Friday, May 24, 2013
Last Updated: 1:47:42 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದೇಶ ಭಾಷೆಗಳ ಗಡಿಯ ದಾಟಿ...
    • ಇನ್ನಷ್ಟು ವೇಗ, ಇನ್ನಷ್ಟು ಎತ್ತರ, ಇನ್ನಷ್ಟು ಬಲ ಎಂಬುದು ಒಲಿಂಪಿಕ್ಸ್‌ನ ಕ್ರೀಡಾ ಮಂತ್ರ.

      • ಎಸ್‌. ಜಗದೀಶ್ಚಂದ್ರ ಅಂಚನ್‌ | Jul 22, 2012

        ಇನ್ನಷ್ಟು ವೇಗ, ಇನ್ನಷ್ಟು ಎತ್ತರ, ಇನ್ನಷ್ಟು ಬಲ ಎಂಬುದು ಒಲಿಂಪಿಕ್ಸ್‌ನ ಕ್ರೀಡಾ ಮಂತ್ರ. ಗೆದ್ದರಷ್ಟೇ ಕೀರ್ತಿಯಲ್ಲ, ಅರ್ಪಣಾ ಮನೊಭಾವದಿಂದ ಪಾಲ್ಗೊಳ್ಳುವುದು ಮುಖ್ಯ ಎಂಬುದು ಇಲ್ಲಿನ ಧ್ಯೇಯ ವಾಕ್ಯ. ಜುಲೈ 27ರಿಂದ ಆಗಸ್ಟ್‌ 12ರ ವರೆಗೆ ನಡೆಯುವ ಈ ಕ್ರೀಡಾಮೇಳಕ್ಕಾಗಿ ಬ್ರಿಟನ್ನಿನ ಮಹಾನಗರಿ ಲಂಡನ್‌ ಸಜ್ಜುಗೊಳ್ಳುತ್ತಿದೆ.  ದೇಶಗಳು, ಜನಾಂಗಗಳು, ಭಾಷೆಗಳು ತಮ್ಮ ಗಡಿರೇಖೆಯನ್ನು ಮರೆತು ಭಾವನಾತ್ಮಕವಾಗಿ ಒಂದಾಗುವ ಸನ್ನಿವೇಶ ಸನ್ನಿಹಿತವಾಗಿದೆ.

                ಚೀನ ಚೀನ ಚೀನ ಹಾಗೂ ದೀರ್ಘ‌ ಐತಿಹ್ಯವುಳ್ಳ ಒಲಿಂಪಿಕ್‌ ಗ್ರೀಸ್‌ ದೇಶದ ಸುವರ್ಣಯುಗಕ್ಕೆ ಮುಂಚೆ ಯಾವುದೇ ಅಡೆತಡೆಯಿಲ್ಲದೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಾ ಬಂದಿದೆ. ಜ್ಯೂಸ್‌ ದೇವತೆಯ ಆರಾಧನೋತ್ಸವವಾಗಿ, ಗ್ರೀಕರ ಧಾರ್ಮಿಕ ಹಬ್ಬವಾಗಿಯೂ ಆಚರಣೆಗೆ ಬಂದ ಈ ಒಲಿಂಪಿಕ್‌ ಸಾರ್ವತ್ರಿಕ ಮನ್ನಣೆಗೂ ಪಾತ್ರವಾಗಿದೆ.

        ಶಾಂತಿಗಾಗಿ ಕ್ರೀಡೆ ಎಂಬ ಮೂಲ ಸಿದ್ಧಾಂತದಲ್ಲಿ ಕ್ರೀಡಾ ಆಂದೋಲನವನ್ನು ಆರಂಭಿಸಿದ ಗ್ರೀಕರು ಒಲಿಂಪಿಕ್ಸ್‌ ಕ್ರೀಡೆಗೆ ಮೂಲ ಸ್ಫೂರ್ತಿ. ಸೌಂದರ್ಯಾರಾಧಕ ಪ್ರವೃತ್ತಿಯ ಗ್ರೀಕರಿಗೆ ಅಂಗಸೌಷ್ಠವದಲ್ಲಿ ಅಪಾರ ಆಸಕ್ತಿ. ದೇವತಾರಾಧನೆ ಹಾಗೂ ಕ್ರೀಡೆ ಅವರ ಉಸಿರಾಗಿತ್ತು. ಪುರಾತನ ಗ್ರೀಕ್‌ ಸಂಸ್ಕೃತಿಯ ಧಾರ್ಮಿಕ ಆಚರಣೆಯ ಅಂಗವಾಗಿ ಹುಟ್ಟಿದ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

        ಒಲಿಂಪಿಕ್ಸ್‌ನ ತವರು ಗ್ರೀಸ್‌ ದೇಶ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ.  ಅನೇಕ ದಂತಕತೆಗಳಿವೆ. ಗ್ರೀಕ್‌ ಪುರಾಣಗಳಾದ ಹೋಮರ್‌ ವಿರಚಿತ ಒಡಿಸ್ಸಿ ಮತ್ತು ಈಲಿಯಡ್‌ ಸಹ ಒಲಿಂಪಿಕ್ಸ್‌ ಮಾದರಿ ಕ್ರೀಡೆಗಳ ಬಗೆಗೆ ಮಾಹಿತಿಯನ್ನು ಒಳಗೊಂಡಿದೆ. ಕಿ. ಪೂ. 776 ಗ್ರೀಕ್‌ ನಾಗರಿಕತೆಯಲ್ಲೊಂದು ಹೊಸ ಅಧ್ಯಾಯ ಪ್ರಾರಂಭವಾದ ವರ್ಷ ಅದು. ಆ ವರ್ಷ ಒಲಿಂಪಿಯಾದಲ್ಲಿ ನಡೆದ ಕ್ರೀಡಾಕೂಟ ಮುಂದೆ ಒಲಿಂಪಿಕ್‌ ಕ್ರೀಡಾಕೂಟವಾಗಿ ಮಾರ್ಪಟ್ಟಿತು.

        ಅಥೆನ್ಸ್‌ನ ಒಲಿಂಪಿಯಾ ಅಂಗಣವನ್ನು ಒಲಿಂಪಿಕ್‌ ಕ್ರೀಡೆಗಳ ಮೂಲಸ್ಥಾನವೆಂದು ಗುರುತಿಸಲಾಗಿದೆ. ಒಲಿಂಪಿಯಾ ಪುರಾತನ ಗ್ರೀಸ್‌ನ ಪ್ರಸಿದ್ಧವಾದ ಧರ್ಮಕ್ಷೇತ್ರವೂ ಹೌದು. ಸಮುದ್ರ ತೀರದ ಇಪ್ಪತ್ತು ಕಿ.ಮೀ. ದೂರದಲ್ಲಿ ಆಲ್ಫಿಯಸ್‌ ಹಾಗೂ ಕ್ಲೇಡಿಯಸ್‌ ನದಿಗಳ ಸಂಗಮ ಸ್ಥಳದ ಕ್ರೋನಿಯಸ್‌ ಪರ್ವತಾವಳಿಯ ತಪ್ಪಲಿನ ಕಣಿವೆಯಲ್ಲಿ ಈ ಸುಂದರ ತಾಣವಿದೆ. ಪ್ರಾಚೀನ ಪ್ರಪಂಚದ ಏಳು ಮಹಾ ಅದ್ಭುತಗಳಲ್ಲೊಂದಾದ 60 ಅಡಿ ಎತ್ತರವಿರುವ ಬಂಗಾರದ ಜ್ಯೂಸ್‌ ದೇವತೆಯ ಪ್ರತಿಮೆ ಇದ್ದದ್ದು ಕೂಡ ಈ ಒಲಿಂಪಿಯಾದಲ್ಲಿಯೇ.

        ಗ್ರೀಸ್‌ ದೇಶ ಹಲವು ವಿಭಾಗಗಳಾಗಿ ಒಡೆದು ಹೋದ ಸಂದರ್ಭದಲ್ಲಿ ಎಲಿಸ್‌ ಪ್ರಾಂತ್ಯದ ದೊರೆ ಇಫಿತೋಸ್‌ ತನ್ನ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಒಲಿಂಪಿಕ್‌ ಮಾದರಿಯ ಕ್ರೀಡಾಕೂಟವನ್ನು ಪ್ರಾರಂಭಿಸಿದ. ಈ ಸಂದರ್ಭದಲ್ಲಿ ಎಲ್ಲಾ ಪ್ರಾಂತ್ಯಗಳಲ್ಲೂ ಶಸ್ತ್ರಾಸ್ತ್ರ ಬಳಕೆಯನ್ನು ನಿಷೇಧಿಸಿದ್ದ. ಈ ನಿಷೇಧವನ್ನು ಸಾರುವ ಸಂದೇಶವನ್ನು ಕಂಚಿನ ತಗಡಿನ ಮೇಲೆ ಬಳೆಗಳ ರೂಪದಲ್ಲಿ ಕೆತ್ತಿಸಿದ್ದು, ಪ್ರಾಚೀನ ಒಲಿಂಪಿಕ್‌ ಕ್ರೀಡೆಯ ಸಂಕೇತಗಳಾಗಿ ಉಳಿದಿವೆ.

        ಒಲಿಂಪಿಕ್ಸ್‌ ಕ್ರೀಡೆಯ ಬಗ್ಗೆ ಕೆಲವೊಂದು ಸ್ವಾರಸ್ಯಕರವಾದ  ಕಥೆಗಳಿವೆ. ಹೋಮರ್‌ ಯುಗದ ವೀರ ಪೆಟ್ರೋಕ್ಲಸ್‌ ಎಂಬ ವೀರನ ಸ್ಮರಣಾರ್ಥ ಇಂಥ ಕ್ರೀಡಾಕೂಟ ಜರುಗಿದ ವಿವರ ಹೋಮರ್‌ನ ಮಹಾಕಾವ್ಯ ಈಲಿಯಡ್‌ನ‌ಲ್ಲಿದೆ. ಪೆಟ್ರೋಕ್ಲಸ್‌ನ ವೀರ ಮರಣದ ಗೌರವಾರ್ಥವಾಗಿ ರಥದ ಓಟ ಗೌರವಾರ್ಥವಾಗಿ ರಥದ ಓಟ ಮತ್ತಿತರ ಕ್ರೀಡಾ ಸ್ಪರ್ಧೆಗಳು ನಡೆದ ಉದಾಹರಣೆಗಳಿವೆ. ಮತ್ತೂಂದು ಕಥೆಯ ಪ್ರಕಾರ ಭೂಮಿಯ ಒಡೆತನಕ್ಕಾಗಿ ಜ್ಯೂಸ್‌ ಮತ್ತು ಕ್ರೋನಸ್‌ ದೇವತೆಗಳ ಮಧ್ಯೆ ಒಲಿಂಪಿಯಾದಲ್ಲಿ ಮಲ್ಲಯುದ್ಧ ಜರಗಿತ್ತು. ಜ್ಯೂಸ್‌ ದೇವತೆಗೆ ಜಯ ದೊರೆಯಿತು. ವಿಜಯದ ಸ್ಮರಣಾರ್ಥವಾಗಿ ಜ್ಯೂಸ್‌ ದೇವತೆಯ ವಾಸಸ್ಥಳವಾದ ಒಲಿಂಪಿಯಾ ಪರ್ವತಾವಳಿಯ ತಪ್ಪಲಿನಲ್ಲಿ ಜ್ಯೂಸ್‌ ದೇವತೆಯ ಮಗ ಹರ್ಕುÂಲಿಸ್‌ ಈ ಒಲಿಂಪಿಕ್‌ ಕ್ರೀಡೆಯನ್ನು ಆರಂಭಿಸಿದನೆಂಬುದು ಮತ್ತೂಂದು ಐತಿಹ್ಯ. ಹೀಗೆ ಆರಂಭವಾದ ಒಲಿಂಪಿಕ್‌ ಕ್ರೀಡೆಗಳು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನ ಒಲಿಂಪಿಯಾ ಗ್ರಾಮದಲ್ಲಿ ನಡೆಯುತ್ತಿದ್ದವು.

        ಮೊದಲು ಒಲಿಂಪಿಕ್‌ ಕ್ರೀಡೆಗಳಲ್ಲಿ ಹೊರಗಿನವರಿಗೆ ಅವಕಾಶವಿಲ್ಲದೆ ಗ್ರೀಕ್‌ ಪುರುಷರು ಮಾತ್ರ ಭಾಗವಹಿಸುತ್ತಿದ್ದರು. ಮಹಿಳೆಯರಿಗೆ ಸ್ಪರ್ಧಿಸಲು ಮಾತ್ರವಲ್ಲ , ವೀಕ್ಷಿಸಲು ಕೂಡಾ ಅವಕಾಶವಿರಲಿಲ್ಲ. ಪುರುಷ ಸ್ಪರ್ಧಿಗಳು ನಗ್ನರಾಗಿಯೇ ಭಾಗವಹಿಸಬೇಕಾಗಿತ್ತು. ಆರಂಭಿಕ ಹಂತದಲ್ಲಿ ಈ ಸ್ಪರ್ಧೆ ಒಂದೇ ದಿನಕ್ಕೆ ಸೀಮಿತವಾಗಿತ್ತು. ಸ್ಪರ್ಧೆಯೂ ಒಂದೇ ಆಗಿತ್ತು. ಅದುವೇ ಫ‌ುಟ್‌ ರೇಸ್‌. ಎಲಿಸ್‌ ನಗರದ ಕೊರಿಯೋಬಸ್‌ ಈ ಸ್ಪರ್ಧೆಯ ಮೊದಲ ಚಾಂಪಿಯನ್‌ ಆಗಿ ಮೂಡಿಬಂದಿದ್ದ. ವೃತ್ತಿಯಲ್ಲಿ ಅಡುಗೆಯವನಾದ ಈತನಿಂದ ಒಲಿಂಪಿಕ್‌ ವಿಜಯಗಳ ಶಕೆ ಆರಂಭಗೊಂಡಿತು.

        ಮೊದಲು ಓಟದ ಸ್ಪರ್ಧೆಯಿಂದ ಆರಂಭವಾದ ಪ್ರಾಚೀನ ಒಲಿಂಪಿಕ್ಸ್‌ ನಲ್ಲಿ ನಂತರ ಹಲವು ಕ್ರೀಡೆಗಳು ಸೇರ್ಪಡೆಗೊಂಡವು.

        ಗಡಿಗಳನ್ನು ದಾಟಿ...

        ವರ್ಷಗಳು ಉರುಳಿದಂತೆ ಕೇವಲ ಗ್ರೀಕರಿಗೆ ಮಾತ್ರ ಸೀಮಿತವಾಗಿದ್ದ ಒಲಿಂಪಿಕ್‌ ಕ್ರೀಡೆ ಬಳಿಕ ಇತರ ರಾಷ್ಟ್ರಗಳಿಗೂ ವಿಸ್ತರಿಸಲ್ಪಟ್ಟಿತ್ತು. ಸಿಸಿಲಿಯನ್ನರು ಮತ್ತು ಕ್ರೆಟನ್ನರು ಭಾಗವಹಿಸುವುದರೊಂದಿಗೆ ಈ ಕ್ರೀಡಾಕೂಟ ಇತರ ದೇಶಗಳಿಗೂ ಮುಕ್ತವಾಯಿತು. ಕ್ರಮೇಣ ಮಹಿಳಾ ಕ್ರೀಡಾಪಟುಗಳಿಗೂ ಅವಕಾಶ ದೊರೆಯಿತು. ಕ್ರಿ. ಪೂ. 204ರ ಒಲಿಂಪಿಕ್ಸ್‌ನಲ್ಲಿ ಮೆಸಿಡೋನಿಯಾದ ಮಹಿಳೆ ರಥ ಸ್ಪರ್ಧೆಯಲ್ಲಿ ವಿಜೇತಳಾದ ದಾಖಲೆಗಳಿವೆ. ಪ್ರಾಚೀನ ಒಲಿಂಪಿಕ್ಸ್‌ನಲ್ಲಿ ಒಂದು ಚರಿತ್ರಾರ್ಹ ವಿಶ್ವದಾಖಲೆಯೊಂದು ಇದೆ. ಕ್ರಿ. ಪೂ ಏಳನೇ ಶತಮಾನದಲ್ಲಿ ಕಿಯೋನಿಸ್‌ ಎಂಬಾತ ಕೈಯಲ್ಲಿ ಭಾರದ ಗುಂಡುಗಳನ್ನು ಹಿಡಿದುಕೊಂಡು 23 ಅಡಿ, 1.5  ಅಂಗುಲ ದೂರ ನೆಗೆದಿದ್ದ. ಈ ಕಾಲದಲ್ಲಾದರೆ ಅವನು ಸ್ಟಿರಾಯ್ಡಗಳ ಸೇವಿಸಿದ್ದನೆ ಎಂದು ಪರೀಕ್ಷೆಯಾಗುತ್ತಿತ್ತು.

        ಕಲಾಪ್ರಿಯರಾಗಿದ್ದ ಗ್ರೀಕರಿಗೆ ಒಲಿಂಪಿಕ್ಸ್‌ ಕೇವಲ ಕ್ರೀಡೆಗಳಿಗೆ ಮಾತ್ರ ಸೀಮಿತವಾಗಿದ್ದನ್ನು ಸಹಿಸಲಾಗಲಿಲ್ಲ. ಹಲವು ಕುಶಲಕಲೆಗಳ ಸ್ಪರ್ಧೆಯನ್ನು ಸೇರಿಸಿದರು. ಆದರೆ ಇದು ಅಷ್ಟೊಂದು ಸಾಫ‌ಲ್ಯ ಕಾಣಲಿಲ್ಲ. ಮೊದಮೊದಲು ಒಲಿಂಪಿಕ್‌ ವಿಜಯಿಗಳಿಗೆ ಕೇವಲ ಆಲೀವ್‌ ಎಲೆಗಳ ಕಿರೀಟವನ್ನು ಮಾತ್ರ ತೊಡಿಸಲಾಗುತ್ತಿದ್ದುದರಿಂದ ರಾಜಾಶ್ರಯಿಗಳಾಗಿ ಸುಖಜೀವಿಗಳಾಗಿದ್ದ ಕಲಾವಿದರಿಗೆ ಈ ಸ್ಪರ್ಧೆಗಳು ಅಷ್ಟೊಂದು ಆಕರ್ಷಕ ವಾಗಿ ಕಾಣಲಿಲ್ಲ. ಆದರೆ, ಇವರಿಗೆ ಸಮಾಜದಲ್ಲಿ ಉನ್ನತ ಸ್ಥಾನ ಮಾನವು ದೊರೆಯಿತು. ಅಭಿಮಾನಿಗಳು ಅನೇಕ ಕಾಣಿಕೆಗಳನ್ನು ವಿಜೇತರಿಗೆ ಸಲ್ಲಿಸುತ್ತಿದ್ದರು. ಕನ್ಯಾಪಿತೃಗಳು ಒಲಿಂಪಿಕ್‌ ವಿಜೇತರೊಂದಿಗೆ ತಮ್ಮ ಹೆಣ್ಣುಮಕ್ಕಳ ಮದುವೆ ಮಾಡಲು ಪೈಪೋಟಿ ನಡೆಸುತ್ತಿದ್ದರು. ಮೂರು ಸ್ಪರ್ಧೆಗಳಲ್ಲಿ ವಿಜೇತರಾದವರ ಮೂರ್ತಿ ಸ್ಥಾಪನೆ, ನಗರದ ರಸ್ತೆಗಳಿಗೆ ಒಲಿಂಪಿಕ್‌ ವೀರರ ಹೆಸರುಗಳನ್ನಿಡುವುದರಿಂದ ಅವರ ಗೌರವ ಮತ್ತಷ್ಟು ವೃದ್ಧಿಗೊಳ್ಳುತ್ತಿತ್ತು.

