Thursday, June 20, 2013
Last Updated: 12:50:22 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಲಾತ್ಮಕ ಪೂಜೆ
    • ಕಣ್ಮನ ಸೂರೆಗೊಂಡ ಯಕ್ಷಗಾನ ಪ್ರದರ್ಶನ
    • ಕಲೆಯ ಅಭಿರುಚಿ ಇಲ್ಲದಿರುವವರಿಗೆ ಕಲೆಯ ಶ್ರೀಮಂತಿಕೆ ತಿಳಿಯುವುದು ಕಷ್ಟ.

      • ಎಚ್‌. ಎನ್‌. ಆಚಾರ್ಯ | Jul 27, 2012

        ಕಲೆಯನ್ನು ಆಸ್ವಾದಿಸುವವರಿಗೆ ಮಾತ್ರ ಅದರ ಮೌಲ್ಯ, ಅದನ್ನು ಆಸ್ವಾದಿಸಿ ಅನುಭವಿಸುವುದರ ಸ್ವಾರಸ್ಯ ತಿಳಿಯುವುದಲ್ಲದೆ ಕಲೆಯ ಅಭಿರುಚಿ ಇಲ್ಲದಿರುವವರಿಗೆ ಕಲೆಯ ಶ್ರೀಮಂತಿಕೆ ತಿಳಿಯುವುದು ಕಷ್ಟ. ಕಲೆ ಎನ್ನುವುದು ಎಲ್ಲರಿಗೂ ಒಲಿಯುವುದಿಲ್ಲ. ಹಾಗಂತ ಉಳಿದವರಲ್ಲಿ ಕಲಾತ್ಮಕ ಮನಸ್ಸು ಇಲ್ಲವೇ ಎನ್ನುವ ಪ್ರಶ್ನೆ ಮುಂದಾಗುವುದು ಸ್ವಾಭಾವಿಕ. ಪ್ರತಿಯೊಬ್ಬ ಮಾನವನಲ್ಲಿಯೂ ಕಲೆ ಇದ್ದೇ ಇರುತ್ತದೆ. ಆದರೆ ಒಬ್ಬೊಬ್ಬರು ಒಂದೊಂದು ಮಾರ್ಗದಲ್ಲಿ ಸಾಗುತ್ತಾರೆ, ಒಬ್ಬೊಬ್ಬರ ಕಲಾತ್ಮಕ ಸಂವೇದನೆ ಒಂದೊಂದು ರೀತಿ, ಒಂದೊಂದು ಮಟ್ಟದಲ್ಲಿರುತ್ತದೆ.

        ಒಂದೇ ಮಾರ್ಗವನ್ನು ಅನುಸರಿಸಿ ಕಲಿತರೆ ನಾವು ಆಯ್ಕೆ ಮಾಡಿಕೊಂಡ ಕಲೆ ಅಥವಾ ಕಾರ್ಯದಲ್ಲಿ ಸಿದ್ಧಿ ಅಥವಾ ಅಭಿವೃದ್ಧಿಯನ್ನು ಕಾಣಲು ಸಾಧ್ಯವೆಂದು ಪ್ರಯತ್ನಿಸುತ್ತಿರುವವರು ಕೋಟೇಶ್ವರದ ಶ್ರೀ ದುರ್ಗಾಂಬಿಕಾ ಯಕ್ಷಗಾನ ಕಲಾ ಕೇಂದ್ರದ ಕಲಾವಿದರು. ಇತ್ತೀಚೆಗೆ ಇವರ 8ನೇ ವಾರ್ಷಿಕೋತ್ಸವದ ಅಂಗವಾಗಿ ಬಾಲ ಕಲಾವಿದರು ಪ್ರದರ್ಶಿಸಿದ ಯಕ್ಷಗಾನ ಆಖ್ಯಾನ ""ಮಹಾಮಂತ್ರಿ ದುಷ್ಟಬುದ್ಧಿ'.

        ಸ್ವಾರ್ಥಿಯಾದ ಮಂತ್ರಿ ದುಷ್ಟಬುದ್ಧಿ ರಾಜ್ಯದಾಹ, ಅಧಿಕಾರ ದಾಹದಿಂದ ತನ್ನ ಮಗಳು ವಿಧವೆಯಾಗುವುದನ್ನೂ ಲೆಕ್ಕಿಸದೆ ಚಂದ್ರಹಾಸನನ್ನು ಕೊಲೆಗೈಯ್ಯಲು ಕಟುಕರಿಗೆ ಅಪ್ಪಣೆ ಕೊಟ್ಟು ಕಳುಹಿಸುತ್ತಾನೆ. ವಿಧಿಯ ಸಂಕಲ್ಪದಿಂದ ಆತನ ಮಗ ಮದನನೇ ಕಟುಕರ ಖಡ್ಗಕ್ಕೆ ಬಲಿಯಾಗುತ್ತಾನೆ. ಕಟುಕರು ಕಗ್ಗೊಲೆಗೆ ಸಾಕ್ಷಿಯಾಗಿ ರಕ್ತದ ಕುರುಹನ್ನು ಮಂತ್ರಿಗೊಪ್ಪಿಸಲು ದುಷ್ಟಬುದ್ಧಿ ಶತ್ರು ಅಳಿದನೆಂದು ಸಂತೋಷಪಡುತ್ತಾನೆ. ಆ ಸಮಯಕ್ಕೆ ಆತ ಕೊಲ್ಲಲೆಳಸಿದ್ದ ಚಂದ್ರಹಾಸ ರಾಜ ಸುಬುದ್ಧಿಯ ಆಸ್ಥಾನದಿಂದ ದುಷ್ಟಬುದ್ಧಿ ಇರುವಲ್ಲಿಗೆ ಬರುತ್ತಾರೆ. ದಿಗ್ಭ್ರಾಂತನಾಗುವ ದುಷ್ಟಬುದ್ಧಿ ಅವನಲ್ಲಿ "ನನ್ನ ವಚನದಂತೆ ನೀನು ಕಾಳಿಕಾಲಯಕ್ಕೆ ಹೋಗಲಿಲ್ಲವೇ?' ಎಂದು ಪ್ರಶ್ನಿಸುತ್ತಾನೆ. ಚಂದ್ರಹಾಸ "ನನ್ನ ಬದಲು ನಿಮ್ಮ ಮಗ ಹೋಗಿದ್ದಾರೆ' ಎನ್ನಲು ಆಗಿರುವ ಅನಾಹುತವನ್ನು ನೆನೆದು ದುಷ್ಟಬುದ್ಧಿ ಉದ್ವೇಗ, ಆವೇಶ, ಭಯ - ದುಃಖದಿಂದ ಕಾಳಿಕಾಲಯಕ್ಕೆ ಹೊರಡುತ್ತಾನೆ.

        "ಮಹಾಮಂತ್ರಿ ದುಷ್ಟಬುದ್ಧಿ' ಪ್ರಸಂಗದ ಹೃದಯ ಭಾಗವಾದ ಈ ಸನ್ನಿವೇಶದಲ್ಲಿ ದುಷ್ಟಬುದ್ಧಿಯ ಪಾತ್ರವನ್ನು ನಿರ್ವಹಿಸುವುದು ಅನುಭವಿ ಕಲಾವಿದರಿಗೂ ಒಂದು ಸವಾಲು. ಇಂತಹ ಪಾತ್ರ ನಿರ್ವಹಿಸುವುದಕ್ಕೆ ಕಲಾಸಿದ್ಧಿ ಸಂಪನ್ನರಿಗೆ ಮಾತ್ರ ಸಾಧ್ಯವಾದರೂ ಮೊನ್ನೆಯ ಪ್ರದರ್ಶನದಲ್ಲಿ 9ನೇ ತರಗತಿಯ ವಿದ್ಯಾರ್ಥಿ ಪೂರ್ಣಚಂದ್ರ ಕಾರಂತ ಈ ಪಾತ್ರ ನಿರ್ವಹಿಸಿ ಗೆದ್ದಿದ್ದಾನೆ.

        ದುಷ್ಟಬುದ್ಧಿಯ ಪುತ್ರಿ ವಿಷಯೆಯ ಪಾತ್ರದಲ್ಲಿ 7ನೇ ತರಗತಿಯ ವಿದ್ಯಾರ್ಥಿ ನಿಶಾಂತ ತನ್ನ ಸುಂದರ ರೂಪು, ವಯ್ನಾರ, ಬೆಡಗು ಬಿನ್ನಾಣ, ನಯವಾದ ನಾಟ್ಯಗಳಿಂದ ಗಮನ ಸೆಳೆದನು. ಈ ಪ್ರಸಂಗದಲ್ಲಿ ಚಂದ್ರಹಾಸನ ಪಾತ್ರ ನಿರ್ವಹಿಸಿದ್ದು 8ನೇ ತರಗತಿಯ ದೀಕ್ಷಲ್‌. ಆಕೆಯ ಮಾತುಗಾರಿಕೆ ಮೆಚ್ಚುವಂಥದ್ದಾಗಿತ್ತು. ಆದರೆ ನಾಟ್ಯವನ್ನು ಇನ್ನೂ ಸರಿಯಾಗಿ ಅಭ್ಯಾಸ ಮಾಡಿದರೆ ಭವಿಷ್ಯದಲ್ಲಿ ಪ್ರಬುದ್ಧ ಕಲಾವಿದೆಯಾಗುವುದರಲ್ಲಿ  ಸಂಶಯವಿಲ್ಲ. ಹಾಗೇ ಮದನನಾಗಿ 9ನೇ ತರಗತಿಯ ರಶ್ಮಿತಾ ಶೆಟ್ಟಿ ಉತ್ತಮ ಕುಣಿತ, ಮಾತುಗಾರಿಕೆಯಿಂದ ಮನಗೆದ್ದಳು. ಹಾಸ್ಯದ ಬ್ರಾಹ್ಮಣ ಪಾತ್ರಧಾರಿ ಸೌರಭ ಆನಗಳ್ಳಿ ಚೆನ್ನಾಗಿ ನಿರ್ವಹಿಸಿದ್ದಾನೆ. ಕಟುಕರಾಗಿ ಹರ್ಷ, ಆಕರ್ಷ ಪೂಜಾರಿ ಪಾತ್ರ ನಿರ್ವಹಿಸಿದರು. 5ನೇ ತರಗತಿಯ ಪವನ್‌ ಕುಮಾರ್‌ ಕಾಳಿಕಾದೇವಿಯಾಗಿ ಕಾಣಿಸಿಕೊಂಡಿದ್ದಾನೆ.

        ಎರಡೂವರೆ ತಾಸುಗಳ ಈ ಚಿಕ್ಕಚೊಕ್ಕ ಪ್ರದರ್ಶನ  ಪ್ರೇಕ್ಷಕರನ್ನು ಬಿಗಿಯಾಗಿ ಹಿಡಿದುನಿಲ್ಲಿಸಿತ್ತು. ಈ ಬಾಲಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಹೊರಗೆಡಹಲು ಸಹಕರಿಸಿದವರು ಭಾಗವತರಾಗಿ ಕರುಣಾಕರ ಆಚಾರ್ಯ ಕೋಟೇಶ್ವರ, ಮದ್ದಳೆಯಲ್ಲಿ  ರವಿ ಶೃಂಗೇರಿ, ಚೆಂಡೆಯಲ್ಲಿ ಶ್ರೀಕುಮಾರ ಮೊಗವೀರ ಇವರು. ವಸ್ತ್ರಾಭರಣದಲ್ಲಿ ಶ್ರೀಮತಿ ಶಾಂತಾ, ಹರ್ಷ, ಸೌಮ್ಯಾ, ಸತೀಶ್‌ ಸೌಡ ಇವರುಗಳ ಶ್ರಮ ಸಾರ್ಥಕವಾಯಿತು.

        ಯಕ್ಷಗಾನವು ನಶಿಸುತ್ತಿದೆಯೆಂಬ ಮಾತು ಕೇಳಿಬರುತ್ತಿರುವ ಈ ಕಾಲಘಟ್ಟದಲ್ಲಿ ಕಳೆದ ಎಂಟು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಯಕ್ಷವಿದ್ಯೆಯನ್ನು ಧಾರೆಯೆರೆಯುತ್ತಿರುವ ಶ್ರೀ ದುರ್ಗಾಂಬಿಕಾ ಯಕ್ಷಗಾನ ಕಲಾಕೇಂದ್ರ (ರಿ.), ಕೋಟೇಶ್ವರ ಇದರ ಸಕಲರಿಗೂ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus