ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಗಾಂಧಿವಾದಿ ಅಣ್ಣಾ ಹಜಾರೆ ರಾಜಕೀಯ ಅಖಾಡಕ್ಕೆ ಧುಮುಕುತ್ತಾರಾ?ಹೌದೆಂಬ ಸುಳಿವನ್ನು ಅವರೇ ನೀಡಿದ್ದಾರೆ. ಆದರೆ, ತಾವೇ ಸ್ವತಃ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದೂ ಅವರು ಸ್ಪಷ್ಟಪಡಿಸಿದ್ದಾರೆ.ಕೇಂದ್ರ ಸರ್ಕಾರದ 15 ಮಂದಿ ಕಳಂಕಿತ ಸಚಿವರ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಮ್ಮ ತಂಡದ ಸದಸ್ಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ವೇಳೆ ಕೆಲ ಸುದ್ದಿವಾಹಿನಿಗಳಿಗೆ ಸಂದರ್ಶನ ನೀಡಿದ ಅವರು ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ, ತಾವು ನಡೆಸುವ ರಾಜಕಾರಣದ ಸ್ವರೂಪ ಹೇಗಿರುತ್ತದೆ ಎಂಬ ಬಗ್ಗೆ ಗೊಂದಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ.ಶುಕ್ರವಾರ ಅವರು ಆಡಿದ ಮಾತುಗಳ ಸಾರಾಂಶವಿಷ್ಟು:- ಇನ್ನೂ ಎಷ್ಟು ದಿನ ಉಪವಾಸ, ಸತ್ಯಾಗ್ರಹ... ಎನ್ನುತ್ತಿರುತ್ತೀರಿ. ಇದಕ್ಕೊಂದು ಪರ್ಯಾಯ ಹುಡುಕಿ ಎಂದು ಜನರು ಕೇಳುತ್ತಿದ್ದಾರೆ. ಅವರಿಗೀಗ ರಾಜಕೀಯ ಪರ್ಯಾಯವನ್ನು ಒದಗಿಸುವ ಸಮಯ ಬಂದಿದೆ.- 2014ರ ಲೋಕಸಭೆ ಚುನಾವಣೆಗೆ ಒಳ್ಳೆಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಪ್ರಕಟಿಸುತ್ತೇವೆ.- ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಯಾರಾದರೂ ಭ್ರಷ್ಟಾಚಾರದ ವಿರುದ್ಧ ಹೋರಾಡಲು ರಾಜಕೀಯ ಪಕ್ಷ ಸ್ಥಾಪಿಸಿದರೆ ಅದಕ್ಕೆ ಬೆಂಬಲ ನೀಡುತ್ತೇನೆ.- ಲೋಕಪಾಲ ಮಸೂದೆ ಪಾಸು ಮಾಡಿಸುವುದೇ ನಮ್ಮ ಮೂಲ ಹೋರಾಟ. ಈಗ ನಡೆಸುತ್ತಿರುವುದು ಅದರ ಒಂದು ಅಂಗ ಮಾತ್ರ.- ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ನೋಡಿದರೆ ಜನರು ಇದರಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆಂಬ ಅನುಮಾನ ನನಗೂ ಮೂಡುತ್ತಿದೆ.- ಬಾಬಾ ರಾಮದೇವ್ ರಾಜಕೀಯ ಪಕ್ಷ ಸ್ಥಾಪಿಸಲು ಹೊರಟಿದ್ದಾರಾ ಎಂಬ ಬಗ್ಗೆ ನನಗೆ ಗೊತ್ತಿಲ್ಲ.ಕಳೆದ ವರ್ಷ ಲೋಕಸಭೆ ಉಪ ಚುನಾವಣೆಯಲ್ಲಿ ಅಣ್ಣಾ ತಂಡದವರು ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರಿಂದಲೇ ಅವರ ಹೋರಾಟ ಜನಬೆಂಬಲ ಕಳೆದುಕೊಂಡಿತು ಎಂಬ ವಾದವಿದೆ.