Sunday, May 19, 2013
Last Updated: 1:15:04 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪಿತೃತ್ವ ವಿವಾದ: ರೋಹಿತ್‌ ಶೇಖರ್‌ಗೆ ತಿವಾರಿಯೇ ತಂದೆ
    • 87ನೇ ವಯಸ್ಸಲ್ಲಿ ಎನ್‌.ಡಿ. ತಿವಾರಿ ಅಪ್ಪ ಆದರು!
    • ದೆಹಲಿ ಹೈಕೋರ್ಟ್‌ನಿಂದ ಡಿಎನ್‌ಎ ಪರೀಕ್ಷೆ ವರದಿ ಬಹಿರಂಗ
      • Udayavani | Jul 28, 2012

        ನವದೆಹಲಿ: ರೋಹಿತ್‌ ಶೇಖರ್‌ ಎಂಬ ವ್ಯಕ್ತಿಗೆ ಹಿರಿಯ ಕಾಂಗ್ರೆಸ್‌ ನಾಯಕ ಎನ್‌.ಡಿ.ತಿವಾರಿಯೇ ಅಪ್ಪ ಎಂದು ಡಿಎನ್‌ಎ ಪರೀಕ್ಷೆಯಿಂದ ಸಾಬೀತಾಗಿದೆ. ಅದರೊಂದಿಗೆ ಪಿತೃತ್ವ ವಿವಾದದಲ್ಲಿ ಸಿಲುಕಿದ್ದ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತಿವಾರಿ (87) ಭಾರಿ ಮುಖಭಂಗ ಅನುಭವಿಸಿದ್ದಾರೆ.

        ಡಿಎನ್‌ಎ ವರದಿಯನ್ನು ಬಹಿರಂಗಗೊಳಿಸಬಾರದು ಎಂದು ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಹಿಂದೆ ತಿರಸ್ಕರಿಸಿತ್ತು. ಅದನ್ನು ವಿಭಾಗೀಯ ಪೀಠದಲ್ಲಿ ಹಾಗೂ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆಗೆ ಬರುವುದಕ್ಕೂ ಮೊದಲೇ ಶುಕ್ರವಾರ ವಿಭಾಗೀಯ ಪೀಠ ಈ ಅರ್ಜಿಯನ್ನು ತಿರಸ್ಕರಿಸಿ ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯ ನೀಡಿದ್ದ ಡಿಎನ್‌ಎ ವರದಿಯನ್ನು ಬಹಿರಂಗಪಡಿಸಿತು.

        'ತಿವಾರಿ ಅವರೇ ರೋಹಿತ್‌ ಶೇಖರ್‌ನ ಜೈವಿಕ ತಂದೆ ಹಾಗೂ ಉಜ್ವಲಾ ಶರ್ಮಾ ಜೈವಿಕ ತಾಯಿ ಎಂದು ವರದಿ ತಿಳಿಸಿದೆ' ಎಂದು ವಿಭಾಗೀಯ ಪೀಠ ಹೇಳಿತು.

        ವರದಿ ಬಹಿರಂಗಪಡಿಸಬಾರದು ಎಂಬ ತಿವಾರಿಯವರ ವಾದ ಒಪ್ಪಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ವಿಚಾರಣೆಯನ್ನು ಅನಗತ್ಯವಾಗಿ ವಿಳಂಬ ಮಾಡಿದಂತಾಗುತ್ತದೆ ಎಂದೂ ಅಭಿಪ್ರಾಯಪಟ್ಟಿತು.

        ಇದು ಎನ್‌.ಡಿ.ತಿವಾರಿಗೆ ಅಂಟಿಕೊಂಡಿದ್ದ ಪಿತೃತ್ವ ವಿವಾದದ ಅಂತಿಮ ತೀರ್ಪಲ್ಲ. ಡಿಎನ್‌ಎ ವರದಿಯು ಈ ಪ್ರಕರಣದಲ್ಲಿ ಒಂದು ಸಾಕ್ಷ್ಯವಷ್ಟೆ. ಅಂತಿಮ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ. ಆದರೆ, ಅದು ಡಿಎನ್‌ಎ ವರದಿಯನ್ನು ಆಧರಿಸಿರುವ ಸಾಧ್ಯತೆಯೇ ಹೆಚ್ಚು.

        ತಿವಾರಿಗೆ ಅವರ ಪತ್ನಿಯಿಂದ ಮಕ್ಕಳಿಲ್ಲ. ದೆಹಲಿ ಮೂಲದ 32 ವರ್ಷದ ರೋಹಿತ್‌ ನ್ಯಾಯಾಲಯಕ್ಕೆ ಹೋಗಿ ತಾನು ತಿವಾರಿಯವರ ಮಗ ಎಂದು ದಾವೆ ಹೂಡಿದ್ದ. ಅವನ ತಾಯಿ ಉಜ್ವಲಾ ಹಾಗೂ ತಿವಾರಿ ನಡುವೆ ಹೇಗೆ ಸಂಪರ್ಕವೇರ್ಪಟ್ಟಿತು ಎಂಬ ಸಂಗತಿ ಇನ್ನೂ ನಿಗೂಢವಾಗಿದೆ.

        ರಾಜಕಾರಣಿಯೊಬ್ಬರ ಪಿತೃತ್ವ ವಿವಾದ ಡಿಎನ್‌ಎ ಪರೀಕ್ಷೆಯ ಹಂತಕ್ಕೆ ಹೋಗಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು. ರೋಹಿತ್‌ ಶೇಖರ್‌ ಅವರು ತಿವಾರಿ ಪುತ್ರ ಎಂಬ ವರದಿ ಬಂದಿರುವ ಹಿನ್ನೆಲೆಯಲ್ಲಿ ಶೇಖರ್‌ ಅವರು ತಿವಾರಿ ಆಸ್ತಿಯಲ್ಲಿ ಪಾಲು ಕೇಳಬಹುದಾಗಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

        ಕೋರ್ಟಿಗೇ ಬರಲಿಲ್ಲ ತಿವಾರಿ:

        ಡಿಎನ್‌ಎ ವರದಿಯನ್ನು ಕೋರ್ಟ್‌ ಆವರಣದಲ್ಲಿ ಬಹಿರಂಗಪಡಿಸುವುದಕ್ಕೂ ಮುನ್ನ ನ್ಯಾಯಾಧೀಶರು ರೋಹಿತ್‌ ಹಾಗೂ ಉಜ್ವಲಾ ಅವರ ಪರ ವಕೀಲರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಅವರ ಸಮ್ಮುಖದಲ್ಲಿ ಲಕೋಟೆ ಒಡೆದರು. ಅಲ್ಲಿ ತಿವಾರಿ ಪರ ವಕೀಲರಿಗೂ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಅವರು ಹಾಜರಿರಲಿಲ್ಲ. ತಿವಾರಿ ಕೂಡ ಕೋರ್ಟ್‌ಗೆ ಬರಲಿಲ್ಲ. ನಂತರ ತಮ್ಮ ನಿವಾಸದಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಇದು ತಮ್ಮ ಖಾಸಗಿ ವಿಚಾರ ಎಂದಷ್ಟೇ ಹೇಳಿದರು.

        ಇದು ನನ್ನ ಖಾಸಗಿ ವಿಚಾರ. ಇದನ್ನೇ ದೊಡ್ಡ ವಿವಾದ ಮಾಡಬೇಕಿಲ್ಲ. ರೋಹಿತ್‌ ಶೇಖರ್‌ ವಿರುದ್ಧ ನನಗೆ ಯಾವುದೇ ರೀತಿಯ ಸೇಡಿಲ್ಲ. ಆತನ ಬಗ್ಗೆ ನನಗೆ ಅನುಕಂಪವಿದೆ. ನನ್ನ ಹಿರಿತನ ಹಾಗೂ ಸರಳತೆಗೆ ಮಸಿ ಬಳಿಯಲು ನನಗಾಗದವರು ರೂಪಿಸಿರುವ ಸಂಚು ಇದು.
        - ಎನ್‌.ಡಿ.ತಿವಾರಿ, ಕಾಂಗ್ರೆಸ್‌ ಮುಖಂಡ (ಪತ್ರಿಕಾ ಹೇಳಿಕೆಯಲ್ಲಿ)

        ನಾವು ತಿವಾರಿಯವರಿಂದ ಏನನ್ನೂ ಬಯಸುತ್ತಿಲ್ಲ. ರೋಹಿತ್‌ ಶೇಖರ್‌ ತಿವಾರಿಯವರ ಮಗ ಎಂದು ಸಾಬೀತಾಗುವುದಷ್ಟೇ ನಮಗೆ ಬೇಕಿತ್ತು. ನ್ಯಾಯಾಲಯ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಒಪ್ಪಿಕೊಳ್ಳುತ್ತೇವೆ. ತಿವಾರಿಯವರು 'ಹೃದಯದಿಂದ' ಕೊಡುವುದನ್ನು ಸ್ವೀಕರಿಸುತ್ತೇವೆ.
        - ಉಜ್ವಲಾ ಶರ್ಮಾ, ರೋಹಿತ್‌ನ ತಾಯಿ


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus