Udayavani | Jul 27, 2012
2 ಲಕ್ಷ ರೂ. ಮೌಲ್ಯದ ಖೋಟಾನೋಟು ವಶ; ಮೂವರ ಬಂಧನ
ಮಂಗಳೂರು : ನಗರದಲ್ಲಿ ಖೋಟಾ ನೋಟು ಚಲಾಯಿಸಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಬಾಲಕರಾಗಿದ್ದು 500 ರೂ. ಮುಖಬೆಲೆಯ ಸುಮಾರು 2 ಲಕ್ಷ ರೂ. ಮೌಲ್ಯದ ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ. ಬಂಗಾಳದ ಮಾಲ್ಡಾ ಜಿಲ್ಲೆಯ ರತನ್‌ಪುರದ ನಿರಂಜನ್ ಚೌಧುರಿ( 22), ಸುನೀಲ್ ಚೌಧುರಿ ( 14) ಹಾಗೂ ಜಮಾಯಿಪುರದ ಮನ್ನು ಚೌಧುರಿ ( 15) ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ರುವಾರಿ ತಲೆಮರೆಸಿಕೊಂಡಿದ್ದು ಆರೋಪಿಯ ಪತ್ತೆಗೆ ಬಲೆಬೀಸಲಾಗಿದೆ.
ಜು. 27 ರಂದು ಬೆಳಗ್ಗೆ ನಗರದ ಲಾಲ್‌ಭಾಗ್‌ನಲ್ಲಿರುವ ಸಾಯಿಬಿನ್ ಕಾಂಪ್ಲೆಕ್ಸ್‌ನ ಬಳಿ ಓರ್ವ ಹುಡುಗ ಖೋಟಾನೋಟು ಚಲಾಯಿಸಲು ಪ್ರಯತ್ನಿಸುತ್ತಿದ್ದಾನೆ ಎಂಬುದಾಗಿ ಬರ್ಕೆ ಪೊಲೀಸ್ ಠಾಣಾ ಪಿಎಸ್‌ಐ ಪೂವಪ್ಪ ಎಚ್.ಎಸ್. ಅವರಿಗೆ ಬಂದ ಖಚಿತ ಮಾಹಿತಿಯನ್ವಯ ಸಿಬಂದಿಗಳ ಜತೆಗೆ ಸ್ಥಳಕ್ಕೆ ತೆರಳಿ ಬಾಲಕನನ್ನು ವಶಕ್ಕೆ ತೆಗದುಕೊಂಡು ವಿಚಾರಣೆ ನಡೆಸಿದಾಗ ಜಾಲವೊಂದು ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂತು. ತನ್ನ ಜತೆಗೆ ಖೋಟಾ ನೋಟು ಚಲಾಯಿಸಲು ಇನ್ನು ಇಬ್ಬರು ಬಂದಿದ್ದು ನಗರದ ರಾವ್ ಆ್ಯಂಡ್ ರಾವ್ ವೃತ್ತದ ಬಳಿಯ ವಸತಿಗೃಹವೊಂದರಲ್ಲಿ ಉಳಿದುಕೊಂಡಿರುವುದಾಗಿ ಬಾಲಕ ಮಾಹಿತಿ ನೀಡಿದ. ವಸತಿಗೃಹಕ್ಕೆ ತೆರಳಿದ ಪೊಲೀಸರು ಉಳಿದ ಇಬ್ಬರನ್ನು ಬಂಧಿಸಿ ಅವರ ಬಳಿ ಇದ್ದ ಖೋಟಾನೋಟುಗಳನ್ನು ವಶಪಡಿಸಿಕೊಂಡರು. ನಿರಂಜನ್ ಚೌಧುರಿಯಿಂದ 81,000 ರೂ. ಮೌಲ್ಯದ ಖೋಟಾನೋಟು ಹಾಗೂ 2,070 ರೂ. ಅಸಲಿ ನೋಟು, ಸುನೀಲ್ ಚೌಧುರಿ ಬಳಿಯಿಂದ 62,000 ರೂ. ಮೌಲ್ಯದ ಖೋಟಾನೋಟು ಹಾಗೂ 780 ರೂ. ಅಸಲಿ ನೋಟು ಮತ್ತು ಮನ್ನು ಚೌಧುರಿಯಿಂದ 57,000 ರೂ. ಮೌಲ್ಯದ ಖೋಟಾನೋಟು ಹಾಗೂ 3,240 ರೂ. ಅಸಲಿ ನೋಟು ವಶಪಡಿಸಿಕೊಳ್ಳಲಾಗಿದೆ.
ಖೋಟಾನೋಟುಗಳನ್ನು ಆರೋಪಿತರು ಬಾಂಗ್ಲಾದೇಶದಿಂದ ಭಾರತದ ಗಡಿಭಾಗದಲ್ಲಿರುವ ಮಾಲ್ಡಾ ಜಿಲ್ಲೆಯ ಮೂಲಕ ದೇಶಕ್ಕೆ ತಂದಿರುವ ಸಾಧ್ಯತೆಗಳಿವೆ. ಆರೋಪಿತರು ಮಂಗಳೂರಿನಲ್ಲಿ ಖೋಟಾನೋಟುಗಳನ್ನು ಚಲಾವಣೆ ನಡೆಸುವ ಮುನ್ನವೇ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಪ್ರಕರಣದ ಮುಂದಿನ ತನಿಖೆಯನ್ನು ಬಂದರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ವಿನಯ ಎಂ. ಗಾಂವ್ಕರ್ ಅವರು ಕೈಗೊಂಡಿದ್ದಾರೆ.
ಕಾರ್ಯಾಚರಣೆಯನ್ನು ಮಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನಿರ್ದೇಶನದಂತೆ ಡಿಸಿಪಿಗಳಾದ ಮುತ್ತುರಾಯ ಹಾಗೂ ಡಿ. ಧರ್ಮಯ್ಯ ಹಾಗೂ ಎಸಿಪಿ ಸುಭಾಶ್ಚಂದ್ರ ಅವರು ಮಾರ್ಗದರ್ಶನದಲ್ಲಿ ಬಂದರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ವಿನಯ ಎಂ. ಗಾಂವ್ಕರ್ ಅವರ ನೇತೃತ್ವದಲ್ಲಿ ಬರ್ಕೆ ಪೊಲೀಸ್ ಠಾಣಾ ಪಿಎಸ್‌ಐ ಪೂವಪ್ಪ ಎಚ್.ಎಸ್. ಹಾಗೂ ಸಿಬಂದಿಗಳಾದ ಶೇಖರ ಗಟ್ಟಿ, ಮಹಿಳಾ ಎಚ್‌ಸಿ ಕವಿತಾ, ಪಿಸಿಗಳಾದ ಸಂತೋಷ್ ಸಸಿಹಿತ್ಲು, ಪ್ರದೀಪ್ ಕುಮಾರ್ ರೈ, ಇಸಾಕ್, ಚಂದ್ರಶೇಖರ್, ವಿನೋದ್, ಕುಮಾರ್, ಸುನೀಲ್ ಕುಮಾರ್ ಅವರನ್ನು ಒಳಗೊಂಡ ತಂಡ ನಡೆಸಿದೆ .
ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.