ಪುತ್ತೂರು: ಸಕಲೇಶಪುರ ತಾಲೂಕು ವ್ಯಾಪ್ತಿಯ ವಿವಿಧೆಡೆ ಗುಡ್ಡ ಕುಸಿದು ರೈಲು ಹಳಿಯ ಮೇಲೆ ಬಿದ್ದಿರುವುದರಿಂದ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ.ಸಕಲೇಶಪುರ ತಾಲೂಕಿನ ಕಡಗರಹಳ್ಳಿ, ಎಡಕುಮೇರಿ, ಸಿರಿಬಾಗಿಲು ಪ್ರದೇಶದಲ್ಲಿ ರೈಲು ಹಳಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇನ್ನೆರಡು ಕಡೆಯಲ್ಲಿ ಸ್ವಲ್ಪ ಮಣ್ಣು ಬಿದ್ದಿದ್ದರೂ ಅದನ್ನು ತೆರವು ಮಾಡಲಾಗಿದೆ. ಉಳಿದೆಡೆ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.ಗುಡ್ಡ ಕುಸಿತದಿಂದಾಗಿ ಕಾರವಾರ-ಯಶವಂತಪುರ ನಡುವೆ ಸಂಚರಿಸುವ ಯಶವಂತಪುರ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ರದ್ದುಗೊಂಡಿದೆ. ಶನಿವಾರ ಬೆಳಗ್ಗಿನ ಕಾರವಾರ-ಮಂಗಳೂರು-ಬೆಂಗಳೂರು ರೈಲು ಕೂಡ ರದ್ದುಗೊಂಡಿದೆ.ಕಣ್ಣೂರು-ಯಶವಂತಪುರ ನಡುವೆ ಸಂಚರಿಸುವ ಕಣ್ಣೂರು ಎಕ್ಸ್‌ಪ್ರೆಸ್ ಕೂಡ ಗುರುವಾರ ರದ್ದುಗೊಂಡಿತ್ತು. ಶುಕ್ರವಾರ ರದ್ದುಗೊಂಡ ರೈಲಿನಿಂದಾಗಿ ಮುಂಗಡ ಬುಕ್ಕಿಂಗ್ ಮಾಡಿದ ಪ್ರಯಾಣಿಕರ ಹಣ ವಾಪಸ್ಸು ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.ಶನಿವಾರ ಸಂಜೆಯೊಳಗೆ ಮಣ್ಣು ತೆರವು ಕಾರ್ಯ ಪೂರ್ಣಗೊಂಡರೆ ರಾತ್ರಿ ರೈಲು ಸಂಚರಿಸುವ ಸಾಧ್ಯತೆ ಇದೆ.