Thursday, May 23, 2013
Last Updated: 1:03:06 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಂಸ್ಥೆಗಳಿಗೆ ಕಳಂಕ ತಾರದಿರಿ
    • ಅಣ್ಣಾ ತಂಡಕ್ಕೆ ಶರದ್‌ ಯಾದವ್‌ ಹಿತವಚನ
    • ಯಾವುದೇ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಕಷ್ಟದ ಕೆಲಸ...

      • Udayavani | Jul 27, 2012

        ಹೊಸದಿಲ್ಲಿ : ಭ್ರಷ್ಟಾಚಾರ ವಿರುದ್ಧದ ಹೋರಾಟದ ನೆಪದಲ್ಲಿ ಸಂಸ್ಥೆಗಳ ಹೆಸರನ್ನು ಕೆಡಿಸದಿರುವಂತೆ ಜೆಡಿಯು ಅಧ್ಯಕ್ಷ ಶರದ್‌ ಯಾದವ್‌ ಅವರು ಅಣ್ಣಾ ತಂಡಕ್ಕೆ ಹಿತವಚನ ಹೇಳಿದ್ದಾರೆ. ಭ್ರಷ್ಟಾಚಾರದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ದೇಶದ ರಾಜಕೀಯ ಪಕ್ಷಗಳು ಸಶಕ್ತವಾಗಿದ್ದು, ಈ ಕಾರ್ಯ, ಇವುಗಳಿಂದ ಮಾತ್ರ ಸಾಧ್ಯ ಎಂದವರು ಹೇಳಿದರು.

        ಸಚಿವರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಶಾಮೀಲಾದ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು, ಈ ವಿಚಾರವಾಗಿ ಸಂಸತ್‌ನಲ್ಲಿ ಪ್ರಸ್ತಾಪಿಸಿವೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದವರು ನೂತನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ವಿರುದ್ಧ ಅಣ್ಣಾ ತಂಡ ನಡೆಸಿದ ವಾಕ್‌ ಪ್ರಹಾರದ ಕುರಿತಾಗಿನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

        ಪ್ರಣವ್‌ ಮುಖರ್ಜಿ ಅವರಿಗೆ ಸ್ವತಃ ಅಣ್ಣಾ ಹಜಾರೆ ಅವರು ಅಭಿನಂದನೆಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ತಂಡದ ಹಿಂದಿನ ಆರೋಪಗಳ ಬಗೆಗೆ ತಾನು ಪ್ರತಿಕ್ರಿಯೆ ನೀಡಲಾರೆ ಎಂದವರು ಹೇಳಿದರು.

        ಯಾವುದೇ ಪ್ರತಿಭಟನೆಗಳನ್ನು ಮಾಧ್ಯಮಗಳ ಮೂಲಕ ನಡೆಸಲು ಸಾಧ್ಯವಿಲ್ಲ ಎಂಬುದು ಈ ಹಿಂದೆಯೇ ಸಾಬೀತಾಗಿದ್ದು, ಭವಿಷ್ಯದಲ್ಲಿಯೂ ಇದು ಅಸಾಧ್ಯ. ಯಾವುದೇ ಪ್ರತಿಭಟನೆಯಲ್ಲಿ ಜನರ ಪಾಲ್ಗೊಳ್ಳುವಿಕೆಯು ಪ್ರತಿಭಟನೆಯ ಕುರಿತಾಗಿನ ಚಲನಶೀಲತೆ ಹಾಗೂ ಸಿದ್ಧತೆಗಳನ್ನು ಅವಲಂಬಿಸಿರುತ್ತದೆ. ಇದು ಕೇವಲ ಅಣ್ಣಾ ತಂಡ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತ್ರವಲ್ಲದೆ ಜೆ.ಪಿ. ಚಳವಳಿ, ಸಂಸತ್‌ ಹಾಗೂ ಸುಪ್ರೀಂಕೋರ್ಟ್‌ನಲ್ಲಿಯೂ ಇದು ಸಾಬೀತಾಗಿದೆ ಎಂದು ಶರದ್‌ ಯಾದವ್‌ ಹೇಳಿದರು.

        ಯಾವುದೇ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಕಷ್ಟದ ಕೆಲಸವಾಗಿದ್ದು, ನೀವು ಜನರ ಬಳಿಗೆ ತೆರಳದೇ ಜನಬೆಂಬಲವನ್ನು ಕ್ರೋಡೀಕರಿಸುವುದು ಅಸಾಧ್ಯ. ಈ ಕಾರ್ಯವನ್ನು ರಾಜಕೀಯ ಪಕ್ಷಗಳನ್ನು ಹೊರತು ಪಡಿಸಿ, ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದರು.

        ದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ರಾಜಕೀಯ ಪಕ್ಷಗಳನ್ನು ಸ್ಥಾಪಿಸಲು ಯಾವುದೇ ನಿರ್ಬಂಧಗಳಿಲ್ಲ ಎಂದು ಶರದ್‌ ಯಾದವ್‌ ಅವರು ಅಣ್ಣಾ ಹಜಾರೆ ತಂಡ ಚುನಾವಣೆಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದೆ ಎಂಬ ಸುದ್ದಿಯ ಕುರಿತಾಗಿನ ಪ್ರಶ್ನೆಗೆ ಉತ್ತರಿಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus