Thursday, May 23, 2013
Last Updated: 9:28:36 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಲಲನೆಯ ವರ್ಣನೆ
    • ಲಲನೆಯ ವರ್ಣನೆ.

      • ಪ್ರೊ. ಶಿವರಾಮಯ್ಯ | Jul 20, 2012

        ಪ್ರಾಚೀನಕಾಲದಿಂದಲೂ ಹೆಣ್ಣಿನ ಅಸ್ತಿತ್ವಕ್ಕೆ ಮಹತ್ವ ಕೊಡಲಾಗಿಲ್ಲ. ಪುರುಷನು ಹೆಣ್ಣನ್ನು ಕಾವ್ಯವರ್ಣನೆಗೆ ಮತ್ತು ಭೋಗಕ್ಕೆ  ಬಳಸುತ್ತಿದ್ದುದೇ ಹೆಚ್ಚು. ಇತಿಹಾಸವನ್ನು ಅವಲೋಕಿಸುತ್ತ ಹೋದರೆ ಲಿಂಗಭೇದ ಅಮಾನವೀಯ ಚಿತ್ರಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ವೇಶ್ಯಾವೃತ್ತಿಯೂ ಸಾಮಾಜಿಕ ಲಿಂಗ ಅಸಮಾನತೆಯ ಪ್ರತಿಫ‌ಲವೇ ಆಗಿದೆ. ಈ ಕುರಿತ ಕೆಲವು ವಿಚಾರಗಳು ಇಲ್ಲಿವೆ...


        ಒಟ್ಟು ನಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಗಮನಿಸಿದಾಗ "ಹೆಣ್ಣು' ಸಾಂಸ್ಕೃತಿಕವಾಗಿ ದಾಖಲಾಗಿರುವುದು ಕೇವಲ ವರ್ಣನಾರ್ಹ ವಸ್ತುವಾಗಿಯೇ ಎಂಬುದು ಉತ್ಪ್ರೇಕ್ಷೆಯಲ್ಲ. ಬಹುಪಾಲು ಕವಿಗಳು ಹೆಣ್ಣಿನ ಸೌಂದರ್ಯವನ್ನು ಸಮಯ ಸಿಕ್ಕಾಗಲೆಲ್ಲಾ ಬಣ್ಣಿಸಿ ದಣಿದಿದ್ದಾರೆ. ಕೆಲವೊಮ್ಮೆ ಪ್ರಕೃತಿಯ ಪ್ರತೀಕವೆಂದು ಕರೆದು ಆಕೆಯನ್ನು ಆರಾಧಿಸಿಯೂ ಇದ್ದಾರೆ. ಒಟ್ಟಾರೆ ಅವಳ ಬೌದ್ಧಿಕ ಹಾಗೂ ಮಾನಸಿಕ ಸ್ವರೂಪ ಚಿತ್ರಣವನ್ನು ಕೊಡುವಲ್ಲಿ ಸೋಲುತ್ತಾರೆ. ಇದಕ್ಕೆ ಕಾರಣ ಮಾನವ ಸಮಾಜದಲ್ಲಿ ಗಂಡು ಹೆಣ್ಣು ಅಭಿನ್ನ ಮತ್ತು ಅನಿವಾರ್ಯ ಘಟಕಗಳು ಎಂಬ ಅರಿವಿನ ಕೊರತೆ. ಅವಳು ಹೆಂಡತಿಯಾಗಿ, ಮಗಳಾಗಿ, ಸೋದರಿಯಾಗಿ, ಅಜ್ಜಿಯಾಗಿ ಮನೆ ಒಳಗೆ-ಹೊರಗೆ ದುಡಿದು ಬಂದ ದಾರಿ ಗಂಡಿನಷ್ಟೇ ಸರಿ ಅರ್ಧ ಇದೆ; ಆದರೂ ಆಕೆ ಲೋಕದಲ್ಲಿ ಹಾಗೂ ಅದರ ಪ್ರತಿಬಿಂಬವಾದ ಸಾಹಿತ್ಯ ಲೋಕದಲ್ಲಿಯೂ ಬಹುಮಟ್ಟಿಗೆ ಅವಜ್ಞೆಗೆ ಗುರಿಯಾಗಿದ್ದಾಳೆ. ಹೆಣ್ಣು ನಡೆದು ಬಂದ ದಾರಿಯನ್ನು ಗಮನಿಸಿದರೆ, ವೇದಕಾಲೀನ ಮಹಿಳೆಯ ಸ್ಥಾನ-ಮಾನ ಸ್ವಲ್ಪ ಉನ್ನತಮಟ್ಟದಲ್ಲಿಯೇ ಇದ್ದಿತೆಂದು ಹೇಳಬಹುದು. ಕೆಲವರಿಗಾದರೂ ವೇದ ವಿದ್ಯೆ ಲಭಿಸಿತ್ತು. ಅದರ ಪರಿಣಾಮವಾಗಿ ತತ್ತÌಜ್ಞಾನ ಮುಂತಾದ ಗಹನ ವಿಚಾರದಲ್ಲಿ ಚರ್ಚೆ ನಡೆಸುವಷ್ಟು ವಿಚಾರವಂತರಿದ್ದರು. ಆದರೆ, ಪುರಾಣ-ಇತಿಹಾಸಗಳ ಕಾಲದಲ್ಲಿ ಹೆಣ್ಣು ಅಲಕ್ಷಿಸಲ್ಪಟ್ಟಳು. ಮಹಾಕಾವ್ಯಗಳ ಕಾಲಕ್ಕೆ ಅವಳ ಸ್ಥಿತಿ ಇನ್ನೂ ಹದಗೆಟ್ಟಿತು. ಇದಕ್ಕೆ "ಹೆಣ್ಣು ಒಂದು ಭೋಗವಸ್ತು' ಎಂದು ಭಾವಿಸಿದ ರಾಜಪ್ರಭುತ್ವವೇ ಕಾರಣ. ಮುಂದೆ ಜೈನ ಹಾಗೂ ಬೌದ್ಧಧರ್ಮಗಳ ಕಾಲದಲ್ಲಿ ಅವಳು ತನ್ನ ದೀನ ಸ್ಥಿತಿಯಿಂದ ಸ್ವಲ್ಪ ಚೇತರಿಸಿಕೊಂಡಳು. ಕಂತಿ, ಶ್ರಾವಕಿ, ಯೋಗಿನಿ, ಭಿಕ್ಷುಣಿಯಾಗಿ ಅವಳು ಕಾಣಿಸಿಕೊಳ್ಳತೊಡಗಿದಳು. ಆದರೆ ಮುಂದೆ ಬಂದ ಸ್ಮತಿಕಾರರು ಮತ್ತೆ ಈ ಪರಿಸರವನ್ನು ಬಿಗಿಗೊಳಿಸಿ ಸ್ತ್ರೀಪುರುಷರೆಂಬ ತಾರತಮ್ಯವನ್ನು ಹೆಚ್ಚಿಸಿ ಸ್ತ್ರೀಸಮಾಜವನ್ನು ಅಧಃಪತನಗೊಳಿಸಿದರು.
        .
        ವಿವಾಹ ಸಂಸ್ಥೆ ಹುಟ್ಟಿದಂದಿನಿಂದ ಅಸ್ತಿತ್ವಕ್ಕೆ ಬಂದ ಗೃಹಿಣೀ ಸಮಾಜದ ಒಟ್ಟೊಟ್ಟಿಗೆ ಈ ವೇಶ್ಯಾವಾಟಿಕೆಗಳೂ ಬೆಳೆದುಬಂದಿವೆ. ಇದು ಎಲ್ಲ ದೇಶ ಎಲ್ಲ ಕಾಲಗಳಲ್ಲೂ ಇದ್ದ ಒಂದು ಪುರಾತನ ಪದ್ಧತಿ. ವಿವಾಹಿತ ಅಥವಾ ಅವಿವಾಹಿತ ಪುರುಷರು ಇಟ್ಟುಕೊಂಡ ಹೆಣ್ಣುಗಳೇ ವೇಶ್ಯೆಯರು, ಗಂಡಿನ ಆಡ್ಯತೆಯನ್ನು ಇದರಿಂದ ಗುರ್ತಿಸಲಾಗುತ್ತಿತ್ತು. ಸಾಮಾನ್ಯವಾಗಿ ಮೇಲುವರ್ಗದ ಗಂಡುಗಳು ಕೆಳವರ್ಗದ ಹೆಣ್ಣುಗಳನ್ನು ಇಟ್ಟುಕೊಳ್ಳುತ್ತಿದ್ದರು. ಕನ್ನಡ ಕಾವ್ಯಗಳಲ್ಲಿ ವೇಶ್ಯಾವಾಟಿಕೆ ಸಹ ಅಷ್ಟಾದಶ ವರ್ಣನೆಗಳಲ್ಲಿ ಒಂದು ಎಂದು ವರ್ಣಿಸಲ್ಪಟ್ಟಿದೆ. ಭೋಗವಸ್ತುಗಳಲ್ಲಿ ವೇಶ್ಯೆ ಬಹಳ ಮೇಲಿನವಳು. ತಮ್ಮ ಕಾವ್ಯ ಕಥಾಪುರುಷರು ವೇಶ್ಯಾವಾಟಿಕೆಯನ್ನು ಹೊಕ್ಕು ಹೊರಬರದಿದ್ದರೆ ಕನ್ನಡ ಕವಿಗಳಿಗೆ ನಿದ್ದೆಯಿಲ್ಲ. ಇ. ಪಿ. ರೈಸ್‌ ಆಪಾದನೆಗೆ ಇದೇ ಸರಕು.

        ವಿದ್ಯುಚ್ಚೋರನ ಕಥೆಯಲ್ಲಿ ರಾಜನು ಬಸದಿಗೆ ಹೊರಟ ಸಂದರ್ಭದಲ್ಲಿ ಇಬ್ಬರು ಸೂಳೆಯರು ಚಾಮರ ಹಾಕುತ್ತ ಬರುತ್ತಾರೆ. ಜನ್ನನ ಅನಂತನಾಥ ಪುರಾಣದಲ್ಲಿ ರಾಣಿವಾಸ, ಪೆಂಡವಾಸ ಎಂಬ ಎರಡು ಮಾತುಗಳುಂಟು. ಪೆಂಡವಾಸವು ಸೂಳೆಯರಿಗೆ ಸಂಬಂಧಿಸಿರಬೇಕು. ಕವಿ ಪಂಪನೂ ಪೆಂಡವಾಸದ ಸೂಳೆಯರು ಎಂದು ಹೇಳುತ್ತಾನೆ. ಪುರುಷರ ಸೇವೆಯನ್ನು ಮಾಡುತ್ತಿದ್ದವರು ಕೇವಲ ಸೂಳೆಯರಾದರೆ ಅವರ ದೇವರುಗಳ ಸೇವೆಗೆ ನಿಯಮಿತರಾಗಿದ್ದ ಹೆಣ್ಣುಗಳಿಗೆ "ದೇವಸೂಳೆಯರು' ಎಂದು ಶಾಸನಗಳಲ್ಲಿ ಕರೆಯಲಾಗಿದೆ. ಪ್ರಾಚೀನ ಕಾಲದಲ್ಲಿ ದೇವಸ್ಥಾನ ಒಂದು ಸಾಮಾಜಿಕ ಸಂಸ್ಥೆಯಾಗಿದ್ದು, ಪೂಜಾರಿ ಮೊದಲ್ಗೊಂಡು ರೂವಾರಿಯವರೆಗೆ ಸೂಳೆಯರದೂ ಪ್ರಮುಖ ವರ್ಗವಿತ್ತು ಮತ್ತು ಅವರಿಗೆ ಒಂದು ಸೂಳೆಗೇರಿಯೂ ಇತ್ತು. ಇವರನ್ನು ಆನಂತರದ ಕಾಲದಲ್ಲಿ ದೇವದಾಸಿಯರು ಎಂದೂ ಕರೆಯಲಾಯಿತು. ಇವರು ನೃತ್ಯಕಲೆಗಳಲ್ಲಿ ಪರಿಣತಿಯನ್ನು ಪಡೆದಿರುತ್ತಿದ್ದರು. ಪುರೋಹಿತರಾದಿಯಾಗಿ ಉಳಿದ ಪುರುಷರಿಂದ ಲೈಂಗಿಕವಾಗಿ ತೃಪ್ತಿಯನ್ನು ಪಡೆಯುತ್ತಿದ್ದರಲ್ಲದೆ ಕೆಲವೊಮ್ಮೆ ಶೋಷಣೆಗೂ ಒಳಗಾಗುತ್ತಿದ್ದರು. ಸಾಮಾನ್ಯವಾಗಿ ವೇಶ್ಯಾವೃತ್ತಿಯನ್ನು ಅವಲಂಬಿಸಿದ್ದ ಸಾಮಾನ್ಯ ಸ್ತ್ರೀಯರನ್ನು ಕನ್ನಡ ಶಾಸನ ಮತ್ತು ಕಾವ್ಯಗಳು ಗೌರವದಿಂದಲೇ ಕಂಡಿವೆ ಎಂದು ಡಾ. ಚಿದಾನಂದಮೂರ್ತಿ  ಅಭಿಪ್ರಾಯ ಪಡುತ್ತಾರೆ.
        ಪಂಪ ಭಾರತದಲ್ಲಿ ಸುಭದ್ರೆಯ ದರ್ಶನವು ಅರಿಕೇಸರಿಯ ಹೃದಯವನ್ನು ಕಲಕಿತ್ತು. ಅವನ ಅಂತಃಕರಣಗಳೆಲ್ಲ ಸಿಡಿದರೆ ಗುಳ್ಳೆಯೇಳುವ ಶೃಂಗಾರರಸದಲ್ಲಿ ಮುಳುಗಿ ಹೋಗಿದ್ದವು. ಇಂಥ ಮನಃಸ್ಥಿತಿಯಲ್ಲಿ ಅವನು ಹಿಂಬಾಲಿಸಿದ ನಾಗರಿಕ ವಿಟ ವಿದೂಷಕಾದಿಗಳೊಡನೆ ದ್ವಾರಕಾ ನಗರದ ಹೂವಿನ ಸಂತೆಯಂತಿದ್ದ ಹೂವಾಡಗಿತ್ತಿಯರ ಬೀದಿಗೆ ಕಾಲಿರಿಸುತ್ತಾನೆ.

        ಗ್ರಾಮ್ಯವಾದ "ದೇಸಿಯಂ ಪೊಸಯಿಸಿ' ಹೊಸತು ಮಾಡಿಕೊಂಡ ಮಾರ್ಗರೂಪವಾದ ಉದಾರತಾಗುಣವನ್ನು ಆ "ಉದಾತ್ತ ನಾರಾಯಣ'ನಾದ ಅರಿಕೇಸರಿಯ ಮೂಲಕವಾಗಿಯೇ ವಿಸ್ತರಿಸಿ ಹೇಳುವ ಕವಿಯ ಜಾಣ್ಮೆ ಮೋಹಕವಾಗಿದೆ. ಆ ಕಾಲದ ಪಟ್ಟಣಗಳಲ್ಲಿ ಹೂವಿನ ಬೀದಿಗಳಿದ್ದು ಸಂಜೆಯ ವೇಳೆಯಲ್ಲಿ ಅಲ್ಲಿ ಹೂವಿನ ವ್ಯಾಪಾರ ಅತಿಶಯವಾಗಿ ನಡೆಯುತ್ತಿತ್ತೆಂಬುದು ತಿಳಿದುಬರುತ್ತದೆ. ಹೂವಿನ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದವರು ಕೇವಲ ಸ್ತ್ರೀಯರೇ. ಆ ಮಾಲೆಗಾರ್ತಿಯರು ಹೇಗಿದ್ದರೆಂದರೆ, ಮೇಲಕ್ಕೆ ಎತ್ತಿದ್ದ ತೋಳುಗಳ ಕಂಕುಳ ಭಾಗ (ಕುಪ್ಪಸ ಇಲ್ಲದೆ) ಕಾಮನನ್ನು ಗಾಳಿಪಟ ಆಡಿಸುವಂತೆ ಆಡಿಸುವುದಕ್ಕೆಂಬಂತೆ ಇದ್ದು, ಎಲ್ಲಿಯೂ ಅಪರೂಪವಾಗಲು, ಹೊಸದಾದ ಮಾಲೆಯು ಕಾಮದೇವನಿಗೆಂದು ಎತ್ತಿದ ಮೀನಿನ ಧ್ವಜವನ್ನು ಒಂದು ಕಡೆಗೆ ಸರಿಸುತ್ತಿರಲು, ಎಂದರೆ ತಿರಸ್ಕರಿಸುತ್ತಿರಲು, ಚೆಲ್ಲಾಟವಾಡುತ್ತ ಹೂವಿನ ಹಾರಗಳನ್ನು ಮೇಲೆತ್ತಿ ತೋರಿಸುವ ಹೂವಾಡಗಿತ್ತಿಯರನ್ನು ಅರ್ಜುನ ನಿಂತು ನೋಡಿದನಂತೆ! ಪಟವಿದ್ಯೆ (ಗಾಳಿಪಟ) ಆಡಿಸುವ ಆಟದ ಉಪಮೆಯನ್ನು ಪಂಪ ಇಲ್ಲಿಗೆ "ತಗುಳಿc'ದ್ದಾನೆ.

        ಪಂಪ ಆದಿಪುರಾಣದಲ್ಲಿಯೂ ಕೂಡ ಪಟವಿದ್ಯೆಯ ಹೋಲಿಕೆಯನ್ನು ಬಳಸುತ್ತಾನೆ. ಪಟಮಿದೆ ಸಾಲ್ಗುಮನ್ಯಭವ ವಲ್ಲಭನಂ ಪಟವಿದ್ಯೆಯೆತ್ತಲುಂ ಜಟಮಟಿಕರ್ಕಳಂ ತೊಡರೆ ಸುತ್ತಲುಂ ಇದು ಶ್ರೀಮತಿ-ವಂಜ್ರಜಂಘ ಭವದ ಸಂದರ್ಭ. ಪಂಡಿತೆಯು ಶ್ರೀಮತಿಯ ಚಿತ್ರಪಟವನ್ನು ತೆಗೆದುಕೊಂಡು ನಿನ್ನ ಮತ್ತೂಂದು ಭವದ ಗಂಡನನ್ನು ಹುಡುಕಲು ಈ ಪಟವೇ ಸಾಕು. ಪಟದಾಟದಂತಹ ಸಂಸಾರವನ್ನು ಎತ್ತಿಹಾಕಲು (ಹಾರಿಸಲು) ಅದರಲ್ಲಿ ಆಸಕ್ತರಾದವರನ್ನು ಸುತ್ತಿಹಾಕಲು ಎನ್ನುವಳು. ವೇದಾಂತ ದೃಷ್ಟಿಗೆ "ಪಟವಿದ್ಯೆ'ಯು ಈ "ಭವಸಂಸಾರ'ಕ್ಕೆ ಒಡ್ಡಿದ ಪ್ರತಿಮೆಯಾಗುತ್ತದೆ.

        ಹರಿಹರನು ಹೂವಿನ ಮಾರುಕಟ್ಟೆಯನ್ನು ಪರಿಮಳದಾಡುಂಬೊಲನ (ಗಿರಿಜಾ: 2-84) ಎಂದಿದ್ದಾನೆ. ಗಿರಿರಾಜನ ರಾಜಧಾನಿಯಾದ ಔಷಧಿ ಪ್ರಸ್ಥಪುರದ ಹೂವಿನ ಮಾರುಕಟ್ಟೆಯಲ್ಲಿ ಹೂ ಮಾರುವ ಮಾಲೆಗಾರ್ತಿಯರು, ವಿಟರನ್ನು ಸೆಳೆಯುವ ಪುಣ್ಯಾಂಗನೆಯರು, ಅವರನ್ನು ಬೆನ್ನಟ್ಟಿ ಹುಡುಕುವ ವಿಟಪುರುಷರ ಚಿತ್ರಗಳಿವೆ. ಅಲ್ಲದೆ ರತ್ನಪಡಿ ವ್ಯಾಪಾರಿಗಳು, ಬಟ್ಟೆಯಂಗಡಿ ವರ್ತಕರು ಆ ಊರಿನ ಬೀದಿಗಳಲ್ಲಿ ವಹಿವಾಟು ಮಾಡುತ್ತಿದ್ದರು. ಹರಿಹರನ ಕಾಲದಲ್ಲಿ ವಿಜಯನಗರವು ದಕ್ಷಿಣ ಇಂಡಿಯಾದ ವ್ಯಾಪಾರ ವಹಿವಾಟಿನ ಕೇಂದ್ರ ಬಿಂದುವಾಗಿದ್ದಿತು. ಆದ್ದರಿಂದ, ಸೂಳೆಗೇರಿಗಳೂ ಸಹಜವಾಗಿದ್ದವು. ನೇಮಿಚಂದ್ರನ ಲೀಲಾವತೀ ಕಾವ್ಯದಲ್ಲಿ ಬೆಳದಿಂಗಳ ವಿಹಾರ, ಸೂಳೆಗೇರಿ, ಹೂವಿನ ಸಂತೆಗಳ ಸವಿಸ್ತಾರವಾದ ವರ್ಣನೆ ಬರುತ್ತದೆ. ಆದರೆ, ಪಂಪನಂತೆ ದೇಸಿಯನ್ನು ಮಾರ್ಗದಲ್ಲಿ "ಪೊಸತೆಂಬಂತೆ' ಆತ ಬೆಸೆಯಲಾರ. ಜನ್ನನ ಅನಂತನಾಥ ಪುರಾಣ, ಹರಿಹರನ ಗಿರಿಜಾ ಕಲ್ಯಾಣ ಮುಂತಾದ ಕೃತಿಗಳಲ್ಲಿಯೂ ವೇಶ್ಯಾವಾಟಿಕೆಯ ಚಿತ್ರಣ ಸಾಗಿಬಂದಿದೆ. ಜನ್ನ ಅನಂತನಾಥ ತೀರ್ಥಂಕರನನ್ನೂ ಹರಿಹರ ನಾರದನನ್ನೂ ಸೂಳೆಗೇರಿಗಳಲ್ಲಿ ಸುತ್ತಿ ಬರುವಂತೆ ಮಾಡುತ್ತಾರೆ. ಅಷ್ಟಾದಶವರ್ಣನೆ ಇರಬೇಕೆಂಬ ಕಟ್ಟಳೆಗೆ ಕಟ್ಟು ಬಿದ್ದ ಕನ್ನಡ ಕವಿಗಳು ಇಂಥ ಅಚಾತುರ್ಯಕ್ಕೆ ಕೈಹಾಕಿದ್ದರೂ ಆ ಕಾಲದ ಸಾಮಾಜಿಕ ಜೀವನವನ್ನು ಕಟ್ಟಿಕೊಡುವ ಮೂಲಕ ಸಾಂಸ್ಕೃತಿಕ ಪರಂಪರೆಗೆ ವಿಪುಲವಾದ ಸಾಮಗ್ರಿಯನ್ನೊದಗಿಸಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus