ತೀರ್ಥರಾಮ ವಳಲಂಬೆ | Sep 18, 2010
ಬಹಳ ಹಿಂದಿನ ಕಾಲದಿಂದಲೂ ನಮ್ಮ ದೇಶದಲ್ಲಿ ರಕ್ತ ಸಂಬಂಧ ಇರುವ ಗಂಡು ಹೆಣ್ಣುಗಳ ನಡುವೆ ಮದುವೆ ಸಂಬಂಧವನ್ನು ನಿರ್ಬಂಧಿಸಲಾಗಿತ್ತು. ಅದು ಯಾಕೆ ಹಾಗೆ ಎಂದು ಪ್ರಶ್ನಿಸಿದರೆ ಹಿರಿಯರಲ್ಲಿ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ಹಾಗೆ ಮಾಡುವುದು ಪಾಪ. ಒಂದು ವೇಳೆ ಅಂತಹ ಸಂಬಂಧ ನಡೆದು ಹೋದರೆ ಅವರಿಗೆ ಹುಟ್ಟುವ ಮಕ್ಕಳು ದೋಷಪೂರಿತವಾಗಿರುತ್ತವೆ. ಯಾವುದೇ ಕಾರಣಕ್ಕೂ ಅಂತಹ ಸಂಬಂಧಕ್ಕೆ ಮುಂದಾಗಬೇಡಿ ಎಂದು ಕಳಕಳಿಯಿಂದ ಮನವಿ ಮಾಡುತ್ತಿದ್ದರು.
ಅಂತಹ ತಪ್ಪು ನಡೆಯಬಾರದು ಎಂಬ ಕಾರಣಕ್ಕಾಗಿ ನಮ್ಮ ಪೂರ್ವಜರು ಪ್ರತಿಯೊಂದು ಜಾತಿ, ವರ್ಗ, ಪಂಗಡಗಳ ಜನಗಳಿಗೂ ಅವರ ಕುಟುಂಬ ಮೂಲದ ಆಧಾರದಲ್ಲಿ ಪ್ರತ್ಯೇಕವಾದ ಗೋತ್ರಗಳನ್ನು ಹುಟ್ಟು ಹಾಕಿರುತ್ತಾರೆ. ಒಂದೇ ರಕ್ತ ಮೂಲದ ಗಂಡು ಹೆಣ್ಣುಗಳ ನಡುವೆ ಮದುವೆ ಸಂಬಂಧ ನಡೆಯುವುದನ್ನು ತಪ್ಪಿಸಲು ಅದು ಸಹಕಾರಿಯಾಗುತ್ತಿತ್ತು. ಯಾವುದೇ ಕಾರಣಕ್ಕೂ ಒಂದೇ ಗೋತ್ರದ ಎರಡು ಕುಟುಂಬಗಳ ನಡುವೆ ಮದುವೆ ಸಂಬಂಧ ಬೆಳೆಯದಂತೆ ನಿರ್ಬಂಧಿಸುವ ಹಿರಿಯರ ಉದ್ದೇಶ ಆ ಮೂಲಕ ಸುಲಭವಾಗುತ್ತಿತ್ತು.
ಹಿರಿಯರಿಂದ ಬಂದ ವಿಚಾರಗಳೆಲ್ಲ ಮೂಢನಂಬಿಕೆ ಎಂದು ಮೂಗು ಮುರಿಯುವವರಿಗೂ ಈ ರೀತಿ ರಕ್ತ ಸಂಬಂಧಿಗಳ ನಡುವೆ ಮದುವೆ ನಡೆಸುವ ಧೈರ್ಯ ಇಂದಿಗೂ ಇಲ್ಲ. ಯಾಕೆಂದರೆ ಅಂತಹ ತಪ್ಪು ಹೆಜ್ಜೆ ಇಟ್ಟು ಮುಂದೆ ಪಶ್ಚಾತ್ತಾಪಕ್ಕೊಳಗಾದವರ ಸಾಕಷ್ಟು ಉದಾಹರಣೆಗಳು ಈ ಸಮಾಜದಲ್ಲಿವೆ. ಈ ರೀತಿಯ ನಂಬಿಕೆಯ ಹಿಂದೆ ವೈಜ್ಞಾನಿಕ ಕಾರಣಗಳೇನಾದರೂ ಇರಬಹುದೇ ಎಂದು ಹುಡುಕಾಡಿದ ಕೆಲ ವಿಜ್ಞಾನಿಗಳಿಗೆ ಪೂರ್ವಜರ ಅನುಭವದ ಮಾತಿನ ಹಿಂದಿನ ರಹಸ್ಯವನ್ನು ತಿಳಿಯುವುದು ಕಷ್ಟವಾಗಲಿಲ್ಲ.
ಹಾಗೆ ಹೊರಬಿದ್ದ ರಹಸ್ಯವೇ "ಡಿಎನ್‌ಎ' ಎಂಬ ವಂಶವಾಹಿನಿಯ ಕತೆ. ಇಂದು ಈ ವಂಶವಾಹಿನಿಯ ವಿಜ್ಞಾನ ಅತ್ಯಂತ ಜನಪ್ರಿಯ ಅಧ್ಯಯನ ಸಂಗತಿಯಾಗಿದೆ.
ಡಿ ಆಕ್ಸಿರೈಬೋ ನ್ಯೂಕ್ಲಿಕ್ ಆ್ಯಸಿಡ್ ಅಥವಾ ಡಿಎನ್‌ಎ ಎನ್ನುವುದು ಜೀವಿಗಳಲ್ಲಿನ ಒಂದು ಅನುವಂಶೀಯ ಅಂಶವಾಗಿದೆ. ನಮ್ಮ ಶರೀರದ ಬಹುತೇಕ ಜೀವಕೋಶಗಳಲ್ಲಿ ಈ ಡಿಎನ್‌ಎ ಗಳಿರುತ್ತವೆ ಎನ್ನಲಾಗಿದೆ. ಪುರುಷರ ವೀರ್ಯ ಹಾಗೂ ಸ್ತ್ರೀಯರ ಅಂಡಾಣುಗಳ ಮೂಲಕ ಈ ಡಿಎನ್‌ಎಗಳು ಮುಂದಿನ ಸಂತತಿಗೆ ರವಾನೆಯಾಗುತ್ತವೆೆ. ಈ ಡಿಎನ್‌ಎಗಳಲ್ಲಿ ಸಂಕೇತ ರೂಪದಲ್ಲಿ ಅಡಕವಾಗಿರುವ ಅನುವಂಶೀಯ ಮಾಹಿತಿಗಳು ಮುಂದೆ ಹುಟ್ಟಲಿರುವ ಮಗುವಿನ ಕಣ್ಣು, ಕಿವಿ, ಮೂಗು, ಬಾಯಿ, ತಲೆಕೂದಲು, ಶರೀರದ ಆಕಾರ, ಗಾತ್ರ, ಬಣ್ಣ, ನಡೆನುಡಿ, ಅಭಿರುಚಿ ಮತ್ತಿತರ ಗುಣಲಕ್ಷಣಗಳನ್ನು ನಿರ್ಧರಿಸುತ್ತವೆ. ಜೊತೆಗೆ ಮಗುವಿನ ಶಾರೀರಿಕ, ಮಾನಸಿಕ, ಆರೋಗ್ಯ, ಹಾಗೂ ವೈಚಾರಿಕ ಗಟ್ಟಿತನವನ್ನು ಇದೇ ವಂಶವಾಹಿನಿಗಳು ನಿರ್ಧರಿಸುತ್ತವೆ.
ತಂದೆ ತಾಯಿಯಿಂದ ಪಡೆದು ಬಂದ ತಲಾ 23 ವರ್ಣತಂತುಗಳು (ಕ್ರೋಮೋಸೋಮ್ಸ್) 23 ಜೋಡಿಗಳಾಗಿ ಮಗುವಿನ ರೂಪುರೇಷೆಯನ್ನು ನಿರ್ಧರಿಸುತ್ತವೆ. ಅವುಗಳಲ್ಲಿ ಒಂದು ಜೊತೆ ವರ್ಣತಂತುಗಳು ಮಗುವಿನ ಲಿಂಗ ನಿರ್ಧಾರವನ್ನು ಮಾಡುತ್ತವೆೆ. ಅಂತಹ ನಿರ್ಧಾರ ಸಾಧ್ಯವಾಗುವುದು ಗಂಡಿನ ವೀರಾಯಣುವಿನಿಂದ ಬಂದ ವರ್ಣತಂತುವಿನಿಂದ ಮಾತ್ರ. ಏಕೆಂದರೆ ಸ್ತ್ರೀಯ ಅಂಡಾಣುವಿನಿಂದ ಬಂದ ವರ್ಣ ತಂತುವಿನಲ್ಲಿ ಎರಡೂ ಅಂಶಗಳು xx ಎಂದು ಗುರುತಿಸಲ್ಪಟ್ಟಿದೆ. ಆದರೆ ಪುರುಷ ಮೂಲದ ವರ್ಣತಂತುವಿನಲ್ಲಿ x ಮತ್ತು y ಎಂಬ ಎರಡು ಅಂಶಗಳಿರುವುದರಿಂದ ಅವುಗಳಲ್ಲಿ ಯಾವುದು ಸ್ತ್ರೀಯ xx ವರ್ಣತಂತುಗಳ ಜೊತೆ ಕೈ ಜೋಡಿಸುತ್ತವೆ ಎನ್ನುವುದರ ಆಧಾರದಲ್ಲಿ ಮಗುವಿನ ಲಿಂಗ ನಿರ್ಧಾರವಾಗುತ್ತದೆ. ಸ್ತ್ರೀಯ xx ವರ್ಣತಂತುಗಳ ಜೊತೆ ಪುರುಷನ y ವರ್ಣತಂತು ಸೇರಿದರೆ ಆ ಮಗು ಗಂಡಾಗಿಯೂ, ಸ್ತ್ರೀಯ xx ವರ್ಣತಂತುಗಳ ಜೊತೆ ಪುರುಷನ x ವರ್ಣತಂತುಗಳು ಜೋಡಿಯಾದರೆ ಆ ಮಗು ಹೆಣ್ಣಾಗಿಯೂ ಬೆಳೆದು ಬರುತ್ತದೆ. ಪ್ರತಿ ವರ್ಣತಂತುವಿನಲ್ಲೂ ಸಾವಿರಕ್ಕೂ ಅಧಿಕ ವಂಶವಾಹಿನಿಗಳು (ಎಛಿnಛಿs) ಇರುತ್ತವೆ. ಈ ವಂಶವಾಹಿನಿಗಳ ಗುಂಪನ್ನೇ "ಡಿಎನ್‌ಎ' ಎಂದು ಕರೆಯಲಾಗುತ್ತದೆ. ಬಹುತೇಕ ಎಲ್ಲರಲ್ಲು ಒಂದೇ ರೀತಿಯ ವಂಶವಾಹಿನಿಗಳಿದ್ದು ಕೇವಲ ಶೇ. 1ರಷ್ಟು ಮಾತ್ರ ವಂಶವಾಹಿನಿಗಳಲ್ಲಿ ವ್ಯತ್ಯಾಸ ಇರುತ್ತದೆ ಎನ್ನುತ್ತದೆ ವಿಜ್ಞಾನ. ಎಲ್ಲಾ ಜೀವರಾಶಿಗಳಲ್ಲು ಕಂಡುಬರುವ ಈ ಡಿಎನ್‌ಎ ದ್ರವ್ಯವನ್ನು 1984-85 ರಲ್ಲಿ ಸರ್ ಅಲೆಕ್ ಜೆಫ್ರೀಸ್ ಎಂಬ ವಿಜ್ಞಾನಿಯೊಬ್ಬ ಪ್ರತ್ಯೇಕಿಸಿ ವ್ಯಕ್ತಿ ವ್ಯಕ್ತಿಗೆ ಇರುವ ಭಿನ್ನತೆಯನ್ನು ಗುರುತಿಸಿದ. ಮನುಷ್ಯರ ಡಿಎನ್‌ಎಗಳು ಸುಮಾರು ಮೂರು ಬಿಲಿಯನ್ ಮೂಲಗಳನ್ನು ಹೊಂದಿದ್ದು ಇಬ್ಬರು ವ್ಯಕ್ತಿಗಳಲ್ಲಿನ ವ್ಯತ್ಯಾಸವನ್ನು ಗುರುತಿಸುವುದು ಅಷ್ಟೊಂದು ಸುಲಭ ಸಾಧ್ಯವಿಲ್ಲ.
ಆದರೂ ವಿಜ್ಞಾನಿಗಳು ಅಂತಹ ಸಾಹಸಕ್ಕೆ ಮುಂದಾಗಿದ್ದು ಬಹಳಷ್ಟು ಮಟ್ಟಿಗೆ ಸಫಲರಾಗಿದ್ದಾರೆ.
ಡಿಎನ್‌ಎ ಪರೀಕ್ಷೆಗಳಲ್ಲಿ 2 ವಿಧಗಳಿದ್ದು Rಉಔಕ ಎಂಬ ವಿಧಾನದ ಪರೀಕ್ಷೆಗೆ ತುಸು ಅಧಿಕ ಪ್ರಮಾಣದ ಡಿಎನ್‌ಎಗಳ ಆವಶ್ಯಕತೆ ಇರುತ್ತದೆ. ಆದರೆ ಕಇR ಎನ್ನುವ ಪರೀಕ್ಷೆಗೆ ಅಲ್ಪ ಪ್ರಮಾಣದ ಡಿಎನ್‌ಎಗಳು ಸಾಕಾಗುತ್ತವೆ. ಆದರೆ ಅಂತಹ ಪರೀಕ್ಷೆಯಿಂದ ಕೆಲವೊಂದು ತಪ್ಪುಗಳು ಸಂಭವಿಸುವ ಸಾಧ್ಯತೆಗಳಿರುವುದರಿಂದ ಮೃತ ದೇಹವೊಂದು ಗುರುತು ಹಿಡಿಯಲಾರದಷ್ಟು ವಿರೂಪಗೊಂಡಿರುವ ಸಂದರ್ಭಗಳಲ್ಲಿ ಈ ಕಇR ರೀತಿಯ ಪರೀಕ್ಷೆಯಿಂದ ಆ ಮೃತ ದೇಹದ ಡಿ ಎನ್ ಎ ಪರೀಕ್ಷೆಯಿಂದ ಅದು ಆತನ ಕುಟುಂಬದವರ ಡಿಎನ್‌ಎಯೊಂದಿಗೆ ಹೋಲಿಕೆ ಕಂಡು ಬಾರದೇ ಇರುವ ಸಾಧ್ಯತೆಯೂ ಇದೆ.
ಆದರೆ ಸಾಮಾನ್ಯವಾಗಿ ಯಾವುದೇ ವ್ಯಕ್ತಿಯೋರ್ವನ ಡಿಎನ್‌ಎ ಆತನ ರಕ್ತ ಸಂಬಂಧಿಗಳ ಜೊತೆ ತಾಳೆಯಾಗಲೇ ಬೇಕು. ಸರಿಯಾದ ರೀತಿಯಲ್ಲಿ ಡಿಎನ್‌ಎ ಪರೀಕ್ಷೆ ನಡೆಯಿತು ಎಂದಾದರೆ ಹೆತ್ತವರು ಮತ್ತು ಮಗುವಿನ ನಡುವಿನ ಸಂಬಂಧದ ಸತ್ಯಾಸತ್ಯತೆ ಹೊರಬೀಳಲೇ ಬೇಕು. ಹಾಗಾಗಿ ಇಂದು ಯಾರಾದರೂ ಒಬ್ಬ ಮಗುವೊಂದಕ್ಕೆ ತಂದೆಯಾಗಿದ್ದಲ್ಲಿ ಆತ ಆ ಮಗುವನ್ನು ನನ್ನದಲ್ಲ ಎಂದು ವಾದಿಸಿ ತಪ್ಪಿಸಿಕೊಳ್ಳುವಂತಿಲ್ಲ. ಹಾಗೇನೆ ಹೆಂಗಸೊಬ್ಬಳು ತನ್ನ ಕರುಳ ಕುಡಿಗೆ ಇವನೇ ತಂದೆ ಎಂದು ಅನಗತ್ಯ ಯಾರ ಮೇಲು ಅಪವಾದ ಹೊರಿಸುವಂತಿಲ್ಲ.
