Saturday, May 25, 2013
Last Updated: 6:58:24 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸರಕಾರಿ ಪೂಜೆಗೆ ಒಲಿದ ವರುಣದೇವ
    • ಮಂಗಳೂರಿನ ಶ್ರೀ ಮಂಗಳಾದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿತು .

      • Udayavani | Jul 27, 2012

        ಉಡುಪಿ:ನಾಡಿನ ಎಲ್ಲೆಡೆ ಉತ್ತಮ ಮಳೆಯಾಗಿ ಸಮೃದ್ದಿ ಬೆಳೆ ಬೆಳೆದು ಸುಭಿಕ್ಷೆ ನೆಲೆಯಾಗಲಿ ಎಂದು ಪ್ರಾರ್ಥಿಸಿ ದ.ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಕುಕ್ಕೆಶ್ರೀ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಕಟೀಲು, ಉಡುಪಿ ಜಿಲ್ಲೆಯ ಕೊಲ್ಲೂರು, ಮಂದಾರ್ತಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಶುಕ್ರವಾರ ದ.ಕ. ಜಿಲ್ಲೆಯ ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಕೊಲ್ಲೂರು, ಸಿದ್ಧಾಪುರ ಪರಿಸರದಲ್ಲಿ ಭಾರೀ ಮಳೆಯಾಗಿದೆ.

        ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ, ಪರ್ಜನ್ಯ ಜಪ , ಜಲಾಭಿಷೇಕ ನೆರವೇರಿಸಿ ಮಳೆಗಾಗಿ ಪ್ರಾರ್ಥಿಸಲಾಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ಸಿಯಾಳಾಭಿಷೇಕ, ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆ ನೆರವೇರಿತು. ಮಂಗಳೂರಿನ ಶ್ರೀ ಮಂಗಳಾದೇವಿ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಜರಗಿ ಸಮೃದ್ಧವಾಗಿ ಮಳೆ-ಬೆಳೆಯಾಗುವಂತೆ ಪ್ರಾರ್ಥಿಸಲಾಯಿತು.

        ಸುಳ್ಯದ ಅಜ್ಜಾವರ ಶ್ರೀ ಮಹಿಷಾಮರ್ದಿನಿ , ಆಲೆಟ್ಟಿ ಶ್ರೀ ಸದಾಶಿವ ಹಾಗೂ ನಾಗಪಟ್ಟಣ ಶ್ರೀ ಸದಾಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಬಂಟ್ವಾಳ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿದೆ.

        ಮಳೆಗಾಗಿ ಪ್ರಾರ್ಥಿಸಿ ಜು. 27 ಹಾಗೂ ಆ. 2ರಂದು ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ನದಿತೀರ, ಕಲ್ಯಾಣಿ ಪುಷ್ಕರಣಿಗಳನ್ನು ಹೊಂದಿರುವ ದೇವಳಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸುವಂತೆ ಸರಕಾರ ಸೂಚಿಸಿತ್ತು.

        ಸುಬ್ರಹ್ಮಣ್ಯ

        ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೈದಿಕರಿಂದ ಪರ್ಜನ್ಯ ಜಪ ಮತ್ತು ಶ್ರೀ ದೇವರಿಗೆ ಜಲಾಭಿಷೇಕ ನಡೆಯಿತು. ಆ.2ರಂದು ಕೂಡ ಇದೇ ಸೇವೆ ಪುನರಾರ್ವನತೆಯಾಗಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್‌ ಮಡ್ತಿಲ ತಿಳಿಸಿದ್ದಾರೆ.

        ಕೊಲ್ಲೂರು

        ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಹಾಸ್ರರು ಭಕ್ತರ ಸಮ್ಮುಖದಲ್ಲಿ ಕಂಬಗಣಪತಿಯಲ್ಲಿ ಪ್ರಾರ್ಥನೆ, ಅನಂತರ ಶ್ರೀ ದೇವಿಗೆ ವಿಶೇಷವಾದ ಪಂಚಾಮೃತ ಅಭಿಷೇಕ, ಕೀÒರಾಭಿಷೇಕ, ಶತರುದ್ರಾಭಿಷೇಕದ ಬಳಿಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಎಲ್‌.ಎಸ್‌. ಮಾರುತಿ, ಅಧೀಕ್ಷಕ ರಾಮಕೃಷ್ಯ ಅಡಿಗ, ಇಲಾಖೆಯ ಇಂಜಿನಿಯರ್‌ಗಳಾದ ಮುರುಳಿ ಹಾಗೂ ಪ್ರದೀಪ್‌, ದೇವಳದ ತಂತ್ರಿಗಳು, ಅರ್ಚಕರು, ಸಿಬಂದಿವರ್ಗ ಉಪಸ್ಥಿತರಿದ್ದರು.

        ಆ.2: ಪರ್ಜನ್ಯ ಕಲಶಾಭಿಷೇಕ

        ನಿರಂತರವಾಗಿ 7 ದಿವಸಗಳ ಕಾಲ ನಡೆಯುವ ವಿಶೇಷ ಪೂಜೆಯಲ್ಲಿ ಪರ್ಜನ್ಯ ಜಪ. ಕಲಶ ಪೂಜೆ, ಹೋಮ ಆನಂತರ ಪರ್ಜನ್ಯ ಕಲಶದಿಂದ ಶ್ರೀ ದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಯಲಿದೆ. ಆ. 2ರಂದು ಪರ್ಜನ್ಯ ಕಲಶಾಭಿಷೇಕ ನಡೆಯಲಿದೆ.

        ಮಂದಾರ್ತಿ, ನೀಲಾವರ...

        ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆಡಳಿತೆ ಮೊಕ್ತೇಸರ ಧನಂಜಯ ಶೆಟ್ಟಿ, ನೀಲಾವರದ ಶ್ರೀಮಹಿಷಮರ್ದಿನೀ ದೇವಸ್ಥಾನದಲ್ಲಿ ಆಡಳಿತೆ ಮೊಕ್ತೇಸರ ಬಿ.ಸುಪ್ರಸಾದ ಶೆಟ್ಟಿ, ಉಡುಪಿಯ ಅಂಬಲಪಾಡಿ ದೇವಸ್ಥಾನದಲ್ಲಿ ಆಡಳಿತ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್‌, ಕಡಿಯಾಳಿ ಮಹಿಷಮರ್ದಿನೀ ದೇವಸ್ಥಾನದಲ್ಲಿ ಆಡಳಿತಾಧಿಕಾರಿ ಗೋಕುಲದಾಸ ನಾಯಕ್‌, ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತೆ ಮೊಕ್ತೇಸರ ರಾಧಾಕೃಷ್ಣ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ನಡೆಯಿತು.

        ಕಾಪು ಜನಾರ್ದನ ದೇವಸ್ಥಾನ, ಕಾಪು ಮಾರಿಯಮ್ಮ, ಉಡುಪಿಯ ಶ್ರೀಅನಂತೇಶ್ವರ, ಬನ್ನಂಜೆ ಮಹಾಲಿಂಗೇಶ್ವರ, ವಡಭಾಂಡೇಶ್ವರ ದೇವಸ್ಥಾನ, ಕೋಟದ ಅಮೃತೇಶ್ವರಿ, ಮರವಂತೆಯ ವರಾಹಸ್ವಾಮಿ, ಆರೂರು ವಿಷ್ಣುಮೂರ್ತಿ, ಹಿರಿಯಡಕ ವೀರಭದ್ರಸ್ವಾಮಿ, ಮಾರನಕಟ್ಟೆ ಬ್ರಹ್ಮಲಿಂಗೇಶ್ವರ, ಗುಡ್ಡಮ್ಮಾಡಿ ದೇವಸ್ಥಾನ, ನಂದಿಕೂರು ದುರ್ಗಾಪರಮೇಶ್ವರಿ, ಕಾರ್ಕಳದ ಅನಂತಪದ್ಮನಾಭ, ಇನ್ನದ ಮಹಾಲಿಂಗೇಶ್ವರ, ಮುಂಡ್ಕೂರು ದುರ್ಗಾಪರಮೇಶ್ವರಿ ಹೀಗೆ ವಿವಿಧ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.

        ಪೂಜೆ ಹೊತ್ತಿನಲ್ಲಿಯೇ ಭಾರೀ ಮಳೆ

        ಕೊಲ್ಲೂರಿನಲ್ಲಿ ಸಾಮೂಹಿಕ ಪೂಜೆ ನಡೆಯುತ್ತಿದ್ದಂತೆಯೇ ದಟ್ಟವಾಗಿ ಮೋಡ ಕವಿದು ಸುಮಾರು ಒಂದು ಗಂಟೆ ಸಮಯ ಭಾರೀ ಮಳೆ ಸುರಿಯಿತು. ಅನಂತರವೂ ಆಗಾಗ್ಗೆ ಕೊಲ್ಲೂರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸಾಧಾರಣವಾಗಿ ಮಳೆಯಾಗಿದೆ. ಎಲ್ಲೆಡೆ ಕಾರ್ಮೋಡ ಕವಿದಿತ್ತು. ಇದೇ ರೀತಿ ವಿವಿಧ ಕಡೆಗಳಲ್ಲಿ ಆಗಿದೆ.

