ಅರಕೆರೆ ಜಯರಾಮ್ | Aug 01, 2012
ಹೆಣ್ಣುಮಕ್ಕಳ ಮಾನಹಾನಿಗೆ ಯತ್ನಿಸಿದ ಅಥವಾ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗಳನ್ನು ಗ್ರಾಮಸ್ಥರೇ ಸೇರಿ ಥಳಿಸುವ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ತೋರಿಸುತ್ತಲೇ ಇರುತ್ತವೆ. ಕ್ರಿಮಿನಲ್‌ಗಳ ಜತೆ ಹೆಜ್ಜೆ ಹಾಕುವ ಪರಿಪಾಠವನ್ನು ಟಿವಿ ವರದಿಗಾರ ಸಿಬ್ಬಂದಿ ಕೈಬಿಡಬೇಕು. ಬದಲಿಗೆ, ಸ್ವಂತ ನೆಲೆಯಲ್ಲಿ ತನಿಖಾ ವರದಿಗೆ ಮುಂದಾಗಬೇಕು.
ಯಾವುದೇ ದೃಷ್ಟಿಯಿಂದ ನೋಡಿದರೂ ಮಂಗಳೂರು ಪೊಲೀಸರು ಕಳೆದ ಶನಿವಾರದಂದು ನಗರದ ಹೋಮ್‌ಸ್ಟೇ ಒಂದರಲ್ಲಿ ಸಂಭವಿಸಿದ ಆಘಾತಕಾರಿ ಘಟನೆಯ ಬಗ್ಗೆ ತಮಗೆ ಪೂರ್ವಭಾವಿ ಮಾಹಿತಿ ನೀಡದೆ ಕಾರ್ಯಾಚರಿಸಿದ ಎರಡು ಟಿವಿ ಸುದ್ದಿ ವಾಹಿನಿಗಳ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ಸರಿಯಾದ ಕೆಲಸವನ್ನೇ ಮಾಡಿದಂತಾಗಿದೆ. ನಗರದ ಪಡೀಲ್ ಪರಿಸರದ ಈ ಹೋಮ್‌ಸ್ಟೇಯಲ್ಲಿ ಹುಟ್ಟುಹಬ್ಬದ ನಿಮಿತ್ತ ಜಮಾಯಿಸಿದ್ದ ಹುಡುಗ-ಹುಡುಗಿಯರ ಮೇಲೆ ನೈತಿಕತೆಯ ರಕ್ಷಕರೆಂದು ಸ್ವಯಂಘೋಷಿಸಿಕೊಂಡ ಕೆಲವರು ಹಲ್ಲೆ ನಡೆಸಿದ ಸಂದರ್ಭದಲ್ಲಿ ಟಿವಿ ಪತ್ರಕರ್ತರು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆಯೇ ಅದರ ವರದಿಗೆಂದು ಸ್ಥಳಕ್ಕೆ ಧಾವಿಸಿದ್ದರು.
ತಪ್ಪೆಸಗಿದವರ ವಿರುದ್ಧ ಪೊಲೀಸರು ತಕ್ಕ ಕ್ರಮ ಕೈಗೊಳ್ಳಲು ಈ ಚಾನೆಲ್‌ಗಳ ಸುದ್ದಿ - ಚಿತ್ರ ತುಣುಕುಗಳು ನೆರವಾಗುತ್ತವೇನೋ ನಿಜ. ಆದರೆ ಹೋಮ್‌ಸ್ಟೇಯಲ್ಲಿ ಹುಡುಗ ಹುಡುಗಿಯರಿದ್ದ ಬಗೆಗಿನ ಮಾಹಿತಿ ತಮಗೆ ಮೊದಲೇ ತಿಳಿದಿರುತ್ತ, ಟಿವಿ ಪತ್ರಕರ್ತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಹೋದುದು ನಿಜಕ್ಕೂ ಅಕ್ಷಮ್ಯ. ಒಂದು ವೇಳೆ ಇನ್ನೊಮ್ಮೆ ಯಾವುದಾದರೂ ರೌಡಿಗಳ ತಂಡವೊಂದು "ನಾವಿಂದು ಇಂಥವರನ್ನು ಮುಗಿಸಲಿದ್ದೇವೆ' ಎಂಬ ಮಾಹಿತಿಯನ್ನು ನೀಡಿದಲ್ಲಿ, ನಿಮ್ಮ ಕ್ಯಾಮರಾಮೆನ್ ಅಥವಾ ವರದಿಗಾರರನ್ನು ಆ ಕ್ರಿಮಿನಲ್‌ಗಳ ತಂಡದೊಂದಿಗೆ ಕಳುಹಿಸಿಕೊಡುತ್ತೀರಾ - ಎಂಬ ಪ್ರಶ್ನೆಯನ್ನು ಈ ಸುದ್ದಿ ಚಾನೆಲ್‌ಗಳಿಗೆ ಹಾಕಬೇಕಾಗಿದೆ.
