ಅನು ಬೆಳ್ಳೆ | Jul 22, 2012
ನನಗೂ ಅವರಿಗೂ ಪರಿಚಯವಾಗಿದ್ದು ತೀರಾ ಇತ್ತೀಚೆಗೆ. ಮುಂಜಾನೆಯ ವೇಗದ ನಡಿಗೆಗೆ ಸಾಥ್ ನೀಡುವವರಂತೆ ನನ್ನ ಹಿಂದೆಯೇ ವೇಗವಾಗಿ ಬರುತ್ತಿದ್ದವರು ಪರಿಚಿತರಂತೆ ನೇರವಾಗಿ ಮಾತಿಗಿಳಿದಿದ್ದರು. ನನಗಾದರೂ ಅವರನ್ನು ನೋಡಿದ ಪರಿಚಯವೂ ಇಲ್ಲ; ಹಾಗಂತ ಎಲ್ಲೋ ನೋಡಿದ ಹಾಗೆ ಇದೆಯಲ್ಲ , ಅನ್ನುವ ಅನುಮಾನವೂ. ಹಾಗಾಗಿ, ಅವರನ್ನು ಸೇರಿಕೊಂಡೆ, ನನ್ನ ನಡಿಗೆಯ ವೇಗಕ್ಕೆ ಕಡಿವಾಣ ಹಾಕಿಕೊಂಡಂತೆ.
""ನೀವು ನಮ್ಮ ಮನೆಯ ಮುಂದಿನಿಂದಲೇ ಹೋಗುವುದನ್ನು ಕಂಡಿದ್ದೇನೆ. ಹಾಗೇ ನನಗೂ ಹುಮ್ಮಸ್ಸು ನೋಡಿ. ನಾನೂ ವಾಕಿಂಗ್ ಹೊರಡೋಣ ಅಂದುಕೊಂಡಿದ್ದೇನೆ. ನಾಳೆಯಿಂದ ಇದೇ ಸಮಯಕ್ಕೆ ಸರಿಯಾಗಿ ಬರುತ್ತೇನೆ' ಕೇವಲ ಬಾಯಿಮಾತಿಗೆ ಅಂದಿದ್ದರೋ ಏನೋ ಅಂದುಕೊಂಡಿದ್ದೆ. ಇಲ್ಲ, ಅವರು ನನಗಿಂತಲೂ ಲವಲವಿಕೆಯಲ್ಲಿರುವುದನ್ನು ಗುರುತಿಸಿಕೊಂಡಿದ್ದೆ. ನನ್ನ ನಡಿಗೆಯೀಗ ಅವರ ಊರುಗೋಲಿನಂತಾಗಿದೆ. ಅವರ ಮನೆಯ ಮುಂದೆ ಬರುತ್ತಲೇ ಕಾಯುವಂತೆ ನಿಲ್ಲುತ್ತಿದ್ದೆ. ಆದರೆ, ಅವರು ನನ್ನನ್ನು ಕಾಯಿಸುತ್ತಿರಲಿಲ್ಲ. ನನ್ನ ನಡಿಗೆ ನಿಲ್ಲದಂತೆ ನನ್ನ ಜತೆಗೆ ಸೇರಿಕೊಳ್ಳುತ್ತಿದ್ದರು.
ಇಷ್ಟೊಂದು ಆತ್ಮೀಯರಾದ ಮೇಲೆ ಆ ಮಾತು, ಈ ಮಾತು ಬರುತ್ತದೆಯೆನ್ನಿ. ಉದ್ದೇಶಪೂರ್ವಕವಾಗಿ ನಾನೇನೂ ಕೇಳಿದ್ದಲ್ಲ. "ತಮ್ಮದು ಯಾವೂರಾಯ್ತು?' ಅಂದೆ. ಮುಖದಲ್ಲಿ ಮುಗುಳ್ನಗುವಿತ್ತು. "ನಿವೃತ್ತನಾದವನಿಗೆ ಯಾವೂರಾದರೇನು? ಒಂದೂರು ಹೋಗು ಅನ್ನುತ್ತೆ; ಇನ್ನೊಂದೂರು ಬಾ ಅನ್ನುತ್ತೆ' ಆಡಿದ ದಾಟಿಯಲ್ಲಿ ವಿಷಾದವಿತ್ತೂ, ವ್ಯಂಗ್ಯವಿತ್ತೂ ತಿಳಿಯಲಿಲ್ಲ. ನಿವೃತ್ತಿಯ ನೋವೇನಾದರೂ ಇರಬಹುದೆ?
ಅಂದುಕೊಂಡರೆ ಅದೂ ಇಲ್ಲವೆನಿಸಿತು. ಯಾಕೆಂದರೆ, ಆ ಜೀವನಕ್ಕೆ ಅವರು ಒಗ್ಗಿಕೊಂಡಂತೆ ತೋರುತ್ತಿದ್ದರು. ಯುವಕರನ್ನು ನಾಚಿಸುವಂತೆ ನೀಟಾಗಿ ಗಡ್ಡ ಬೋಳಿಸಿ, ಬಿಳಿಯ ತಲೆಗೂದಲನ್ನು ಪಕ್ಕಕ್ಕೆ ಬಾಚಿ, ನಿರ್ಮಲವಾದ ಬಟ್ಟೆ ಉಟ್ಟು ಸಂಪೂರ್ಣ ಆರೋಗ್ಯವಂತನಂತೆ ನಡೆಯುತ್ತಿದ್ದರು. ಅವರ ವಯಸ್ಸಿಗೆ ನಾವೆಲ್ಲಾ ಏನೋ ಅಂದುಕೊಂಡೆ. ಅವರ ಮಾತಿನ ಅರ್ಥ ತಿಳಿಯದೆ, ಮತ್ತೂಮ್ಮೆ ಕೇಳಬೇಕೆಂದುಕೊಂಡರೆ ಅವರಾಗಿಯೇ, ""ನೋಡಿ, ಮನುಷ್ಯ ಒಂದು ಕಡೆ ಸೆಟಲ್ ಆಗಿಬಿಟ್ರೆ ಲವಲವಿಕೆ ಬತ್ತಿ ಹೋದ ಹಾಗಲ್ಲವೆ?
ಅದಕ್ಕೆ ವಚನಕಾರರು ಸ್ಥಾವರಕ್ಕಳಿವುಂಟು ಜಂಗಮಕ್ಕಲ್ಲ ಅಂದಿರುವುದು' ನಕ್ಕರು. ನಾನು, ""ಆದರೂ ಮನುಷ್ಯ ತಾನು ಇಂಥಲ್ಲಿಯವನೆಂದು ಗುರುತಿಸಿಕೊಂಡಿರುವುದಿಲ್ಲವೆ? ಹಾಗೇ ನೀವೂ...' ಅಂದೆ.
ಸ್ವಲ್ಪ ಹೊತ್ತು ನಮ್ಮ ಪಾದುಕೆಗಳ ಸದ್ದು ಮಾತ್ರವಿತ್ತು. ಅವರೇನು ನಿಟ್ಟುಸಿರಿಟ್ಟರೋ, ಏದುಸಿರು ಬಿಡುತ್ತಿದ್ದರೋ; ಅಂತೂ ಒಂದು ಪೂರ್ಣವಿರಾಮ ಇಟ್ಟಂತೆ ಮೌನದ ಬಳಿಕ, ""ಅದೆಲ್ಲವೂ ಶಾಶ್ವತವೆ?
ಹುಟ್ಟು ಸಾವುಗಳೆಲ್ಲಾ ಒಂದು ನಿಮಿತ್ತ ಮಾತ್ರವಲ್ಲವೆ? ಈ ನಡುವೆ ಮನುಷ್ಯ ಹೇಗೆ ಬಾಳುತ್ತಾನೆನ್ನುವುದು ಮುಖ್ಯ ನೋಡಿ. ನಾನೀಗ ಹೇಗಿದ್ದೇನೆ? ನೋಡುವುದಕ್ಕೆ ಆರೋಗ್ಯವಂತನ ಹಾಗೆ ಕಾಣುತ್ತಿಲ್ಲವೇ?'
""ಹೌದು ಸ್ವಾಮಿ, ಇದರಲ್ಲಿ ಆಶ್ಚರ್ಯ ಪಡುವಂತದ್ದೇನಿದೆ? ಈಗಿನ ಲೈಫ್ ಸ್ಟೈಲ್ ಆ ಥರಾ ಇದೆ. ಈ ಶುಗರ್ ಕಾಯಿಲೆ ಹತ್ತಿಕೊಂಡು ಏಳೆಂಟು ವರ್ಷಗಳಾದವು, ಸ್ವಾಮಿ' ಅಂದಾಗ ಅವರ ಮೇಲೆ ಕನಿಕರವೂ ಮೂಡಿತು. ಆ ದಿನ ಅವರು ಮಾತಾಡಲೇ ಇಲ್ಲ. ತಮಗಿರುವ ಕಾಯಿಲೆಯ ಬಗ್ಗೆ ನನ್ನ ಬಳಿ ಹೇಳಿಕೊಂಡಿರುವುದಕ್ಕೆ ಬೇಸರದಿಂದಿರುವರೇನೋ ಅಂದುಕೊಂಡು ನಾನೂ ಸುಮ್ಮನಾದೆ.
ಮರುದಿನ ನಾನು ಎಂದಿಗಿಂತಲೂ ಬೇಗನೆ ಹೊರಟು ಅವರ ಮನೆಯ ಹತ್ತಿರ ಬರುವಷ್ಟರಲ್ಲಿ ಅವರೇ ನನಗಾಗಿ ಕಾದು ನಿಂತಿದ್ದರು. ನಾನು ಮುಗುಳ್ನಕ್ಕೆ. ಅವರೂ ಪ್ರತಿಕ್ರಯಿಸಿದವರೆ, ""ನಡೀರಿ, ಹೋಗೋಣ' ಅಂದರು, ಎಂದಿನ ದನಿಯಲ್ಲಿಯೇ. ಕೇಳಲೋ ಬೇಡವೋ ಎಂಬ ಜಿಜ್ಞಾಸೆಯೊಳಗೆ, ""ಮೂರು ದಿನಗಳಿಂದಲೂ ನೀವು ಕಾಣಿಸಲಿಲ್ಲ. ಊರಲ್ಲಿರಲಿಲ್ಲವೇ?' ಎಂದು ಪ್ರಶ್ನಿಸಿದೆ. ""ನನ್ನನ್ನು ನೀವು ಆಗಲೇ ಜಂಗಮನೆಂದು ಬಿಟ್ಟಿರಿ. ನಿಮ್ಮ ಊಹೆಯಂತೆ ನಾನೊಬ್ಬ ಅಖಂಡ ಬ್ರಹ್ಮಚಾರಿಯೇ. ಹಾಗಾಗಿ, ನಾನು ಊರೂರು ಅಲೆದರೂ ನನ್ನ ಹಿಂದೆ ಮುಂದೆ ಕೇಳುವವರಾರು ಇಲ್ಲ'. ನನ್ನ ಪ್ರಶ್ನೆಗೆ ಸಮಂಜಸ ಉತ್ತರ ಬಾರದಿದ್ದರೂ ಅವರು ಹೇಳಿದ ಮಾತು ನನಗೆ ಶಾಕ್‌ನಂತಾಗಿತ್ತು. ಮನೆಯಲ್ಲಿ ಹೆಂಡತಿ ಮಕ್ಕಳಿದ್ದೂ ಕೆಲಸದ ಹೊರೆಯಿಲ್ಲದೆಯೂ ಒಮ್ಮೊಮ್ಮೆ ನನಗೆ ತಾಳ್ಮೆ ತಪ್ಪುವುದಲ್ಲದೆ, ಯಕ್ಷಗಾನದ ಭಯಂಕರ ವೇಷಧಾರಿಯಂತೆ ಆರ್ಭಟಿಸಿ ಪ್ರತಿಕ್ರಿಯಿಸುತ್ತಿದ್ದೆ. ಮನೆಯಾಕೆ ಹೇಳುವ ಸಣ್ಣ ಪುಟ್ಟ ಕೆಲಸಗಳನ್ನೂ ನಿರಾಕರಿಸಿಬಿಡುತ್ತಿದ್ದೆ. ಹಿಂದೆ ಮುಂದೆ ಯಾರೂ ಇಲ್ಲದ ಈ ವಯಸ್ಸಿನಲ್ಲಿ ಎಲ್ಲವನ್ನೂ ಮಾಡಿಕೊಂಡು ಹೇಗಿರುವರೋ ತಿಳಿಯೆ. ಅಖಂಡ ಬ್ರಹ್ಮಚಾರಿ ಬೇರೆ ! ಅಚ್ಚರಿಯಾಯಿತು.
""ಮನೆ ಕೆಲಸಗಳೆಲ್ಲ ನಿಮ್ಮಿಂದ ಸಾಧ್ಯವೇ?' ಅಂದೆ. ""ಮನೆ ಕೆಲಸ ಏನಿರುತ್ತೆ? ಅಡುಗೆ ಮಾಡಿ ಮನೆ ಸ್ವತ್ಛ ಮಾಡಿ ಬಟ್ಟೆಗಳನ್ನು ಒಗೆದು ಹಾಕಲು ಒಬ್ಬಳಿದ್ದಾಳೆ ' ಎಂದು ದೇಶಾವರಿಯಾಗಿ ನಗುತ್ತ ಹೇಳಿದರು, ಬೆಳಿಗ್ಗೆ ಕುಂಚ ಹಿಡಿದು ಕುಳಿತರೆ ಸಂಜೆಯಾದರೂ ಸಮಯ ಸರಿಯುವುದೇ ತಿಳಿಯದು' ಏನನ್ನೂ ಫಕ್ಕನೆ ಹೇಳಿಕೊಳ್ಳದ ಅವರ ಬಗ್ಗೆ ಈ ಮಾತಿನಿಂದ ಕುತೂಹಲವೂ, ಆಶ್ಚರ್ಯವೂ ಅಯಿತು.
ಮದುವೆಯಾಗಿಲ್ಲವೆಂದಮಾತ್ರಕ್ಕೆ ಮನೆಕೆಲಸವನ್ನೆಲ್ಲಾ ಅವರೇ ಮಾಡಬೇಕೆಂದೇನಿದೆ? ಕೆಲಸಕ್ಕಾಗಿಯೇ ಹೆಂಗಸೊಬ್ಬಳು ಬರುತ್ತಾಳೆ; ಇಡೀ ದಿನ ಕುಂಚ ಹಿಡಿದು ಕುಳಿತಿರುವ ಸುಖೀಪುರುಷನೀತ ಅನಿಸಿತು.
ಆ ಪುಣ್ಯಾತ್ಮ ಒಂದು ದಿನವೂ ನನ್ನ ವೈಯಕ್ತಿಕ ವಿಷಯಗಳನ್ನು ಕೇಳಿರಲಿಲ್ಲ. ನನಗೂ ಹೇಳಿಕೊಳ್ಳಬೇಕೆಂಬ ಕುತೂಹಲವಿರಲಿಲ್ಲ. ಸುಮ್ಮನೆ ಅವರ ಜೊತೆಗೆ ಬೆಳಿಗ್ಗೆ ವಾಕಿಂಗ್ ಹೋಗಿಬರುತ್ತಿದ್ದೆ. ಆದರೆ ಆ ದಿನ ಹಿಂತಿರುಗಿ ಬರುವಾಗ ಗೇಟಿನ ಬಳಿಯೇ ನಿಲ್ಲಿಸಿ ಮಾತಿಗೆ ತೊಡಗಿದರೆ, ನನ್ನ ಲೆಕ್ಕ ಪ್ರಕಾರ ಇನ್ನು ಮೂರು ದಿನ ಆತ ಮನೆಯಿಂದ ಹೊರಗೆ ಬರದ ದಿನಗಳು ಅಂತಂದುಕೊಂಡೆ. ಅವರು ಹೇಳುವುದಕ್ಕೆಲ್ಲ "ಹೂಂ' ಗುಟ್ಟುತ್ತಿದ್ದೆ. ""ಬರೀ "ಹೂಂ'ಗುಟ್ಟುತ್ತಿದ್ದೀರಲ್ಲ, ಮನೆಗೆ ಬನ್ನಿ. ನಿಮಗೊಂದು ವೈಯಕ್ತಿಕ ವಿಷಯವನ್ನು ತಿಳಿಸಬೇಕು' ಅಂದರು. ತಟ್ಟನೆ ಎಚ್ಚೆತ್ತುಕೊಂಡಂತೆ, ""ಇಲ್ಲ, ಇನ್ನೊಂದು ದಿನ ಬರುತ್ತೇನೆ, ಮನೆಯಲ್ಲಿಯೂ ಹೇಳಿಲ್ಲ, ಆಫೀಸಿಗೂ ಹೊತ್ತಾಗುತ್ತೆ' ಎಂದೆ. ಅವರ ಮುಖ ನಿರಾಶೆಗೊಂಡದ್ದನ್ನು ಕಂಡೆ. ತೀರಾ ವೈಯಕ್ತಿಕ ವಿಷಯ ಅಂದರಲ್ಲವೆ? ಎಂದು ಆಲೋಚಿಸಿದವನೆ ಅವರಿಗೆ ಬೇಸರ ಮಾಡಬಾರದೆಂದುಕೊಂಡು ಒಪ್ಪಿಕೊಂಡೆ. ಮನೆಯ ಬಾಗಿಲು ದೂಡಿ ಒಳಗೆ ಕರೆದರು.
ಯಾಕೋ ಬ್ರಹ್ಮಚಾರಿಯ ಮನೆಯೆನ್ನುವ ಅಳುಕಿತ್ತು. ಒಳಗಡಿಯಿಟ್ಟಾಗ ಕುಳಿತುಕೊಳ್ಳುವಂತೆ ಸೂಚಿಸಿದರು. ""ನಿಮಗೆ ಅಭ್ಯಂತರವಿಲ್ಲದಿದ್ದರೆ ಸಕ್ಕರೆ ಇಲ್ಲದೆ ಚಹಾ ಮಾಡಿಕೊಡಬಲ್ಲೆ' ಅಂದರು. ಮುಜುಗರವೆನಿಸಿದ್ದಕ್ಕೋ ಅಥವಾ ಅಂತಹ ಟೀ ಕುಡಿದು ಅಭ್ಯಾಸವಿಲ್ಲದಕ್ಕೋ ನಿರಾಕರಿಸಿದೆ. ಆದರೆ, ಅದರಿಂದ ಆತನಿಗೇನೂ ಅನಿಸಲಿಲ್ಲವೆನ್ನುವುದು ತಿಳಿಯಿತು. ಅವರು ನನ್ನ ಎದುರಿಗೆ ಕುಳಿತವರೆ ಒಂದು ಫೋಟೋವನ್ನು ಕೊಟ್ಟರು. ನಾನು ತೆಗೆದುಕೊಂಡು ನೋಡಿದರೆ, ತುಂಬಾ ಮುದ್ದಾದ ಹುಡುಗಿಯ ಭಾವಚಿತ್ರ. ಸುಮಾರು 17-18ರ ವಯಸ್ಸು; ಮದುವೆಯಾಗಿದ್ದರೆ ಅದೇ ವಯಸ್ಸಿನ ಮಗಳಿರುತ್ತಿದ್ದಳ್ಳೋ ಏನೋ ಈತನಿಗೆ? ಆ ಪ್ರಶ್ನೆ ಕೇಳುವಂತಿಲ್ಲ. ಅಖಂಡ ಬ್ರಹ್ಮಚಾರಿಯಲ್ಲವೇ? ""ಇದು ಯಾರ ಭಾವಚಿತ್ರ?'
ಅಂದೆ. ""ಸುಮ್ಮನೆ ನೋಡಿ' ಅವರ ಮಾತು ವಿಚಿತ್ರವಾಗಿತ್ತು. ಮನುಷ್ಯನೂ ವಿಚಿತ್ರವಾಗಿ ಕಂಡರು.
ಅವರನ್ನೇ ನೋಡಿದೆ. ಮುಖದಲ್ಲಿ ತೇಜಸ್ಸು ಇತ್ತು. ಕಣ್ಣುಗಳು ಏನನ್ನೋ ಹೇಳಲು ತವಕಿಸುತ್ತಿದ್ದವು. ಅವರಾಗಿಯೇ ಆ ಭಾವಚಿತ್ರದ ಬಗ್ಗೆ ಹೇಳಬಹುದೆಂದುಕೊಂಡೆ. ""ನಾನು ಸತ್ತು ಬದುಕಿದವನು, ಅಂದ್ರೆ ಪುನರ್ಜನ್ಮ ಪಡೆಯುವುದಕ್ಕೆ ಕಾರಣಳಾದವಳು ಈ ಹುಡುಗಿ, ಗೀತಾಂಜಲಿ ಅಂತ. ರವೀಂದ್ರರ ಕವನದ ಹಾಗೆ ಇವಳು' ತಟ್ಟನೆ ಮಾತು ಮುಗಿಸಿ ನಿರ್ಲಿಪ್ತರಂತೆ ಕುಳಿತರು.
ಅವರು ಹೇಳಿದ್ದು ಹರೆಯದಲ್ಲಿ ನಡೆದ ಘಟನೆಯೆನಿಸಿತು. ನಾನು ಕೈಗಡಿಯಾರ ನೋಡಿಕೊಂಡೆ. ತತ್‌ಕ್ಷಣವೇ, ""ನಿಮಗೆ ಹೊತ್ತಾಯಿತಲ್ಲವೆ? ಇರಿ ಬಂದೆ' ಅಂದವರೇ ಎದ್ದು ಒಳಗೆ ಹೋದವರು ಕೈಯಲ್ಲೊಂದು ಫ್ರೆàಂ ಹಾಕಿದ ಭಾವಚಿತ್ರವನ್ನು ತಂದುಕೊಟ್ಟರು. ಕೆಳಗೆ ಸತ್ಯ ಎಂದು ಬರೆದಿತ್ತು! ಇದು ಯಾರು ಅನ್ನುವಂತೆ ಅವರನ್ನು ದಿಟ್ಟಿಸಿದೆ. ಅವರು ನಕ್ಕರು. ""ನನ್ನದೇ ಫೋಟೋ. ರಿಟಾçಯರ್x ಆಗುವ ಎರಡು ವರ್ಷಗಳ ಹಿಂದೆ ತೆಗೆದದ್ದು. ಅಂದ್ರೆ ನನಗೆ ಪುನರ್ಜನ್ಮ ಬರುವ ಮೊದಲಿನದ್ದು' ಅವರ ಮಾತನ್ನು ಕೇಳಿ ಬೆಪ್ಪನಂತೆ ಕುಳಿತು ಪಕ್ಕದಲ್ಲಿಟ್ಟಿದ್ದ ಭಾವಚಿತ್ರದತ್ತ ನೋಡಿದೆ. ಈಗ ನನಗೆ ನಿಜವಾಗಿಯೂ ಕುತೂಹಲ ಮೂಡಿದ್ದು. ""ಅದು ಹೇಗೆ ಸಾಧ್ಯ?' ಕುತೂಹಲದ ಪ್ರಶ್ನೆ ನನ್ನದು. ""ಅದೇ ಸ್ವಾಮಿ, ಮನುಷ್ಯ ಸಂಬಂಧಗಳೆಲ್ಲಾ ಸುಳ್ಳು' ಅಂದರು. ಅರ್ಥವಾಗಲಿಲ್ಲ. ""ಮತ್ತೆ, ಈ ಫೋಟೋ... ಪುನರ್ಜನ್ಮ?' ಅಂದೆ.
