ಮಂಗಳೂರು: ಪಡೀಲ್‌ನಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ವಿರುದ್ಧ ಕ್ರಮ ಕೈಗೊಂಡು ಅದನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿ ಡಾ| ಎನ್.ಎಸ್. ಚನ್ನಪ್ಪ ಗೌಡ ಅವರಿಗೆ ಪಡೀಲ್ ಕಾರ್ಪೊರೇಟರ್ ಮೋಹನ್ ಪಡೀಲ್ ನೇತೃತ್ವದಲ್ಲಿ ಪಡೀಲ್ ಬದ್ಲಗುಡ್ಡೆ ನಿವಾಸಿಗಳು ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರಿಗೂ ಮನವಿ ಸಲ್ಲಿಸಲಾಯಿತು. ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮಹಾನಗರ ಪಾಲಿಕೆ, ಅಥವಾ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದಾಗಲಿ ಯಾವುದೇ ಪರವಾನಿಗೆ ಪಡೆದಿರುವುದಿಲ್ಲ. ಸರಕಾರದ ಕಾನೂನು ಹಾಗೂ ನೀತಿನಿಯಮಗಳ ವಿರುದ್ಧವಾಗಿ ಇದು ಕಾರ್ಯಾಚರಿಸುತ್ತಿದೆ. ಜನವಸತಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಇಲ್ಲಿ ನಿರಂತರ ಧ್ವನಿವರ್ಧಕಗಳನ್ನು ಬಳಸಿ, ಅವಧಿ ಮೀರಿ ಮೋಜುಮಸ್ತಿ ಕೂಟ ಜರಗುತ್ತಿದೆ. ಅಶ್ಲೀಲ ವರ್ತನೆಗಳು ನಡೆಯುತ್ತವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.