ಶನಿವಾರದ ಘಟನೆಯಲ್ಲಿ ಗಂಡು - ಹೆಣ್ಣುಮಕ್ಕಳನ್ನು ಸದೆ ಬಡಿದವರ ಗುಂಪು ಈ ಕ್ರಿಮಿನಲ್ ಕೃತ್ಯದ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕಾಗಿ ಮೇಲೆ ಹೇಳಿದ ಎರಡು ಟಿವಿ ಸಿಬಂದಿ ತಂಡವನ್ನು ತನ್ನೊಂದಿಗೇ ಸ್ಥಳಕ್ಕೆ ಕರೆದೊಯ್ದಿತ್ತು. ಈ ಘಟನೆಯನ್ನು ಪ್ರಥಮ ಆದ್ಯತೆಯ ಸುದ್ದಿಯನ್ನಾಗಿ ಬಳಸಿಕೊಳ್ಳುವ ಆತುರದಲ್ಲಿ ಟಿವಿ ತಂಡಗಳ ಮಂದಿ ತಾವು ನಾಗರಿಕರಾಗಿ ನಿರ್ವಹಿಸಬೇಕಿದ್ದ ಕರ್ತವ್ಯ - ಬಾಧ್ಯತೆಗಳನ್ನು ಮರೆತರು. ಟಿವಿ ವರದಿಗಾರರು ಪೊಲೀಸರಿಗೆ ಸೂಚನೆ ನೀಡಿದ್ದಿದ್ದರೆ, ಬಡಪಾಯಿ ಹುಡುಗ - ಹಡುಗಿಯ ಮೇಲಿನ ಹಲ್ಲೆಯನ್ನು ತಪ್ಪಿಸಬಹುದಿತ್ತು.
ಇನ್ನು ದಾಳಿ ನಡೆಸಿದ ತಂಡದ ಕೃತ್ಯವನ್ನು ಯಾರೂ ಯಾವ ರೀತಿಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ. ಹಲ್ಲೆ ನಡೆಸಿದವರು ಪಶುಗಳಂತೆ ವರ್ತಿಸಿದ್ದಾರೆ. ಅವರು ಅನುಕಂಪಕ್ಕೆ ಅರ್ಹರಲ್ಲ. ಅವರ ವರ್ತನೆಯ ಬಗ್ಗೆ ವಿಚಾರಣೆ ನಡೆಸಲು ಕಾನೂನಿದೆ. ಹೀಗಾಗಿ ಅವರ ಬಗ್ಗೆ ಬರೆಯುವ ಅಗತ್ಯವಿಲ್ಲ.
ನಮ್ಮ ಪತ್ರಕರ್ತರು, ವಿಶೇಷವಾಗಿ ಟಿವಿ ಮಾಧ್ಯಮದಲ್ಲಿರುವವರು, ನೆನಪು ಮಾಡಿಕೊಳ್ಳಬೇಕಾದ ಸಂಗತಿಯೊಂದಿದೆ. ಅದೆಂದರೆ, ಸುಡಾನ್‌ನ ಯಾದವೀ ಕಲಹದ ಬಳಿಕ ಸಂಭವಿಸಿದ ಭೀಕರ ಕ್ಷಾಮದ ಬಗ್ಗೆ ವರದಿ ಮಾಡಲು ತೆರಳಿದ್ದ ಅಮೆರಿಕನ್ ಸುದ್ದಿ ಛಾಯಾಗ್ರಾಹಕ ಕೆವಿನ್ ಕಾರ್ಟರ್ ಅವರು ತೆಗೆದಿದ್ದ ಒಂದು ಛಾಯಾಚಿತ್ರ ಎಬ್ಬಿಸಿದ್ದ ವಿವಾದದ ಅಲೆ. ಬರಗಾಲದ ಭೀಕರ ದೃಶ್ಯಗಳನ್ನು ಸೆರೆಹಿಡಿಯುತ್ತ
ಹೋದ ಕೆವಿನ್‌ಗೆ ಒಂದೆಡೆ ಸಾವಿನ ಅಂಚಿನಲ್ಲಿದ್ದ ಹಸಿದ ಬಾಲಕಿಯೊಬ್ಬಳು ಕಾಣಸಿದ್ದಳು. ಇನ್ನೂ ಪ್ರಾಣ ಹೋಗಿರದ ಅಸಹಾಯ ಸ್ಥಿತಿಯಲ್ಲಿದ್ದ ಅವಳು ಕೊನೆಯುಸಿರೆಳೆಯುವುದನ್ನೇ ಕಾಯುತ್ತಿದೆಯೆಂಬಂತೆ, ರಣ ಹದ್ದೊಂದು ಅವಳ ಪಕ್ಕದಲ್ಲೇ ಕುಳಿತಿತ್ತು. ಕೆವಿನ್ ಅವರು ಸೆರೆ ಹಿಡಿದ ಈ ಹೃದಯವಿದ್ರಾವಕ ಛಾಯಾಚಿತ್ರ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾಗಿ, ಕೆವಿನ್ ಕಾರ್ಟರ್ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೂ ಪಾತ್ರರಾದರು. ಬಹುಶಃ ಈ ಐತಿಹಾಸಿಕ ಛಾಯಾಚಿತ್ರ, 1970ರ ಆದಿಭಾಗದಲ್ಲಿ ಸಮರಕ್ಷುಬ್ಧ ವಿಯೆಟ್ನಾಂನಲ್ಲಿ ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಒಂದಷ್ಟು ಮಕ್ಕಳು ಭೀತಿಯಿಂದ ಕಿರುಚುತ್ತ ಓಡುತ್ತಿದ್ದುದನ್ನು ದಾಖಲಿಸಿರುವ ಇನ್ನೊಂದು ಪ್ರಶಸ್ತಿ ವಿಜೇತ ಛಾಯಾಚಿತ್ರಕ್ಕೆ ಸರಿದೊರೆಯೆನಿಸುವ ಕಲಾಕೃತಿ.
ಆದರೆ ಸುಡಾನ್‌ನಲ್ಲಿ ಅಂದು ಕೆವಿನ್ ಕಾರ್ಟರ್, ಸಾಯ ಹೊರಟಿದ್ದ ಆ ಹೆಣ್ಣುಮಗುವಿನ ಚಿತ್ರವನ್ನು ಕ್ಯಾಮರಾದಲ್ಲಿ ಸೆರೆಹಿಡಿದ ಬಳಿಕ, ಆಕೆಯನ್ನು ಹಾಗೆಯೇ ಬಿಟ್ಟು ಬಂದುದು ಸರಿಯೇ ಎಂಬ ಪ್ರಶ್ನೆ ಮಾತ್ರ ಬೃಹದಾಕಾರವಾಗಿ ಬೆಳೆದು ವಿಶ್ವಾದ್ಯಂತ ಆ ಬಗ್ಗೆ ದೊಡ್ಡ ಜಿಜ್ಞಾಸೆಯೇ ನಡೆಯಿತು. ಕೆವಿನ್ ಕಾರ್ಟರ್ ಹಲವು ವರ್ಷಗಳ ಕಾಲ ಅಪರಾಧಿ ಪ್ರಜ್ಞೆಯಿಂದ ಬಳಲಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡರು.
ಇಂದು ಕೂಡ ರಾಜಕೀಯ ಪಕ್ಷಗಳು ವಿವಿಧ ಸಂಘಟನೆಗಳು ಪ್ರತಿಭಟನಾ ಪ್ರದರ್ಶನ, ಪಿಕೆಟಿಂಗ್, ಪ್ರತಿಕೃತಿ ದಹನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಪತ್ರಿಕೆಗಳಿಗೆ, ಟಿವಿ ಕಚೇರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿಯೇ ಹೊರಡುತ್ತವೆ. ಈಚಿನ ದಿನಗಳಲ್ಲಿ ಇಂಥ ಆಹ್ವಾನಗಳ ಸ್ವರೂಪ ಬದಲಾಗಿರುವಂತೆ ತೋರಿಬರುತ್ತಿದೆ. ರೋಗಗ್ರಸ್ತ ಮನಸ್ಸಿನ ಮಂದಿ ತಾವೇನು ಮಾಡುತ್ತಾರೋ ಅದಕ್ಕೆಲ್ಲ ಹೆಮ್ಮೆಪಟ್ಟುಕೊಳ್ಳುತ್ತಾರೆ. ಅದಕ್ಕೆ ತಕ್ಕ ಪ್ರಚಾರವನ್ನು ಬಯಸುತ್ತಾರೆ ಎಂಬುದು ಇಂದು ರಹಸ್ಯವಾಗಿಯೇನೂ ಉಳಿದಿಲ್ಲ. ಮಂಗಳೂರಿನ ಘಟನೆಗೆ ಕಾರಣರಾದವರ ಗುಂಪು, "ನೈತಿಕತೆಯ ಹಾದಿಯಿಂದ ಆಚೆಗೆ ಸರಿದ ಹುಡುಗ ಹುಡುಗಿಯರನ್ನು ಸರಿ ಮಾಡುವ' ತನ್ನ ಪ್ರಯತ್ನಕ್ಕೆ ಸರ್ವತ್ರ ಬೆಂಬಲ ವ್ಯಕ್ತವಾಗುವುದೆಂದು ಭಾವಿಸಿತ್ತು. ಟಿವಿ ವರದಿಗಾರರು ಆ ಗುಂಪಿನ ಕೃತ್ಯಕ್ಕೆ ಪ್ರೇರಕರಾಗಿ ನಡೆದುಕೊಂಡರು.
ಮಂಗಳೂರಿನ ಘಟನೆ ದೇಶದಲ್ಲಿ ಸದ್ಯ ಯಾವ ಮಾದರಿಯ ಟಿವಿ ವರದಿಗಾರಿಕೆ ನಡೆಯುತ್ತಿದೆ ಎಂಬುದಕ್ಕೊಂದು ಉದಾಹರಣೆಯಾಗಿ ಸಲ್ಲುತ್ತದೆ. ತೀರಾ ಇತ್ತೀಚೆಗಷ್ಟೇ ಗುವಾಹಟಿಯಲ್ಲಿ ಪತ್ರಕರ್ತನೊಬ್ಬನ ಇಷಾರೆಯ ಮೇರೆಗೆ ಎಂಬಂಥ ರೀತಿಯಲ್ಲಿ ಹುಡುಗಿಯೊಬ್ಬಳ ಮೇಲೆ ರೌಡಿಗಳ ಗುಂಪೊಂದು ಹಲ್ಲೆ ಮಾಡಿದ ಘಟನೆ ನಡೆಯಿತು. ಅಸ್ಸಾಂನ ಆ ಪತ್ರಕರ್ತನನ್ನೀಗ ಬಂಧಿಸಲಾಗಿದ್ದು, ಟಿವಿ ಚಾನೆಲ್‌ನ ಸಂಪಾದಕರು ಕೂಡ ರಾಜೀನಾಮೆ ನೀಡಿದ್ದೂ ಆಯಿತು.
ನಮ್ಮ ರಾಜ್ಯದಲ್ಲಿ ಕೂಡ ಮಹಿಳೆಯರ ಅಥವಾ ಶಾಲಾ ಹೆಣ್ಣುಮಕ್ಕಳ ಮಾನಹಾನಿಗೆ ಯತ್ನಿಸಿದ ಅಥವಾ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗಳನ್ನು ಗ್ರಾಮಸ್ಥರೇ ಸೇರಿ ಥಳಿಸುವ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ತೋರಿಸುತ್ತಲೇ ಇರುತ್ತವೆ. ಶಾಲಾ ಬಾಲಕಿಯರ ಮೇಲೆ ಅಸಭ್ಯವಾಗಿ ನಡೆದುಕೊಂಡ ಶಿಕ್ಷಕರನ್ನು ಗ್ರಾಮಸ್ಥರೆಲ್ಲ ಸೇರಿ ಹೊಡೆಯುವ ಸುದ್ದಿ ಚಿತ್ರಗಳಂತೂ ದಿನನಿತ್ಯದ ಕಥೆ ಎಂಬಂತಾಗಿದೆ. ಹೀಗೆ ಬೀಳುವ ಏಟನ್ನು ಟಿವಿ ಚಾನೆಲ್‌ಗಳೂ ಪತ್ರಿಕೆಗಳೂ "ಧರ್ಮದೇಟು' ಎಂದೇ ಕರೆಯುವ ಮೂಲಕ ಈ ಹಲ್ಲೆಯನ್ನು ಸಮರ್ಥಿಸುತ್ತವೆ. ಇಂಥ ಸಂದರ್ಭಗಳಲ್ಲಿ ಟಿವಿ ಚಾನೆಲ್‌ಗಳಾಗಲಿ, ಪತ್ರಿಕೆಗಳಾಗಲಿ ಮಾಡಬೇಕಾದ್ದೇನು? ಇಂಥ ಘಟನೆಗಳ ಬಗ್ಗೆ ತನಿಖೆ ನಡೆಸಬೇಕಾದ್ದು ಅವುಗಳ ಕರ್ತವ್ಯ. ಹಾಗೆ ಏಟು ತಿನ್ನುವ ಅಧ್ಯಾಪಕರ ಮೇಲೆ ಇಂಥ ಗಂಭೀರ ಆರೋಪವನ್ನು ಯಾವ ಆಧಾರದಲ್ಲಿ ಹೊರಿಸಲಾಗುತ್ತದೆ? ಧರ್ಮದ ಆಧಾರದಲ್ಲಿ? ಇಲ್ಲವೇ, ಜಾತಿಯ ಆಧಾರದಲ್ಲಿ ಆರೋಪಿ ನಿಜವಾಗಿ ಅಪರಾಧಿಯೇ ಆಗಿದ್ದರೂ ಗ್ರಾಮಸ್ಥರಿಗೆ ಆತನ ಮೇಲೆ ಕೈಮಾಡುವ ಹಕ್ಕಿಲ್ಲ. ಮಂಗಳೂರಿನಲ್ಲಿ ಈ ಹಿಂದೆ 2009ರಲ್ಲಿ ಪಬ್ ಒಂದರ ಮೇಲೆ ದಾಳಿಯ ವೇಳೆ ಹುಡುಗಿಯರ ಮೇಲೆ ಹಲ್ಲೆ ನಡೆದಾಗ ಕೂಡ ಟಿವಿ ಮಂದಿ ಎಲ್ಲವನ್ನೂ ನೇರವಾಗಿ ಚಿತ್ರಿಸಿಕೊಂಡಿದ್ದರು.
ಇನ್ನು, ಪತ್ರಕರ್ತರಿಗೆಂದೇ ವಿಶೇಷ ಹಕ್ಕುಗಳಾಗಲಿ, ಸ್ವಾತಂತ್ರ್ಯವಾಗಲಿ ಇಲ್ಲ ಎಂಬುದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕಾದ ಕಾಲ ಬಂದಿದೆ. ಅವರಿಗೆ ಜನಸಾಮಾನ್ಯರಿಗಿಂತ ಹೆಚ್ಚಿನ ಹಕ್ಕುಗಳಾಗಲಿ, ಅಧಿಕಾರಗಳಾಗಲಿ ಇಲ್ಲ. 1915ರಷ್ಟು ಹಿಂದೆಯೇ ಇಂಗ್ಲೆಂಡ್‌ನ ಪ್ರಿವೀ ಕೌನ್ಸಿಲ್ ಈ ಅಂಶವನ್ನು ಒತ್ತಿ ಹೇಳಿತ್ತು.
ಕ್ರಿಮಿನಲ್‌ಗಳ ಜತೆ ಹೆಜ್ಜೆ ಹಾಕುವ ಪರಿಪಾಠವನ್ನು ಟಿವಿ ವರದಿಗಾರ ಸಿಬಂದಿ ಇನ್ನು ಮುಂದೆ ಕೈಬಿಡಬೇಕು. ಬದಲಿಗೆ, ಸ್ವಂತ ನೆಲೆಯಲ್ಲಿ ತನಿಖಾ ವರದಿಗೆ ಮುಂದಾಗಬೇಕು. ಇಂಗ್ಲಿಷ್ ನಿಯತಕಾಲಿಕೆಯೊಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ, ಖುದ್ದಾಗಿ ನಡೆಸಿದ್ದ "ಕುಟುಕು ಕಾರ್ಯಾಚರಣೆ'ಯ ಫಲಶ್ರುತಿಯಾದ ವರದಿಯನ್ನು ವಿಚಾರಣೆಯ ವೇಳೆ ಅಧಿಕೃತ ಪುರಾವೆಯೆಂದು ಪರಿಗಣಿಸಲಾಯಿತು ಎಂಬುದನ್ನು ತಾವು ಮರೆಯಕೂಡದು. ಮಂಗಳೂರಿನಲ್ಲೂ ಅಷ್ಟೆ, "ಅಲ್ಲಿನ ಹೋಮ್‌ಸ್ಟೇಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ' ಎಂದು, ಸ್ವತಃ ಕಾನೂನನ್ನು ಕೈಗೆತ್ತಿಕೊಂಡ ಸ್ವಘೋಷಿತ "ಜಾಗೃತದಳ'ದ ಮಂದಿ ಹೇಳಿಕೊಳ್ಳುತ್ತಿದ್ದರೆ, ಚಾನೆಲ್ ಮಂದಿ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಮೊದಲು ಪರಿಶೀಲಿಸಿ, ಆಮೇಲಷ್ಟೇ ವರದಿಗಾರಿಕೆಗೆ ಧಾವಿಸಬೇಕಿತ್ತು.