""ಅದರ ಹಿಂದೆ ದೊಡ್ಡ ಕಥೆಯಿದೆ. ನಿಮಗೆ ಆಫೀಸಿಗೆ ತಡವಾಗುವುದಿಲ್ಲವೇ?' ನನ್ನನ್ನು ಸಾಗ ಹಾಕಲು ಹೇಳಿದರೋ ಏನೋ? "ಹೌದು' ಎಂದು ಹೇಳಿ ಹೊರಟೆ.
ನನ್ನ ನಿರೀಕ್ಷೆಯಂತೆ ಆಸಾಮಿ ಮೂರು ದಿನ ನಾಪತ್ತೆ! ಮನೆಯಲ್ಲಿಯೇ ಇರಬಹುದೆನ್ನುವ ಊಹೆ ನನ್ನದು. ಕೆಟ್ಟ ಕುತೂಹಲಕ್ಕೆ ಮನೆಯತ್ತ ಹೋದರೆ ಬಾಗಿಲು ತೆರೆದುಕೊಂಡೇ ಇತ್ತು! ಮನೆಯಲ್ಲಿದ್ದರೂ ಆತ ಹೊರಗೆ ಬರುತ್ತಿಲ್ಲವೇಕೆಂದು ತಲೆ ಕೆಡಿಸಿಕೊಂಡು ಬಾಗಿಲಿನ ಮೇಲೆ ಕುಟ್ಟಿದೆ. ಹೊರಗೆ ಬಂದದ್ದು ಸುಮಾರು 50ರ ಅಂಚಿನ ಒಬ್ಬ ಮಹಿಳೆ. ಆಕೆ ಮನೆಗೆಲಸದವಳಿರಬೇಕೆಂದುಕೊಂಡೆ. ""ಸತ್ಯರವರು ಮನೆಯಲ್ಲಿಲ್ಲವೆ?' ನನ್ನ ಪ್ರಶ್ನೆಗೆ ತಬ್ಬಿಬ್ಟಾದವರಂತೆ ಕಂಡಿತು ಆಕೆಯ ಮುಖ. ಸುಧಾರಿಸಿಕೊಂಡು, ""ಇಲ್ಲ, ಮಗಳ ಮನೆಗೆ ಹೋಗಿರಬಹುದು' ಊಹಿಸಿಕೊಂಡು ಹೇಳಿದಳಾಕೆ. ಮಗಳ ಮನೆಗೆ ! ಅಖಂಡ ಬ್ರಹ್ಮಚಾರಿಗೆ ಮಗಳೆ?
ನಗು ಬಂದರೂ ತಡೆದುಕೊಂಡೆ. ಆಕೆ ಕದ ಮುಚ್ಚುವ ಮೊದಲು ನಾನೇ ಅಲ್ಲಿಂದ ಹೊರಟರೆ ಸಾಕೆಂದುಕೊಂಡು ಹೊರಗೆ ಬಂದು ಅರ್ಧ ದಾರಿಯವರೆಗೂ ವಾಕ್ ಮಾಡಿ ಹಿಂತಿರುಗಿದೆ. ಸತ್ಯಾರವರು ಹೇಳಿದ್ದೆಲ್ಲ ಸುಳ್ಳೇ? ಮೂರು ದಿನಗಳ ತರುವಾಯ ಮತ್ತೆ ನನ್ನನ್ನು ಊರುಗೋಲಾಗಿ ಮಾಡಿಕೊಂಡರು.
ದಾರಿಯುದ್ದಕ್ಕೂ ಅವರೂ ಮಾತನಾಡಲಿಲ್ಲ; ನಾನೂ ಮಾತನಾಡಿಸಲಿಲ್ಲ. ನಾನು ಮನೆಗೆಲಸದ ಹೆಂಗಸನ್ನು ವಿಚಾರಿಸಿರುವುದರಿಂದ ಅವರ ಬಣ್ಣ ಬದಲಾಯಿತೆಂದು ಮನುಷ್ಯ ಸುಮ್ಮನಿರುವರೇ ಅಂದುಕೊಂಡರೂ, ಅದೂ ಅಲ್ಲವಾಯಿತು. ಹಿಂತಿರುಗಿ ಬರುವ ಸಮಯದಲ್ಲಿ, ""ಮನೆಯಲ್ಲಿ ಏನಾದರೂ ತಾಪತ್ರಯವೇ?' ಎಂದರು. "ಇಲ್ಲ' ಅಂದೆ ಚುಟುಕಾಗಿ. ""ಮತ್ಯಾಕೆ ಮೌನವಾಗಿರುವಿರಲ್ಲಾ?' ಕೇಳಿದರು.
""ಏನಿಲ್ಲಾ, ನೀವೂ ಮೂರು ದಿನದಿಂದ ಇರಲಿಲ್ಲವಲ್ಲ' ಅಂದೆ. ತಕ್ಷಣವೇ ಸುಮ್ಮನಾದರು. ನಾನು ಒಳಗೊಳಗೆ ನಕ್ಕೆ. ಶತಸುಳ್ಳಿನ ಮನುಷ್ಯ ಅಂದುಕೊಳ್ಳುತ್ತ, ""ಊರಿಗೆ ಹೋಗಿದ್ದೀರಾ?' ಅಂದೆ.
""ಊರಿಲ್ಲದವನಿಗೆ ಊರು ಕಟ್ಟಬೇಡಿ. ಊರೂರು ಅಲೆಯುವವನು ನಾನು' ಅಂದರು. ಅವರ ಮಾತಿನಲ್ಲೇನೂ ಸಿಟ್ಟಿರಲಿಲ್ಲ. ""ಹಾಗಾದರೆ, ನೀವು ಈಗ ಈ ಊರಿನಲ್ಲಿರುವಿರಲ್ಲಾ? ಆದ್ದರಿಂದ ಸದ್ಯ ನೀವು ಇದೇ ಊರಿನವರು' ಅಂದೆ. ""ಇಲ್ಲೇನು ನನಗೆ ಸ್ವಂತ ಮನೆಯಿಲ್ಲ. ಹಾಗಿರುವಾಗ ಇದು ನನ್ನ ಊರು ಹೇಗಾದೀತು?' ""ಹಾಗಾದರೆ, ನಿಮ್ಮ ಹುಟ್ಟೂರು ಯಾವುದು? ಅದೇ ನಿಮ್ಮ ಊರು' ಅಂದೆ ಸ್ವಲ್ಪ ದನಿಯೆತ್ತರಿಸಿ. ಅವರು ಒಮ್ಮೆ ಕಕ್ಕಾಬಿಕ್ಕಿಯಾದರು. ನನ್ನ ದನಿಗೋ ಅಂದುಕೊಂಡೆ. ಅದಕ್ಕಲ್ಲ ಅನಿಸಿತು.
