Udayavani | Jul 27, 2012
ಲಂಡನ್ : ಭಾರತ ಪುರುಷರ ಆರ್ಚರಿ ತಂಡ ರಾಂಕಿಂಗ್ ಸುತ್ತಿನಲ್ಲಿ 12ನೇ ಹಾಗೂ ಅಂತಿಮ ಸ್ಥಾನ ಪಡೆದು ನಿರಾಸೆ ಅನುಭವಿಸಿತು. ಇದರೊಂದಿಗೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ನಿರಾಶಾದಾಯಕ ಆರಂಭ ಪಡೆಯಿತು.

ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಜಯಂತ ತಾಲೂಕಾªರ್, ತರುಣ್‌ದೀಪ್ ರೈ ಮತ್ತು ರಾಹುಲ್ ಬ್ಯಾನರ್ಜಿ ಅವರನ್ನೊಳಗೊಂಡ ಭಾರತ ತಂಡ 1969 ಅಂಕ ಪಡೆದು 12ನೇ ಸ್ಥಾನಕ್ಕೆ ಕುಸಿಯಿತು. ಹಾಲಿ ಚಾಂಪಿಯನ್ ಕೊರಿಯಾ ತಂಡ 2087 ಅಂಕ ಗಿಟ್ಟಿಸಿ ಅಗ್ರ ಶ್ರೇಯಾಂಕ ಗಳಿಸಿತು.

ಭಾರತದ ಸ್ಪರ್ಧಿಗಳಾದ ತರುಣ್‌ದೀಪ್ ರೈ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದರು. 72 ಅವಕಾಶಗಳಲ್ಲಿ ಅವರು 664 ಅಂಕ ಗಿಟ್ಟಿಸಿ 31ನೇ ಸ್ಥಾನ ಪಡೆದರೆ, ಬ್ಯಾನರ್ಜಿ 665 ಅಂಕ ಪಡೆದು 46 ಮತ್ತು ತಾಲೂಕಾªರ್ 650 ಅಂಕದೊಂದಿಗೆ 53ನೇ ಸ್ಥಾನಕ್ಕೆ ಕುಸಿದರು.

ಕೊರಿಯಾ ಪರ ಡಾಂಗ್ ಹ್ಯುನ್ ವೈಯಕ್ತಿಕ ವಿಭಾಗದಲ್ಲಿ ವಿಶ್ವ ದಾಖಲೆ (770 ಅಂಕಗಳ ಪೈಕಿ 699) ನಿರ್ಮಿಸಿದರು. ಫ್ರಾನ್ಸ್ 2021 ಅಂಕದೊಂದಿಗೆ ಎರಡನೇ ಸ್ಥಾನ ಪಡೆಯಿತು.

ತಂಡಗಳಿಗೆ ಈಗ ದೊರೆತಿರುವ ರಾಂಕಿಂಗ್ ಆಧಾರದ ಮೇಲೆ ಮುಖಾಮುಖೀ ಸ್ಪರ್ಧೆಗಳು ನಡೆಯಲಿವೆ. ಪ್ರತಿಯೊಂದು ತಂಡಗಳು ತಲಾ 6 ಬಾಣಗಳ ಒಂದು ಸುತ್ತಿನಲ್ಲಿ ಪಾಲ್ಗೊಳ್ಳಲಿವೆ. ಅತಿ ಹೆಚ್ಚು ಅಂಕ ಪಡೆದ ತಂಡ ಮುಂದಿನ ಸುತ್ತಿಗೆ ಪ್ರವೇಶಿಸಲಿದೆ.

ಒಂದು ವೇಳೆ ತಂಡಗಳು ಸಮಬಲ ಸಾಧಿಸಿದರೆ, ತಲಾ ಮೂರು ಬಾಣಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಇಲ್ಲಿಯೂ ಸಮಬಲ ಕಂಡುಬಂದರೆ ಗುರಿಗೆ (ಬುಲ್) ಅತಿ ಸಮೀಪದಲ್ಲಿ ಯಾರು ಹೆಚ್ಚು ಬಾಣ ಹೊಡೆದಿರುತ್ತಾರೆ ಆ ತಂಡವನ್ನು ವಿಜಯಿ ಎಂದು ತೀರ್ಮಾನಿಸಲಾಗುವುದು. ಸೆಮಿಫೈನಲ್‌ನಲ್ಲಿ ಗೆದ್ದ ತಂಡಗಳು ಚಿನ್ನಕ್ಕಾಗಿ ಸ್ಪರ್ಧಿಸಿದರೆ, ಸೋತ ತಂಡಗಳು ಕಂಚಿನ ಪದಕಕ್ಕೆ ತೃಪ್ತಿ ಹೊಂದಬೇಕಾಗುತ್ತದೆ.
ವನಿತೆಯರಿಗೆ 9ನೇ ಸ್ಥಾನ

ವನಿತಾ ಆರ್ಚರಿ ತಂಡ ಕೂಡ ರಾಂಕಿಂಗ್ ಸುತ್ತಿನಲ್ಲಿ ನಿರೀಕ್ಷೆಗೂ ಕೆಳ ಮಟ್ಟದ ಸಾಧನೆಗೈದು ನಿರಾಸೆ ಮೂಡಿಸಿದೆ. ವಿಶ್ವದ ನಂ.1 ಆರ್ಚರ್ ದೀಪಿಕಾ ಕುಮಾರಿ, ಲೈಶ್ರಾಮ್ ಬೊಂಬಯಾ ದೇವಿ ಮತ್ತು ಚೆಕ್ರೊವೊಲು ಸುರೊ ಅವರನ್ನೊಳಗೊಂಡ ತಂಡ ಒಟ್ಟು 1938 ಅಂಕ (662+651+625) ಗಳಿಸಿ ಇಟಲಿ, ಬ್ರಿಟನ್, ಉಕ್ರೇನ್ ತಂಡಗಳಿಂದಷ್ಟೇ ಮೇಲುಳಿಯಿತು.

ನಿರೀಕ್ಷೆಯಂತೆ ಕೊರಿಯಾ 1993 ಅಂಕ ಗಳಿಸಿ ಅಗ್ರಸ್ಥಾನ ಪಡೆದರೆ, ಅಮೆರಿಕ (1979) ಮತ್ತು ಚೈನೀಸ್ ಥೈಪೆ (1976) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಸಂಪಾದಿಸಿದವು.

ವೈಯಕ್ತಿಕ ವಿಭಾಗದಲ್ಲೂ ದೀಪಿಕಾ ಕುಮಾರಿ ಅವರಿಂದ ನಿರೀಕ್ಷಿತ ಸಾಧನೆ ಹೊರಹೊಮ್ಮಲಿಲ್ಲ. ಅವರು 662 ಅಂಕಗಳೊಂದಿಗೆ 8ನೇ ಸ್ಥಾನ ಪಡೆದರು. ಮೊದಲಾರ್ಧದಲ್ಲಿ 327 ಅಂಕ ಗಳಿಸಿದ ದೀಪಿಕಾ 18ಕ್ಕೆ ಸ್ಥಾನಕ್ಕೆ ಕುಸಿದಿದ್ದರು. ಆದರೆ ದ್ವಿತೀಯಾರ್ಧದಲ್ಲಿ 335 ಅಂಕಗಳೊಂದಿಗೆ ಭರ್ಜರಿ ಪುನರಾಗಮನ ಸಾರಿದರು. ಬೊಂಬಯಾ 651 ಅಂಕಗಳೊಂದಿಗೆ (327+324) 22ನೇ ಹಾಗೂ ಚೆಕ್ರೊವೊಲು 625 ಅಂಕ ಗಳಿಸಿ (309+316) 50ನೇ ಸ್ಥಾನಕ್ಕೆ ಜಾರಿದರು.

ಇಲ್ಲಿಯೂ ಕೊರಿಯ ನಿರೀಕ್ಷಿತ ಸಾಧನೆಯೊಂದಿಗೆ ಮೊದಲೆರಡು ಸ್ಥಾನ ಅಲಂಕರಿಸಿತು ಚೈನೀಸ್ ಥೈಪೆ 3ನೇ ಸ್ಥಾನ ಪಡೆಯಿತು.
