ಬೆಂಗಳೂರು : ರೈತರು ಸದಾ ಸರ್ಕಾರದ ಬಳಿ ಬೇಡುವಂತೆ ಮಾಡುವ ಯೋಜನೆಗಳಿಗಿಂತ ಅವರನ್ನು ಸ್ವಾವಲಂಬಿಗಳನ್ನಾಗಿಸುವ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಎಂದು ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ವಿಧಾನಸಭೆಯಲ್ಲಿ ಶುಕ್ರವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಕೊಡ್ತಾ ಇರಬೇಕು. ರೈತ ಕೈ ಒಡ್ಡುತ್ತಾ ಇರಬೇಕು ಎಂಬ ಧೋರಣೆ ಬೇಡ. ಸಣ್ಣಪುಟ್ಟ ಪ್ರೋತ್ಸಾಹಧನ ವಿತರಣೆಯಿಂದ ರೈತನ ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯವಿಲ್ಲ ಎಂದು ಹೇಳಿದರು.ರೈತರಿಗೆ ಶಾಶ್ವತವಾಗಿ ಅನುಕೂಲವಾಗುವ ನೀರಾವರಿ ಯೋಜನೆಗಳಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಬೇಕು.ನೀರಾವರಿ ವಲಯಕ್ಕೆ ಈ ಹಿಂದೆ ಯೋಜನಾ ಗಾತ್ರದಲ್ಲಿ ಶೇಕಡ 30 ರಷ್ಟು ಮೀಸಲಿಡಲಾಗುತ್ತಿತ್ತು. ಆದರೆ, ಈಗ ಅದು ಶೇಕಡ 18 ಕ್ಕೆ ಇಳಿದಿದೆ. ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ನಿಗದಿಪಡಿಸಬೇಕು ಎಂದು ತಿಳಿಸಿದರು.ರೈತರಿಗೆ ಬೇಕಿರುವುದು ಸಕಾಲಕ್ಕೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ, ಬೆಳೆದ ಬೆಳೆಗೆ ನ್ಯಾಯಯುತ ಬೆಲೆ, ಮಾರುಕಟ್ಟೆ ವ್ಯವಸ್ಥೆ. ಇದರ ಬಗ್ಗೆ ಹೆಚ್ಚು ಗಮನ ನೀಡಿ ಯೋಜನೆ ರೂಪಿಸಬೇಕು ಎಂದು ಹೇಳಿದರು.