""ನಾನು ನಿಮಗೊಂದು ವೈಯಕ್ತಿಕ ಸತ್ಯವನ್ನು ಹೇಳಬೇಕೆಂದಿದ್ದೆ, ನೆನಪಿದೆಯೇ?' ಅಂದರು. ""ಹೌದು,
ಗೀತಾಂಜಲಿಯ ವಿಷಯವಲ್ಲವೆ?' ಅಂದೆ ಉದ್ದೇಶಪೂರ್ವಕವಾಗಿ. ""ಹೌದು, ಅದೇ ಹುಡುಗಿಯ ವಿಷಯ.
ನೀವು ಆಕೆಯ ಹೆಸರನ್ನು ನೆನಪಿಟ್ಟುಕೊಂಡಿರುವಿರಲ್ಲ?' ತಮಾಷೆಗೆಂದರೋ ತಿಳಿಯಲಿಲ್ಲ. ""ಕೇಳಿ, ಆ ಹುಡುಗಿಯಿಂದಾಗಿಯೇ ನಾನು ಬದುಕಿರೋದು'. ""ಹೌದು, ಈ ಸಂಗತಿಯನ್ನು ನೀವು ಈ ಹಿಂದೆಯೇ ಹೇಳಿರುವಿರಲ್ಲ?' ಅದರಲ್ಲೇನೂ ಸ್ವಾರಸ್ಯವಿಲ್ಲವೆನ್ನುವಂತೆ ಹೇಳಿದೆ. ""ನೋಡಿ, ಮನುಷ್ಯ ಒಳ್ಳೆಯವನಾಗಿದ್ರೆ ಎಲ್ಲರೂ ಒಳ್ಳೆಯವರೇ ಆಗುತ್ತಾರೆ; ಕೆಟ್ಟವನಾದ್ರೆ ಯಾರೂ ಹತ್ತಿರ ಹೋಗೋದಿಲ್ಲ,
ಅಲ್ಲವೇ?' ಅವರ ಮಾತಿನ ತಲೆಬುಡ ಅರ್ಥವಾಗಲಿಲ್ಲ. ಹೂಂ ಕೂಡ ಅನ್ನಲಿಲ್ಲ. ""ಆ ಹುಡುಗಿ ನನ್ನಲ್ಲಿ ಏನು ವಿಶೇಷ ಕಂಡಳ್ಳೋ; ನನ್ನನ್ನು ಹಚ್ಚಿಕೊಂಡಳು ಅನ್ನಿ' ಅವರ ಮಾತು ಇಷ್ಟವಾಗಲಿಲ್ಲ ನನಗೆ, ""ಈ ಪ್ರಾಯದಲ್ಲಿಯೇ?' ಅಂದೆ. ಮುಖದ ಭಾವ ಬದಲಾಯಿತು. ಸೋತವರಂತೆ ಕಂಡರು. ಕೊನೆಗೆ ಮನೆಯ ಗೇಟು ತಲುಪುವಷ್ಟರಲ್ಲಿ, ""ನಾಳೆ ಭಾನುವಾರವಲ್ಲವೇ? ನೀವು ಮನೆಗೆ ಬನ್ನಿ. ನಿಮ್ಮ ಬಳಿ ಎಲ್ಲವನ್ನೂ ಹೇಳಿಕೊಳ್ಳಬೇಕೆಂದಿರುವೆ, ವಿಶ್ವಾಸದಿಂದ. ಜೊತೆಗೆ ನಿಮಗೆ ಒಂದು ಚಿತ್ರವನ್ನು ಬರೆದುಕೊಡುತ್ತೇನೆ, ನನ್ನ ನೆನಪಿಗೆ. ಇನ್ನೆಷ್ಟು ದಿನ ಇಲ್ಲಿರುವೆನೋ ಗೊತ್ತಿಲ್ಲ' ಅಂದರು. ಹಿಂತಿರುಗದೆ ಮನೆಯೊಳಗೆ ನಡೆದರು.
ಮರುದಿನ ನಾನು ಅವರ ಮನೆಗೆ ಹೋದಾಗ ಧ್ಯಾನಾಸಕ್ತನಂತೆ ಕುಳಿತಿದ್ದರು. ಕೆಲಸದಾಕೆಯೂ ಇರುವಂತೆ ಕಾಣಲಿಲ್ಲ. ಸುಮ್ಮನೆ ತೊಂದರೆಕೊಡುವುದೇತಕೆಂದು ಹಿಂತಿರುಗುವವನಿದ್ದೆ. ನನ್ನನ್ನು ಗಮನಿಸದವರಂತೆ ಕಣ್ಣು ಮುಚ್ಚಿಯೇ ಕರೆದರು, ""ಬನ್ನಿ , ಕುಳಿತಿರಿ. ಈಗ ಬಂದೆ' ಅನ್ನುತ್ತಾ. ಆ ಧ್ಯಾನದ ಸ್ಥಿತಿಯಲ್ಲಿಯೂ ನನ್ನ ಬರುವಿಕೆ ಅವರಿಗೆ ತಿಳಿದಿದ್ದು ಆಶ್ಚರ್ಯವೆ! ಕುರ್ಚಿಯಲ್ಲಿ ಕುಳಿತೆ. ಒಂದೆರಡು ನಿಮಿಷಗಳಲ್ಲಿ ಎದ್ದು ನಿಂತು ನನ್ನೆದುರಿಗೆ ಕುಳಿತರು. ""ಈ ಶುಗರಿನ ಪ್ರಾಬ್ಲಿಂ ಸ್ವಾಮಿ, ನಾನಾ ತರದ ವೇಷ ಮಾಡಬೇಕು. ಏಳೆಂಟು ವರ್ಷಗಳಿಂದ ಕಾಡ್ತಾ ಇದೆ, ಅಂದೆನಲ್ಲವೆ? ಹಾಗಿರುತ್ತಾ ನನಗೆ ಜೀವನವೇ ಬೇಡ, ಸೂಸೈಡ್ ಮಾಡಿಕೊಳ್ಳೋಣ ಅನಿಸ್ತಿತ್ತು. ಎಲ್ಲದಕ್ಕು ಭಾವುಕನಾಗಿ ಬಿಡ್ತಿದ್ದೆ. ಕೈ ತುಂಬಾ ಹಣವಿತ್ತು. ಊರೂರು ಅಲೆಯುವವನಿಗೆ ಬಂಧನಕ್ಕೊಳಗಾದ ಅನುಭವ. ಯಾಕೆ ಹೀಗೆ... ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದೆ.
ಆವಾಗಲೂ ನನಗೆ ಗೊತ್ತಾಗಿರಲಿಲ್ಲ. ಆದರೆ ಮುಂದೊಂದು ದಿನ ಕನಸಿನಲ್ಲಿ ಎಲ್ಲಾ ಸ್ಪಷ್ಟವಾಗಿ ಗೋಚರಿಸಿದ್ದು, ಹುಡುಕುತ್ತಿದ್ದೆ... ಕೊನೆಗೂ ಹುಡುಕಿದೆನೆನ್ನಿ. ಜೋಪಡಿಯ ಮುಂದೆ ಭಿûಾಪಾತ್ರೆ ಹಿಡಿದುಕೊಂಡಿರುವಂತೆ ನನಗೆ ಗೋಚರಿಸಿದ್ದು ಅವಳೇ, ಆ ಹುಡುಗಿ. ಅವಳ ಬಗ್ಗೆ ವಿಚಾರಿಸಿದೆ. ಅಷ್ಟು ದಾರಿದ್ರ್ಯವಿದ್ದರೂ ಸ್ವಾಭಿಮಾನಿ ಹುಡುಗಿ. ದಿನಾ ಬಂದು ಭೇಟಿಯಾಗಿ ಮಾತನಾಡಿಸುತ್ತಿದ್ದೆ. ನಾನು ಬರೆದ ಚಿತ್ರಗಳನ್ನು ತೋರಿಸುತ್ತಿದ್ದೆ. ಅವಳಿಗೂ ಚಿತ್ರ ಬರೆಯುವ ಆಸಕ್ತಿ, ಹೇಳಿಕೊಡುತ್ತಿದ್ದುದುಂಟು. ಮೊದಲೇ ಹೇಳಿದೆನಲ್ಲವೆ, ನಾನು ಜಂಗಮಾಂತ. ನಾನು ಹೊರಡುವಾಗ ನನ್ನ ಜೊತೆಗೆ ಬರುವೆನೆಂದಿದ್ದಳು ಆದರೆ...' ಮಾತು ನಿಲ್ಲಿಸಿದರು. ಅವರು ಭಾವೋದ್ವೇಗಕ್ಕೆ ಒಳಗಾಗಿರುವಂತೆ ಕಂಡಿತು. ನಾನಾಗಿ ಏನೂ ಕೇಳಬಾರದೆಂದು ನಿರ್ಧರಿಸಿರುವುದರಿಂದ ಸುಮ್ಮನಿದ್ದೆ, ಅನುಕಂಪ ತೋರಿಸುವಂತೆ.
ಆ ಕ್ಷಣದಲ್ಲಿ ನನಗೆ ಜೀಕೆ ಮಾಸ್ತರರ ಪ್ರಣಯ ಪ್ರಸಂಗ ನೆನಪಾಯಿತು. ಮನುಷ್ಯ ಕನಸುಗಳನ್ನು ಕಟ್ಟಿಕೊಂಡಿರುವಷ್ಟು ದಿನ ಲವಲವಿಕೆಯಲ್ಲಿರಬಲ್ಲ ಅಂದುಕೊಂಡೆ. ಒಬ್ಬ ಮಧುಮೇಹಿ ಇಳಿವಯಸ್ಸಿನಲ್ಲಿ ಇಷ್ಟೊಂದು ಚುರುಕಿನಿಂದ ಇರಲು ಸಾಧ್ಯವೆ? ಈ ರೀತಿ ತನ್ನನ್ನು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತ? ಅವರ ಮುಖದಲ್ಲಿನ ತೇಜಸ್ಸು, ತಾಳ್ಮೆ, ತೂಕದ ಮಾತುಗಳು, ಕಣ್ಣಿನ ಕಾಂತಿ...
ಇವೆಲ್ಲವೂ ಆತನನ್ನು ಆರೋಗ್ಯವಂತನಂತೆ ಕಾಣಿಸುತ್ತಿದ್ದವು. ಮುಂದೆ ಅವರೂ ಏನನ್ನೂ ಹೇಳಲಿಲ್ಲ ; ನನಗೂ ಕೇಳಬೇಕೆನಿಸಲಿಲ್ಲ. ಆ ವಿಷಯವನ್ನೇ ಮರೆತುಬಿಟ್ಟಂತೆ ಇದ್ದೆವು. ಸುತ್ತಲೂ ಕಣ್ಣು ಹಾಯಿಸಿದರೆ ಎಲ್ಲವೂ ಖಾಲಿ ಖಾಲಿ ಅನಿಸಿತು, ಅವರ ಮುಗಿದ ಮಾತುಗಳಂತೆ. ಅಲ್ಲಿ ಕುಳಿತಿರಲಾರದೆ ಎದ್ದೆ. ಅವರು ಮತ್ತೆ ಧ್ಯಾನಕ್ಕೆ ಇಳಿದವರಂತೆ ಕಂಡರು. ""ಬರುತ್ತೇನೆ' ಎಂದು ಹೊರಗೆ ಬಂದಾಗ ಮಾತಿಲ್ಲದೆ ನನ್ನತ್ತಲೇ ನೋಡುತ್ತಿದ್ದರು.
ಗೀತಾಂಜಲಿಯ ನೆನಪಾಗಿ ಅವರ ಮೂಡ್ ಹಾಳಾಯಿತೇನೋ ಅಂದುಕೊಂಡೆ. ಸಮಾಧಾನ ಮಾಡಬೇಕೆಂದು ಕೂಡ ಅನಿಸಲಿಲ್ಲ. ಇದಾದ ಬಳಿಕ ಮತ್ತೆ ಮೂರು ದಿನ ಅವರು ಕಣ್ಮರೆಯಾದರು. ನಾಲ್ಕನೇ ದಿವಸಕ್ಕೆ ಗೇಟಿನ ಬಳಿ ಆತುಕೊಂಡಿರುತ್ತಾರೆಂದು ನಿರೀಕ್ಷಿಸಿದ್ದೆ. ಅವರ ದರ್ಶನವಾಗಲಿಲ್ಲ. ನನಗೆ ಕೆಟ್ಟ ಕುತೂಹಲವಿತ್ತೆನ್ನಿ. ನಾನೇ ಗೇಟು ದಾಟಿ ಮನೆಯ ಬಾಗಿಲನ್ನು ಇಣುಕಿದೆ.
ಬಾಗಿಲು ತೆರೆದುಕೊಂಡಿರುವಾಗ ಆಶ್ಚರ್ಯವಾಗದಿರಲಿಲ್ಲ. ಆತ್ಮೀಯತೆಯಿದ್ದುದರಿಂದ, ""ರಾಯರೆ' ಎಂದು ಸಂಬೋಧಿಸುತ್ತಾ ಕರೆದೆ. ಅವರ ಬದಲಾಗಿ ಕೆಲಸದಾಕೆ ಹೊರಗೆ ಬಂದು ಮುಗುಳ್ನಕ್ಕು, ""ಅವರು ಊರಲಿಲ್ಲ' ಅಂದಳು, ಒಂದೆರಡು ಬಾರಿ ಅವರ ಮನೆಗೆ ಹೋಗಿರುವ ನನ್ನನ್ನು ಪರಿಚಿತನಂತೆ ಕಂಡು.
ಅವಳೇನೂ ನನ್ನನ್ನು ಹಾಗೆ ಹೋಗಗೊಡಲಿಲ್ಲ. ಒಳಗೆ ಕರೆದಳು. ಅವಳಿಗೆ ತೊಂದರೆಯಾಯಿ ತೆಂದುಕೊಂಡು, ""ಏನಿಲ್ಲ, ಇವತ್ತು ಅವರು ಕಾಣಿಸಲಿಲ್ಲ ನೋಡಿ, ಅದಕ್ಕೆ ಬಂದೆ. ಬೇರೇನೂ ಧಾವಂತವಿಲ್ಲ.
ಅವರು ಹಿಂದಿರುಗಿದ ಮೇಲೆ ಬರುತ್ತೇನೆ' ಅನ್ನುತ್ತ ಬಾಗಿಲಿಗೆ ಬೆನ್ನು ಹಾಕಿದಾಗ ಆಕೆ, ""ದಯ ವಿಟ್ಟು ಒಳಗೆ ಬನ್ನಿ. ನಿಮ್ಮ ಜೊತೆಗೆ ಮಾತನಾಡುವುದಿದೆ' ಎಂದಳು.
ಅವಳು ಸತ್ಯರ ಬಗ್ಗೆ ಹೇಳುವುದಕ್ಕಾಗಿಯೇ ನನ್ನನ್ನು ಕರೆಯುತ್ತಿ ರುವುದೆನಿಸಿತು. ನನಗೂ ಕೆಟ್ಟ ಕುತೂಹಲವಿತ್ತಲ್ಲವೆ? ಅದಲ್ಲದೆ, ಆಕೆ ನಾವಿಬ್ಬರು ಮಾತಾಡಿಕೊಂಡಿರುವುದನ್ನು ಕೇಳಿಸಿರುವ ಸಾಧ್ಯತೆ ಯಿರುವುದರಿಂದ ಏನೋ ರಹಸ್ಯ ಹೇಳಿಯಾಳೆಂದುಕೊಂಡೆ. ಒಳಗೆ ನಡೆದೆ. ""ಇವರ ಬಗ್ಗೆ ಹೇಳಬೇಕೂಂತ ಕರೆದೆ' ಸೆರಗಿನಿಂದ ಕೈ ಒರೆಸಿಕೊಳ್ಳುತ್ತಾ. ಅವಳ ಮುಖದಲ್ಲಿ ಸಂಕೋಚವಿತ್ತು ಮತ್ತು ಆಕೆಯ ಸಂಬೋಧನೆ ನನಗೆ ಆಶ್ಚರ್ಯವನ್ನುಂಟು ಮಾಡಿತು. ""ನೀವು ಯಾರ ವಿಷಯ ಹೇಳುತ್ತಿರುವುದು?' ಅಂದೆ.
ಆಕೆಯ ಮುಖ ಬಿಳುಚಿಕೊಂಡಿತು. ""ನನ್ನ ಯಜಮಾನರ ಬಗ್ಗೆ. ನೀವೊಬ್ಬರೆ ಅವರಿಗೆ ಆತ್ಮೀಯರಾಗಿರುವುದರಿಂದ ನಿಮ್ಮ ಬಳಿ ಹೇಳಿಕೊಳ್ಳಬೇಕೆನಿಸಿತು'. ಆಕೆ ನನ್ನ ಕಣ್ಣುಗಳಲ್ಲಿದ್ದ ಆಶ್ಚರ್ಯಕ್ಕೋ; ಕುತೂಹಲಕ್ಕೋ ಇನ್ನಷ್ಟು ಸಂಕೋಚಪಟ್ಟಂತೆ ಕಂಡರು. ಅದನ್ನು ಹತ್ತಿಕ್ಕಿಕೊಂಡರೂ, ನನ್ನ ಮನಸ್ಸಿಗೆ ಮಾತ್ರ ಸತ್ಯರವರು ಒಬ್ಬ ನಿಗೂಢ ವ್ಯಕ್ತಿತ್ವದವರಂತೆ ಕಂಡರು.
""ಮಗಳ ಮನೆಗೆ ಅಂತಾರೆ, ಮೂರು ದಿವಸ ಕಾಣೆಯಾಗಿ ಬಿಡುತ್ತಾರೆ. ಕೇಳಿದರೆ ಹೇಳುವುದಿಲ್ಲ. ಮಗಳು ದೂರದ ಅಮೆರಿಕ ದಲ್ಲಿರುವುದು. ಎಲ್ಲಿ ಹೋಗ್ತಾರೋ; ಏನು ಮಾಡ್ತಾರೋ ಒಂದೂ ತೋಚುವುದಿಲ್ಲ. ನಿಮ್ಮ ಬಳಿ ಏನಾದರೂ ಹೇಳಿಕೊಂಡಿರುವರೆ?'
""ಇಲ್ಲಿಯವರೆಗೆ ನೀವು ಅದನ್ನು ವಿಚಾರಿಸಿಕೊಂಡಿಲ್ಲವೇ?' ನಾನು ಪ್ರಶ್ನಿಸಿದೆ. ಮಗಳು ಅಮೆರಿಕದಲ್ಲಿರುವುದು ಗೊತ್ತಿದ್ದೂ ಆಕೆ ಅವರು ಮಗಳ ಮನೆಗೆ ಅಂದಾಗ ಅನುಮೋದಿಸುತ್ತಾ ಸುಮ್ಮನಿರುವುದೇತಕೆ? ""ನನ್ನ ಮಾತು ಎಲ್ಲಿ ಕೇಳ್ತಾರೆ? ನಾನೇನಾ ದರೂ ಪ್ರಶ್ನಿಸಿದರೆ ಆರ್ಭಟಿಸಿ, ತಾಂಡವ ನೃತ್ಯ ಮಾಡುವುದಕ್ಕೆ ಶುರು ಮಾಡ್ತಾರೆ. ಅದಕ್ಕೆ ಕೇಳುವುದನ್ನು ನಿಲ್ಲಿಸಿಬಿಟ್ಟೆ ಅಂದರು. ""ಬಹಳ ಸೋಜಿಗ ಅನಿಸುತ್ತದೆ ನಿಮ್ಮ ಯಜಮಾನರ ವಿಷಯದಲ್ಲಿ. ನನ್ನ ಬಳಿ ಯಾವ ಸಂಗತಿಯನ್ನೂ ಹೇಳಿಲ್ಲ' ಗೀತಾಂಜಲಿಯ ವಿಷಯವನ್ನು ಮುಚ್ಚಿಡುತ್ತಾ ಹೇಳಿದೆ. ""ಮತ್ತೆ ಮೊನ್ನೆ... ಆ ಹುಡುಗಿಯ ಬಗ್ಗೆ ನಿಮಗೆ ಹೇಳುತ್ತಿ ದ್ದರಲ್ಲವೆ?' ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಯೇ ಬಿಟ್ಟರು!
""ಆ ದಿನ ನಿಮಗೆ ಭಾವಚಿತ್ರವನ್ನು ತೋರಿಸಿದರಲ್ಲವೇ?' ""ಹೌದಮ್ಮಾ, ಭಾವಚಿತ್ರ ತೋರಿಸಿದರು, ಹೆಸರು ಗೀತಾಂಜಲಿ ಅಂದರು. ಇನ್ನು, ಆಕೆಯ ಬಗ್ಗೆ ಕಲ್ಪಿಸಿಕೊಂಡು ಏನೇನೋ ಅಂದರು. ನನಗೊಂದು ಚಿತ್ರವನ್ನು ಬರೆದುಕೊಡುತ್ತೇನೆಂದು ಕೂಡ ಹೇಳಿದ್ದರು' ಆಕೆ ಕೇಳಬಹುದಾದ ಪ್ರಶ್ನೆಗಳನ್ನು ಊಹಿಸಿಕೊಂಡು ಎಲ್ಲವನ್ನೂ ಹೇಳದೆ ಕೆಲವೊಂದನ್ನು ಮುಚ್ಚಿಟ್ಟುಕೊಂಡೆ. ಆಕೆ ಅಸಮಾಧಾನದ ನಿಟ್ಟುಸಿರಿಟ್ಟಂತೆ ಕಂಡಿತು.
""ಅವರು ಯಾರ ಜೊತೆಗೂ ಹೀಗೆಲ್ಲಾ ಹೇಳುವುದಿಲ್ಲ; ಯಾವತ್ತು ಹೀಗೆ ಹೇಳು ತ್ತಾರೋ ಆಮೇಲೆ ಆ ಊರಿನಲ್ಲಿ ನಿಲ್ಲುವುದಿಲ್ಲ. ಆವಾಗೆಲ್ಲಾ ನಾನೇ ಅವರನ್ನು ಹುಡುಕಿಕೊಂಡು ಹೋಗಬೇಕು; ಬಿಡಾರವನ್ನು ಪಲ್ಲಟ ಮಾಡಬೇಕು. ಈ ಇಳಿವಯಸ್ಸಿನಲ್ಲಿ ನನಗೆ ಸಾಧ್ಯವೇ?' ಆಕೆ ಕಣ್ಣೀರು ಮಿಡಿದರೋ ಏನೋ?
ಸೆರಗನ್ನಂತು ಕಣ್ಣಿಗೆ ಒತ್ತಿಕೊಂಡದ್ದು ಕಂಡಿತು. ಆಕೆ ಕಲಸದವಳಲ್ಲ , ಅವರ ಕೈ ಹಿಡಿದ ಪತ್ನಿಯೇ ಆಗಿರಬೇಕು ಎಂದು ನನಗೆ ದೃಢವಾಗತೊಡಗಿ ಸಮಾಧಾನ ಪಡಿಸುವುದು ನನಗೆ ಗೊತ್ತಾಗಲಿಲ್ಲ.
""ಬಂದಾರು, ಚಿಂತಿಸಬೇಡಿ ' ಅಂದೆನ್ನುತ್ತಾ ಹೊರಟೆ. ಇನ್ನು ಮುಂದೆ ಅವರ ಜೊತೆಗೆ ವಾಕಿಂಗ್ ಹೋಗಬಾರದೆಂದು ನಿರ್ಧರಿಸಿದೆ. ಆದರೆ ನಡೆಯುವ ದಾರಿಯನ್ನು ಬದಲಾಯಿಸುವುದು ಅಷ್ಟು ಸುಲಭವೆ?
ಅಂತೂ ಈ ವಿಷಯಕ್ಕಾಗಿಯೇ ನನ್ನ ನಡುಗೆಯ ಪಥವನ್ನು ಬದಲಾಯಿಸಿದೆಯೆನ್ನಿ. ಆವಾಗೆಲ್ಲಾ ಎದುರಾಗುವವರು ಎದುರು ಮನೆಯ ಬಾಬಣ್ಣನವರು. ""ಏನು ರಾಯರೆ, ಬದಲಾಗಿ ಬಿಟ್ಟಿದ್ದೀರಿ?'
ವ್ಯಂಗ್ಯವಾಡಿದರು. ಅವರಿಗೆ ನನ್ನ ಹಾಗೂ ಸತ್ಯರವರ ಸ್ನೇಹದ ಬಗ್ಗೆ ಗೊತ್ತಿರದ್ದೇನಲ್ಲ. ""ಹೀಗೆ ಒಂದೇ ದಾರಿಯಲ್ಲಿ ನಡೆದು ಬೇಸರವೆನ್ನಿ. ಅದಕ್ಕೆ ಸ್ವಲ್ಪ$ಬದಲಾವಣೆ.' ಅಂದೆ. ಅವರು ನಕ್ಕರು. ""ಇದೇ ಮಾತು ಸತ್ಯರವರೂ ಹೇಳುತ್ತಿದ್ದರು. ನೆಲೆ ನಿಂತ ಊರು ಅವರನ್ನು ದೂಡದಿದ್ದರೂ; ಅವರಾಗಿಯೇ ಊರು ಬದಲಾಯಿಸುತ್ತಿದ್ದರು. ಇನ್ನೆಷ್ಟು ದಿನ ಇಲ್ಲಿ ಅಂದೆ ಅವರನ್ನು. ಬುದ್ಧಿಭ್ರಮಣೆಯಾಗುವವರೆಗೆ ಅಂದಿದ್ದರು.
ಈಗ ಮೂರ್‍ನಾಲ್ಕು ದಿವಸಗಳಿಂದ ಕಾಣಿಸುತ್ತಿಲ್ಲವಲ್ಲವೇ? ಊರು ಬಿಟ್ಟರೇನೋ?' ನನ್ನನ್ನು ಓದಿಕೊಂಡವರಂತೆ ಹೇಳಿದರು.
""ರಾಯರೆ, ಆ ಮನುಷ್ಯ ಸರಿಯಿಲ್ಲ ಅನ್ನಲಾರೆ. ಆದರೂ ಇನ್ನೊಬ್ಬರಿಂದ ಅನುಕಂಪ ಗಿಟ್ಟಿಸಿಕೊಳ್ಳಬೇಕೆನ್ನುವ ಚಪಲ ವುಳ್ಳವರು. ನಿಮ್ಮ ಹತ್ತಿರ ಒಂದು ಮಾತನಾಡಿದರೆ; ನನ್ನ ಹತ್ತಿರ ಇನ್ನೊಂದೇನನ್ನೋ ಹೇಳುತ್ತಾರೆ. ಏನೇನೋ ಅರ್ಥವಿಲ್ಲದ್ದೆಲ್ಲಾ' ಈ ಅನುಭವ ಬಾಬಣ್ಣನವರಿಗೂ ಆಗಿದೆ ಅಂದುಕೊಂಡೆ. ಬಾಬಣ್ಣ ನನ್ನ ಪ್ರತಿಕ್ರಿಯೆಗೆ ಕಾಯುವವರಲ್ಲ. ಸತ್ಯರ ಬಗ್ಗೆ ಎಲ್ಲವನ್ನೂ ಹೇಳಿಯೇ ತೀರಬೇಕೆನ್ನುವಂತೆ, ""ನಿಮಗೇನೋ ಚಿತ್ರ ಬರೆದು ಕೊಡುವರಂತಲ್ಲ? ಆದರೆ, ನೀವು ಜನ ಹೇಗೆ ಅಂತ ತಿಳಿಯದೆ ಆ ಮಾತು ಅಂದರಂತೆ. ಅದಕ್ಕೆ ನಿಮ್ಮನ್ನು ಮನೆಗೆ ಕರೆಸಿರುವುದಂತೆ. ನೀವು ಒಳ್ಳೆಯ ಜನ ಅಂತಂದಿದ್ದೆ. ಅವರಿಗೆ ಏನನಿಸಿತೋ, ಮಾತಾಡದೆ ಹೊರಟೇ ಬಿಟ್ಟರು. ಆನಂತರ ನನಗೂ ಕಂಡಿಲ್ಲ' ನಾನೇನೋ ಒತ್ತಾಯಪೂರ್ವಕ ಚಿತ್ರ ಬರೆಸುವುದಕ್ಕೆ ಹೇಳಿದಂತೆ ಇತ್ತು ಅವರ ಮಾತು. ಈ ಬಾಬಣ್ಣನೇ ಏನೋ ಅವರ ಕಿವಿ ಕಚ್ಚಿ ದ್ದಾರೆಂದುಕೊಂಡೆ. ಬಾಬಣ್ಣನಿಗೆ ಅಂಥ ಬುದ್ಧಿಯಿರುವುದರಿಂದಲೇ ನಾನು ಅವರ ವಿರುದ್ಧ ದಿಕ್ಕಿಗೆ ವಾಕಿಂಗ್ ಹೊರಡುತ್ತಿದ್ದದ್ದು.
ಇದಾಗಿ ಒಂದೆರಡು ವಾರಗಳು ಕಳೆದಿರಬಹುದು. ನನ್ನದೊಂದು ಕೆಟ್ಟ ಕುತೂಹಲ, ಸತ್ಯರವರ ಧರ್ಮಪತ್ನಿ ಗಂಡನನ್ನು ಹುಡುಕುವಲ್ಲಿ ಸಫಲರಾದರೆ? ಅನ್ನುವುದನ್ನು ತಿಳಿದು ಕೊಳ್ಳಬೇಕೆನಿಸಿತು. ಅವರ ಮನೆಯ ದಾರಿಯನ್ನು ಹಿಡಿದೆ. ಹೆಂಗಸು ಮನೆಯ ಬಾಗಿಲಿಗೆ ನಿಂತಿದ್ದರು; ಯಾರನ್ನೋ ನಿರೀಕ್ಷಿಸುವಂತೆ ಮತ್ತು ಏನನ್ನೋ ಹೇಳುವ ಕಾತರದಿಂದಿರುವಂತೆ. ನನ್ನನ್ನು ಆಕೆ ಗಮನಿಸಿದಂತೆ ಇರಲಿಲ್ಲ. ಅಲ್ಲಿಗೆ ಹೋಗುವುದು ಬೇಡವೆನಿಸಿ ಹಿಂತಿರುಗಿದೆ. ಸತ್ಯರವರು ಹೋಗಿರುವುದಾದರೂ ಎಲ್ಲಿಗೆ?
ಆ ಪ್ರಶ್ನೆ ನನ್ನನ್ನು ಹಿಂಬಾಲಿಸುತ್ತಿರುವಂತೆ ಭಾಸವಾಯಿತು.