ಮೈಸೂರು : ವಿಶ್ವಕರ್ಮ ಸಂಘ ಮಹಾಸಭಾದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆ.8ರಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಪೂರ್ವಭಾವಿ ಪ್ರತಿಭಟನೆ ಜು.31ರಂದು ಮೈಸೂರಲ್ಲಿ ನಡೆಯಲಿದೆ ಎಂದು ರಾಜ್ಯ ವಿಶ್ವಕರ್ಮ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಚಂದ್ರು ವಿಶ್ವಕರ್ಮ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಮುದಾಯದ ಹತ್ತು ಹಲವು ಬೇಡಿಕೆಗಳ ಈಡೇರಿಕೆ ಹಲವು ಪ್ರತಿಭಟನೆ, ಸಮಾವೇಶಗಳ ಮೂಲಕ ಒತ್ತಾಯಿಸುತ್ತ ಬಂದಿದ್ದರೂ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲವೆಂದು ಆರೋಪಿಸಿದರು.ವಿಶ್ವಕರ್ಮ ಜಯಂತಿ ಸೆ.17ರಂದು ಸಾರ್ವತ್ರಿಕ ರಜೆ ಘೋಷಿಸಬೇಕು, ಸಮುದಾಯಕ್ಕೆ ಪ್ರತ್ಯೇಕ ಶೇ.3 ಮೀಸಲು ನಿಗದಿಪಡಿಸಬೇಕು, ಹೊರ ರಾಜ್ಯಗಳಿಂದ ಕಡಿಮೆ ದರ್ಜೆಯಲ್ಲಿ ಬರುವ ಆಭರಣಗಳನ್ನು ನಿಯಂತ್ರಿಸಬೇಕು, ಪ್ರತ್ಯೇಕ ನಿಗಮ ಸ್ಥಾಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರ ಕಡೆಗಣಿಸಿದೆ ಎಂದರು.ಮೈಸೂರಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದು, ಗಾಂಧಿವೃತ್ತದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಾಗುವುದು. ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಸೇರಿದಂತೆ ಸಮಾಜದ ಗುರುಗಳು, ಪ್ರಮುಖರು ಭಾಗವಹಿಸಲಿದ್ದಾರೆ.ಪ್ರತಿಭಟನೆಗೆ ಮುನ್ನ ಇರಿನ್ ರಸ್ತೆಯಲ್ಲಿರುವ ಕಾಳಿಕಾಂಬ ದೇವಾಲಯದಿಂದ ಹೊರಡುವ ಮೆರವಣಿಗೆಗೆ ಶಾಸಕ ವಿ.ಶ್ರೀನಿವಾಸ ಚಾಲನೆ ನೀಡುವರು. ಧರಣಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು. ಸಮಾಜದ ಜಿಲ್ಲಾಧ್ಯಕ್ಷ ಎನ್.ನಂದಕುಮಾರ್ ಮತ್ತಿತರರು ಹಾಜರಿದ್ದರು.
ವಿಶ್ವಕರ್ಮ ಸಮಾಜ ರಾಜ್ಯ ಸರಕಾರದ ಮುಂದೆ ಮಂಡಿಸಿದ್ದ ಹಲವು ಪ್ರಮುಖ ಬೇಡಿಕೆಗಳನ್ನು ಸರಕಾರ ಇನ್ನೂ ಕಡೆಗಣಿಸಿರುವುದು ನಿಜಕ್ಕೂ ವಿಷಾದನೀಯ. ಈ ವಿಚಾರದಲ್ಲಿ ಸರಕಾರ ಎಚ್ಚೆತ್ತು ಅತಿ ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗುವಂತೆ ಒತ್ತಾಯಿಸಲು ಕರ್ನಾಟಕ ರಾಜ್ಯ ವಿಶ್ವಕರ್ಮ ಸಭಾದ ಮೈಸೂರು ಘಟಕ ಹಮ್ಮಿಕೊಂಡಿರುವ ಪಾದಯಾತ್ರೆ-ಪ್ರತಿಭಟನೆ ಸಮಯೋಚಿತವಾಗಿರುತ್ತದೆ. ಈ ರಾಜ್ಯಮಟ್ಟದ ಪ್ರತಿಭಟನಾ ಚಳುವಳಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕೈಗೊಂಡಿರುವ ಈ ಪ್ರಯತ್ನದಲ್ಲಿ ಕೈ ಜೋಡಿಸಿದರೆ ಖಂಡಿತವಾಗಿ ಒಂದು ಉತ್ತಮ ಫಲಿತಾಂಶವನ್ನು ಅಪೇಕ್ಷಿಸಬಹುದೇನೋ? "ಒಗ್ಗಟ್ಟಿನಲ್ಲಿ ಬಲವಿದೆ" ಎನ್ನುವುದನ್ನು ನಮ್ಮ ಸಮಾಜದವರೆಲ್ಲರೂ ಅರಿತುಕೊಂಡು ಈ ಮಹಾತ್ಸಾಧನೆಗೆ ಸಹಕರಿಸುವುದರೊಂದಿಗೆ, ಅತಿ ಶೀಘ್ರದಲ್ಲಿ ವಿಶ್ವಕರ್ಮ ಸಮಾಜದ ರಾಜಕೀಯ ಪ್ರತಿನಿಧಿಯನ್ನು ನಾವು ವಿಧಾನಸೌಧದಲ್ಲಿ ಕಾಣುವಂತಾಗಲೆಂದು ಹಾರೈಸುತ್ತೇನೆ.