ಮೋಹನ ಕುಮಾರ್ ಪಡೀಲ್ ಮಂಗಳೂರು ಪಾಲಿಕೆ ಸದಸ್ಯ | Aug 02, 2012
ಸಂದರ್ಶನ : ಗಿರೀಶ್ ಬಾಬು
ಮಂಗಳೂರಿನ ಪಡೀಲ್ ಬಳಿಯ ಹೋಮ್ ಸ್ಟೇಯಲ್ಲಿ ಪಾರ್ಟಿ ಮಾಡುತ್ತಿದ್ದ ಯುವತಿಯರ ಮೇಲೆ ನಡೆದ ನೈತಿಕ ಪೊಲೀಸರ ಹಲ್ಲೆ ಇದೀಗ ಇಡೀ ದೇಶದಲ್ಲಿ ಕುಖ್ಯಾತಿ ಪಡೆದಿದೆ. ಮಂಗಳೂರಲ್ಲಿ ತಾಲೀಬಾನೀ ಸಂಸ್ಕೃತಿ ಬೇರು ಬಿಡುತ್ತಿದೆ ಎಂದು ಬೊಬ್ಬೆಯೆದ್ದಿದೆ. ವಿದ್ಯಾರ್ಥಿನಿಯರ ಮೇಲೆ ನಡೆದ ಅಮಾನುಷ ಹಲ್ಲೆಯನ್ನು ಯಾರೂ ಸಮರ್ಥಿಸಿಕೊಳ್ಳಲಾಗದು. ಆದರೆ, ಇಂತಹ ಘಟನೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯೇ ಆಗಾಗ ಏಕೆ ಪಕ್ಕಾಗುತ್ತಿದೆ ಎಂಬ ಪ್ರಶ್ನೆ ಮಾತ್ರ ಪ್ರಜ್ಞಾವಂತರನ್ನು ಕಾಡುತ್ತಿದೆ. ಈ ಘಟನೆಯ ಹಿಂದೆ ರಾಜಕೀಯ ಕಾರಣಗಳನ್ನು ಹುಡುಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ಘಟನೆಯ "ಮಾಸ್ಟರ್ ಮೈಂಡ್' ಎಂಬ ಆರೋಪಕ್ಕೆ ಒಳಗಾಗಿರುವ ಸ್ಥಳೀಯ ಕಾರ್ಪೋರೇಟರ್ ಮೋಹನ್ ಪಡೀಲ್ ಅವರು ಈ ಹೋಮ್ ಸ್ಟೇ ಗದ್ದಲ ಹಾಗೂ ಅದರ ಹಿಂದಿನ ಕಾರಣಗಳ ಬಗ್ಗೆ ನೇರಾನೇರ ಮಾತನಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಾಗ ಯಾಕೆ ವಿದ್ಯಾರ್ಥಿಗಳ ಮೇಲೆ "ನೈತಿಕ ಪೊಲೀಸರ' ದಾಳಿಯಾಗುತ್ತೆ?
- ನೋಡಿ, ಹೊರಗಿನಿಂದ ಬಂದ ವಿದ್ಯಾರ್ಥಿಗಳು ನಮ್ಮ ಊರಿನಲ್ಲಿ ಫ್ರೀಯಾಗಿ ಇದ್ದೇವೆ ಅಂತ ಇಲ್ಲಿ ಏನೇನೋ ಮಾಡಲು ಹೋಗುತ್ತಾರೆ. ಅದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಯಾವಾಗಲೂ ಮೂಲ ನಿವಾಸಿಗಳ ಜೀವನ ಶೈಲಿಯನ್ನು ಹೊರಗಿನವರು ಬಂದು ಹಾಳು ಮಾಡುವಾಗ ಪ್ರತಿರೋಧ ಇರುತ್ತದೆ. ನಮ್ಮ ಮನೆಯ ಮಕ್ಕಳು ಹಾಳಾಗಬಾರದು ಎಂಬುದು ಇಲ್ಲಿನ ಬಹುಸಂಖ್ಯಾತ ಜನರ ಕಾಳಜಿ. ಹೀಗಾಗಿ ಈ ಘಟನೆ ನಡೆದಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು.
ಹೋಮ್ ಸ್ಟೇ ದಾಳಿಗೆ ನಿಮ್ಮ ಕುಮ್ಮಕ್ಕು ಇದೆಯಂತೆ?
- ಪಡೀಲ್‌ನಲ್ಲಿ ಒಂದು ಹೋಮ್ ಸ್ಟೇ ಇದೆ. ಇಲ್ಲಿ ರಾತ್ರಿ ಮೂರು ಗಂಟೆವರೆಗೆ ಡಾನ್ಸ್, ಮ್ಯೂಸಿಕ್ ಹಾಕುತ್ತಾರೆ ಅಂತ ಎಂಟು ತಿಂಗಳ ಹಿಂದೆ ಈ ಹೋಮ್ ಸ್ಟೇ ಬಗ್ಗೆ ನೆರೆಹೊರೆಯವರು ನನಗೆ ದೂರು ನೀಡಿದ್ದರು. ಆಗ ನಾನು ನಮ್ಮ ಪ್ರದೇಶದ ಕೆಲ ಹಿರಿಯರೊಂದಿಗೆ ತೆರಳಿ ಆ ಹೋಮ್ ಸ್ಟೇಯವರಿಗೆ ಎಚ್ಚರಿಕೆ ಕೊಟ್ಟು ಬಂದಿದ್ದೆ. ಆದರೆ, ಮೊನ್ನೆ ಘಟನೆ ನಡೆದ ದಿನ ರಾತ್ರಿ ನಾನು ಐಯ್ಯಪ್ಪ ಸ್ವಾಮಿ ಕಾರ್ಯಕ್ರಮವೊಂದಕ್ಕೆ ತೆರಳಲು ಬಟ್ಟೆ ಇಸಿŒ ಮಾಡಿಕೊಳ್ಳುತ್ತಿದ್ದೆ. ಆಗ ನನಗೆ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ತೆರಳಿದೆ. ಆ ವೇಳೆಗಾಗಲೇ ರಾದ್ದಾಂತ ಮುಗಿದುಹೋಗಿತ್ತು. ಆದರೆ, ನೆರೆಹೊರೆಯವರು ಸೇರಿದಂತೆ ದೊಡ್ಡ ಗುಂಪು ಇನ್ನೂ ಅಲ್ಲಿತ್ತು. ಆಗ ನಾನು ಅಲ್ಲಿ ಸೇರಿದ್ದ ಜನರನ್ನು ಸಮಾಧಾನಪಡಿಸಿ ಅವರನ್ನು ಸ್ಥಳದಿಂದ ತೆರಳುವಂತೆ ಹೇಳುತ್ತಿದ್ದೆ. ಆದರೆ, ಗುಂಪು ಕೇಳುತ್ತಿರಲಿಲ್ಲ. ಆ ವೇಳೆಗೆ ಅಲ್ಲಿಗೆ ಪೊಲೀಸ್ ಕಮಿಷನರ್ ಬಂದರು. ಆಗ ಗುಂಪಿನಲ್ಲಿದ್ದ ಒಬ್ಬ ಕಮಿಷನರ್‌ಗೆ ಬೈಯ್ದ. ಇದರಿಂದ ಪೊಲೀಸರು ಸಿಟ್ಟಾದರು. ಈ ಸಂದರ್ಭದಲ್ಲಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಆರಂಭಿಸಿದರು. ನನ್ನ ನೆರೆಮನೆಯವರಿಗೆ ಒಬ್ಬ ಪೊಲೀಸ್ ಹೊಡೆಯಲು ಹೋದ. ಅದನ್ನು ನಾನು ತಡೆಯಲು ಮುಂದಾದೆ. ಲಾಠಿ ಚಾರ್ಜ್ ಏಕೆ ಮಾಡುತ್ತೀರಿ. ಜನರೇನೂ ನಿಮ್ಮ ವಾಹನಗಳಿಗೆ ಬೆಂಕಿ ಇಟ್ಟರಾ? ಅಥವಾ ಕಲ್ಲು ಹೊಡೆದರಾ? ಎಂದು ನಾನು ಪೊಲೀಸರನ್ನು ಪ್ರಶ್ನಿಸಿದ್ದು ನಿಜ. ಅಷ್ಟಕ್ಕೆ ಎಸಿಪಿಯೊಬ್ಬರು ನನ್ನ ಕಾಲರ್ ಹಿಡಿದು ಎಳೆದಾಡಿದರು. ಆಗ ಮತ್ತೆ ಜನರು ಗದ್ದಲ ಮಾಡಿದರು. ಅನಂತರ ಪೊಲೀಸರು ನನ್ನನ್ನು ಬಂಧಿಸಿದರು. ಆದರೆ, ನನ್ನ ಏರಿಯಾ ಜನ ಪೊಲೀಸ್ ಠಾಣೆ ಬಳಿ ಬಂದು ಪ್ರತಿಭಟನೆ ನಡೆಸಿದ ನಂತರ ನನ್ನನ್ನು ಬಿಟ್ಟರು. ಇದಿಷ್ಟು ವಾಸ್ತವ.
ನೀವೇ ಈ ಘಟನೆಯ "ಮಾಸ್ಟರ್ ಮೈಂಡ್' ಅಂತೆ?
- ಇಂತಹ ಆರೋಪ ಮಾಡುವವರು ದಕ್ಷಿಣ ಕನ್ನಡದ ಯಾವುದೇ ಪವರ್‌ಫುಲ್ ದೇವಸ್ಥಾನಕ್ಕೆ ಬೇಕಾದರೂ ಬರಲಿ. ಅಲ್ಲಿ ನಾನು ಪ್ರಮಾಣ ಮಾಡಲು ಸಿದ್ಧ. ನನಗೂ ಈ ಘಟನೆಗೂ ಸಂಬಂಧವೇ ಇಲ್ಲ. ನಾನು ಕೆಟ್ಟವನಾಗಿದ್ದರೆ, ಮೊನ್ನೆ ವಿಧಾನಸಭೆಯಲ್ಲಿ ಕಾಂಗ್ರೆಸ್‌ನವರು ನನ್ನ ಏಕೆ ಸಪೋರ್ಟ್ ಮಾಡುತ್ತಿದ್ದರು?
ಹಾಗಾದರೆ, ಈ ದಾಳಿಗೆ ನಿರ್ದಿಷ್ಟ ಕಾರಣವೇನು?
- ನೋಡಿ, ನನ್ನ ಏರಿಯಾ ಮಂಗಳೂರು ಸಿಟಿಯಿಂದ 11 ಕಿ.ಮೀ ದೂರದಲ್ಲಿದೆ. ಆ ಹೋಮ್ ಸ್ಟೇ ಇರೋದು ಅತ್ಯಂತ ಇಂಟರೀಯರ್ ಪ್ರದೇಶದಲ್ಲಿ. ಘಟನೆ ನಂತರ ನಾನು ಆ ಹೋಮ್‌ಸ್ಟೇಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರೊಂದಿಗೆ ತೆರಳಿದ್ದೆ. ಅಲ್ಲಿ ನೋಡಿದರೆ ಪ್ರತಿಯೊಂದು ರೂಮ್‌ನಲ್ಲೂ ಮಂಚ-ಹಾಸಿಗೆ ಇದೆ. ಆ ಹೋಮ್‌ಸ್ಟೇನಲ್ಲಿ ಇದ್ದ ಫ್ರಿಡ್ಜ್ನಲ್ಲಿ ಹಾಟ್ ಡ್ರಿಂಕ್ಸ್, ಬಿಯರ್ ಬಾಟಲಿ ಹಾಗೂ ಕೋಕೋ ಕೋಲಾ ಎಲ್ಲಾ ಇತ್ತು. ಅದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಇಷ್ಟಕ್ಕೂ ಅಲ್ಲಿ ಬರ್ತ್ ಡೇ ಪಾರ್ಟಿ ನಡೆಯಿತು ಅಂತಾರಲ್ಲ. ಹಾಗಿದ್ದರೆ ಅಲ್ಲಿ ಕೇಕ್ ಏಕೆ ಇರಲಿಲ್ಲ? ಬರ್ತ್ ಡೇ ಪಾರ್ಟಿ ಹೇಗೆ ಮಾಡುತ್ತಾರೆ? ಮನೆಯವರು, ಗೆಳೆಯರು ಎಲ್ಲಾ ಸೇರಿ ಮಾಡುತ್ತಾರೆ? ಅದನ್ನು ಬಿಟ್ಟು ರಿಮೋಟ್ ಏರಿಯಾದಲ್ಲಿ ಇರೋ ಹೋಮ್ ಸ್ಟೇದಲ್ಲಿ ಅರೆ ಬರೆ ಬಟ್ಟೆ ಹಾಕಿಕೊಂಡು, ಶರ್ಟು ಬಿಚ್ಚಿಕೊಂಡು ಸಭ್ಯಸ್ಥರು ಇಂತಹ ಪಾರ್ಟಿ ಮಾಡುತ್ತಾರಾ?
ಹೇಗೆ ಪಾರ್ಟಿ ಮಾಡಬೇಕು ಅಂತ ಹೇಳಲು ನೀವ್ಯಾರು?
- ನಿಜ. ಅದು ಅವರವರ ವೈಯಕ್ತಿಕ ವಿಚಾರ. ಆದರೆ, ಅವರ ವೈಯಕ್ತಿಕ ವಿಚಾರಗಳು ಸಭ್ಯ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ. ಆ ಪಾರ್ಟಿಯಲ್ಲಿ ಇದ್ದ ಹುಡುಗಿಯರು ವಿದ್ಯಾರ್ಥಿನಿಯರು. ಆದರೆ, ಹುಡುಗರು ಸೂxಡೆಂಟ್ಸ್ ಅಲ್ಲ. ಆ ವಿದ್ಯಾರ್ಥಿನಿಯರು ಹಾಕಿಕೊಂಡಿದ್ದ ಡ್ರೆಸ್ ನೋಡಿದ್ದೀರಾ? ವಿದ್ಯಾರ್ಥಿಗಳು ಕುಡಿತದಲ್ಲಿ, ಧೂಮಪಾನದಲ್ಲಿ ತೊಡಗುವುದು ಎಷ್ಟು ಉಚಿತ ನೀವೇ ಹೇಳಿ. ಹೋಮ್ ಸ್ಟೇಯನ್ನು ಅವರು ಎರಡು ದಿನ ಬುಕ್ ಮಾಡಿದ್ದರಂತೆ. ಬರ್ತ್ ಡೇ ಪಾರ್ಟಿ ಮಾಡಲು 2 ದಿನ ಏಕೆ ರೂಮ್ ಬುಕ್ ಮಾಡಬೇಕು?
ಅದು ಅವರು ಹಾಗೂ ಅವರ ಪಾಲಕರ ಇಷ್ಟ. ಆದರೆ, ಈ ಪರಿ ಹುಡುಗಿಯರಿಗೆ ಮನ ಬಂದಂತೆ ಹೊಡೆಯಬೇಕಾ?
- ಇಲ್ಲ. ನಾನು ಇಂಥ ದಾಳಿಯನ್ನು ಖಂಡಿತ ಒಪ್ಪುವುದಿಲ್ಲ. ಮಹಿಳೆಯರ ಮೇಲೆ ಹಲ್ಲೆ ಮಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಒಂದು ವೇಳೆ ಅಲ್ಲಿ ಅನೈತಿಕವಾದದ್ದು ನಡೆದಿದೆ ಎಂದರೆ ಬಾಗಿಲು ಬೀಗ ಹಾಕಿ ಪೊಲೀಸರನ್ನು ಕರೆಸಬೇಕಿತ್ತು. ಒಂದು ವೇಳೆ ನಮ್ಮ ಅಕ್ಕ-ತಂಗಿಯರು ಅಂತಹ ಕೃತ್ಯದಲ್ಲಿ ಭಾಗಿಯಾಗಿದ್ದರೆ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಹೊಡೆಯಬಹುದು. ಆದರೆ, ಪಬ್ಲಿಕ್‌ನಲ್ಲಿ ಹೊಡೆಯೋದು ತಪ್ಪು.
ಹಾಗಿದ್ದರೆ, ದಾಳಿಕೋರಿಗೆ ಯಾವ ಶಿಕ್ಷೆಯಾಗಬೇಕು?
- ಅದನ್ನು ನಾನೆಂಥಾ ಹೇಳುವುದು? ಕಾನೂನಿನಂತೆ ನಡೆಯುತ್ತದೆ.
ಈ ಅಕ್ರಮ ಹೋಮ್ ಸ್ಟೇಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತವೆ ಅಂತ ನಿಮಗೆ ಗೊತ್ತಿದ್ದರೂ ನೀವು ಯಾವುದೇ ಕಾನೂನು ಕ್ರಮ ಜರುಗಿಸಲಿಲ್ಲ ಏಕೆ?
- ಈ ಹೋಮ್ ಸ್ಟೇಯಲ್ಲೂ ಇಂತಹ ಚಟುವಟಿಕೆಗಳು ನಡೆಯುತ್ತೇ ಅಂತಾ ನನಗೆ ಈ ದಾಳಿ ಘಟನೆಯ ನಂತರವೇ ಗೊತ್ತಾಗಿದ್ದು. ಅಲ್ಲಿ ಹಿಂದೆ ಒಂದು ಮೆಹಂದಿಗೆ ನಾನು ಹೋಗಿದ್ದೆ. ಆಗ ನನಗೆ ಗೊತ್ತಿರಲಿಲ್ಲ. ಎಂಟು ತಿಂಗಳ ಹಿಂದೆ ಅಲ್ಲಿ ರಾತ್ರಿ ಮ್ಯೂಸಿಕ್ ಹಾಕ್ತಾರೆ ಅಂತ ನೆರೆಹೊರೆಯವರು ದೂರಿದ್ದರು. ಆಗ ಎಚ್ಚರಿಕೆ ಕೊಟ್ಟಿದೆ. ಈಗ ಈ ಘಟನೆ ನಡೆದ ನಂತರ ಅಲ್ಲಿಗೆ ಬೈಕ್‌ನಲ್ಲಿ ಹುಡುಗ-ಹುಡುಗಿಯರು ಬರುತ್ತಿದ್ದರು. ಏನೇನೋ ನಡೆಯುತ್ತೆ ಅಂತ ಹೇಳ್ತಾರೆ. ಮೊದಲೇ ಗೊತ್ತಿದ್ದರೆ ಇದಕ್ಕೆ ನಾನು ಕಡಿವಾಣ ಹಾಕುತ್ತಿದ್ದೆ. ಈ ಕುರಿತು ಸ್ಥಳೀಯರು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಏನು ಪ್ರಯೋಜನವಾಯಿತು ನೀವೇ ಹೇಳಿ. ಈಗ ಗದ್ದಲ ಇಡೀ ರಾಜ್ಯದ ಕಣ್ ತೆರೆಸಿದೆ ಅಷ್ಟೇ.
ಕರಾವಳಿ ತಾಲಿಬಾನೀಕರಣಗೊಳ್ಳುತ್ತಿದೆ ಎಂದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳಲಾಗುತ್ತಿದೆ?
- ಇದು ತೀರಾ ಅತಿಯಾದ ಅಪಪ್ರಚಾರ. ಪರಿಸ್ಥಿತಿ ಅಷ್ಟೊಂದು ಹದಗೆಟ್ಟಿಲ್ಲ. ದಕ್ಷಿಣ ಕನ್ನಡ ತಾಲೀಬಾನೀಕರಣ ಆಗಬಾರದು ನಿಜ. ಆದರೆ, ನಾವು ನಮ್ಮ ಮನೆ ಹೇಗಿದೆಯೋ ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಇರಬೇಕು ಎಂದು ಭಾವಿಸುವವರು. ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ, ಅದನ್ನು ತಡೆಯಬೇಕಾಗುತ್ತದೆ. ರಾಜಕೀಯಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಾರೆ. ಅದಕ್ಕೆ ಯಾರು ಏನು ಮಾಡಲು ಸಾಧ್ಯ?
ಮಕ್ಕಳು ಕೆಟ್ಟರೆ, ಅದನ್ನು ನೋಡಿಕೊಳ್ಳುವ ಹೊಣೆ ಹೊರಲು ಪೋಷಕರಿದ್ದಾರೆ. ಅದನ್ನು ಕೇಳಲು ನೀವ್ಯಾರು?
- ಮಕ್ಕಳು ಹೊರಗೆ ಹೋಗಿ ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳಲು ಎಲ್ಲಾ ಪೋಷಕರಿಗೂ ಸಾಧ್ಯವೇ? ಹೊರಗೆ ವಿದ್ಯಾರ್ಥಿಗಳು ಅನೈತಿಕ ಚಟುವಟಿಕೆ ನಡೆಸುವುದನ್ನು ಗಮನಿಸಲು ಎಂದೇ ಕೆಲವೊಂದು ಸಂಘಟನೆಗಳು ಹುಟ್ಟಿಕೊಂಡಿವೆ. ನಿಮಗೆ ನಿಜ ಹೇಳುತ್ತೇನೆ. ಇಂತಹ ಸಂಘಟನೆಗಳ ಹೆದರಿಕೆಯಿಂದ ಅವ್ಯವಹಾರ ಹಾಗೂ ಅಶ್ಲೀಲ ಘಟನೆಗಳು ಕಂಟ್ರೋಲ್ ಆಗುತ್ತಿದೆ.
ಅಂದ್ರೆ ನೈತಿಕ ಪೊಲೀಸ್‌ಗೆ ನಿಮ್ಮ ಬೆಂಬಲವಿದೆ?
- ಸಂಘಟನೆಗಳು ಇಂತಹ ಘಟನೆಗಳ ಬಗ್ಗೆ ಕಣ್ಗಾವಲು ಇಡುವುದು ಸರಿ. ಆದರೆ, ಹೊಡೆಯುವುದು ಹಿಂಸೆ ಮಾಡುವುದು ಸರಿಯಲ್ಲ ಇಂತಹ ಚಟುವಟಿಕೆ ಕುರಿತು ಪೊಲೀಸರಿಗೆ ಮಾಹಿತಿ ನೀಡಬೇಕು.
ಇಂದಿನ ಯುವ ಜನಾಂಗ ಬಯಸುವ ಸ್ವತಂತ್ರಕ್ಕೆ"ನೈತಿಕ ಪೊಲೀಸ್‌ಗಿರಿ'ಯ ತಡೆಯೊಡ್ಡುವುದು ಎಷ್ಟು ಸರಿ?
- ಸ್ವತಂತ್ರ ಬೇಕು ನಿಜ. ಆದರೆ, ಯಾವುದಕ್ಕೆಲ್ಲಾ ಸ್ವತಂತ್ರ ಇರಬೇಕು. ಸಂಸ್ಕೃತಿ ಹಾಗೂ ಕಾನೂನು ಬದ್ಧ ಚಟುವಟಿಕೆಗಳನ್ನು ನಡೆಸಲು ಸ್ವತಂತ್ರ ಇರಬೇಕು. ಆದರೆ, ಸಂಸ್ಕೃತಿ ವಿರುದ್ಧವಾಗಿ ನಡೆದುಕೊಂಡು ನನಗೆ ಸ್ವತಂತ್ರ ಇದೆ ಏನು ಬೇಕಾದರೂ ಮಾಡುತ್ತೇನೆ ಎಂದರೆ ಒಪ್ಪುವುದು ಸರಿಯೇ? ನನ್ನ ಪ್ರಕಾರ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಾಮಾಜಿಕ ನಡವಳಿಕೆ ಹೇಳಿಕೊಡಬೇಕು. ದೇಶ, ದೇವರು, ಹಿರಿಯರ ಬಗ್ಗೆ ಭಯ ಭಕ್ತಿ ಮೂಡಿಸಬೇಕು. ಆಗ ಮಕ್ಕಳು ದಾರಿ ತಪ್ಪುವುದಿಲ್ಲ. ಆಗ ಇಂತಹ ಘಟನೆ ನಡೆಯುವುದಿಲ್ಲ. ಭಾರತದಂತಹ ಅಭಿವೃದ್ಧಿಶೀಲ ದೇಶಕ್ಕೆ ಇಂತಹ ಸಂಸ್ಕೃತಿಯ ಅಗತ್ಯವಿದೆ. ಪಾರ್ಟಿ ಹಾಗೂ ಮೋಜಿನ ಸಂಸ್ಕೃತಿಯಲ್ಲ.
ಆದರೆ, ನಿಮ್ಮ ಈ ಧೋರಣೆ ಹಾಗೂ ನೈತಿಕ ಪೊಲೀಸರ ವಿರುದ್ಧ ಮಂಗಳೂರಿನ ಯುವ ಜನಾಂಗ ಸಿಡಿದೆದ್ದಿಯಲ್ಲ?
- ಇಲ್ಲ, ಅದು ಕೆಲವೇ ಕಾಲೇಜುಗಳು ನಡೆಸಿದ ಪ್ರತಿಭಟನೆ ಮಾತ್ರ. ಎಲ್ಲಾ ಕಾಲೇಜುಗಳು ಹಾಗೂ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿಲ್ಲ. ಈ ಜಿಲ್ಲೆಯ ಬಹುತೇಕ ಯುವ ಜನಾಂಗ ಅನೈತಿಕ ಹಾಗೂ ಸ್ವೇಚ್ಛಾಚಾರಕ್ಕೆ ಬೆಂಬಲ ನೀಡುವುದಿಲ್ಲ. ನಿಮಗೆ ಮಂಗಳೂರಿನ ನಿಜವಾದ ನೆಲದ ಗುಣ ಗೊತ್ತಿಲ್ಲ.
ಬದಲಾವಣೆ ಜಗದ ನಿಯಮ ಎನ್ನುತ್ತಾರೆ. ದಕ್ಷಿಣ ಕನ್ನಡ ಬದಲಾಗಲು ಹಿಂಜರಿಯುತ್ತಿದೆಯೇ?
- ಇಂತಹ ಚಟುವಟಿಕೆ ನಡೆಯುವುದೇ ಬದಲಾವಣೆ ಎಂದರೆ ಅದನ್ನು ಬೇರೆ ಊರುಗಳಲ್ಲಿ ಒಪ್ಪಿಕೊಳ್ಳಬಹುದು. ಆದರೆ, ಧರ್ಮ ನೆಲೆಸಿರುವ, ಅಡಿಗಡಿಗೂ ಭೂತಾರಾಧನೆ, ದೇವಾರಾಧನೆ ನಡೆಯುವ ಜಿಲ್ಲೆಯಿದು. ಇಲ್ಲಿ ಅಂತಹದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಕರಾವಳಿಯಲ್ಲಿ ಅಕ್ರಮ ಹೋಮ್ ಸ್ಟೇ ಹೆಚ್ಚುತ್ತಿವೆಯೇ?
- ಹಾಗಂತ ನನಗೂ ಅನಿಸುತ್ತಿದೆ. ಏಕೆಂದರೆ, ಹೋಮ್ ಸ್ಟೇ ನಡೆಸಲು ಪರವಾನಿಗೆಯೇ ಇವರಿಗೆ ನೀಡಲಾಗಿಲ್ಲ. ಮನೆಯೊಂದನ್ನು ಕಟ್ಟಿಕೊಂಡು ಅಲ್ಲಿ ಇಂತಹ ಚಟುವಟಿಕೆ ನಡೆಸುತ್ತಿದ್ದಾರೆ. ಏಕೆಂದರೆ, ಒಂದು ಬಾರಿ ಹೋಮ್ ಸ್ಟೇ ಎಂದು ಘೋಷಿಸಿಕೊಂಡರೆ ಕಮರ್ಷಿಯಲ್ ಟಾಕ್ಸ್ ಕಟ್ಟಬೇಕಾಗುತ್ತದೆ. ಹೀಗಾಗಿ ಇವೆಲ್ಲಾ ಅಕ್ರಮ ಹೋಮ್ ಸ್ಟೇಗಳು. ಇಲ್ಲೆಲ್ಲಾ ಅವ್ಯವಹಾರಗಳು ನಡೆಯುತ್ತವೆ. ಅದನ್ನು ಪೊಲೀಸರು ಇನ್ನಾದರೂ ಹದ್ದುಬಸ್ತಿಗೆ ತರಬೇಕು. ಈ ಘಟನೆಯಿಂದ ಎಲ್ಲರೂ ಪಾಠ ಕಲಿಯಬೇಕು.