Udayavani | Jul 27, 2012
ಯಕ್ಷಗಾನ ಕಲೆ ಕಾಲದಿಂದ ಕಾಲಕ್ಕೆ ಬದಲಾದ ಸಾಮಾಜಿಕ ಪರಿಸ್ಥಿತಿಯ ಪ್ರಭಾವದಿಂದ ತಾನೂ ಬದಲಾಗುತ್ತಾ ಬಂದಿದೆ. ಹೀಗೆ ಬದಲಾವಣೆ ಕಂಡಿರುವ ಒಂದು ವಿಭಾಗ ಪ್ರಸಂಗಗಳ ರಚನೆ. ಹಿಂದಿನ ಪ್ರಸಂಗ ಗಳು ಬಿಗಿಯಾದ ಛಂದಸ್ಸಿನ ಚೌಕಟ್ಟಿನಲ್ಲಿದ್ದರೆ ಇಂದಿನ ಹಲವು ಪ್ರಸಂಗಗಳು ಕೇವಲ ರಂಗ ಪ್ರದರ್ಶನಕ್ಕಾಗಿ ರೂಪಿತವಾದವುಗಳು. ಕಲೆಗೆ ಧರ್ಮದ ಹಿನ್ನೆಲೆ ಇದೆ. ಅಲ್ಲಿ ದೇವರ ಆರಾಧನೆ ಇದೆ. ಹೀಗೆ ಧರ್ಮದ ಹಿನ್ನೆಲೆ ಇದ್ದಾಗ ಕಲೆ ಕಲಬೆರಕೆಯಾಗದೆ ಉಳಿಯುತ್ತದೆ. ಧರ್ಮಕ್ಕೂ ಆಚರಣೆಗೂ ಕಲಾಭಿವ್ಯಕ್ತಿಗೂ ಸಂಬಂಧವಿದೆ.
ಯಕ್ಷಗಾನದಲ್ಲಿ ಕ್ಷೇತ್ರ ಮಹಾತ್ಮೆ ಪ್ರಸಂಗ ಗಳು ಆಯಾ ಕ್ಷೇತ್ರದ ಮಹಿಮೆಯನ್ನು ಪಸರಿಸುವಲ್ಲಿ, ಪ್ರಭಾವ ಹೆಚ್ಚಿಸುವಲ್ಲಿ ಸಾರ್ಥಕತೆ ಕಾಣುತ್ತವೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ , ಮಂದಾರ್ತಿ ಕ್ಷೇತ್ರ ಮಹಾತ್ಮೆ, ಕಟೀಲು ಮಹಾತ್ಮೆಗಳಂತಹ ಯಕ್ಷಗಾನ ಪ್ರಸಂಗಗಳಿಗೆ ಹಲವಾರು ವರ್ಷಗಳ ಇತಿಹಾಸ ಇದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ರಚನೆಯಾದ ಸೌಕೂರು, ಅಮೃತೇಶ್ವರಿ, ಕಮಲಶಿಲೆ; ಕಳೆದ ವರ್ಷ ಅಪಾರ ಜನಮನ್ನಣೆ ಪಡೆದ ಹಿರಿಯಡ್ಕ, ಬೇಲೂ¤ರು, ನೀಲಾವರ ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಸಹ ಅಪಾರ ಭಕ್ತಾದಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಈ ವರ್ಷ ರಂಗಕ್ಕೆ ಬಂದ ಗೋಳಿ ಗರಡಿಯವರ "ಪುರದೈವ ಪಂಜುರ್ಲಿ' ಪ್ರಸಂಗ ಸಮಾಜದ ಎಲ್ಲಾ ವರ್ಗದವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಅದು ಕಂಡ ಪ್ರದರ್ಶನಗಳ ಸಂಖ್ಯೆಯೇ ಒಂದು ದಾಖಲೆ.
ಯಕ್ಷಗಾನದ ಭದ್ರ ಹಿನ್ನೆಲೆ ಇರುವ ಅಗರಿ ಕುಟುಂಬ ದಿಂದ ಬಂದ ಅಗರಿ ಭಾಸ್ಕರ ರಾವ್‌ಅವರು ರಚಿಸಿರುವ ಹೊಸ ಪ್ರಸಂಗ "ತ್ರಿಕಣ್ಣೇಶ್ವರೀ ಮಹಾತ್ಮೆ' ದೇವಿ ತ್ರಿಕಣ್ಣೇಶ್ವರಿಯ ಕ್ಷೇತ್ರ ಪ್ರಭಾವವನ್ನು ಹೆಚ್ಚಿಸುವಲ್ಲಿ ಸಾರ್ಥಕತೆ ಕಂಡಿದೆ.
ತೆಂಕುತಿಟ್ಟು ಯಕ್ಷಗಾನದ ದಂತಕಥೆಯಾಗಿ ಪ್ರಸಿದ್ಧ ರಾದವರು ಭಾಗವತ, ಪ್ರಸಂಗಕರ್ತ ಅಗರಿ ಶ್ರೀನಿವಾಸ ಭಾಗವತರು. ಅವರು ಈ ಕಲಾಕ್ಷೇತ್ರಕ್ಕೆ ಎರಡು ಅನಘì ರತ್ನಗಳನ್ನು ನೀಡಿದ್ದಾರೆ. ಹಿರಿಯ ಪುತ್ರ ಸುರತ್ಕಲ್ ಮೇಳ ದಲ್ಲಿ ದೀರ್ಘಕಾಲ ಭಾಗವತರಾಗಿದ್ದ ರಘುರಾಮ ಭಾಗವತರು, ಕಿರಿಯ ಪುತ್ರ ಅಗರಿ ಭಾಸ್ಕರ ರಾಯರು. ಭಾಸ್ಕರ ರಾಯರು ಪ್ರಸಂಗರಚನೆಯಲ್ಲಿ ತೊಡಗಿ ಸುಮಾರು 15ರಷ್ಟು ಪ್ರಸಂಗಗಳನ್ನು ರಚಿಸಿದ್ದಾರೆ. ಅವರ "ಮಂತ್ರಾಲಯ ಮಹಾತ್ಮೆ', "ದಶಮಗ್ರಹ ವಿಜಯ', "ಶ್ರೀ ವಾಣಿ ವಿಲಾಸ', "ಧರ್ಮ ವಿಜಯ' ಮೊದಲಾದ ಪ್ರಸಂಗಗಳು ಎಪ್ಪತ್ತರ ದಶಕದಲ್ಲಿ ವಿವಿಧ ಮೇಳಗಳಲ್ಲಿ ಪ್ರದರ್ಶನ ಕಂಡಿವೆ.
ಅಗರಿಯವರು ಇತ್ತೀಚೆಗೆ ರಚಿಸಿದ ಪ್ರಸಂಗ ಶ್ರೀ ದೇವಿ ತ್ರಿಕಣ್ಣೇಶ್ವರಿ ಮಹಾತ್ಮೆ ಕೋಟೇಶ್ವರದಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಕುಂದಾಪುರದ ಹೊದ್ರಾಳಿಯ ದೇವಿಯ ಪುರಾಣವನ್ನು ಸಾರುವ "ತ್ರಿಕಣ್ಣೇಶ್ವರಿ ಮಹಾತ್ಮೆ' ಎಂಬ ಈ ಪೌರಾಣಿಕ ಪ್ರಸಂಗಕ್ಕೆ ದೇವೀ ಭಾಗವತದ ಹಿನ್ನೆಲೆಯಿರುವುದರಿಂದ ಪಾತ್ರಧಾರಿಗಳಿಗೆ ಸತ್ವಪೂರ್ಣ ಪಾತ್ರಚಿತ್ರಣಕ್ಕೆ ಅವಕಾಶ ದೊರೆಯಿತು. ಇಲ್ಲಿಯ ವಸ್ತು ಜನಸಾಮಾನ್ಯರಿಗೆ ಹೆಚ್ಚು ಪರಿಚಯವಿಲ್ಲದ್ದರಿಂದ ಸಹಜ ವಾಗಿ ಪ್ರೇಕ್ಷಕರಲ್ಲಿ ಹೆಚ್ಚು ಕುತೂಹಲ ಮೂಡಿಸುತ್ತದೆ. ಕಥಾ ಸಂವಿಧಾನದಲ್ಲಿ ಯಕ್ಷಗಾನೀಯ ಅಂಶಗಳಾದ ಶೃಂಗಾರ, ಹಾಸ್ಯ, ಕರುಣ ಮೊದಲಾದ ರಸಗಳಿಗೆ ಸಾಕಷ್ಟು ಒತ್ತು ನೀಡಿರುವುದರಿಂದ ಪ್ರದರ್ಶಕರಿಗೆ ಪ್ರಯೋಗ ಸುಲಭ ಸಾಧ್ಯ. ಶ್ರೀಹರಿ, ಹಯಮುಖನಾದುದು, ಹಯಗ್ರೀವನೆಂಬ ರಕ್ಕಸನ ಅಟ್ಟಹಾಸ, ಸತ್ವ- ರಜಸ್ಸು- ತಮೋಗುಣಗಳನ್ನು ಸಮ ಸ್ಥಿತಿಯಲ್ಲಿಡುವ ಸಂಕಲ್ಪದೊಂದಿಗೆ ಪ್ರತ್ಯಕ್ಷರಾಗುವ ಹರಿ-ಹರರನ್ನು ಹರಸಲು ಬಂದ ದೇವಿ ತ್ರಿಕಣ್ಣೇಶ್ವರಿ ಇವೆಲ್ಲವೂ ಚೌಕಟ್ಟಿನಲ್ಲಿ ಅಚ್ಚುಕಟ್ಟಾಗಿ ಮೂಡಿ ಬಂದಿವೆ.
ಪ್ರಥಮ ಪ್ರದರ್ಶನದಲ್ಲಿ, ಸತ್ಯಲೋಕದಲ್ಲಿ ಬ್ರಹ್ಮ ದೇವನ ಒಡ್ಡೋಲಗದಿಂದ ಪ್ರಾರಂಭವಾಗುವ ಕಥಾ ಭಾಗದಲ್ಲಿ ಬ್ರಹ್ಮನಾಗಿ ಹಿರಿಯ ಹವ್ಯಾಸಿ ಕಲಾವಿದ ನಾರಾಯಣ ಪ್ರಭು ಕಥೆಗೆಉತ್ತಮ ಪ್ರಾರಂಭವನ್ನು ನೀಡಿದರು. ಸೃಷ್ಟಿಕಾರ್ಯದಲ್ಲಿ ಏಕತಾನತೆಯ ಭಯ ವನ್ನು ಮನಮುಟ್ಟುವಂತೆ ಅಭಿನಯಿಸಿದರು. ಬ್ರಹ್ಮ ತನ್ನ ಸಮಸ್ಯೆಯ ಪರಿಹಾರಕ್ಕಾಗಿ ವಿಷ್ಣುವಿನಲ್ಲಿ ಬಂದಾಗ ಅವರ ನಡುವೆ ನಡೆದ ಸಂಭಾಷಣೆ ವಿಕೋಪಕ್ಕೆ ತಿರುಗುತ್ತದೆ. ಅವರಿಬ್ಬರ ನಡುವೆ ನಡೆದ ಸಂಗ್ರಾಮವು ಒಂದು ವಿಶಿಷ್ಟ ಅನುಭವವನ್ನು ಕೊಟ್ಟಿತು. ಆಗ ಬ್ರಹ್ಮ -ವಿಷ್ಣುಗಳ ಗರ್ವಭಂಗ ಮಾಡಲು ಆದಿ ಮಾಯೆಯು ಲಿಂಗ ರೂಪದಲ್ಲಿ ಪ್ರಕಟ ವಾಗುತ್ತಾಳೆ. ಈ ಭಾಗದಲ್ಲಿ ದೇವಿಯು ಅರ್ಧ ನಾರೀಶ್ವರ ಸ್ವರೂಪದಲ್ಲಿ ಪ್ರಕಟವಾಗು ವುದು ಹೊಸ ರೀತಿಯ ಪ್ರಯೋಗ.
ಬಡಗುತಿಟ್ಟಿನ ಖ್ಯಾತ ಕಲಾವಿದ, ಐರೋಡಿ ಗೋವಿಂದಪ್ಪನವರು ಹಯ ಗ್ರೀವ ರಕ್ಕಸನಾಗಿ ಖಳಪಾತ್ರದಲ್ಲಿ ಕಾಣಿಸಿಕೊಂಡದ್ದು ವಿಶೇಷವಾಗಿತ್ತು. ಪೌರಾಣಿಕ ಪ್ರಸಂಗಗಳಲ್ಲಿ ಬರುವ ಗರುಡ, ಹುಲಿ, ಸಿಂಹದಂತಹ ಪ್ರಾಣಿಗಳ ರೀತಿಯಲ್ಲಿ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಗೆದ್ದಲು ಹುಳುವಿನ ವೇಷ ಮತ್ತು ಅಭಿನಯ ಪರಂಪರೆಯ ಚೌಕಟ್ಟಿನಲ್ಲಿ ಮೂಡಿಬಂತು. ಸಂಪ್ರದಾಯದ ಭಾಗವತ ಜಯಂತ ಕುಮಾರರ ಪೌರಾಣಿಕ ಪ್ರಜ್ಞೆ ಎದ್ದುಕಾಣುತ್ತಿತ್ತು. ದೇವಿ ತ್ರಿಕಣ್ಣೇಶ್ವರಿ ಪ್ರತ್ಯಕ್ಷಳಾಗಿ ಹಯಗ್ರೀವನಾದ ವಿಷ್ಣುವಿಗೆ ಸೂಕ್ತ ಸ್ಥಾನಮಾನ ನೀಡಿ, ಸತ್ವ, ರಜ, ತಮೋಗುಣಗಳನ್ನು ನಿಯಂತ್ರಿಸಲು ಹೊದ್ರಾಳಿಯಲ್ಲಿ ನೆಲೆ ನಿಂತ ಬಗೆ ಯನ್ನು ಉತ್ತಮ ಕಾವ್ಯಶಕ್ತಿಯಿಂದ ಯಕ್ಷಗಾನೀಯ ಕೃತಿಯನ್ನಾಗಿಸಿ ಅಗರಿ ಭಾಸ್ಕರ ರಾವ್ ಯಶಸ್ಸು ಪಡೆದಿದ್ದಾರೆ. ಅವರ ಪ್ರಯತ್ನ ದೇವಿ ಆರಾಧಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.
ಕವಿಯ ಕಲ್ಪನಾ ಶಕ್ತಿಯಿಂದ ಮೂಡಿಬಂದ ಈ ಆಖ್ಯಾನವು ಯಶಸ್ವಿಯಾಗುವಲ್ಲಿ ಕವಿಯ ಆಶಯ, ನಿರ್ದೇಶಕ ಜಯಂತ ಕುಮಾರರ ಕಾಳಜಿ ಎದ್ದುಕಾಣುತ್ತದೆ.
ಎಸ್‌ವಿ