Thursday, May 23, 2013
Last Updated: 3:28:12 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಂಪ್ರದಾಯಬದ್ಧ ಹೊಸತನದಿಂದ ಮೂಡಿಬಂತು
    • ಕಲಾರಂಗ ಸಂಯೋಜಿತ ಬಡಗುತಿಟ್ಟು ಯಕ್ಷಗಾನ
    • "ಸತೀ ಸಾವಿತ್ರಿ'' ಮತ್ತು "ದ್ರೌಪದಿ ಪ್ರತಾಪ'' ಪ್ರಸಂಗದ ಪ್ರದರ್ಶನ.

      • ಪ್ರೊ| ಎಸ್‌. ವಿ. ಉದಯಕುಮಾರ ಶೆಟ್ಟಿ | Jul 27, 2012

        ಕಲೆ ಮತ್ತು ಕಲಾವಿದರ ಏಳಿಗೆಗಾಗಿ ಕಟಿಬದ್ಧ ವಾಗಿ ಕೆಲಸ ಮಾಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆ ತನ್ನ ಸದಸ್ಯರಿ ಗಾಗಿ ಪ್ರತಿವರ್ಷವೂ ಮಳೆಗಾಲದಲ್ಲಿ ಆಯೋಜಿಸುವ ತೆಂಕು- ಬಡಗು ಅವಳಿ ಯಕ್ಷಗಾನ ಕಾರ್ಯಕ್ರಮದ ಅಂಗವಾಗಿ ಮೂಡಿ ಬಂದ ಬಡಗುತಿಟ್ಟಿನ ಯಕ್ಷಗಾನ "ಸತೀ ಸಾವಿತ್ರಿ' ಮತ್ತು "ದ್ರೌಪದಿ ಪ್ರತಾಪ' ಪ್ರಸಂಗದ ಪ್ರದರ್ಶನವು ನಡುತಿಟ್ಟು ಹಾಗೂ ಬಡಾಬಡಗಿನ ಖ್ಯಾತನಾಮ ಕಲಾವಿದರಿಂದ ಸಂಪ್ರದಾಯದ ಚೌಕಟ್ಟಿನಲ್ಲಿ ಹೊಸತನದೊಂದಿಗೆ ಮೂಡಿಬಂತು, ಕಲಾ ರಂಗದ ರಸಸೃಷ್ಟಿಯ ಕಾರ್ಯಕ್ರಮ ಸಂಯೋಜನಾ ಸಾಮರ್ಥ್ಯವನ್ನು ಸಾಬೀತು ಪಡಿಸಿತು.

        ಮೊದಲ ಪ್ರಸಂಗ "ಸತಿ ಸಾವಿತ್ರಿ'ಯ ಪ್ರದರ್ಶನ ಇತ್ತೀಚಿನ ದಿನಗಳಲ್ಲಿ ಕಡಿಮೆ. ಆದರೆ ಅನೇಕರು ಎಪ್ಪತ್ತರ ದಶಕದಲ್ಲಿ ಮಂದಾರ್ತಿ ಮತ್ತು ಕೊಲ್ಲೂರು ಮೇಳಗಳ ತಿರುಗಾಟದ ಬಹುಪಾಲು ಆಟಗಳಲ್ಲಿ ಈ ಪ್ರಸಂಗ ಪ್ರದರ್ಶನ ಗೊಂಡದ್ದನ್ನು ನೋಡಿರುವ ಸಾಧ್ಯತೆ ಇದೆ. ತೀರಾ ನಾಟಕೀಯವಾದ ಈ ಪ್ರಸಂಗದಲ್ಲಿ ಯಕ್ಷಗಾನೀಯ ಅಂಶಗಳು ಕಡಿಮೆ. ಆದರೂ ಅಂದಿನ ಉಡುಪಿ ಬಸವನವರ ಯಮ, ಕೊರಗಪ್ಪ ದಾಸ ಹಾಸ್ಯಗಾರರ ಚಿತ್ರಗುಪ್ತ, ಅರಾಟೆ ಮಂಜುನಾಥರ ಸಾವಿತ್ರಿ, ಶಿರಿಯಾರ ಮಂಜು ನಾಯ್ಕ, ಮೊಳಹಳ್ಳಿ ಹೆರಿಯ, ತೆಕ್ಕಟ್ಟೆ ಆನಂದ ಮಾಸ್ತರ್‌ ಮುಂತಾದ‌ವರ ಸತ್ಯವಾನ ಪಾತ್ರಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದವು. ಚಲನಚಿತ್ರ ವಾಗಿ, "ಯಮನ ಸೋಲು' ಎಂಬ ನಾಟಕವಾಗಿಯೂ ಪ್ರಸಿದ್ಧಿ ಪಡೆದ ಆಖ್ಯಾನ ಇದು. ಪ್ರಸ್ತುತ ಪ್ರದರ್ಶನದಲ್ಲಿ ಪ್ರಸಂಗದ ಮೂಲ ಪದ್ಯಗಳಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ, ಶೃಂಗಾರದ ಹೊಸ ಪದ್ಯಗಳನ್ನೂ ಸೇರಿಸಿಕೊಂಡು ಕಲಾವಿದರು ಸಮರ್ಥವಾಗಿ ರಂಗದ ಮೇಲೆ ಅಭಿನಯಿಸಿದ್ದಾರೆ.

        ಯಕ್ಷಗಾನ ಭಾಗವತಿಕೆಗೆ ಹೊಸ ಸಾಧ್ಯತೆ ಗಳನ್ನು ನೀಡಿ, ಶಾಸ್ತ್ರೀಯ ಸಂಗೀತದ ಹೊಸರಾಗ ಗಳನ್ನು ಹಾಕಿ ಕೇಳುಗರನ್ನು ಸಂಗೀತದ ಲೋಕಕ್ಕೆ ಕರೆದೊಯ್ಯುವ, ಶಾಸ್ತ್ರೀಯ ಸಂಗೀತದಲ್ಲಿಯೂ ಸಾಧನೆ ಮಾಡಿರುವ ಭಾಗವತ ವಿದ್ವಾನ್‌ ಗಣಪತಿ ಭಟ್ಟರ "ಕಲ್ಯಾಣಿ' ರಾಗದ ಗಣಪತಿ ಕೌತುಕ "ಆದೌದೇವಕೀದೇವೀ ಗರ್ಭ ಜನನಂ' ಪದ್ಯದ ಬಳಿಕ ಅದೇ ರಾಗದಲ್ಲಿ "ಹರೇ ರಮಣ ಗೋವಿಂದ' ಪದ್ಯಕ್ಕೆ ಜೋಡಿ ಬಾಲ ಗೋಪಾಲರ ಪ್ರವೇಶ ರಂಗದಲ್ಲಿ ಒಮ್ಮೆಗೇ ಯಕ್ಷಗಾನೀಯ ವಾತಾವರಣವನ್ನು ಸೃಷ್ಟಿಸಿತು. ಅಶ್ವಪತಿಯ ಪೀಠಿಕೆಯ ಎರಡು ಪದ್ಯಗಳಲ್ಲಿ ತ್ರಿವುಡೆ ತಾಳದಲ್ಲಿ ಹೇಳುವಣಿಗೆಗೆ ಕೊಂಚವೂ ಭಂಗ ಬರದಂತೆ ಜಾಗ್ರತೆ ವಹಿಸಿ ಉಡುಪಿ ಕೇಂದ್ರದಲ್ಲಿ ತಮ್ಮ ಗುರುಗಳಾದ ನೀಲಾವರ ರಾಮಕೃಷ್ಣಯ್ಯನವರ ಸ್ವರಸಂಚಾರವನ್ನು ನೆನಪಿಸಿದರು. ಬಳಿಕ ಸತ್ಯವಾನ-ಸಾವಿತ್ರಿಯ ಶೃಂಗಾರ ಭಾಗ, ಯಮ ಮತ್ತು ಸಾವಿತ್ರಿಯ ಸಂವಾದ ಭಾಗಗಳಲ್ಲಿ ಹಾಡಿದ ಖರಹರಪ್ರಿಯ, ಬಹುದಾರಿ, ಪೂರ್ವಿಕಲ್ಯಾಣಿ, ದರ್ಬಾರ್‌ಕಾನಡ, ಕಾಪಿ, ಮೋಹನ, ಸಾವೇರಿ ರಾಗಗಳು ಸಂಗೀತಪ್ರಿಯರಿಗೆ ರಸದೌತಣ ನೀಡಿದವು.

        ಅಶ್ವಪತಿಯಾಗಿ ಹಿರಿಯ ಕಲಾವಿದ ಶಿರಳಗಿ ತಿಮ್ಮಪ್ಪಹೆಗಡೆ, ನಾರದನಾಗಿ ಅಶೋಕ ಭಟ್‌ ಪೋಷಕ ಪಾತ್ರಗಳನ್ನು ಸಮರ್ಥವಾಗಿ ತುಂಬಿದರು. ಸಾವಿತ್ರಿಯಾಗಿ ಮಂಟಪ ಪ್ರಭಾಕರ ಉಪಾಧ್ಯರು ಶೃಂಗಾರ, ಕರುಣ, ಭಕ್ತಿ ರಸಗಳನ್ನು ಭಾವನೆ ಮತ್ತು ಅಭಿನಯದ ಮೂಲಕ ಸಮರ್ಥವಾಗಿ ತುಂಬಿದ್ದಾರೆ. ಕೆಲವು ಕಡೆ ಮಾತು ಕಡಿಮೆ ಎನಿಸಿದರೂ ಆ ಭಾಗಗಳನ್ನು ಭಾವನೆ ಮತ್ತು ಅಭಿನಯಗಳಿಂದ ತುಂಬಿಸಿದ್ದಾರೆ. ಸಾಧ್ವಿ ಶಿರೋಮಣಿಯಾಗಿ ಪತಿವ್ರತೆ ಎನಿಸಿದ ಸಾವಿತ್ರಿಗೆ ಜಗಮಗಿಸುವ ವೇಷಭೂಷಣವೆಷ್ಟು ಸಮಂಜಸ ಎನ್ನುವುದು ಪ್ರಶ್ನೆಯಾಗಿಯೇ ಉಳಿಯಿತು. ಕನಿಷ್ಠ ಪತಿ ವಿಯೋಗವಾಗಿ ಯಮನೊಂದಿಗೆ ಸಂವಾದ ಮಾಡುವ ಭಾಗದಲ್ಲಾದರೂ ಸೀರೆ ಬದಲಾಯಿಸಬಹುದಿತ್ತು. ಕಲೆ ನಿಂತ ನೀರಾಗಬಾರದು, ಸದಾ ಹರಿಯುತ್ತಾ ಇರಬೇಕು ಎಂಬ ನೆಲೆಯಲ್ಲಿ ಈ ಬದಲಾವಣೆಯನ್ನು ಒಪ್ಪಬಹುದೇನೋ.

        ಸತ್ಯವಾನನಾಗಿ ಹಿರಿಯ ಕಲಾವಿದ ತೀರ್ಥ ಹಳ್ಳಿ ಗೋಪಾಲಾಚಾರ್ಯರು ತನ್ನ ಎಂದಿನ ಹಿತಮಿತದ ನಡೆಯನ್ನು ಬಿಟ್ಟುಕೊಡದೆ ಶೃಂಗಾರ ಭಾಗದ ನಾಟ್ಯವನ್ನು ಮನೋಜ್ಞವಾಗಿ ಪ್ರಸ್ತುತ ಪಡಿಸಿದರು. ಇಲ್ಲಿಯೂ ಸಹ ವೇಷಭೂಷಣ ಒಂದು ಜಿಜ್ಞಾಸೆಯಾಗಿಯೇ ಉಳಿಯಿತು. ಹಿಂದಿನ ಕಲಾವಿದರು ಈ ಪಾತ್ರಕ್ಕೆ ಚಾರುದತ್ತ ನಂತಹ ನಾಟಕೀಯ ಉಡುಪು ಧರಿಸುತ್ತಿದ್ದರು.

        ಪ್ರದರ್ಶನ ನೋಡಿದವರಿಗೆ ಬಹುಕಾಲ ನೆನಪಲ್ಲಿ ಉಳಿಯಬಹುದಾದದ್ದು ಪ್ರಸಂಗದ ಎರಡನೇ ವೇಷ‌ವಾದ ಯಮನ ಪಾತ್ರ.ತನ್ನ ಗತ್ತು, ಗಾಂಭೀರ್ಯ, ಮಾತು, ಅಭಿನಯ, ಪ್ರಯಾಣ ಕುಣಿತ- ಇವೆಲ್ಲದರಲ್ಲೂ ತನ್ನತನ ವನ್ನು ಬಿಟ್ಟುಕೊಡದೆ ಗಂಭೀರವಾದ ಅಭಿನಯ ನೀಡಿದವರು ಖ್ಯಾತ ಕಲಾವಿದರಾದ  ಕೊಂಡದ ಕುಳಿ ರಾಮಚಂದ್ರ ಹೆಗಡೆಯವರು.ಕೋಣ ವನ್ನು ಏರಿ ಬಂದ ಯಮ, ಕೋಣವನ್ನು ಕಂಬಕ್ಕೆ ಕಟ್ಟಿ, ಸಾವಿತ್ರಿಯೊಡನೆ ದೀರ್ಘ‌ಕಾಲ ಸಂವಾದ ನಡೆಸಿ, ಶೈಮಿನೀ ಪುರಕ್ಕೆ ವಾಪಸಾಗುವ ಹಂತ ದಲ್ಲಿ ಕೋಣವನ್ನು ಬಿಚ್ಚುವಲ್ಲಿ ಅವರು ತೋರಿದ ಅಭಿನಯ ಅವರ ರಂಗಪ್ರಜ್ಞೆ, ಸಮಯಪ್ರಜ್ಞೆ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿತು.

        ಚಿತ್ರಗುಪ್ತನಾಗಿ ಚಪ್ಪರಮನೆ ಶ್ರೀಧರ ಹೆಗಡೆಯವರು ಸಂಪ್ರದಾಯದ ನಡೆಯಲ್ಲಿ ಅಶ್ಲೀಲವಿಲ್ಲದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಶಾಸ್ತ್ರೀಯ ಸಂಗೀತದ ಲೇಪವಿರುವ ಪದ್ಯಗಳಿಗೆ ನವಿರಾದ ಹೊರಳಿಕೆಯಿಂದ ಮದ್ದಳೆಯ ಇಂಪಾದ ಸಾಥ್‌ ನೀಡಿದ ಮದ್ದಲೆಗಾರ ಎ. ಪಿ. ಪಾಠಕ್‌ಭಾಗವತಿಕೆಯ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ.

        ಬಡಗುತಿಟ್ಟಿನ ಬಯಲಾಟ ಮೇಳಗಳಲ್ಲಿ ಅತಿಹೆಚ್ಚು ಪ್ರದರ್ಶನ ಕಾಣುವ ಚುರುಕು ನಡೆಯ "ದ್ರೌಪದಿ ಪ್ರತಾಪ' ತುಸು ತಡವಾಗಿ ಪ್ರಾರಂಭಗೊಂಡು ವೇಗವಾಗಿಯೇ ಸಾಗಿತು. ಪ್ರಾರಂಭದ ಕೃಷ್ಣ- ನಾರದರ ಸಂವಾದ, ನಾರದ-ಚಂದ್ರವರ್ಮ-  ಸೂರ್ಯವರ್ಮರ ಸಂವಾದ, ಅರ್ಜುನ- ಸೂರ್ಯವರ್ಮ- ಚಂದ್ರವರ್ಮರ ಸಂವಾದ ಭಾಗವಿಲ್ಲದೇ ಭೀಮಾರ್ಜುನರ ಯುದ್ಧದಿಂದ ಪ್ರಸಂಗ ಪ್ರಾರಂಭವಾಯಿತು. ಭೀಮನಾಗಿ ಕೋಡಿ ವಿಶ್ವನಾಥ ಗಾಣಿಗರು ಎರಡನೇ ವೇಷದ ಗಂಭೀರತೆಯನ್ನು ಉಳಿಸಿಕೊಂಡರು. ಆದರೆ ದ್ರೌಪದಿಯ ಸಂವಾದ ಭಾಗ ಹಾಸ್ಯ ಮಿಶ್ರಣವಾಗಿ ಕಂಡಿತು. ಕಟ್ಟು ಮೀಸೆ ಇಲ್ಲದ ಮುಖವರ್ಣಿಕೆ, ಭುಜಕೀರ್ತಿ, ಎದೆಕಟ್ಟು ಬಡಾಬಡಗನ್ನು ಹೋಲುತ್ತಿತ್ತು. ಅರ್ಜುನನಾಗಿ ಥಂಡಿಮನೆ ಶ್ರೀಪಾದ ಹೆಗಡೆಯವರು ಪುರುಷ ವೇಷದ ನಡೆಗೆ ಕೊಂಚವೂ ಕೊರತೆ ಬಾರದೆ ಹಾಗೆ ಅಭಿನಯಿಸಿದರು. "ಅರರೆ ವ್ರಕೋದರ ಬಿದ್ದ', "ರಮಣಿ ಇದೇನಿದು ನಿನ್ನ ಗಮನ ವಿಚಿತ್ರವು' ಮುಂತಾದ ಕಡೆಗಳಲ್ಲಿ ಬಡಾಬಡಗಿನ ನೃತ್ಯ ವೈವಿಧ್ಯವನ್ನು ಅವರು ಚೆನ್ನಾಗಿ ಬಿಂಬಿಸಿದರು.

        ಪ್ರಸಂಗದ ಇನ್ನೆರಡು ಪ್ರಮುಖ ವೇಷ ಗಳಾದ ದ್ರೌಪದಿ ಹಾಗೂ ಸುಭದ್ರೆಯಾಗಿ ನೀಲ್ಕೋಡು ಶಂಕರ ಹೆಗಡೆ ಮತ್ತು ಮಾಧವ ನಾಗೂರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಸಂಗದ ಮುನ್ನಡೆಗೆ ಗಣನೀಯ ಕೊಡುಗೆ ನೀಡಿದರು. ಪ್ರಸಂಗದ ಪ್ರಾರಂಭದಿಂದ ಕೊನೆಯವರೆಗೆ ಇರುವ ದ್ರೌಪದಿ ಪಾತ್ರವನ್ನು ತನ್ನ ಮೇಲ್ಮಟ್ಟದ ನಾಟ್ಯ, ಮಾತುಗಾರಿಕೆಗಳಿಂದ ಉತ್ತುಂಗಕ್ಕೆ ಏರಿಸಿದ ಹೆಗಡೆಯವರ ಸಾಧನೆ ಅಮೋಘವಾಗಿತ್ತು. ಸಂಪ್ರದಾಯದ ನೃತ್ಯ ವೆಂದರೆ ಏನೆಂದು ತನ್ನ ವಿಶಿಷ್ಟ ಚಾಲು ಕುಣಿತ ದಿಂದ ತೋರಿಸಿಕೊಟ್ಟು ಪ್ರೇಕ್ಷಕರ ಕರತಾಡನ ದೊಂದಿಗೆ ಸಹ ಕಲಾವಿದರಿಂದಲೂ ಶಹಬ್ಟಾಸ್‌ಗಿರಿ ಪಡೆದ ಮಾಧವ ನಾಗೂರು ತಮ್ಮ ತಂದೆ ಯಿಂದ ಮತ್ತು ಗುರುವಿನಿಂದ ಪಡೆದ ನಡುತಿಟ್ಟಿನ ನೃತ್ಯ ಶ್ರೀಮಂತಿಕೆಯನ್ನು ಸಾದರ ಪಡಿಸಿದರು.

        ಬಲರಾಮನ ವೇಷ ಇಲ್ಲದಿರುವುದರಿಂದ ಇದ್ದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡವರು ಖ್ಯಾತ ಪುಂಡು ವೇಷಧಾರಿ ಮಂಕಿ ಈಶ್ವರ ನಾಯ್ಕರು. ಚಂಡಿ, ಕಾಳಿ ಪಾತ್ರಗಳು ಹಾಗೆ ಬಂದು ಹೀಗೆ ಹೋದವು ಅನಿಸಿತು. ಕಥೆಯ ಉಪ ಸಂಹಾರ ಭಾಗವನ್ನು ತನ್ನ ಪ್ರಬುದ್ಧ ಮಾತುಗಾರಿಕೆಯಿಂದ ತುಂಬಿದವರು ಈಶ್ವರ ಪಾತ್ರಧಾರಿ ನೀರ್ಜೆಡ್ಡು ಚಂದ್ರಕುಮಾರರು.

        ಪ್ರದರ್ಶನದ ಯಶಸ್ಸಿಗೆ ಹಿಮ್ಮೇಳದ ಕೊಡುಗೆ ಗಣನೀಯವಾಗಿದೆ. ಮೇರು ಭಾಗವತ ಕಾಳಿಂಗ ನಾವಡರ ದಾರಿಯÇÉೇ ಸಾಗಿದ ಯುವ ಪ್ರತಿಭಾವಂತ ಭಾಗವತ ರಾಘವೇಂದ್ರ ಆಚಾರ್ಯರು ಏರು ಶ್ರುತಿಯಲ್ಲಿ ಹಾಡಿದ ಹಳೆಯ ರಾಗಗಳಾದ ಬಿಲಹರಿ, ಧನ್ಯಾಸಿ, ಮೋಹನ, ಸಾವೇರಿ ಮುಂತಾದ ರಾಗಗಳು ಕರ್ಣಾನಂದ ನೀಡಿದವು. ಪ್ರಸಂಗದ ನಡೆ, ರಾಗ ಶುದ್ಧಿ, ಸಾಹಿತ್ಯ ಶುದ್ಧಿಗಳಿಂದ ಅವರು ತಾನೊಬ್ಬ ಸಮರ್ಥ ಭಾಗವತನೆನ್ನುವುದನ್ನು ಸಾಬೀತುಪಡಿಸಿದರು. ಚೆಂಡೆ -ಮದ್ದಳೆಯಲ್ಲಿ ಶ್ರೀಧರ ಭಂಡಾರಿ ಮತ್ತು ಸಂಪ ಲಕ್ಷ್ಮೀನಾರಾಯಣ ಸಹಕರಿಸಿದ್ದರು.

        ಒಟ್ಟಾರೆಯಾಗಿ ಸಣ್ಣಪುಟ್ಟ ಕೊರತೆಗಳನ್ನು ಬಿಟ್ಟರೆ ಎರಡು ಅಪೂರ್ವ ಪ್ರಸಂಗಗಳನ್ನು ಕಲಾವಿದರು ಮನೋಜ್ಞವಾಗಿ ಪ್ರದರ್ಶಿಸಿದ್ದಾರೆ ಎನ್ನುವಲ್ಲಿ ಕಲಾರಂಗದ ಕಾರ್ಯದಕ್ಷತೆ, ಸಂಘಟನೆ, ಕಲಾವಿದರ ಕಾಳಜಿ, ಪ್ರಜ್ಞಾವಂತ ಪ್ರೇಕ್ಷಕರ ಬಗ್ಗೆ ಇರುವ ಗೌರವ ಎದ್ದುಕಾಣುತ್ತಿತ್ತು. ಹೊಸ ಹೊಸ ಕಲಾವಿದರು ಸೃಷ್ಟಿಯಾಗುತ್ತಿಲ್ಲ, ಯಕ್ಷ‌ಗಾನಕ್ಕೆ ಪ್ರೇಕ್ಷಕರು ಕಡಿಮೆಯಾಗುತ್ತಿದ್ದಾರೆ ಎನ್ನುವ ಮಾತನ್ನೂ ಈ ಪ್ರದರ್ಶನ ಸುಳ್ಳಾಗಿಸಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus