Saturday, May 25, 2013
Last Updated: 12:15:25 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜಲಾಭಿಷೇಕ, ಪರ್ಜನ್ಯ ಹೋಮ
    • ಮಳೆಗಾಗಿ ಮುಜರಾಯಿ ದೇಗುಲಗಳಲ್ಲಿ ಪೂಜೆ
    • ಕಾಕತಾಳೀಯವೆಂಬಂತೆ ಭರ್ಜರಿ ಮಳೆ
      • Udayavani | Jul 27, 2012

        ಚಾ.ನಗರ, ಬಳ್ಳಾರಿಯಲ್ಲಿ ನಡೆಯದ ಪೂಜೆ

        ಬೆಂಗಳೂರು :
        ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಬರಗಾಲ ನೀಗಲೆಂದು ಪ್ರಾರ್ಥಿಸಿ ಮುಜರಾಯಿ ದೇವಾಲಯಗಳಲ್ಲಿ ವರುಣಮಂತ್ರ ಪೂರ್ವಕವಾಗಿ ಜಲಾಭಿಷೇಕ ನಡೆಸಬೇಕು ಎಂಬ ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಕಾಕತಾಳೀಯವೆಂಬಂತೆ ಇತ್ತ ಪೂಜೆ ನಡೆಯುತ್ತಿದ್ದರೆ ಅತ್ತ ರಾಜ್ಯದ ಹಲವೆಡೆ ಭರ್ಜರಿ ಮಳೆ ಸುರಿಯಿತು.

        ಮಳೆಗಾಗಿ ಪ್ರಾರ್ಥಿಸಿ ಜು.27 ಹಾಗೂ ಆ.2ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಜಲಾಭಿಷೇಕ ಪೂಜೆ ನಡೆಸುವಂತೆ ಸರ್ಕಾರ ಆದೇಶಿಸಿತ್ತು. ಅದರಂತೆ ವರಮಹಾಲಕ್ಷ್ಮೀ ಪೂಜಾದಿನವಾದ ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ, ಮೇಲುಕೋಟೆಯ ಚೆಲುವನಾರಾಯಣ, ಕುಕ್ಕೆಯ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕೆ, ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮೀ ಸೇರಿದಂತೆ ರಾಜ್ಯದ ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ಜಲಾಭಿಷೇಕ, ಪರ್ಜನ್ಯ ಹೋಮ, ವಿಶೇಷ ಪೂಜೆಗಳು ನಡೆದವು. ಆದರೆ, ಸರಕಾರಿ ಆದೇಶದ ಲಿಖೀತ ಪ್ರತಿ ದೊರೆತಿಲ್ಲ ಎಂಬ ಕಾರಣಕ್ಕಾಗಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನಾಥ, ಮಲೆ ಮಹದೇಶ್ವರ, ಚಾಮರಾಜೇಶ್ವರ, ಹುಲುಗನಮುರುಡಿ, ಗೋಪಾಲಸ್ವಾಮಿ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆಯಲಿಲ್ಲ. ಆದೇಶದ ಪ್ರತಿ ಶುಕ್ರವಾರ ಸಂಜೆ ತಲುಪಿದ್ದರಿಂದ ಬಳ್ಳಾರಿಯ ಕನಕದುರ್ಗಮ್ಮ ದೇವಾಲಯದಲ್ಲಿಯೂ ವಿಶೇಷ ಪೂಜೆ ನಡೆಸಲಾಗಿಲ್ಲ.

        ದೇವಾಲಯಗಳಲ್ಲಿ ಪರ್ಜನ್ಯ ಜಪ, ಹೋಮ, ಹವನ

        ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಟಿ.ನರಸೀಪುರದ ಅಗಸ್ತೇಶ್ವರ ದೇವಾಲಯ, ಗಂಜಾಂ ನರಸಿಂಹಸ್ವಾಮಿ ದೇವಾಲಯ, ಮೂಗೂರು ತ್ರಿಪುರ ಸುಂದರಿ ಅಮ್ಮನವರ ದೇವಾಲಯಗಳಲ್ಲಿ ಪರ್ಜನ್ಯ ಜಪ, ಹೋಮಗಳು ನಡೆದವು. ಶ್ರೀರಂಗಪಟ್ಟಣದಲ್ಲಿ ಜಿಲ್ಲಾಧಿಕಾರಿ ಕೃಷ್ಣಯ್ಯ ಶ್ರೀ ನಿಮಿಷಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವರುಣನ ಫ‌ಲನಾಮ ಮಾಡಿ ರುದ್ರಾಭಿಷೇಕ, ಫ‌ಲ ಪಂಚಾಮೃತ ಅಭಿಷೇಕ, ಕ್ಷೀರದಿಂದ ಮಹಾಭಕ್ಷಿತ ಸ್ನಾನ ನೆರವೇರಿಸಲಾಯಿತು. ಮೇಲುಕೋಟೆಯಲ್ಲಿ ಉಪವಿಭಾಗಾಧಿಕಾರಿ ಚಲುವರಾಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

        ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈದಿಕರಿಂದ ಪರ್ಜನ್ಯ ಜಪ ಮತ್ತು ಶ್ರೀದೇವರಿಗೆ ಜಲಾಭಿಷೇಕ ನಡೆಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ, ಕಂಬಗಣಪತಿಯಲ್ಲಿ ಪ್ರಾರ್ಥನೆ, ವಿಶೇಷ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಶತರುದ್ರಾಭಿಷೇಕ ನೆರವೇರಿಸಲಾಯಿತು. ದೇವಿಯ ಸನ್ನಿಧಾನದಲ್ಲಿ 7 ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದ್ದು, ಆ. 2ರಂದು ಪರ್ಜನ್ಯ ಕಲಶಾಭಿಷೇಕ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಸಿಯಾಳಾಭಿಷೇಕ, ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆ ನೆರವೇರಿತು. ವರಮಹಾಲಕ್ಷ್ಮೀ ಪ್ರಯುಕ್ತ ಪ್ರಸಿದ್ಧ ಪುಣ್ಯ ಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಿಗೆ ವಿವಿಧ ಹೂವಿನ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ, ವ್ರತ, ಹೋಮಗಳನ್ನು ನಡೆಸಲಾಯಿತು. ಹಬ್ಬದ ಪ್ರಯುಕ್ತ ದೇವಾಲಯಕ್ಕೆ 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆದರು.

        ಚಿಕ್ಕಮಗಳೂರು ಜಿಲ್ಲೆ ಕಿಗ್ಗಾದ ಋಷ್ಯಶೃಂಗ ದೇವಾಲಯ, ಕಳಸದ ಕಳಸೇಶ್ವರ, ಕೊಡಗಿನ ತಲಕಾವೇರಿ, ಭಾಗಮಂಡಲ, ಮಡಿಕೇರಿಯ ಓಂಕಾರೇಶ್ವರ, ಇರ್ಪು ಶ್ರೀ ರಾಮೇಶ್ವರ ದೇವಾಲಯಗಳಲ್ಲಿಯೂ ವರುಣನ ಕೃಪೆಗಾಗಿ ವಿಶೇಷ ಪೂಜೆಗಳು ನಡೆದವು.

        ಪೂಜೆಗೆ ಒಲಿದ ವರುಣದೇವ:

        ವರಮಹಾಲಕ್ಷ್ಮೀ ಪೂಜೆಯ ನಿಮಿತ್ತ ದೇವಾಲಯಗಳಲ್ಲಿ ನಡೆಸಲಾದ ವಿಶೇಷ ಪೂಜೆಯ ಫ‌ಲವೆಂಬಂತೆ ಶುಕ್ರವಾರ ನಾಡಿನೆಲ್ಲೆಡೆ ಉತ್ತಮ ಮಳೆಯಾಗಿದೆ. ರಾಜಧಾನಿ ಬೆಂಗಳೂರು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಹಲವೆಡೆ ವರ್ಷಧಾರೆ ಸುರಿಯಿತು. ಸುಬ್ರಹ್ಮಣ್ಯ, ಕೊಲ್ಲೂರುಗಳಲ್ಲಿ ಪೂಜೆ ನಡೆಯುತ್ತಿದ್ದಂತೆಯೇ ದಟ್ಟ ಮೋಡ ಕವಿದು ಸುಮಾರು ಒಂದು ಗಂಟೆ ಕಾಲ ಭಾರೀ ಮಳೆ ಸುರಿದು, ಭಕ್ತರಲ್ಲಿ ಹರ್ಷ ಮೂಡಿಸಿತು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus