Saturday, May 18, 2013
Last Updated: 11:57:52 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಡಿಕೆ ಮಂಡಳಿ: ಕ್ಯಾಂಪ್ಕೊ ವಿರೋಧ
    • ಪುತ್ತೂರಿನ ಕ್ಯಾಂಪ್ಕೋ ಶಾಖೆಯಲ್ಲಿ ಸದಸ್ಯ ಬೆಳೆಗಾರರ ಸಂಪರ್ಕ ಸಭೆ

      • Udayavani | Aug 01, 2012

        ಪುತ್ತೂರು: ಕಾಫಿ ಮಂಡಳಿಯ ಮಾದರಿಯಲ್ಲಿ ಅಡಿಕೆ ಮಂಡಳಿ ರಚನೆ ಪ್ರಸ್ತಾವನೆಯನ್ನು ಅಡಿಕೆ ಬೆಳೆಗಾರರ ಸಹಕಾರ ಸಂಸ್ಥೆ ಕ್ಯಾಂಪ್ಕೋ ಸ್ಪಷ್ಟವಾಗಿ ವಿರೋಧಿಸುತ್ತಿದ್ದು, ಅಡಿಕೆ ಮಂಡಳಿ ಅಸ್ತಿತ್ವಕ್ಕೆ ಬಂದರೆ ಕಾಂಪ್ಕೋ ಮತ್ತು ಬೆಳೆಗಾರರು ಅಡಿಕೆ ಮಾರುಕಟ್ಟೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಪ್ರತಿಷ್ಠಿತ ಸಹಕಾರ ಸಂಸ್ಥೆ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು.

        ಪುತ್ತೂರಿನ ಕ್ಯಾಂಪ್ಕೋ ಶಾಖೆಯಲ್ಲಿ ಸದಸ್ಯ ಬೆಳೆಗಾರರ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಡಿಕೆ ಬೆಳೆ ಸ್ಥಿರೀಕರಣಕ್ಕೆ ಕ್ಯಾಂಪ್ಕೋ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಮುಂದಿನ ವರ್ಷದಿಂದ ಕ್ಯಾಂಪ್ಕೋಗೆ ಅಡಿಕೆ ಮಾರಿದ ಬೆಳೆಗಾರರಿಗೆ ಕೆ.ಜಿ.ಯೊಂದರ 1.50 ರೂ.ಗಳಂತೆ ಪ್ರೋತ್ಸಾಹಧನ, 15 ಶೇ. ಲಾಭಾಂಶವನ್ನು ನೀಡುವ ಕುರಿತು ಈ ಬಾರಿಯ ಮಹಾ ಸಭೆಯಲ್ಲಿ ಪ್ರಕಟಿಸಲಾಗುವುದು ಎಂದರು.

        ಆರ್ಥಿಕವಾಗಿ ಬಲಿಷ್ಠವಾಗಿರುವ ಕ್ಯಾಂಪ್ಕೋ ಸಂಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಲು ಸದಸ್ಯರ ಸಹಕಾರ ಅತೀ ಅಗತ್ಯವಾಗಿದ್ದು, ಕ್ಯಾಂಪ್ಕೋ 100 ಕೋಟಿ ರೂ. ಮೀಸಲು ನಿಧಿ ಮತ್ತು ಸದಸ್ಯರಿಂದ ಸಂಗ್ರಹಿಸಿದ 26 ಕೋಟಿ ರೂ. ಶೇರು ಬಂಡವಾಳವನ್ನು ಹೊಂದಿದ್ದು, ಪ್ರಾಮಾಣಿಕ ಮತ್ತು ದಕ್ಷತೆಯ ಆಡಳಿತದಿಂದ ಈ ವರ್ಷ ಅಡಿಕೆ ವ್ಯವಹಾರದಲ್ಲಿ ಕ್ಯಾಂಪ್ಕೋ 41 ಕೋಟಿ ರೂ. ಲಾಭ ಗಳಿಸಲು ಕಾರಣವಾಯಿತು ಎಂದರು.