        ದ.ಕನ್ನಡ ಜಿಲ್ಲೆಯಾದ್ಯಂತ ಮಂಗಳೂರು ಹೊರತು ಪಡಿಸಿದಂತೆ ಉಳಿದೆಡೆಗಳಲ್ಲಿ ಶುಕ್ರವಾರ ಬೆಳಗಿನಿಂದಲೇ ಉತ್ತಮ ಮಳೆ ಸುರಿದಿದೆ. ಸುಳ್ಯ, ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿ ಬೆಳಗಿನಿಂದಲೇ ಮೋಡಕವಿದ ವಾತಾವರಣ ಕಂಡುಬಂದಿದ್ದರೂ ಸಾಧಾರಣ ಮಳೆಯಷ್ಟೇ ಸುರಿದಿದೆ. ಕುಂದಾಪುರ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಕಾರ್ಕಳ ತಾಲೂಕಿನಲ್ಲಿ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದೆ.

        ಭಗವಂತ ಮೆಚ್ಚಿದ್ದಾನೆ:ಪೂಜಾರಿ

        ನಮ್ಮ ಪ್ರಾರ್ಥನೆಯನ್ನು ಭಗವಂತ ಮೆಚ್ಚಿದ್ದಾನೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಪ್ರತಿಕ್ರಿಯೆ ನೀಡಿದ್ದಾರೆ.ಭಗವಂತ ಮಳೆ ಸುರಿಸುತ್ತಿದ್ದಾನೆ. ನನಗೆ ಸಂತೋಷವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

        ಇತ್ತೀಚಿಗೆ ಮಳೆಗಾಗಿ ಪ್ರಾರ್ಥಿಸಿ ಮುಜರಾಯಿ ದೇವಸ್ಥಾನಗಳ ವತಿಯಿಂದ ಪ್ರಾರ್ಥನೆ, ವಿಶೇಷ ಪೂಜೆ, ಜಪಗಳನ್ನು ನಡೆಸಲು ಸಚಿವರು ಆದೇಶಿಸಿದ್ದರು. ಪ್ರತಿ ದೇವಸ್ಥಾನದವರು 5,000 ರೂ. ಹೆಚ್ಚದಂತೆ ಇದಕ್ಕಾಗಿ ಖರ್ಚು ಮಾಡಲು ಆದೇಶಿಸಲಾಗಿತ್ತು. ಇದು ವೆಚ್ಚದಾಯಕ ಎಂದು ವಿರೋಧಿಗಳು ಆರೋಪಿಸಿದ್ದರು. ದೇವಸ್ಥಾನಗಳ ಹುಂಡಿಯಿಂದಲೇ ಖರ್ಚು ಮಾಡಲಾಗುವುದೇ ವಿನಾ ಸರಕಾರದಿಂದ ಖರ್ಚು ಮಾಡುತ್ತಿಲ್ಲ. ಎಲ್ಲ ಇಲಾಖೆಗಳೂ ಅವರವರ ವ್ಯಾಪ್ತಿಯಲ್ಲಿ ಕೆಲಸ ಮಾಡುವಾಗ ಮುಜರಾಯಿ ಇಲಾಖೆಯಿಂದ ಪೂಜೆ ಸಲ್ಲಿಸುವ ಕೆಲಸ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದರು. ಇದೀಗ ಶುಕ್ರವಾರ ಪೂಜೆ ಸಲ್ಲಿಕೆಯಾಗಿದ್ದು ಎಲ್ಲೆಡೆ ಮಳೆ ಬಂದ ವರದಿಗಳಾಗಿವೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • ಗ್ರಾಮ ಚಾವಡಿ
        ಆರ್ಯಾಪು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂಬ ಆರೋಪ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಗಿ ಅವರನ್ನು ವರ್ಗಾವಣೆ ಗೊಳಿಸುವಂತೆ ಒತ್ತಾಯಿಸುವ ನಿರ್ಣಯ...
      • Copyright @ 2009 Udayavani.All rights reserved.
      • Designed & Hosted By 4cplus