        ಕಿ.ಪೂ. 776ರಲ್ಲಿ ವೈಭವದಿಂದ ವರ್ಣರಂಜಿತವಾಗಿ ನಡೆಸಲಾರಂಭಿಸಿದ ಪ್ರಾಚೀನ ಒಲಿಂಪಿಕ್ಸ್‌ ಕ್ರೀಡಾಕೂಟ ಕೆಲವು ಶತಮಾನಗಳವರೆಗೆ ನಡೆದು ಕಿ.ಪೂ. 393ರಲ್ಲಿ ಒಮ್ಮಿಂದೊಮ್ಮೆಗೆ ನಿಂತುಹೋದವು. ಇದಕ್ಕೆ ಕಾರಣಗಳು ಹಲವು. ಒಲಿಂಪಿಕ್‌ ವಿಜೇತರು ಆಗಿನ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲಾರಂಭಿಸಿದುದರಿಂದ ಜನಪ್ರಿಯತೆ, ರಾಜಾಶ್ರಯಗಳೆರಡೂ ಹೆಚ್ಚಾದಾಗ ಒಲಿಂಪಿಕ್‌ ಕ್ರೀಡಾಕೂಟ ಅರಾಜಕತೆಯ ಕೇಂದ್ರವಾಯಿತು. ಈ ದ್ವೇಷ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಕಿ. ಪೂ. 365ರಲ್ಲಿ ರೋಮನ್‌ ಚಕ್ರವರ್ತಿ ಥಿಯೋಡೊಸಿಮಸ್‌ ಒಲಿಂಪಿಕ್‌ ಕ್ರೀಡಾಕೂಟವನ್ನು ಬಹಿಷ್ಕರಿಸಿದನಲ್ಲದೆ, ಒಲಿಂಪಿಯಾ ನಗರವನ್ನೇ ನೆಲಸಮ ಮಾಡಿದ. ಅಲ್ಲದೆ, ಜ್ಯೂಸ್‌ ದೇವತೆಯ ವಿಗ್ರಹವನ್ನೂ ನಾಶಪಡಿಸಿದನು. ಆಮೇಲೆ ಕಾಲದ ಗತಿಯಲ್ಲಿ ಒಲಿಂಪಿಕ್‌ ಪಟ್ಟಣವೇ ಭಗ್ನಾವಶೇಷಗೊಂಡಿತು. ಅನಂತರ ಎಲ್ಲರ ಪಾಲಿಗೆ ಉಳಿದದ್ದು ಒಲಿಂಪಿಕ್‌ನ ಆತ್ಮಮಾತ್ರ. ಅಂದು ಆರಿದ ಒಲಿಂಪಿಕ್‌ ಜ್ಯೋತಿ ಮತ್ತೆ ಬೆಳಗಲು 1503 ವರ್ಷಗಳೇ ಬೇಕಾಯಿತು. ಗ್ರೀಕರಿಂದ ಆರಂಭವಾದ ವಿಶ್ವದ ಶ್ರೇಷ್ಠ ಕ್ರೀಡಾಪರ್ವವೊಂದು ರೋಮನ್ನರಿಂದ ಅಂತ್ಯ ಕಂಡಿದ್ದು ನಿಜಕ್ಕೂ ಐತಿಹಾಸಿಕ ದುರಂತ.

        ಮರುಹುಟ್ಟುವಡೆಯಿತು...

        ಇತಿಹಾಸದಾಳದಲ್ಲಿ ಹುದುಗಿ ಹೋಗಿದ್ದ ಆತ್ಮಕ್ಕೆ ಮರುಜೀವ ತುಂಬಿದ್ದು ಸುಮಾರು ಇನ್ನೂರು ವರ್ಷಗಳ ಹಿಂದೆ. ಜರ್ಮನಿಯ ಸಂಶೋಧಕ ಆರ್ನೆಸ್‌ ಕರ್ಟಿಸ್‌ ಪ್ರಾಚೀನ ಒಲಿಂಪಿಯಾ ಬೆಟ್ಟದ ತಪ್ಪಲಿನಲ್ಲಿ ನಡೆಸಿದ ಉತVನನದಿಂದ ಪ್ರಾಚೀನ ಒಲಿಂಪಿಕ್‌ ಎಂಬ ಮಹಾಕಾವ್ಯವು ಚಾರಿತ್ರಿಕ ಮೆರುಗಿನೊಂದಿಗೆ ಮರುಹುಟ್ಟು ಪಡೆಯಿತು.

        ಒಲಿಂಪಿಕ್‌ ಆತ್ಮಕ್ಕೆ ಮರು ಹುಟ್ಟು ನೀಡಿದ ವ್ಯಕ್ತಿ ಫ್ರಾನ್ಸ್‌ನ ಬ್ಯಾರನ್‌ ಪಿಯರಿ ಡಿ. ಕ್ಯುಬರ್ತಿ. ಶ್ರೀಮಂತ ಫ್ರೆಂಚ್‌ ಕುಟುಂಬಕ್ಕೆ ಸೇರಿದ ಈತ ಪ್ರಾಚೀನ ಒಲಿಂಪಿಕ್ಸ್‌ ಕ್ರೀಡೆಗಳ ಅಧ್ಯಯನ ನಡೆಸಿ ಗ್ರೀಕರ ಕಲ್ಪನೆಯಂತೆ ಅಂತಾರಾಷ್ಟ್ರೀಯ ಕ್ರೀಡಾ ಆಂದೋಲನಕ್ಕೆ ಚಾಲನೆ ನೀಡಿದರು. ಅದಮ್ಯ ಉತ್ಸಾಹದ ಬ್ಯಾರನ್‌ ಪಿಯರಿ ಡಿ. ಕ್ಯುಬರ್ತಿಯ ಕನಸು 1986ರಲ್ಲಿ ನನಸಾಯಿತು. ಕ್ಯುಬರ್ತಿಯಂತಹ ಕ್ರೀಡಾ ಪ್ರೇಮಿಯ ಪರಿಶ್ರಮದಿಂದ ಆಧುನಿಕ ಒಲಿಂಪಿಕ್ಸ್‌ ಇತಿಹಾಸ ಆರಂಭವಾಯಿತು. ಇದೀಗ 116 ವರ್ಷಗಳ ಇತಿಹಾಸದ ಕಾಲಘಟ್ಟದಲ್ಲಿ 27 ಬಾರಿ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆದಿದೆ. ವಿಶ್ವ ಸಮರದ ಕರಾಳ ಛಾಯೆಗೆ ನಲುಗಿದ ಒಲಿಂಪಿಕ್ಸ್‌ ಮೂರು ಬಾರಿ (1916, 1940, 1944 ರಲ್ಲಿ) ರದ್ದಾಗಿತ್ತು. ಹಲವು ಬಾರಿ ಆರ್ಥಿಕ ಮುಗ್ಗಟ್ಟುಗಳನ್ನೆದುರಿಸುವ ಸ್ಥಿತಿ ಬಂದಿತ್ತು. ಆದರೂ ಆಧುನಿಕ ಒಲಿಂಪಿಕ್ಸ್‌ ಯಾರ ಊಹೆಗೆ ನಿಲುಕದೆ ಪುರೋಗತಿ ಕಂಡಿತು.

        ಒಲಿಂಪಿಕ್ಸ್‌ ಎಂಬ ಹೆಮ್ಮೆ

        ಒಲಿಂಪಿಕ್ಸ್‌ ಧ್ಯೇಯ ಏನೇ ಇರಲಿ, ಒಲಿಂಪಿಕ್ಸ್‌ ಪದಕದ ಗೆಲುವು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿರುತ್ತದೆ. ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಉತ್ತಮ ಅವಕಾಶ ಕಳೆದುಕೊಂಡದ್ದನ್ನು ಪಿ. ಟಿ. ಉಷಾ ತಮ್ಮ ಜೀವನದ ಅತ್ಯಂತ ಕೆಟ್ಟ ಕ್ಷಣವೆಂದು ಬಣ್ಣಿಸಿದ್ದೇ ಇದಕ್ಕೆ ಸಾಕ್ಷಿ. ಇಲ್ಲಿ ಗೆದ್ದವನ ಖುಷಿಗೆ ಪಾರವಿಲ್ಲ. ಸೋತವನ ದುಃಖಕ್ಕೆ ಮಿತಿಯಿಲ್ಲ. ಕೂದಲೆಳೆಯ ಅಂತರದಲ್ಲಿ ಪದಕ ಕಳೆದುಕೊಂಡವನ ಸ್ಥಿತಿ ಬಣ್ಣಿಸುವುದೇ ಬೇಡ. ಅತ್ಲೆಟ್‌ ಒಬ್ಬ ತನ್ನ ಜೀವಮಾನವಿಡೀ ಮಾಡಿದ ಅಭ್ಯಾಸ ಸಾರ್ಥಕವಾಗಬೇಕಾದರೆ ಒಲಿಂಪಿಕ್‌ ಪದಕ ಗೆಲ್ಲಲೇ ಬೇಕು. ಅತ್ಲೆಟಿಕ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗದ ಭಾರತದ ಬಹುತೇಕ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಲಭ್ಯವಾದರೆ ಗೆದ್ದಷ್ಟು ಖುಷಿ.

        1896ರ ಮೊದಲ ಆಧುನಿಕ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸದೆ ನಿರಾಶವಾಗಿದ್ದ ಗ್ರೀಕ್‌ ದೇಶದ ಜನತೆ, ಮ್ಯಾರಥಾನ್‌ನಲ್ಲಿ ಸ್ಟಿರಿಡಾನ್‌ ಲೂಯಿಸ್‌ ಚಿನ್ನ ಗೆದ್ದಾಗ ಹುಚ್ಚೆದ್ದು ಕುಣಿದರು. ಆತ್ಲೆಟಿಕ್ಸ್‌ನ ದೈತ್ಯ ಪ್ರತಿಭೆ ಎಂದೇ ಬಣ್ಣಿತ ಕಾರ್ಲ್ ಲೂಯಿಸ್‌ ದಾಖಲೆಯ ಲಾಂಗ್‌ಜಂಪ್‌ ನೆಗೆತ ಮತ್ತು ದಾಖಲೆಯ ಒಲಿಂಪಿಕ್‌ ಚಿನ್ನ ಗೆದ್ದಾಗ ಇಡೀ ವಿಶ್ವವೇ ಸಂಭ್ರಮಿಸಿ, ಮಹಾನ್‌ ಅತ್ಲೆಟ್‌ಗೆ ಅಭಿನಂದನೀಯ ವಿದಾಯ ಹೇಳಿತು. ಅಂತೆಯೇ 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಅಭಿನವ್‌ ಬಿಂದ್ರಾ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಾಗ ಇಡೀ ಭಾರತವೇ ಹುಚ್ಚೆದ್ದು ಕುಣಿದಿರಲಿಲ್ಲವೆ ? 

        ಆದರೆ, ಒಲಿಂಪಿಕ್‌ ಕ್ರೀಡಾಕೂಟಕ್ಕೆ ಇನ್ನೊಂದು ಮುಖವೂ ಇದೆ.  ಬರ್ಲಿನ್‌ ಒಲಿಂಪಿಕ್ಸ್‌ನಲ್ಲಿ ಜೆಸ್ಸಿ ಓವೆನ್ಸ್‌ ಎಂಬ ಅಮೇರಿಕಾದ ನೀಗ್ರೋ ಆತ್ಲೆಟ್‌ ನಾಲ್ಕು ಚಿನ್ನದ ಪದಕ ಗೆದ್ದಾಗ ಆರ್ಯ ಕುಲವೇ ಶ್ರೇಷ್ಠವೆಂದು ತಿಳಿದಿದ್ದ ಹಿಟ್ಲರ್‌ ಒಲಿಂಪಿಕ್ಸ್‌ ಮೈದಾನದಿಂದಲೇ ಹೊರ ನಡೆದಿದ್ದ. ಬೆನ್‌ ಜಾನ್ಸನ್‌ ಸಿಯೋಲ್‌ ಒಲಿಂಪಿಕ್ಸ್‌ನಲ್ಲಿ ಅತ್ಯಂತ ವೇಗದ ಓಟಗಾರನಾಗಿ ವಿಜೃಂಭಿಸಿದಾಗ ಆತನನ್ನೂ ಅಭಿನಂದಿಸಿದವರೆಲ್ಲರು ಮರುದಿನ ಅವನು ಉದ್ದೀಪನ ದ್ರವ್ಯಸೇವನೆ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಾಗ ಖನ್ನರಾದದ್ದಿದೆ. ಇದೇ ಪದಕ ಗೆಲ್ಲುವ ಮಹಾದಾಸೆಯಿಂದ ಅಲ್ಲವೇ ನ್ಯೂಯಾರ್ಕ್‌ನ ಫ್ರೆಡ್‌ ಲಾರ್ಸ್‌ ಮ್ಯಾರಥಾನ್‌ ಓಡುವಾಗ ಕಾರಿನ ಸಹಾಯ ಪಡೆದದ್ದು !

        ಹೀಗೆ ಇಲ್ಲಿ ಖುಷಿಯಿದೆ, ಉತ್ಸಾಹವಿದೆ, ಉದ್ವೇಗವಿದೆ, ಕೊಂಚ ಮಟ್ಟಿನ ನೋವೂ ಇದೆ. ಭಾವೈಕ್ಯದ ಸಂದೇಶವಿದ್ದರೂ ವಿರೋಧಿಗಳ ಬಗ್ಗೆ ಮಾತ್ಸರ್ಯವಿದೆ. ಆದರೂ 116 ವರ್ಷಗಳಲ್ಲಿ ಜಗತ್ತು ಊಹೆಗೂ ನಿಲುಕದ ವೈಜಾnನಿಕ ಪ್ರಗತಿ ಸಾಧಿಸಿದಂತೆ ಒಲಿಂಪಿಕ್ಸ್‌ ಕೂಡಾ ಹೆಮ್ಮರವಾಗಿ ಬೆಳೆದಿದೆ. ಪಾಲ್ಗೊಳ್ಳುವ ರಾಷ್ಟ್ರಗಳು, ಕ್ರೀಡಾಪಟುಗಳು ಮಾತ್ರವಲ್ಲ ಕ್ರೀಡಾಕೂಟಕ್ಕೆ ವ್ಯಯಿಸುವ ವೆಚ್ಚ... ಈ ಎಲ್ಲಾ ದೃಷ್ಟಿಯಿಂದಲೂ ಒಲಿಂಪಿಕ್ಸ್‌ಗೆ ಸಮಾನವಾದ ಕ್ರೀಡಾಕೂಟ ಮತ್ತೂಂದಿಲ್ಲ. ಹಣದ ಥೈಲಿ ನೀಡದಿದ್ದರೂ ಒಲಿಂಪಿಕ್ಸ್‌ ಪದಕಕ್ಕೆ ಅದೇನೋ ವಿಶೇಷ ಮಹತ್ವ , ಗೌರವ. ಇದೇ ಒಲಿಂಪಿಕ್ಸ್‌ ಕ್ರೀಡೆಗಳ ಯಶಸ್ಸಿನ ರಹಸ್ಯವೂ ಹೌದು.

        ಒಲಿಂಪಿಕ್ಸ್‌ ಇತಿಹಾಸವನ್ನು ಜಿಮ್‌ಥೋರ್ಪ್‌, ಪಾವೋ ನುರ್ಮಿ, ಜೆಸ್ಸಿ ಓವೆನ್ಸ್‌, ಫ್ಯಾನಿ ಬ್ಯಾಂಕರ್ಸ್‌, ಬಾಬ್‌ ಬೀಮನ್‌, ಮಾರ್ಕ್‌ ಫಿಟ್ಜ್ , ಕಾರ್ಲ್ ಲೂಯಿಸ್‌, ಡೇಲಿ ಥಾಂಸನ್‌, ಫ್ಲಾರೆನ್‌ ಜಾಯ°ರ್‌, ಕರ್ಸಿ, ನಾಡಿಯಾ ಕೊಮೆನ್ಸಿ ಹಾಗೂ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಮುಂತಾದ ಮಹಾನ್‌ ಕ್ರೀಡಾಪಟುಗಳು ಶ್ರೀಮಂತಗೊಳಿಸಿದ್ದಾರೆ. ಒಲಿಂಪಿಕ್ಸ್‌ನಿಂದ ಒಲಿಂಪಿಕ್ಸ್‌ಗೆ ಹೊಸ ದಾಖಲೆಗಳು ಸೃಷ್ಟಿಯಾಗಿವೆ. ಕ್ರೀಡಾಶಕ್ತಿ ಬೆಳೆಯುತ್ತಾ ಸಾಗಿವೆ.

        ಆತ್ಯಾಧುನಿಕ ಜಗತ್ತಿನಲ್ಲಿÉ ಮಾನವನ ಸ್ವಾರ್ಥದಿಂದ ತೊಳಲಾಡುತ್ತಿದ್ದರೂ ಒಲಿಂಪಿಕ್ಸ್‌ ಕ್ರೀಡಾ ಆಂದೋಲನ ಮಾನವ ಸಮುದಾಯವನ್ನು ಒಂದುಗೂಡಿಸುವ ಜಾಗೃತ ಶಕ್ತಿಯಾಗಿ ಸಾಕಾರಗೊಳ್ಳುತ್ತಿದೆ. 

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      • Copyright @ 2009 Udayavani.All rights reserved.
      • Designed & Hosted By 4cplus