್ಭುತವಾಗಿ ಮೂಡಿಬಂತು.
ಮಂಗಳೂರು ವಿಶ್ವವಿದ್ಯಾನಿಲಯ ಸಭಾಂಗಣ, ಆಳ್ವಾಸ್ ನುಡಿಸಿರಿ ವೇದಿಕೆಗಳಂತಹ ವಿಶಾಲವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವ "ನಾಟ್ಯ ನಿಲಯಂ' ತಂಡ ಲಭ್ಯ ಚಿಕ್ಕ ವೇದಿಕೆಯನ್ನು ಜಾಣ್ಮೆಯಿಂದ ಉಪಯೋಗಿಸಿ ಪ್ರಬುದ್ಧತೆಯನ್ನು ಮೆರೆದಿತ್ತು. ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು.
ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆದ ನಾಟೊಲ್ಲಾಸಮ್‌ನಲ್ಲಿ 14 ನೃತ್ಯವೈವಿಧ್ಯಗಳನ್ನು ಪ್ರದರ್ಶಿಸಲಾಗಿತ್ತು. "ಭೋ ಶಂಭೋ', "ಜೈ ಹನುಮಾನ್', "ಯಾರಿಗೆ ವಧುವಾಗುವೆ', "ನೀಲಗಗನದೊಳು', "ನಲಿದಾಡೆಯೆನ್ನ ನಾಲಿಗೆ ಮೇಲೆ', "ಧರ್ಮಕ್ಕೆ ಕೈಬಾರದೀ ಕಾಲ', "ತುಂಗಾ ತೀರದಿ', "ಗಲ್ಲುಗಲ್ಲು ಗಲ್ಲೆನುತಾ', "ತಿಂಗಳು ಮುಳುಗಿದವು', "ಜಿಂಕಿ ಚಿಕ್ಕಿಚಾ ಹಾಂಗೆ ಕುಣಿಯಿರೋ', "ಹೆಂಡತಿಯೊಬ್ಬಳು', ಶಿಂದಾರೆ ಪದವರ್ಣ, ತಿಲ್ಲಾನ-ಹೀಗೆ ಶ್ಲೋಕ, ದಾಸ ಸಾಹಿತ್ಯ, ಜಾನಪದ, ಭಾವಗೀತೆ, ಯಕ್ಷಗಾನದ ಹಾಡುಗಳನ್ನು ಸಾಹಿತ್ಯವಾಗಿ ಬಳಸಿಕೊಳ್ಳಲಾಗಿತ್ತು.
ವೈವಿಧ್ಯಮಯ ಹಾಡುಗಳಿಗೆ ವೈವಿಧ್ಯಮಯ ವೇಷಭೂಷಣಗಳೊಂದಿಗೆ, ಭರತನಾಟ್ಯದ ಭದ್ರ ಬುನಾದಿಯ ಹೆಜ್ಜೆಗಾರಿಕೆಯೊಂದಿಗೆ ಕಾರ್ಯಕ್ರಮ ರಂಜಿಸಿತು. ಯಕ್ಷಗಾನದ ಪ್ರಸಿದ್ಧ ಹಾಡು "ನೀಲಗಗನ ದೊಳು' ನಾಟ್ಯ ವೈವಿಧ್ಯಕ್ಕೆ ಬಳಸಿಕೊಂಡದ್ದು ನಾಟ್ಯ ಅಭ್ಯಾಸಿಗಳಿಗೆ ಕೊಡು-ಕೊಳ್ಳುವಿಕೆಯ (ಯಕ್ಷಗಾನ ಮತ್ತು ಭರತನಾಟ್ಯ ಮಧ್ಯೆ) ಹೊಸ ಸಾಧ್ಯತೆಯನ್ನು ತೆರೆದುಕೊಂಡಂತಿತ್ತು.
ಕಾರ್ಯಕ್ರಮದ ಯಶಸ್ಸಿನ ರೂವಾರಿ ನೃತ್ಯಗುರು ಬಾಲಕೃಷ್ಣ ಮಂಜೇಶ್ವರ, ಕೊರಿಯೋಗ್ರಫಿ ಹಾಗೂ ನಟುವಾಂಗ ದಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ ಪ್ರಸಿದ್ಧ ಗಾಯಕರಾದ ಉಣ್ಣಿಕೃಷ್ಣನ್ ವೀಣಾಲಯಂ, ಉಣ್ಣಿಕೃಷ್ಣನ್ ಕುತ್ತಿಕೋಲ್, ವಿಠಲ ಶೆಟ್ಟಿ ಕಾಸರಗೋಡು, ಸುರೇಶ್ ಕಾಂಞಂಗಾಡ್ ಹಿನ್ನೆಲೆ ಗಾಯಕರಾಗಿ ಮೆರೆದಿದ್ದರು. ಪ್ರಬುದ್ಧ ಹಿನ್ನೆಲೆ ವಾದಕರಾದ ವೇಣು ಗೋಪಾಲಾಚಾರಿ (ಕೊಳಲು), ಕಣ್ಣನ್ ಕಾಂಞಂಗಾಡ್ (ಮೃದಂಗ), ತಂಬಾನ್ ಮಣಿಯನ್ (ತಬಲ), ಬಾಲಕೃಷ್ಣ ನೀಲೇಶ್ವರ (ಕೀಪ್ಯಾಡ್), ಗಣೇಶ್‌ನೀಲೇಶ್ವರ (ಪೇಡ್) ಹಿಮ್ಮೇಳ ಅನುರಣಿಸುವಂತೆ ಮಾಡಿದವರು. ಸುರೇಶ್ ಮಂಜೇಶ್ವರ ಮುಖವರ್ಣಿಕೆ, ಕಿರಣ್ ಮಾಸ್ಟರ್ ಮಂಜೇಶ್ವರರ ವ್ಯವಸ್ಥಾಪನೆಗಳಿಂದ ಕಾರ್ಯಕ್ರಮ ಸ್ಮರಣಾರ್ಹಗೊಳಿಸಿದರು.
ಮನೆ ಕಟ್ಟಿದ ಪ್ರಯಾಸದ ಮಧ್ಯೆಯೂ ನಾಟ್ಯ ಕಲೆಯನ್ನು ಪ್ರೋತ್ಸಾಹಿಸಿದ ಹೃದಯ ವೈಶಾಲ್ಯಕ್ಕೆ ಸತ್ಯಸಾಯಿ ರಾವ್ ದಂಪತಿ ಅಭಿನಂದನಾರ್ಹರು.