Tuesday, May 21, 2013
Last Updated: 11:50:31 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮತ್ತಾವು ನೆಲ ಬಾಂಬ್‌ ಸ್ಫೋಟಕ್ಕೆ ಏಳು ವರ್ಷ
    • ಮತ್ತಾವು ಬಾಂಬ್‌ ದಾಳಿಯಲ್ಲಿ ಹಾನಿಯಾದ ಪೊಲೀಸ್‌ ವಾಹನ

      • ಶ್ರೀ ದತ್ತ ಶೆಟ್ಟಿ, ಹೆಬ್ರಿ | Jul 27, 2012

        ಮತ್ಯಾವುದೇ ಅಭಿವೃದ್ಧಿಯೂ ಇಲ್ಲಿ ಆಗಿಲ್ಲ!

        ಹೆಬ್ರಿ: ಹೆಬ್ರಿ ಬಳಿಯ ಕಾರ್ಕಳ ತಾಲೂಕಿನ ಕಬ್ಬಿನಾಲೆ ಗ್ರಾಮದ ಮತ್ತಾವು ಬಳಿ ನಕ್ಸಲರು ನೆಲ ಬಾಂಬ್‌ ಸ್ಫೋಟಿಸಿ ಪೊಲೀಸರ ಹತ್ಯೆಗೆ ಯತ್ನಿಸಿದ ಘಟನೆಗೆ ಈಗ ಏಳು ವರ್ಷ. ಆದರೆ ಈ ಏಳು ವರ್ಷದಲ್ಲಿ ಇಲ್ಲಿ ಉಳಿದಂತೆ ಊರಿನ ಯಾವುದೇ ಅಭಿವೃದ್ಧಿಯಾಗಿಲ್ಲ. ಅಂದು ನೀಡಿದ ಭರವಸೆಗಳನ್ನೂ ಜನ ಮರೆಯುವ ಸ್ಥಿತಿಗೆ ತಲುಪಿದ್ದಾರೆ.

        2005ರ ಜುಲೈ 28ರ ಮಧ್ಯಾಹ್ನ 3.30ರ ಸುಮಾರಿಗೆ ನಕ್ಸಲರು ಪೊಲೀಸರನ್ನು ಗುರಿಯಾಗಿರಿಸಿ ನೆಲ ಬಾಂಬ್‌ ಸ್ಫೋಟಿಸಿದ್ದರು. ಅಂದು ಹೆಬ್ರಿ ಪೊಲೀಸರು ಮತ್ತು ಕೆಎಸ್‌ಆರ್‌ಪಿ ತಂಡ ಮುನಿಯಾಲಿನಿಂದ ಕಬ್ಬಿನಾಲೆ ಮಾರ್ಗವಾಗಿ ಹೆಬ್ರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮತ್ತಾವು ತಿರುವಿನಲ್ಲಿ ನಕ್ಸಲರು ಪೊಲೀಸ್‌ ಜೀಪಿನ ಮೇಲೆ ಬಾಂಬ್‌ ಮತ್ತು ಗ್ರೆನೇಡ್‌ ದಾಳಿ ನಡೆಸಿದ್ದರು.

        ಪೊಲೀಸರು ನಕ್ಸಲರ ನಿರೀಕ್ಷಿತ ಸ್ಥಳದಲ್ಲಿ ಹೋಗದಿದ್ದರಿಂದ ಸಂಭಾವ್ಯ ಅನಾಹುತದಿಂದ ಪಾರಾಗಿದ್ದರು. ಈ ಘಟನೆಯಿಂದ ಕೂಡಲೇ ಎಚ್ಚೆತ್ತ ಪೊಲೀಸರು ನಕ್ಸಲರ ಮೇಲೆ ಪ್ರತಿದಾಳಿ ನಡೆಸಿದ್ದರು. ಇದರಿಂದ ಬೆದರಿದ ನಕ್ಸಲರು ಪರಾರಿಯಾಗಿದ್ದರು. ಪೊಲೀಸ್‌ ಜೀಪಿಗೆ ದಾಳಿಯಿಂದ ತುಂಬಾ ಹಾನಿಯಾಗಿತ್ತು.

        ನಕ್ಸಲ್‌ ಸಪ್ತಾಹ

        ನಕ್ಸಲರು ಜುಲೈ 28ರಿಂದ ಆ.3ರವರೆಗೆ 'ಹುತಾತ್ಮ ನಕ್ಸಲ್‌ ಸಪ್ತಾಹ'ವನ್ನು ಆಚರಿಸುತ್ತಾರೆನ್ನುವುದು ಮತ್ತಾವು ಬಾಂಬ್‌ ದಾಳಿಯ ಬಳಿಕ ನಕ್ಸಲ್‌ ಪೀಡಿತ ಪ್ರದೇಶದಲ್ಲಿ ವಾಸಿಸುವ ಜನರಿಗೆ ತಿಳಿದಿತ್ತು. ಅನಂತರ ಈ ದಿನಗಳಲ್ಲಿ ಪೊಲೀಸರು ಮತ್ತು ಎಎನ್‌ಎಫ್ ತಂಡ ಕೂಡ ಸಾಕಷ್ಟು ಎಚ್ಚರಿಕೆ ವಹಿಸಿ ಶೋಧ ಕಾರ್ಯ ನಡೆಸುತ್ತಿದೆ. ಆದರೂ ಸ್ಥಳೀಯರು ಪ್ರತೀ ವರ್ಷವೂ ಈ ವಾರವನ್ನು ಆತಂಕದಿಂದಲೇ ಕಳೆಯುತ್ತಿದ್ದಾರೆ.

        ಅಭಿವೃದ್ಧಿ ಕನಸು ಮಾತ್ರ

        ಕಾರ್ಕಳ ತಾಲೂಕಿನ ಕಾಶ್ಮೀರ ಎನಿಸಿದ ಕಬ್ಬಿನಾಲೆ ಗ್ರಾಮದ ಗಿರಿಶಿಖರಗಳ ನಡುವೆ ಅಲ್ಲಲ್ಲಿ ಬೆರಳೆಣಿಕೆಯ ಗಿರಿಜನರ ಮನೆಗಳು.ಸುತ್ತಮುತ್ತ ದಟ್ಟ ಕಾಡು. ಜನ ಸಂಚಾರಕ್ಕೆ ರಸ್ತೆ ಇಲ್ಲ, ವಿದ್ಯುತ್‌ ಸಂಪರ್ಕ ಇಲ್ಲ. ಅಂದಿನ ನೆಲಬಾಬ್‌ ಘಟನೆಯ ಬಳಿಕ ಅಭಿವೃದ್ಧಿಗೆ ಸಂಬಂಧಿಸಿ ವಿವಿಧ ಯೋಜನೆಗಳ ಭರವಸೆಯನ್ನು ನೀಡಲಾಗಿತ್ತು. ಆದರೆ ಮತ್ತಾವಿನಲ್ಲಿ ಯಾವುದೇ ರೀತಿಯ ಅಭಿವೃದ್ಧಿಯೂ ಆಗಿಲ್ಲ.

        ಮರದ ಸಂಪರ್ಕ ಸೇತುವೆ: ಮತ್ತಾವುಗೆ ಸರಿಯಾದ ದಾರಿಯಿಲ್ಲ, ಇಲ್ಲಿಗೆ ಹೋಗಲು ಮಳೆಗಾಲದಲ್ಲಿ ಮಾತ್ರ ಅಸಾಧ್ಯ. ಸಣ್ಣ ಹೊಳೆಗೆ ಸೇತುವೆ ಇಲ್ಲದೆ ಮತ್ತಾವು ಜನರು ತಾವೇ ನಿರ್ಮಿಸಿದ ಮರದ ಸೇತುವೆಯಲ್ಲಿ ಸಂಚರಿಸುತ್ತಾರೆ. ಮಳೆಗಾಲದ ಸಮಯದಲ್ಲಿ ಮರದ ಸೇತುವೆ ತುಂಬಾ ಪಾಚಿ ಹಿಡಿದು ಇದರಲ್ಲಿ ನಡೆಯುವಾಗ ಸ್ವಲ್ಪ$ ಆಯತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಶಾಲೆಗೆ ಹೋಗುವ ಮಕ್ಕಳು ಮತ್ತು ವೃದ್ದರು ಸಂಚರಿಸಲು ಪರದಾಡಬೇಕು. ಇಲ್ಲಿ ಒಂದು ಕಾಲು ಸಂಕವಾದರೂ ನಿರ್ಮಾಣವಾಗಬೇಕು ಎಂಬ ಈ ಭಾಗದ ಜನರ ಬಹುದಿನದ ಕನಸು ಕನಸಾಗಿಯೇ ಉಳಿದಿದೆ.

        ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿ

        ನಕ್ಸಲ್‌ ಬಾಧಿತ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಕಠಿನ ಕಾನೂನಿನ ತೊಡಕಿನಿಂದ ಅಭಿವೃದ್ಧಿ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳು ಹೇಳುತ್ತಾರೆ.

        ನಕ್ಸಲ್‌ ಪೀಡಿತ ಪ್ರದೇಶದ ಅಭಿವೃದ್ಧಿಗೆಂದೇ ಮೀಸಲಾದ ನಕ್ಸಲ್‌ ಪ್ಯಾಕೇಜ್‌ ಅನುದಾನವನ್ನು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಬಳಸಲು ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

        ಪಂಚಾಯತ್‌ನಿಂದ ಗರಿಷ್ಠ ಅಭಿವೃದ್ಧಿ : ಮತ್ತಾವು ಬಾಂಬ್‌ ದಾಳಿ ಬಳಿಕ ಮತ್ತಾವು ಗ್ರಾಮಸ್ಥರಿಗೆ ಮುದ್ರಾಡಿ ಗ್ರಾಮ ಪಂಚಾಯತ್‌ನಿಂದ ವಿವಿಧ ಯೋಜನೆಗಳ ನೆರವಿನಲ್ಲಿ ಆಶ್ರಯ, ಇಂದಿರಾ ಆವಾಜ್‌ ಮನೆಗಳು ಸೋಲಾರ್‌ ದೀಪಗಳು, ಕೃಷಿ ಉಪಕರಣಗಳೂ ಸಹಿತ ವಿವಿದ ಸವಲತ್ತುಗಳನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ವಿತರಿಸಲಾಗಿದೆ. ಇನ್ನು ಹೆಚ್ಚಿನ ಅಗತ್ಯ ಅಭಿವೃದ್ಧಿಗೆ ಪಂಚಾಯತ್‌ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತ ಬಂದಿದೆ ಆದರೆ ಈ ಮೇಲಿನ ಯಾವುದೇ ಅಭಿವೃದ್ಧಿ ಕಾರ್ಯ ಮಾತ್ರ ಆಗಿಲ್ಲ. ನಕ್ಸಲ್‌ ಪೀಡಿತ, ಗುಡ್ಡಗಾಡು ಮತ್ತು ಅಭಯಾರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಇಂದಿಗೂ ಚಿಂತಾಜನಕ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ನಕ್ಸಲ್‌ ಪ್ರದೇಶದ ಜನರ ಅಭಿವೃದ್ಧಿ ಆಗತ್ಯವಾಗಿ ಆಗಲೇಬೇಕಾಗಿದೆ.



         ಮತ್ತಾವು ಜನರು ಹೊಳೆ ದಾಟಲು ಮರದಲ್ಲಿ ನಿರ್ಮಿಸಿದ ಅಪಾಯಕಾರಿ ಸೇತುವೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus