ಎಲ್. ಎನ್. ಭಟ್ ಮಳಿ | Jul 27, 2012
ಯಕ್ಷಗಾನದ ನೃತ್ಯ ವೈವಿಧ್ಯತೆಯಲ್ಲಿ ತೆಂಕುತಿಟ್ಟಿನ ಪರಂಪರೆಯನ್ನು ಚೆನ್ನಾಗಿ ತಿಳಿದ ಅನುಭವೀ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲರಿಗೆ ಈ ವರ್ಷದ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಘೋಷಿತವಾಗಿದೆ. ಬಂಟ್ವಾಳ ತಾಲೂಕು ಮಿತ್ತನಡ್ಕ ಸಮೀಪದ ಬೇತ ಎಂಬ ಪುಟ್ಟ ಹಳ್ಳಿ ಕುಂಞರ ಹುಟ್ಟೂರು. ತಂದೆ ಮುತ್ತ ಮೂಲ್ಯ, ತಾಯಿ ಅಬ್ಬು. 5ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿ ಹುಡುಗನಾಗಿದ್ದಾಗಲೇ ಯಕ್ಷಗಾನ ಕಲಿಕೆಗೆ ತೊಡಗಿದರು. ಕುರಿಯ ವಿಠಲ ಶಾಸಿŒಗಳಲ್ಲಿ ನಾಟ್ಯಾಭ್ಯಾಸ ಮಾಡಿ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆ ಆರಂಭಿಸಿದರು.

ಕಲಾಭ್ಯಾಸ ಮಾಡಿದ ಬಳಿಕ ಬಾಲಕರು ಮೊದಲಿಗೆ ಮಾಡುತ್ತಿದ್ದ ಬಯಲಾಟದ ನಿತ್ಯವೇಷ ಕುಲಾಲರ ತಿರುಗಾಟದ ಯಶಸ್ಸಿಗೆ ಭದ್ರ ಬುನಾದಿ ಆಯಿತು. ತೆಂಕುತಿಟ್ಟಿನ ರಂಗಸ್ಥಳದಲ್ಲಿ ವೇಷಗಳ ನಡೆಯನ್ನು ಪ್ರಸಂಗ ಆರಂಭ ದಿಂದ ಮಂಗಲದವರೆಗೆ ಅರಿತ ಕುಂಞರು ವಿಶೇಷವಾಗಿ ಪರಂಪರೆಯ ಕಲಾವಿದರೆಂದು ಗುರುತಿಸಲ್ಪಡುತ್ತಾರೆ.
ಧರ್ಮಸ್ಥಳ, ಕೂಡ್ಲು, ಸೌಕೂರು, ಇರಾ, ಕೊಲ್ಲೂರು ಮೇಳಗಳಲ್ಲಿ, 36 ವರ್ಷಗಳ ಕಾಲ ಸುಂಕದಕಟ್ಟೆ ಅಂಬಿಕಾ ಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿನ ತಿರುಗಾಟ ಕುಂಞರ ಅನುಭವದ ಸಂಪುಟದ ಸ್ಪಷ್ಟತೆ ಯನ್ನು ಹೆಸರಿಸುತ್ತದೆ. "ದೇವೇಂದ್ರ' ಕುಂಞರಿಗೆ ಪ್ರಸಿದ್ಧಿ ತಂದುಕೊಟ್ಟ ಪಾತ್ರ. ದೇವೇಂದ್ರನ ಸಭಾಕ್ಲಾಸ್ ಅನ್ನು ಸಮರ್ಥವಾಗಿ ಪ್ರದರ್ಶಿಸಬಲ್ಲ ನಾಟ್ಯವಿಶಾರದರು ಇವರು. ಸಣ್ಣ ತಿಮ್ಮಪ್ಪನವರಿಂದ ಹನುಮಂತನ ತೆರೆ ಪರ್ಪಾಟನ್ನು ಅಭ್ಯಾಸ ಮಾಡಿದ ಕುಲಾಲರು ಆ ಬಗ್ಗೆ ತಿಳಿದ ಬೆರಳೆಣಿಕೆಯ ಕಲಾವಿದರಲ್ಲಿ ಒಬ್ಬರು.
ಕೌಂಡ್ಲಿàಕ, ಹಿರಣ್ಯಾಕ್ಷ, ಭಾನು ಕೋಪ, ಇಂದ್ರಜಿತು, ರಕ್ತಬೀಜ, ಮಧು, ಕೈಟಭ, ಅರ್ಜುನ, ಕುಂಭಸ್ಥನಿ, ಅಜಮುಖೀ ಹೀಗೆ ಯಾವುದೇ ವೇಷ ಗಳನ್ನು ಆಯಾ ಪಾತ್ರಕ್ಕೆ ಬೇಕಾದ ಸ್ಪಷ್ಟ ಮುಖವರ್ಣಿಕೆ ಬರೆದು ರಂಗಸ್ಥಳ ಪ್ರವೇಶ ಮಾಡುವ ಕುಂಞರು ಒಬ್ಬ ಕಲಾರಾಧಕರು. "ಕೋಟಿ ಚೆನ್ನಯ' ಪ್ರಸಂಗದಲ್ಲಿ ಕುಲಾಲರದು ಕೋಟಿಯ ಪಾತ್ರ. ಭಾಗವತರುಗಳಾದ ಪುತ್ತಿಗೆ ತಿಮ್ಮಪ್ಪ ರೈ, ಮರವಂತೆ ನರಸಿಂಹದಾಸ ಇವರುಗಳ ಬಗ್ಗೆ ತುಂಬಾ ಗೌರವ ಕುಲಾಲರಿಗೆ. ಮುಳಿಯಾಲ ಭೀಮ ಭಟ್, ಕರುವೋಳು ದೇರಣ್ಣ ಶೆಟ್ಟಿ, ಬಾಬು ಕುಡ್ತಡ್ಕ ಇವರೆಲ್ಲರ ಒಡನಾಟ ಕುಂಞಣ್ಣರ ಕಲಾಪ್ರಾವೀಣ್ಯಕ್ಕೆ ಪ್ರೇರಕವಾಯಿತು.
ಉಡುಪಿ, ಕಟೀಲು ಮೊದಲಾದೆಡೆಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಪರಂಪರೆ ಯನ್ನು ಪ್ರದರ್ಶಿಸಿದ ಕುಲಾಲರು ತೆಂಕುತಿಟ್ಟು ವೇಷ ಗಾರಿಕೆ, ನಾಟ್ಯಗಾರಿಕೆಗೆ ಒಬ್ಬ ತಜ್ಞರೆಂದರೆ ಅತಿಶಯೋಕ್ತಿ ಆಗಲಾರದು. ತಾಳಬದ್ಧವಾದ ಕುಣಿತ, ಶ್ರುತಿಬದ್ಧವಾದ ಮಾತುಗಾರಿಕೆ, ಅರ್ಥಗಾರಿಕೆ, ಭಾವಾಭಿನಯ, ಪ್ರತ್ಯುತ್ಪನ್ನಮತಿತ್ವ, ಪ್ರಸಂಗಾವಧಾನತೆ ಇವುಗಳು ಕುಲಾಲರ ಕಲಾಗುಣಗಳು.
ತಾಳ್ತಜೆ, ಪದ್ಯಾಣ ಮೊದಲಾದೆಡೆ ಗಳಲ್ಲಿ ಯಕ್ಷಗಾನ ತರಗತಿಗಳನ್ನೂ ನಡೆಸಿದ ಇವರು ಹಲವಾರು ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡಿದ ಗುರುಗಳು.
68ರ ಹರೆಯದ ಕುಂಞರಿಗೆ ಸುಂಕದ ಕಟ್ಟೆ ಸ್ವಾಮೀಜಿಯವರಿಂದ ಸಮ್ಮಾನ ಸಹಿತ ಅನೇಕ ಗೌರವಗಳು ಪ್ರಾಪ್ತವಾಗಿವೆ. ಪತ್ನಿ, ಪುತ್ರ, ಮೂವರು ಪುತ್ರಿಯರ ಕುಟುಂಬದೊಂದಿಗೆ ಬೇತದಲ್ಲಿ ವಾಸವಾಗಿದ್ದಾರೆ. ಎರಡು ವರ್ಷಗಳ ಹಿಂದೆ ರಂಗದಿಂದ ನಿವೃತ್ತಿ ಪಡೆದಿದ್ದಾರೆ.
ಬೇತ ಕುಂಞರನ್ನು ಈ ವರ್ಷದ ದೋಗ್ರ ಪೂಜಾರಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅವರ ಸಾಧನೆಗೆ ನೀಡುತ್ತಿ ರುವ ಗೌರವವಾಗಿದೆ. ಆಗಸ್ಟ್ 1ರಂದು ಮಂಗಳೂರು ಪುರಭವನದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.