ಸಾಂತೂರು ಶ್ರೀನಿವಾಸ ತಂತ್ರಿ | Jul 27, 2012
ಧರ್ಮಸ್ಥಳ ಪ್ರೌಢ ಶಾಲೆಯ ಶಾರೀರಿಕ ಶಿಕ್ಷಣ ಶಿಕ್ಷಕ ರಾಗಿ ನೂರಾರು ಕ್ರೀಡಾ ಪ್ರತಿಭೆಗಳನ್ನು ಪೋಷಿಸಿ, ಬೆಳೆಸಿ "ಪಿ.ಟಿ. ಮಾಸ್ಟರ್' ಎಂದೇ ಚಿರಪರಿಚಿತರಾದ ಧರ್ಮಸ್ಥಳದ ಎಸ್. ಬಿ. ನರೇಂದ್ರ ಕುಮಾರ್ ಯಕ್ಷಗಾನ ಕಲೆಯಲ್ಲೂ ಆಸಕ್ತಿ ಬೆಳೆಸಿ ವೈವಿಧ್ಯಮಯ ಪಾತ್ರಗಳಲ್ಲಿ ವೇಷಧಾರಿಯಾಗಿ, ಸಂಘಟಕರಾಗಿ, ನಾಟ್ಯ ಗುರುಗಳಾಗಿ, ನೇಪಥ್ಯ ಸಹಾಯಕರಾಗಿ, ಕಲಾವಿದರ ಪೋಷಕರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆಗಾಗಿ ಗುರುತಿಸಿ ಕೊಂಡವರು. ಅವರು ತನ್ನ ಯಕ್ಷ ಕಲೋಪಾಸನೆಯ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

1963ರಲ್ಲಿ ನಾಟ್ಯಗುರು ದಿ| ಕುಂಬ್ಳೆ ರಾಮಚಂದ್ರರಿಂದ ನೃತ್ಯಾಭ್ಯಾಸ ಪ್ರಾರಂಭಿಸಿ ರಂಗ ಪ್ರವೇಶಿಸಿದ ನರೇಂದ್ರ ಕುಮಾರ್ 1965ರಲ್ಲಿ ದಿ| ಬಾಬು ರಾವ್ ಧರ್ಮಸ್ಥಳ ಅವರ ಮಾರ್ಗದರ್ಶನದಲ್ಲಿ ಕಲಾವಿದನಾಗಿ ರಾಜ್ಯದ ನಾನಾ ಕಡೆ ನಾಟಕಗಳಲ್ಲಿ ಪ್ರದರ್ಶನ ನೀಡಿ ದ್ದಲ್ಲದೆ, ಬಳ್ಳಂಬೆಟ್ಟು ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿ ನೀಡಿ ಅವರಿಂದ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಯಕ್ಷಗಾನದ ಯಶಸ್ವಿ ಪ್ರದರ್ಶನ ನೀಡಿದ ಸಾಧಕರು. ಅವರು ತರಬೇತಿ ನೀಡಿದ ವಿದ್ಯಾರ್ಥಿನಿಯರ ತಂಡ ಬೆಂಗಳೂರಿನ ಮಹಿಳಾ ಸಾಹಿತ್ಯ ಸಮ್ಮೇಳನ, ಹೈದರಾಬಾದ್ ದೂರದರ್ಶನ ಹಾಗೂ ಬಾಲಕರ ತಂಡ ಗಣೇಶ ಚತುರ್ಥಿ, ದಸರಾ ಮಹೋತ್ಸವ (ಬೆಂಗಳೂರು) ಹಾಗೂ ಗುಜರಾತಿನ ಗಾಂಧಿ ನಗರ ರಾಷ್ಟ್ರೀಯ ಸೇವಾದಳ ಕಾಂಗ್ರೆಸ್ ಸಮ್ಮೇಳನದಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಜನ ಮೆಚ್ಚುಗೆ ಪಡೆದಿದೆ.
ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದ ಸಲಹಾ ಸಮಿತಿ ಸದಸ್ಯರಾಗಿ, ಶ್ರೀ ಕ್ಷೇತ್ರದ ಸಣ್ಣ ಮೇಳದ ನಿರ್ವಹಣೆಯೊಂದಿಗೆ ಟಿ. ನರಸೀಪುರ ತ್ರಿವೇಣಿ ಸಂಗಮ ಕುಂಭ ಮೇಳ, ಗ್ರಾಮಾಭಿವೃದ್ಧಿ ಯೋಜನೆಯ ಕೃಷಿಮೇಳ, ದ.ಕ. ಜಿಲ್ಲಾ ಕರಾವಳಿ ಉತ್ಸವ, ಹಾಸನದ ಹೊಯ್ಸಳ್ಳೋತ್ಸವ, ಉ.ಕ. ಜಿಲ್ಲೆಯ ಕದಂಬೋತ್ಸವ, ಕನ್ನಡ ರಾಜ್ಯೋತ್ಸವ ಬೆಳ್ಳಿಹಬ್ಬ, ದಸರಾ ಉತ್ಸವ, 1994ರಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಸೌಂದರ್ಯ ಸ್ಪರ್ಧೆ, 1989ರಲ್ಲಿ ಮುಂಬಯಿಯಲ್ಲಿ ಅಪ್ನಾ ಉತ್ಸವ್‌ನಲ್ಲಿ ಕಲಾವಿದರಾಗಿ ತನ್ನ ಅದ್ಭುತ ಪ್ರತಿಭೆ ಯನ್ನು ಪ್ರದರ್ಶಿಸಿದ್ದಾರೆ. ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದೊಂದಿಗೆ ಕೇರಳದ ಗುರುವಾಯೂರು ಉತ್ಸವ, ಕಲಾಮಂಡಲಂ ಉತ್ಸವ, ಊಟಿ, ಹೈದರಾ ಬಾದ್, ಚೆನ್ನೈ, ಕೊಯಮತ್ತೂರುಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಧರ್ಮಸ್ಥಳದ ಬಿ. ಭುಜಬಲಿಯವರ ನೇತೃತ್ವದಲ್ಲಿ ದೂರ ದರ್ಶನ ವಾಹಿನಿ ಗಳು, ಸುರತ್ಕಲ್-ಮೂಲ್ಕಿಯಲ್ಲಿ ನಡೆದ ಯಕ್ಷಗಾನ ಸ್ಪರ್ಧೆ, ರಾಷ್ಟ್ರಪತಿ ಭವನ, ದಿಲ್ಲಿ ಕನ್ನಡ ಸಂಘ, ಭಾರತ ಭವನ, ಭೋಪಾಲ ಗಳಲ್ಲಿ ಪಾತ್ರ ನಿರ್ವಹಿಸಿದ ಅನುಭವಿ ಅವರು. ಅನೇಕ ಯಕ್ಷಗಾನ ಸ್ಪರ್ಧೆಗಳ ತೀರ್ಪುಗಾರರಾಗಿ ಕಮ್ಮಟಗಳ ಅದ್ವಿತೀಯ ಸಾಧನೆ ಇತರರಿಗೆ ಮೇಲ್ಪಂಕ್ತಿಯಾಗಬಲ್ಲುದು.
ನರೇಂದ್ರ ಕುಮಾರ್ ಅವರ ಯಕ್ಷಕಲಾ ಸೇವೆಯನ್ನು ಗುರುತಿಸಿ ಧರ್ಮಸ್ಥಳ, ಪುಂಜಾಲಕಟ್ಟೆ, ಬೆಳ್ತಂಗಡಿ ಯಕ್ಷವೃಂದ, ಸುರ್ಮ, ಉಜಿರೆ ಜೇಸೀ, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ, ಗದಗ ಯಕ್ಷಗಾನ ಸಮ್ಮೇಳನ, ಉಜಿರೆ ದೇವಳದ ಜಾತ್ರೆ, ಅರ್ಕುಳ ಸುಬ್ರಾಯ ಆಚಾರ್ ಪ್ರತಿಷ್ಠಾನದಿಂದ ಸಮ್ಮಾನ, ಪ್ರಶಸ್ತಿ ಪುರಸ್ಕಾರಗಳು ಸಂದಿವೆ. 2003ರಲ್ಲಿ ಜರ್ಮನಿಯ ಬರ್ಲಿನ್ ನಗರ ಹಾಗೂ ಅಮೆರಿಕದ ಚಿಕಾಗೋದಲ್ಲಿ ನಡೆದ "ಅಕ್ಕ' ಸಮ್ಮೇಳನದಲ್ಲಿ ಭಾಗವಹಿಸಿದ ಖ್ಯಾತಿ ಅವರದು.
ಜುಲೈ 29ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅವರ ಯಕ್ಷೋಪಾಸನೆಯ ಸುವರ್ಣ ಸಂಭ್ರಮದಲ್ಲಿ 24 ಯಕ್ಷಗಾನ ಸಾಧಕರನ್ನು ಗೌರವಿಸುವುದರೊಂದಿಗೆ "ದಕ್ಷಾದ್ವರ- ಗಿರಿಜಾ ಕಲ್ಯಾಣ' ಯಕ್ಷಗಾನ ಪ್ರದರ್ಶನ ನಡೆಯಲಿದೆ.