ಎರಡು ವಿಭಿನ್ನ ಗೋತ್ರದಿಂದ ಬಂದ ಗಂಡು ಹೆಣ್ಣುಗಳು ಒಂದಾದಾಗ ಹುಟ್ಟುವ ಮಗುವಿನಲ್ಲಿ ವ್ಯತ್ಯಸ್ಥವಾದ ಗುಣ, ನಡತೆ, ಶಾರೀರಿಕ ರೂಪುರೇಷೆಗಳು ಅನುಭವದ ಕೆಲ ಅಂಶಗಳು ಒಂದು ಹೊಸ ರೂಪ ಪಡೆದು ಹೊಸ ತಲೆಮಾರಿನ ಬೆಳವಣಿಗೆಗೆ ನಾಂದಿಯಾಗುತ್ತದೆ. ಆದರೆ ಒಂದೇ ರಕ್ತ ಸಂಬಂಧಿ ಗಂಡು ಹೆಣ್ಣುಗಳು ಬೆರೆತು ಹುಟ್ಟಿದ ಮಗುವಿನಲ್ಲಿ ಬೆಳವಣಿಗೆ ಸೀಮಿತವಾಗುತ್ತದೆ ಅಥವಾ ಕುಂಠಿತಗೊಳ್ಳುತ್ತದೆ. ಆ ಕಾರಣಕ್ಕೆ ಪ್ರಕೃತಿಯೇ ಅಂತಹ ಒಂದು ಸಂಬಂಧ ಸರಿಯಲ್ಲ ಎನ್ನುವುದನ್ನು ತೋರಿಸಿಕೊಡಲು ರಕ್ತ ಸಂಬಂಧಿಗಳ ಸಂಬಂಧದಿಂದ ಹುಟ್ಟಿದ ಮಗುವಿನಲ್ಲಿ ಕೆಲವೊಂದು ದೋಷಗಳನ್ನು ತೋರಿಸಿಕೊಡುತ್ತಿದೆ. ಅದನ್ನು ಗುರುತಿಸಿದ ಪೂರ್ವಜರು ಶತಶತಮಾನಗಳಿಂದಲೇ ಸಮಾಜದ ವಿವಿಧ ವರ್ಗದ ಜನರನ್ನು ಕೌಟುಂಬಿಕ ಅಥವಾ ರಕ್ತ ಸಂಬಂಧದ ಆಧಾರದಲ್ಲಿ ವಿವಿಧ ಗೋತ್ರಗಳಾಗಿ ಗುರುತಿಸಿದೆ.
ಮಗುವೊಂದರ ಲಿಂಗ ನಿರ್ಧಾರದಂತೆ ಗೋತ್ರ ನಿರ್ಧಾರದಲ್ಲೂ ತಂದೆಯ ಪಾತ್ರವೇ ನಿರ್ಧಾರಿತವಾಗಿದೆ. ಸಾಮಾನ್ಯವಾಗಿ ತಂದೆಯಿಂದ ಮಕ್ಕಳಿಗೆ ಕುಲ ಗೋತ್ರ ಗುರುತಿಸಲ್ಪಡುತ್ತದೆ. ಹಾಗಾಗಿ ವ್ಯಕ್ತಿಯೊಬ್ಬ ತನ್ನ ಸೋದರರ ಮಕ್ಕಳೊಂದಿಗೆ ತನ್ನ ಮಕ್ಕಳ ವೈವಾಹಿಕ ಸಂಬಂಧ ಬೆಳೆಸುವಂತಿಲ್ಲ. ಆದರೆ ಆತ ತನ್ನ ಒಡಹುಟ್ಟಿದ ಸಹೋದರಿಯರ ಮಕ್ಕಳೊಂದಿಗೆ ತನ್ನ ಮಕ್ಕಳ ಮದುವೆ ಮಾಡುವುದನ್ನು ಈ ಸಮಾಜ ಮೊದಲಿನಿಂದಲೂ ರೂಢಿ ಇಟ್ಟುಕೊಂಡಿದೆ. ಇಂದು ವಿಜ್ಞಾನವು ಈ ರೀತಿಯ ರಕ್ತ ಸಂಬಂಧಿಗಳ ನಡುವಿನ ಮದುವೆ ಸಂಬಂಧ ಸರಿಯಾಗಿ ಕೂಡಿಬರುವುದಿಲ್ಲ, ಅಂತಹ ಸಂಬಂಧಗಳಿಂದ ಹುಟ್ಟಬಹುದಾದ ಮಗುವಿನ ದೈಹಿಕ ಕ್ಷಮತೆ ದೋಷಪೂರಿತವಾಗಿರುವ ಸಾಧ್ಯತೆ ಇದೆ ಎಂದು ವಿವರಿಸುತ್ತದೆ.
ಏನೇ ಆದರೂ ಈ ಬದುಕು ರೂಪಿಸುವಲ್ಲಿ ನಮ್ಮ ಪೂರ್ವಜರು ಸಾಕಷ್ಟು ಚಾಣಾಕ್ಷತನವನ್ನು ತೋರಿದ್ದರು ಎನ್ನುವುದು ತಿಳಿದು ಬರುತ್ತದೆ. ಹಾಗಿದ್ದರೂ ಈ ಸಮಾಜದ ಚರಿತ್ರೆಯಲ್ಲಿ ಅವಕಾಶ ಸಿಕ್ಕಾಗಲೆಲ್ಲ ಗಂಡಸರು ಸತ್ಯವನ್ನು ಅದುಮಿಟ್ಟು ಹೆಂಗಸರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದೂ ಇದೆ. ಹುಟ್ಟಿದ ಮಕ್ಕಳು ನನ್ನ ರಕ್ತದ ಕುಡಿ ಎಂದು ಆ ಮಕ್ಕಳ ಹೆಸರಿನ ಮುಂದೆ ತನ್ನ ಹೆಸರನ್ನು ಹಾಗೇನೆ ಕುಲ ಗೋತ್ರ ಜಾತಿ ಇತ್ಯಾದಿಗಳನ್ನು ಸೇರಿಸುವ ಬಹಳಷ್ಟು ತಂದೆಯರು ಆ ಮಕ್ಕಳು ನನಗೆ ಹುಟ್ಟಿದವು ಎನ್ನತ್ತಲೇ ಎಲ್ಲಾದರು ತನಗೆ ಸತತ ಹೆಣ್ಣುಮಕ್ಕಳೇ ಹುಟ್ಟಿದಲ್ಲಿ ಅದಕ್ಕೆ ತನ್ನ ಪತ್ನಿಯೇ ಕಾರಣ ಎಂದು ದೂಷಿಸುವುದು ಇದೆ. ಅಂತಹ ಮೂಢನಂಬಿಕೆ ಇಂದಿಗೂ ರೂಢಿಯಲ್ಲಿದೆ. ಅದೇ ರೀತಿ ಗಂಡು ಹೆಣ್ಣೆಂಬ ತಾರತಮ್ಯವೂ ಈ ಸಮಾಜದಲ್ಲಿ ಗಟ್ಟಿಯಾಗಿ ನೆಲೆಯಾಗಿದೆ. ಅಂತಹ ನಂಬಿಕೆಯಿಂದ ಈ ಸಮಾಜ ಹೊರಬರಬೇಕಾಗಿದೆ.
ನೇರಳೆ ಬಿತ್ತಿ ಪೇರಳೆ ಬೆಳೆಯುವಂತಿಲ್ಲ. ಹುಟ್ಟುವ ಮಗು ಗಂಡೊ ಹೆಣ್ಣೋ ಎನ್ನುವುದಕ್ಕೆ ಪೂರ್ತಿಯಾಗಿ ಮಗುವಿನ ತಂದೆಯೇ ಕಾರಣನಾಗುತ್ತಾನೆ. ಅಂತಹ ಒಂದು ಸತ್ಯದ ಅರಿವು ಇದ್ದಲ್ಲಿ ಅದೆಷ್ಟೊ ಸಹೋದರಿಯರ ಮೇಲೆ ನಡೆಯುವ ದೂಷಣೆ ತಪ್ಪಬಹುದು.