ಕೋಕ್ರಾಝಾರ್: ಮೂಲ ನಿವಾಸಿಗಳು ಹಾಗೂ ಬಾಂಗ್ಲಾ ಮುಸ್ಲಿಂ ವಲಸಿಗರ ಹಿಂಸಾಚಾರಕ್ಕೆ ತುತ್ತಾದ ಅಸ್ಸಾಂನ ಮತ್ತಷ್ಟು ಭೀಕರ ಚಿತ್ರಣ ಹೊರಬಿದ್ದಿದ್ದು, ಶುಕ್ರವಾರ ಮತ್ತೆ 14 ಶವ ಪತ್ತೆಯಾಗಿವೆ. ಇದರೊಂದಿಗೆ ಗಲಭೆಗೆ ಬಲಿಯಾದವರ ಸಂಖ್ಯೆ 58ಕ್ಕೆ ಏರಿದೆ. ಈ ನಡುವೆ ರಾಜಕೀಯ ಪಕ್ಷಗಳ ಕಚ್ಚಾಟ ಆರಂಭವಾಗಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸಿದೆ.ಇದೇ ವೇಳೆ ಪರಿಸ್ಥಿತಿ ನಿರ್ವಹಣೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ವಿಫಲವಾಗಿದ್ದಾರೆ ಎಂಬ ಆರೋಪ ಅವರದ್ದೇ ಪಕ್ಷದ ನಾಯಕರಿಂದ ಕೇಳಿಬಂದಿದೆ. ಗೊಗೋಯ್ ಆಡಳಿತ ಸಾಕು ಎಂಬರ್ಥದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರೆಹಮಾನ್ ಖಾನ್ ಮತ್ತಿತರೆ ನಾಯಕರು ಮಾತನಾಡಿದ್ದಾರೆ. ಇದರ ಜೊತೆಗೆ ಗೊಗೋಯ್ ಅವರ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಹೈಕಮಾಂಡ್, ಬಿಕ್ಕಟ್ಟು ಇತ್ಯರ್ಥದ ನಿಟ್ಟಿನಲ್ಲಿ 10 ಸದಸ್ಯರ ಸಮನ್ವಯ ಸಮಿತಿಯೊಂದನ್ನು ರಚನೆ ಮಾಡಿದೆ.ಈ ನಡುವೆ ಘಟನೆಯ ನೈತಿಕ ಹೊಣೆ ಹೊತ್ತು ತರುಣ್ ಗೊಗೋಯ್ ರಾಜೀನಾಮೆ ನೀಡುತ್ತಾರೆ ಎಂಬ ವರದಿಗಳನ್ನು ಖುದ್ದು ಗೊಗೋಯ್ ಅವರೇ ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧವೂ ಪರೋಕ್ಷ ದಾಳಿ ನಡೆಸಿರುವ ಗೊಗೋಯ್, ರಾಜ್ಯದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿ ಸಿಕ್ಕಿತ್ತು ಎಂದಾದರೆ ಅವರೇ ಏಕೆ ತುರ್ತಾಗಿ ಭದ್ರತಾ ಪಡೆಗಳನ್ನು ರಾಜ್ಯಕ್ಕೆ ರವಾನಿಸಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.