ಸಿಡ್ನಿ : ದೇಶದ ಒಲಿಂಪಿಯನ್‌ಗಳಿಗೆ 1980 ಮತ್ತು 1990ರ ಸರಕಾರದಿಂದಲೇ ಉದ್ದೀಪನಕ್ಕೆ ಪ್ರಚೋದನೆ ನೀಡಲಾಗುತ್ತಿತ್ತು ಎಂದು ನಿವೃತ್ತ ಚೀನದ ಮೆಡಿಕಲ್ ಸೂಪರ್‌ವೈಸರ್ ಬಹಿರಂಗಪಡಿಸಿದ್ದಾರೆ.1980ರಲ್ಲಿ ಚೀನಾದ ಜಿಮ್ನಾಸ್ಟಿಕ್ ತಂಡದ ವೈದ್ಯರಾಗಿ ನೇಮಕಗೊಂಡಿದ್ದ ಕ್ಸು ಯಿನ್‌ಕ್ಸಿಯಾನ್ ಆಸ್ಟ್ರೇಲಿಯದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.ಸ್ಟಿರಾಯ್ಡ ಮತ್ತು ದೇಹದ ಅಂಗಗಳ ವೃದ್ ಹಾರ್ಮೋನ್‌ಗಳಿಗೆ ಬಳಸುವ ಔಷಧಗಳನ್ನು ಕ್ರೀಡಾಪಟುಗಳಿಗೆ 'ವೈಜ್ಞಾನಿಕ ತರಬೇತಿ' ಎಂದು ನೀಡಲಾಗುತ್ತಿತ್ತು. ಇದರಿಂದ ಚೀನ ಕ್ರೀಡಾಶಕ್ತಿಯಾಗಿ ಉದಯಿಸಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.ಕ್ರೀಡಾಪಟುಗಳಿಗೆ ತಮಗೆ ಯಾವ ಚುಚುಮದ್ದು ನೀಡಲಾಗುತ್ತಿದೆ ಎಂಬ ಮಾಹಿತಿಯೇ ಇರಲಿಲ್ಲ. ಈ ಬಗ್ಗೆ ಮಾಹಿತಿ ಇದ್ದ ವೈದ್ಯ ಸಿಬಂದಿ ಟೂರ್ನಿಗಳಿಂದ ಹಿಂದೆ ಸರಿಯುತ್ತಿದ್ದರು ಎಂದು ಕ್ಸು ವಿವರಿಸಿದ್ದಾರೆ.ಇದೇ ಮೊದಲ ಬಾರಿಗೆ ವ್ಯವಸ್ಥೆಯ ಬಗ್ಗೆ ವೈದ್ಯರೊಬ್ಬರು ಹೇಳಿಕೆ ನೀಡಿದ್ದು, 1994ರ ವಿಶ್ವ ಈಜು ಚಾಂಪಿಯನ್‌ಶಿಪ್‌ನಲ್ಲಿ ಚೀನ ಎಲ್ಲರ ನಿರೀಕ್ಷೆಗೂ ಮೀರಿ 12 ಚಿನ್ನದ ಪದಕ ಗೆದ್ದಾಗ ಅನುಮಾನಗಳು ಮೂಡಿಬಂದಿದ್ದವು. ಕಳೆದ ಒಂದು ವರ್ಷದ ಹಿಂದೆ 7 ಈಜುಪಟುಗಳು ಉದ್ದೀಪನ ಮದ್ದು ಸೇವನೆಯಲ್ಲಿ ಸಿಕ್ಕಿಬಿದ್ದಿದ್ದರು. ಇದರಿಂದ ತಂಡ 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಕೇವಲ ಒಂದು ಪದಕ ಗೆದ್ದುಕೊಂಡಿತ್ತು.