        990 ಕೋಟಿ ರೂ. ವಾರ್ಷಿಕ ವ್ಯವಹಾರ

        ಕ್ಯಾಂಪ್ಕೋ ಕಳೆದ ಸಾಲಿನಲ್ಲಿ 990 ಕೋಟಿ ರೂ. ವಾರ್ಷಿಕ ವ್ಯವಹಾರ ಮಾಡಿದೆ. 662 ಕೋಟಿ ರೂ.ಗಳ ಒಟ್ಟು ಅಡಿಕೆ ವ್ಯವಹಾರ ನಡೆಸಿದೆ. ಕ್ಯಾಂಪ್ಕೋ ಚಾಕಲೇಟು ಫಾಕ್ಟರಿ ಕಳೆದ ಸಾಲಿನಲ್ಲಿ 14,802 ಟನ್‌ ಚಾಕಲೇಟು ಉತ್ಪಾದಿಸಿದೆ. ಇದರಲ್ಲಿ ಶೇ. 60ರಷ್ಟು ಪ್ರಮಾಣ ಕ್ಯಾಂಪ್ಕೋ ಚಾಕಲೇಟುಗಳ ಉತ್ಪಾದನೆಯಾಗಿದೆ. ಕಾರ್ಖಾನೆಯ ಆಧುನೀಕರಣಕ್ಕಾಗಿ 21 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಈ ಮೂಲಕ ವಾರ್ಷಿಕ 3,600 ಟನ್‌ ಚಾಕಲೇಟು ಉತ್ಪಾದನೆಯನ್ನು ಹೆಚ್ಚಳಗೊಳಿಸುವ ಸಾಮರ್ಥ್ಯವನ್ನು ಸಂಸ್ಥೆಯ ಕಾರ್ಖಾನೆ ಪಡೆದಿದೆ ಎಂದು ಕ್ಯಾಂಪ್ಕೋದ ಆಡಳಿತ ನಿರ್ದೇಶಕ ಸುರೇಶ್‌ ಭಂಡಾರಿ ತಿಳಿಸಿದರು.

        ವೇದಿಕೆಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷ ಕಳಾರು ಸತೀಶ್ಚಂದ್ರ ಭಂಡಾರಿ, ಚಾಕಲೇಟು ಕಾರ್ಖಾನೆಯ ಉಪ ಮಹಾ ಪ್ರಬಂಧಕ ಕೃಷ್ಣ ಕುಮಾರ್‌ ಉಪಸ್ಥಿತರಿದ್ದರು.
        ಪ್ರಸ್ತಾವನೆಗೈದ ಕಾಂಪ್ಕೋ ನಿರ್ದೇಶಕ ಸಂಜೀವ ಮಠಂದೂರು ಮಹಾಸಭೆಗೆ ಪೂರ್ವಭಾವಿಯಾಗಿ 17 ಕಡೆ ಸದಸ್ಯರ ಸಭೆಯನ್ನು ಆಯೋಜಿಸಿ ಅಭಿಪ್ರಾಯಗಳನ್ನು ಕ್ರೂಢೀಕರಿಸಲಾಗುವುದು ಎಂದರು. ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಕೃಷ್ಣಮೂರ್ತಿ ವಂದಿಸಿದರು. ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಮತ್ತು ಸಲಹೆಗಳಿಗೆ ಅಧ್ಯಕ್ಷರು ಉತ್ತರಿಸಿದರು.

        ಉದಯವಾಣಿಗೆ ಶ್ಲಾಘನೆ

        ಈ ಬಾರಿಯ ಅಡಿಕೆ ಮಾರುಕಟ್ಟೆಯಲ್ಲಿ ಬೆಳೆಗಾರರ ಪರ ವರದಿ ಪ್ರಕಟಿಸುವ ಮೂಲಕ ಅಡಿಕೆ ಬೆಳೆಗಾರರಿಗೆ ನ್ಯಾಯಯುತ ಧಾರಣೆ ಸಿಗುವಂತೆ ಉದಯವಾಣಿ ಪತ್ರಿಕೆ ಪ್ರಯತ್ನಿಸಿದೆ. ಕ್ಯಾಂಪ್ಕೋ ಮಾಡುವ ಪ್ರಯತ್ನಗಳನ್ನು ಉದಯವಾಣಿ ಕೂಡಾ ಮಾಡಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮುಕ್ತ ಕಂಠದಿಂದ ಶ್ಲಾಘಿಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus