Udayavani | Jul 27, 2012
ಉಡುಪಿ: ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಅವರು ಜು. 29ರಿಂದ ಆ. 5ರ ವರೆಗೆ ರಾಮನಗರದಿಂದ ಕಾರವಾರದವರೆಗೆ 'ಸ್ವಾಭಿಮಾನಿ ಸಂಕಲ್ಪ ಯಾತ್ರೆ' ಕೈಗೊಳ್ಳಲಿದ್ದು, ಜು. 1ರಂದು ಯಾತ್ರೆ ಉಡುಪಿಗೆ ಆಗಮಿಸಲಿದೆ ಎಂದು ಪಕ್ಷದ ಉಸ್ತುವಾರಿ ಕೆ. ದಿನೇಶ್ ಗಾಣಿಗ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 1ರ ಸಂಜೆ 4ಕ್ಕೆ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಶ್ರೀರಾಮುಲು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಮಾನತೆ, ಸಮಬಾಳು, ಸಮಗ್ರ ಕರ್ನಾಟಕದ ಹೊಸ ದೃಷ್ಟಿಕೋನ ಹಾಗೂ ಬಡವರು, ಶ್ರಮಿಕರು, ರೈತರ ಶ್ರೇಯಾಭಿವೃದ್ಧಿಗಾಗಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಶ್ರೀರಾಮುಲು ಅವರು ಜು. 29ರಿಂದ ಆ. 5ರ ವರೆಗೆ ರಾಮನಗರದಿಂದ ಕಾರವಾರದವರೆಗೆ 1,300 ಕಿ.ಮೀ. ಸ್ವಾಭಿಮಾನಿ ಸಂಕಲ್ಪ ಯಾತ್ರೆ ನಡೆಸಲಿದ್ದಾರೆ.
ಯಾತ್ರೆಯಲ್ಲಿ ಆಯಾ ಭಾಗದ ಸಮಸ್ಯೆಗಳನ್ನು ತಿಳಿದುಕೊಂಡು ಸರಕಾರದ ಮಟ್ಟದಲ್ಲಿ ಪರಿಹಾರೋಪಾಯಕ್ಕೆ ಮಾರ್ಗಸೂಚಿ ತಯಾರಿಸಲಿದ್ದಾರೆ. ಉಡುಪಿಯ ಸಭೆಯಲ್ಲಿ ಚಿತ್ರನಟಿ ರಕ್ಷಿತಾ, ಸಂಸತ್ ಸದಸ್ಯರಾದ ಜೆ. ಶಾಂತಾ, ಫಕೀರಪ್ಪ, ಶಾಸಕರಾದ ಸೋಮಶೇಖರ ರೆಡ್ಡಿ, ಸುರೇಶ್ ಬಾಬು, ಮೃತ್ಯುಂಜಯ ಜಿಣಗಿ ಮೊದಲಾದವರು ಭಾಗವಹಿಸಲಿದ್ದಾರೆ. ಅದೇ ದಿನ ಉಡುಪಿ ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಹೂಡಿ ಪಕ್ಷ ಸಂಘಟನೆ, ಸದಸ್ಯತ್ವದ ಬಗ್ಗೆ ಚರ್ಚೆ ನಡೆಸಿ ಜು. 2ರಂದು ಮಂಗಳೂರಿಗೆ ತೆರಳಲಿದ್ದಾರೆ. ದ.ಕ., ಉಡುಪಿ ಜಿಲ್ಲೆಯ ಹಲವಾರು ಪ್ರಭಾವಿ ನಾಯಕರು ಶ್ರೀರಾಮುಲು ಅವರ ಸಂಪರ್ಕದಲ್ಲಿದ್ದು ಕರಾವಳಿಯಲ್ಲಿ ಪ್ರಬಲವಾಗಿ ಪಕ್ಷ ಕಟ್ಟಲು ಮಾತುಕತೆ ನಡೆಸಿದ್ದಾರೆ ಎಂದವರು ಹೇಳಿದರು.
ಶ್ರೀರಾಮುಲು ಅಭಿಮಾನಿಗಳಾದ ಇಬ್ರಾಹಿಂ ಕೋಟ, ರತ್ನಾಕರ್ ಸಿರಿಯಾನ್ ಕೋಟ, ಪ್ರವೀಣ್ ಕಾಪು, ವರುಣ್ ಸಂತೆಕಟ್ಟೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.