Saturday, May 25, 2013
Last Updated: 9:50:51 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಹಿಳೆಯರಲ್ಲೊಬ್ಬರು ಕ್ಯಾಪ್ಟನ್‌
    • ಮಹಿಳೆಯರಲ್ಲೊಬ್ಬರು ಕ್ಯಾಪ್ಟನ್‌.

      • ಆದಿಕೇಶವ | Jul 27, 2012

        ಕ್ಯಾಪ್ಟನ್‌ ಲಕ್ಷ್ಮೀ ಸೆಹಗಲ್‌!

        "ಆಕೆಯ ನಿಧನದೊಂದಿಗೆ ಲಿಂಗ ಸಮಾನತೆಯ ಜೀವಂತ ದೃಷ್ಟಾಂತವನ್ನು ಕಳೆದುಕೊಂಡಂತಾಯಿತು' ಎಂದು ಉದ್ಗರಿಸಿದವರು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ವಿ. ಆರ್‌. ಕೃಷ್ಣ ಅಯ್ಯರ್‌. ""ಮಹಿಳಾಪರ ಹೋರಾಟದ ಸಶಕ್ತ ಧ್ವನಿಯೊಂದು ಉಡುಗಿ ಹೋಗಿದೆ' ಎಂದು ಅವರು ಉದ್ಗರಿಸುವಾಗ ಗದ್ಗದಿತರಾಗಿದ್ದರು.

        ಎಂಟØತ್ತು ದಶಕಗಳ ಹಿಂದಿನ ದಿನಗಳನ್ನೊಮ್ಮೆ ಊಹಿಸಬೇಕು. ಇಂದು ವೈಚಾರಿಕತೆಯಲ್ಲಿ. ನಾವು ಕಲ್ಪಿಸಲಾರದಷ್ಟೂ  ಹಿಂದೆ ಇದ್ದೆವು. ಅಂಥ ದಿನಗಳಲ್ಲಿ ಭಾರತೀಯ ಮಹಿಳೆಯೊಬ್ಬಳು ಡಾಕ್ಟರಿಕೆ ಕಲಿತು, ಸಮಾಜ ಸೇವೆ ಮಾಡುತ್ತ ಮುಂದೆ ಸ್ವಾತಂತ್ರ್ಯಹೋರಾಟದ ಮುಂಚೂಣಿಯಲ್ಲಿ ನಿಂತದ್ದೇನೂ ಸಾಮಾನ್ಯ ಸಂಗತಿಯಲ್ಲ. ತಲೆಗೆ ಟೋಪಿ ಹಾಕಿಕೊಂಡು, ದಿಟ್ಟ ಯೋಧರಂತೆ ಕಾಣಿಸುವ ಅವರ ಹಳೆಯ ಛಾಯಾಚಿತ್ರಗಳನ್ನು ನೋಡಿದಾಗ ಅದರ ಹಿಂದೆ ಇದ್ದ ಆತ್ಮವಿಶ್ವಾಸ ಮನದಟ್ಟಾಗುತ್ತದೆ. ಲಕ್ಷ್ಮೀ ಸೆಹಗಲ್‌ ಮಹಿಳಾಪರವಾದ ಭಾಷಣ ಮಾಡಿದ್ದು ಕಡಿಮೆ. ಆದರೆ, ಸಮಾನತೆಯನ್ನು ಬಯಸುವ ಮಹಿಳೆಯೊಬ್ಬಳು ಹೇಗೆ ಬದುಕಬೇಕೋ ಹಾಗೆ ಬದುಕಿದರು. ಹಾಗಾಗಿಯೇ ಅವರ ಹೆಸರಿನ ಮುಂದೆ ಪುರುಷರ ಹೆಸರಿನ ಮುಂದೆ ಕಾಣಿಸಿಕೊಳ್ಳಬಹುದಾದ ಕ್ಯಾಪ್ಟನ್‌ ಎಂಬ ಉಪಾಧಿ ಸೇರಿಕೊಂಡಿತು.

        ಸಾಧನೆ ಮಾಡಿ ಹೆಸರು ಪಡೆದ ಎಲ್ಲ ಮಹಿಳೆಯರದ್ದೂ ಕಲ್ಲುಮುಳ್ಳಿನ ದಾರಿಯೇ. ಅದ್ವಿತೀಯ ಸಾಧನೆ ಮಾಡಿದ ನಮ್ಮೂರಿನವರೇ ಆದ ಪಂಡಿತ ರಮಾಬಾಯಿಯವರದೇನು ಸುಖದ ಹಾದಿಯೆ? ಸರೋಜಿನಿ ನಾಯ್ಡು , ಕಮಲಾದೇವಿ ಚಟ್ಟೋಪಾಧ್ಯಾಯರಂಥವರು ಸಾಧನೆ ಮಾಡಿದವರೇ. ಆದರೆ, ಅವರೆಲ್ಲ ರಾಜಕೀಯವಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸಿದವರು. ಲಕ್ಷ್ಮೀ ಸೆಹಗಲ್‌ ಅಂಥ ಉನ್ನತ ರಾಜಕೀಯ ಹುದ್ದೆಯನ್ನೇರಿದವರಲ್ಲ. ರಾಜ್ಯಸಭೆಯ ಸದಸ್ಯೆಯಾಗಿದ್ದಾಗಲೂ ಅವರು ರಾಜಕೀಯಕ್ಕಿಂತ ಸಮಾಜಸೇವೆಯಲ್ಲಿಯೇ ತೊಡಗಿಸಿಕೊಂಡವರು. ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ ಅ-ರಾಜಕೀಯ ಮಹಿಳೆ. ಆದರೆ, ಆ ಚುನಾವಣೆಯಲ್ಲಿ ಅವರು ಗೆಲುವನ್ನು ಸಾಧಿಸಲಾಗಲಿಲ್ಲ, ಅದು ಬೇರೆ ಮಾತು. ಸಾಮಾಜಿಕ ಗೌರವದ ಸ್ಥಾನ ಹೊಂದಿದ್ದಾಗಲೂ ಅವರು ತನ್ನೊಳಗಿನ "ಸಾಮಾನ್ಯ- ಸಹಜತೆ' ಎಂದಿಗೂ ಮರೆತವರಲ್ಲ. ಅವರು ತೀರಿಕೊಂಡದ್ದು ಕಾನ್ಪುರದಲ್ಲಿರುವ ತನ್ನ ಪುಟ್ಟ ಕ್ಲಿನಿಕ್‌ನಲ್ಲಿ. ತಾತ್ವಿಕವಾಗಿ ಎಡಪಂಥೀಯ ಉಳ್ಳವರಾದರೂ ಪಾರ್ಟಿ ರಾಜಕೀಯಗಳಲ್ಲಿ ತೊಡಗಿಸಿಕೊಳ್ಳದೆ ಬದುಕಿನಲ್ಲಿ ಪ್ರಗತಿಪರ ತಾತ್ವಿಕತೆಯನ್ನು ತೊಡಗಿಸಿಕೊಂಡವರು. ಅವರ ಮರಣದಿಂದ ದೊಡ್ಡ ನಷ್ಟವಾದದ್ದು ಕಾನ್ಪುರದ ಬಡಜನರಿಗೆ. ಯಾವ ಕಾಯಿಲೆಯಾದರೂ ಆರೈಕೆಯ ಆಸರೆ ನೀಡುತ್ತಿದ್ದ ಲಕ್ಷ್ಮೀ ಆ ಊರಿನಲ್ಲಿ ಅಕ್ಷರಶಃ ಅಮ್ಮನೇ ಆಗಿದ್ದರು. ಅವರನ್ನು  ಕ್ಯಾಪ್ಟನ್‌ ಎಂದು ಯಾರೂ ಕರೆಯುತ್ತಿರಲಿಲ್ಲ.

        ಫ‌ಕ್ಕನೆ ಅವರು ಉತ್ತರಭಾರತದ ಯಾವುದೋ ರಾಜ್ಯಕ್ಕೆ ಸೇರಿದವರೆಂದು ಅನ್ನಿಸಬಹುದು. ಆದರೆ, ಅವರ ಪೂರ್ವಜರು ಕೇರಳದಲ್ಲಿದ್ದವರು. ಪಾಲಾ^ಟ್‌ನಲ್ಲಿದ್ದ ಅನಕ್ಕರ ಅವರ ಹಿರಿಯರ ಊರು. ಲಕ್ಷ್ಮೀಯವರಿಗೆ ಹಲವು ಭಾಷೆಗಳೊಂದಿಗೆ ಮಲಯಾಳವೂ ಚೆನ್ನಾಗಿ ಬರುತ್ತಿತ್ತು. ಹತ್ತು- ಹನ್ನೆರಡು ವರ್ಷಗಳ ಹಿಂದೆ ಒವೆು¾ ಅವರು ಮಂಗಳೂರಿಗೆ ಬಂದಿದ್ದರು, ಆಸ್ಪತ್ರೆಯೊಂದರ ಉದ್ಘಾಟನೆಗೆ. ಆಗ ಅವರು ಮಲಯಾಳ ಮಾತನಾಡುತ್ತ ಜನರೊಂದಿಗೆ ಎಷ್ಟೊಂದು ಆತ್ಮೀಯವಾಗಿ ವ್ಯವಹರಿಸಿದರೆಂದರೆ, ತಾನು ಸುಭಾಸ್‌ಚಂದ್ರ ಬೋಸ್‌ ಕಾಲದ ಸ್ವಾತಂತ್ರ್ಯ ಹೋರಾಟಗಾರ್ತಿಯೆಂದು ಯಾರೂ ಊಹಿಸದಷ್ಟು. ದೇಶದ ಶಕ್ತಿಯೆಂದು ಪರಿಭಾವಿಸುವ ಯುವಜನರ ಮೇಲೆ ಅವರಿಗೆ ಅತೀವ ವಾತ್ಸಲ್ಯ. ತರುಣ- ತರುಣಿಯರ ನಡುವೆ ಇರಲು ಅವರು ಇಷ್ಟಪಡುತ್ತಿದ್ದರು. ಮಂಗಳೂರಿನಲ್ಲಿ ಅವರನ್ನು ಸುತ್ತುವರಿದಿದ್ದವರು ವೇಗವಾಗಿ ಹೆಜ್ಜೆ ಇಡುತ್ತಿದ್ದಾಗ, ""ನಾನು ವೃದ್ಧೆಯೆಂಬುದನ್ನು ಮರೆತುಬಿಟ್ಟಿರಾ?' ಎಂದು ಅವರು ವಿನೋದವಾಗಿ ಹೇಳಿದ್ದು ಇನ್ನೂ ನೆನಪಾಗುತ್ತಿದೆ. ಅವರು ತೀರಿಕೊಂಡ ಸಂದರ್ಭದಲ್ಲಿ ಪತ್ರಿಕೆಗಳು ಪ್ರಕಟಿಸಿದ ಫೋಟೊಗಳಲ್ಲಿ ಅವರ ನಿಲುವನ್ನು ನೋಡಿದಾಗ 97ರ ಹರೆಯದ ಮಹಿಳೆ ಎಂಬುದು ಮರೆತೇ ಹೋಗುತ್ತದೆ ! ಬಹುಶಃ ಅವರ ಜೊತೆಗೆ ಆತ್ಮೀಯವಾಗಿ ಒಡನಾಡಿದ ಯುವಜನರೂ ಅಂದು ಅವರ ಪ್ರಾಯವನ್ನು ಮರೆತುಬಿಟ್ಟು ಹೆಜ್ಜೆ ಹಾಕಿರಬೇಕು.

        ಮನಸ್ಸನ್ನು ಸದಾ ಸಮಾಜಪರವಾಗಿ ಇಟ್ಟುಕೊಳ್ಳುವವರಿಗೆ ತಮ್ಮ ಬಗ್ಗೆ , ತಮ್ಮ ಪ್ರಾಯದ ಬಗ್ಗೆ , ತಮ್ಮ ಆರೋಗ್ಯದ ಬಗ್ಗೆ ಲಕ್ಷ್ಯವೇ ಇರುವುದಿಲ್ಲ. ಅವರನ್ನು ದೇಹಧರ್ಮ ಬಾಧಿಸುವುದೂ ಇಲ್ಲ. ಪ್ರಸಿದ್ಧ ವಡಕ್ಕತ್‌ ಕುಟುಂಬಕ್ಕೆ ಸೇರಿದವರಾದರೂ ಹುಸಿ ಸಾಂಪ್ರದಾಯಿಕತೆಯನ್ನು ಮೀರಿ ಬೆಳೆಯಲು ಅವರು ಪ್ರಯತ್ನಿಸಿದ್ದು ಅವರ ಬಾಲ್ಯದ ದಿನಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ಅಮ್ಮು ಸ್ವಾಮಿನಾಥನ್‌ ಎಂದು ಎಲ್ಲರಿಂದಲೂ ಕರೆಯಲ್ಪಡುತ್ತಿದ್ದ ಎ. ವಿ. ಅಮ್ಮುಕುಟ್ಟಿ ಲಕ್ಷ್ಮೀಯವರ ತಂದೆ. ಅವರು ಮದ್ರಾಸು ಉಚ್ಚ ನ್ಯಾಯಾಲಯದಲ್ಲಿ ಕ್ರಿಮನಲ್‌ ಲಾಯರ್‌ ಆಗಿದ್ದರು. ಅವರು ಸ್ವತಃ ಪ್ರಗತಿಶೀಲ ಮನೋಧರ್ಮವರಾಗಿದ್ದು ಸಾಮಾಜಿಕ ಕಳಕಳಿ ಮತ್ತು ಸ್ವರಾಜ್ಯ ಹೋರಾಟಗಾರರಾಗಿದ್ದುದರಿಂದ ಮಗಳ ಮೇಲೂ ಆ ಸದ್ಗುಣಗಳ ಪ್ರಭಾವ ಉಂಟಾಗಿತ್ತು. ಹಾಗಾಗಿ, ಮಗಳು ತಾನು ಡಾಕ್ಟರಿಕೆ ಕಲಿತು ಬಡಜನರ ಸೇವೆ ಮಾಡುತ್ತೇನೆಂದು ಹೇಳಿದಾಗ ಅಪ್ಪ ಆಕ್ಷೇಪಿಸಲಿಲ್ಲ. 1938ರಲ್ಲಿ ಲಕ್ಷ್ಮೀ ಮದ್ರಾಸ್‌ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದರು. ಜೊತೆಗೆ ಸ್ತ್ರೀರೋಗ ವಿಭಾಗದಲ್ಲಿ ವಿಶೇಷ ಅಧ್ಯಯನ ಮಾಡಿದರು. ಪೈಲೆಟ್‌ ಆಗಿದ್ದ ಪಿ. ಕೆ. ಎನ್‌. ರಾವ್‌ ಅವರನ್ನು ವಿವಾಹವಾದರೂ ಅವರ ಸಂಸಾರ ದೀರ್ಘ‌ಕಾಲ ಬಾಳಲಿಲ್ಲ. ಪುರೋಗಾಮಿಯಾಗಿ ಯೋಚಿಸುವ ಎಲ್ಲ ಮಹಿಳೆಯರಿಗೆ ಸಂಸಾರ ಒಂದು ಸವಾಲೇ ಸರಿ. ತಾನು ಮಹಿಳೆಯಾಗಿ ಸಾಂಪ್ರದಾಯಿಕ ಜೀವನಕ್ರಮವನ್ನು ಅನುಸರಿಸುತ್ತೇನೆಂದುಕೊಳ್ಳುವವರಿಗೆ ಸಂಸಾರ ಕಷ್ಟವಲ್ಲ. ಆದರೆ, ತನಗೂ ಪುರುಷನ‌ಂತೆ ವ್ಯಕ್ತಿತ್ವವೊಂದಿದೆ, ತಾನೂ ಪುರುಷರಂತೆ ಸಾಧನೆ ಮಾಡುತ್ತೇನೆಂಬ ಮಹತ್ವಾಕಾಂಕ್ಷೆ ಹೊಂದಿರುವವರಿಗೆ ಸಂಸಾರದಲ್ಲಿ ಉಳಿಯುವುದು ಕಷ್ಟವೆನಿಸುತ್ತದೆ. ಅದು, ಅವರ ಸಮಸ್ಯೆಯಲ್ಲ , ಸಂಪ್ರದಾಯಕ್ಕೆ ಜೋತುಬಿದ್ದ ಸಮಾಜದ ದೌರ್ಬಲ್ಯ.

        ಗಂಡನನ್ನು ತೊರೆದ ಲಕ್ಷ್ಮೀ ಸಿಂಗಾಪುರದ ದಾರಿ ಹಿಡಿದರು. 1940. ಸುಭಾಷ್‌ಚಂದ್ರ ಬೋಸ್‌, ಗಾಂಧೀಜಿಯವರ ಅಹಿಂಸೆಯ ಮಾರ್ಗದಿಂದ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ತಿಳಿದು ಯುವಜನರ ತಂಡ ಕಟ್ಟಲು ಹೊರಟ ದಿನಗಳವು. ಭಾರತದಲ್ಲಿ ಮಾತ್ರವಲ್ಲ , ಹೊರದೇಶಗಳಲ್ಲಿಯೂ ಭಾರತ ಸ್ವಾತಂತ್ರ್ಯ ಹೋರಾಟದ ಸೇನೆಯನ್ನು ಸಜ್ಜುಗೊಳಿಸುವ ಕೆಲಸ ನಡೆಯುತ್ತಿತ್ತು. ಸಿಂಗಾಪುರದಲ್ಲಿ ತಾನು ಬಡಜನರಿಗಾಗಿ ಕ್ಲಿನಿಕ್‌ ತೆರೆದು ಸೇವೆಯಲ್ಲಿ ತೊಡಗಿರುವಾಗಲೇ ಸುಭಾಷ್‌ ಚಂದ್ರ ಬೋಸ್‌ ಅವರ ಭಾರತೀಯ ರಾಷ್ಟ್ರೀಯ ಸೇನೆಯ ಚಟುವಟಿಕೆಗಳಲ್ಲಿಯೂ ಲಕ್ಷ್ಮೀ ವ್ಯಸ್ತರಾದರು. 1942ರಲ್ಲಿ ಸಿಂಗಾಪುರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಸಂತ್ರಸ್ತರಾದವರ ಸೇವೆ ಮಾಡುತ್ತಿರುವಾಗ‌, ಬೋಸ್‌ರ ಅಜಾದ್‌ ಹಿಂದ್‌ ಫೌಜ್‌ ಅಭಿಯಾನವನ್ನು ಇನ್ನಷ್ಟು ಸುದೃಢಗೊಳಿಸಬೇಕೆಂಬ ಸಂಕಲ್ಪ ಉಂಟಾಯಿತು. ಅವರು ನೇರವಾಗಿ ಸುಭಾಷ್‌ ಚಂದ್ರ ಬೋಸ್‌ರನ್ನು ಭೇಟಿಯಾಗಿ ಮಹಿಳಾ ಸೇನೆಯನ್ನು ಕಟ್ಟುವ ಪ್ರಸ್ತಾವನೆಯನ್ನು ಮುಂದಿಟ್ಟರು. ಹೀಗೆ ಮಾಡುವುದರಿಂದ ಸ್ವಾತಂತ್ರ್ಯ ಹೋರಾಟ ಅರ್ಥಪೂರ್ಣವಾಗುತ್ತದೆ ಮತ್ತು ಪರಿಪೂರ್ಣವಾಗುತ್ತದೆ ಎಂದು ಮನದಟ್ಟು ಮಾಡಿದರು. ಸ್ವಾತಂತ್ರ್ಯ ಹೋರಾಟದ ದಾರಿ ತೀವ್ರವಾದಿಯದ್ದೇ ಆಗಿರಲಿ, ಅದರಲ್ಲಿ ಮಹಿಳೆಯರು ಸೇರಿಕೊಳ್ಳದಿದ್ದರೆ ಅದು ಅಪೂರ್ಣವಾಗುತ್ತದೆ ಎಂದು ತಿಳಿದ ಬೋಸ್‌ ಅವರು ಲಕ್ಷ್ಮೀಯವರ ಕೇಳಿಕೆ ಸಮ್ಮತಿಸಿದರು. ಝಾನ್ಸಿ ರಾಣಿ ರೆಜಿಮೆಂಟ್‌ ಆರಂಭವಾಗಿ, ಅದರಲ್ಲಿ ಅನೇಕ ಮಹಿಳೆಯರು ಸ್ವಯಂ ಆಸಕ್ತಿಯಿಂದ ಸೇರಿಕೊಂಡರು. ಅದರ ಮುಂಚೂಣಿಯಲ್ಲಿದ್ದ ಲಕ್ಷ್ಮೀ ಸ್ವಾಮಿನಾಥನ್‌ ಅವರು ಕ್ಯಾಪ್ಟನ್‌ ಲಕ್ಷ್ಮೀಯಾದರು. ಆ ಉಪಾಧಿ ಜೀವನದುದ್ದಕ್ಕೂ ಲಕ್ಷ್ಮೀಯವರ ಹೆಸರಿನೊಂದಿಗೆ ಉಳಿದುಕೊಂಡಿತು. 1945ರಲ್ಲಿ ಇಂಗ್ಲಿಷರ ಸೇನೆ ಅವರನ್ನು ಬಂಧಿಸಿತು ಮತ್ತು ಬರ್ಮಾದಲ್ಲಿ ಸೆರೆಮನೆಯಲ್ಲಿರಿಸಿತು.

        1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ, ಮಹಿಳೆಯರಿಗೆ ಲಿಂಗ ಅಸಮಾನತೆಯ ಬಂಧನದಿಂದ ಸ್ವತಂತ್ರರಾಗಿಸುವಲ್ಲಿ ನಿರಂತರ ತೊಡಗಿಸಿಕೊಂಡರು ಲಕ್ಷ್ಮೀ. 1947ರಲ್ಲಿ ಲಾಹೋರ್‌ನಲ್ಲಿ ಅವರು ಪ್ರೇಮ್‌ ಕುಮಾರ್‌ ಸೆಹಗಲ್‌ ಅವರನ್ನು ವಿವಾಹವಾಗಿ, ಕಾನ್ಪುರದಲ್ಲಿ ನೆಲಸಿದರು. ಭಾರತದ ವಿಭಜನೆಯ ಸಂತ್ರಸ್ತರಿಗೆ ಅವರು ನಿಸ್ವಾರ್ಥ ಸೇವೆ ಮಾಡಿದರು. ಬಾಂಗ್ಲಾ ಗಲಭೆಯ ಸಂದರ್ಭದಲ್ಲಿ ದೇಶ, ಧರ್ಮಗಳ ಗಡಿಯನ್ನು ದಾಟಿ ಜನಸೇವೆ ಮಾಡಿದರು. ಭೋಪಾಲ್‌ ದುರಂತದಲ್ಲಿ ನೋವನ್ನುಂಡವರ ಬಳಿ ಅವರು ತಮ್ಮ ವೈದ್ಯಕೀಯ ತಂಡದ ಜೊತೆಗೆ ತೆರಳಿ ಆಸರೆಯಾದರು. 1984ರಲ್ಲಿ ಸಿಕ್‌ ವಿರೋಧಿ ದಂಗೆಯಲ್ಲಿ ಜಖಂಗೊಂಡವರ ಶುಶ್ರೂಷೆ ಮಾಡಿದರು. 1996ರಲ್ಲಿ ಮಿಸ್‌ ವಲ್ಡ್‌ ì ಸ್ಪರ್ಧೆಯ ವಿರುದ್ಧ ನಡೆದ ಅಭಿಯಾನದ ನಾಯಕತ್ವ ವಹಿಸಿದರು.

        ಅವರ ನಿಧನದೊಂದಿಗೆ ಕಾನ್ಪುರದ ಅವರ ಕ್ಲಿನಿಕ್‌ ಬಡಜನರಿಗೆ ಶಾಶ್ವತವಾಗಿ ಮುಚ್ಚಿಬಿಟ್ಟಿದೆ. ಆದರೆ, ಸಾಧನೆ ಮಾಡಬಯಸುವ ಭಾರತದ ಮಹಿಳೆಯರಿಗೆ ಲಕ್ಷ್ಮೀ ಸೆಹಗಲ್‌ಅವರ ಜೀವನ ಕಥನ ಎಂದೆಂದಿಗೂ ಕೈ ಹಿಡಿದು ನಡೆಸಲಿದೆ. 

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಾಂಸಾರಿಕ ಬದುಕಿನ ಬಗ್ಗೆ , ಗಂಡ- ಹೆಂಡತಿಯರ ಬಗ್ಗೆ, ಮದುವೆಯ ಬಗ್ಗೆ ಎಷ್ಟೊಂದು ಜೋಕ್‌ಗಳನ್ನು ಓದುತ್ತ ಇರುತ್ತೇವೆ. ಹೆಚ್ಚಿನವುಗಳನ್ನು ಓದಿ ನಕ್ಕು ಬಿಡುತ್ತೇವೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus