Wednesday, May 22, 2013
Last Updated: 6:32:56 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹೆಣ್ಣಿಗಿಲ್ಲವೆ ವರ್ತಮಾನ?
    • ಹೆಣ್ಣಿಗಿಲ್ಲವೆ ವರ್ತಮಾನ...

      • ಚಂದ್ರಕಲಾ ನಂದಾವರ | Aug 03, 2012

        ಎರಡು ಮುಖ್ಯ ಸಂಗತಿಗಳನ್ನು ಇಲ್ಲಿ ಗಮನಿಸಬೇಕಾಗಿದೆ. ಒಂದು, ಮಂಗಳೂರಿನಲ್ಲಿ ನಡೆದ ಹೋಂಸ್ಟೇ ದಾಳಿಯನ್ನು ವಿರೋಧಿಸುವವರ ಮಾತುಗಳು. ಎರಡು, ಅದನ್ನು ಸಮರ್ಥಿಸುವವರ ವಾದ ಕ್ರಮ. ಈ ಎರಡರಲ್ಲಿಯೂ ಹೆಣ್ಣು ಒಂದು ಪ್ರತ್ಯೇಕ ಚರ್ಚೆಯ ವಸ್ತುವಾಗಿರುವುದು ಪ್ರಧಾನ ಅಂಶ. ಹುಡುಗಿಯರಿಗೂ ಸ್ವಾತಂತ್ರ್ಯವಿಲ್ಲವೆ, ಹುಡುಗರು ಸ್ವೇಚ್ಛೆಯಿಂದ ವ್ಯವಹರಿಸುವಾಗ ಅವರದ್ದು ಮಾತ್ರ ಹೇಗೆ ತಪ್ಪಾಗುತ್ತದೆ ಎಂದು ಒಂದು ವರ್ಗ ಆಕ್ಷೇಪಿಸಿದರೆ ಇನ್ನೊಂದು ವರ್ಗ ಹೇಳುವುದೇ ಬೇರೆ. ಹುಡುಗಿಯರಿಗೆ ಕೊಂಚವೂ ಸ್ವಯ ಇರಲಿಲ್ಲವಾ, ಅವರು ಯಾಕೆ ಹಾಗೆ ಡ್ರೆಸ್‌ ಮಾಡಬೇಕು, ಆದರೂ ದಾಳಿ ಮಾಡಿದವರು ಅವರ ಮೇಲೆ ಕೈ ಮಾಡಿದ್ದು ತಪ್ಪು... ಹೀಗೆ.

        ಉಳಿದ ವಿಷಯಗಳೇನೇ ಇರಲಿ, ಆದರೆ, ಹೀಗೆ ಮಾತನಾಡು ತ್ತಲೇ ಹೆಣ್ಣು ಐದಾರು ದಶಕಗಳ ಹಿಂದಕ್ಕೆ ತಳ್ಳಲ್ಪಡುತ್ತಿರುತ್ತಾಳೆ.


        ಹೆಣ್ಣಿಗೆ ಬಹು ಸುಂದರವಾದ, ಶ್ರೇಷ್ಠವಾದ, ಗೌರವದಿಂದ ಕೂಡಿದ ಸ್ಥಾನಮಾನಗಳಿತ್ತು  ಎನ್ನುವ ಈ ದೇಶದಲ್ಲಿ  ವರ್ತಮಾನ ಇದೆಯೇ ಎಂಬ ಪ್ರಶ್ನೆ ಸದಾ ಕಾಡುತ್ತಿರುವುದು ಸುಳ್ಳಲ್ಲ . ಹಾಗೆಯೇ ಈ ಪ್ರಶ್ನೆಯನ್ನು  ಹುಟ್ಟುಹಾಕುತ್ತಲೇ ಇರುವ ಘಟನೆಗಳು ಸುಶಿಕ್ಷಿತ, ಸಾಂಸ್ಕೃತಿಕ, ಧಾರ್ಮಿಕ ಮಹಣ್ತೀವುಳ್ಳ  ದಕ್ಷಿಣಕನ್ನಡ   ಜಿಲ್ಲೆಯಲ್ಲಿ  ನಡೆಯುತ್ತಿರುವುದನ್ನು  ಗಮನಿಸಿದರೆ ನಮ್ಮ  ಜಿಲ್ಲೆ  ಇವೆಲ್ಲವುಗಳನ್ನು  ಮರೆತು ಅರ್ಥಹೀನ ವಾಣಿಜ್ಯ  ಜಿಲ್ಲೆಯಾಗುತ್ತಿರುವುದು ಸತ್ಯ.

        ಶೈಕ್ಷಣಿಕ ಕ್ಷೇತ್ರದಲ್ಲಿ  ದಾಪುಗಾಲಿಡುತ್ತಿರುವ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಭಾರೀ ಬೇಡಿಕೆ ದೇಶ-ವಿದೇಶಗಳಿಂದ ಇರುವ ಈ ಕಾಲಘಟ್ಟದಲ್ಲಿ   ಜಾಗತೀಕರಣ, ಖಾಸಗೀಕರಣದ ಹಿನ್ನೆಲೆಯಲ್ಲಿ  ನಮ್ಮ  ದೃಷ್ಟಿಕೋನಗಳು ಆಧುನಿಕತೆಯ ಹಿನ್ನೆಲೆಯಲ್ಲೂ  ವಿವೇಚನೆಗೆ ಒಳಗಾಗದೆ ತಳಮಟ್ಟದಲ್ಲಿ  ಅನಗತ್ಯವಾದ ಭಯೋತ್ಪಾದನೆಯನ್ನು  ಉಂಟುಮಾಡುತ್ತಿರುವುದು  ನಮ್ಮ  ಹೆಣ್ಣುಮಕ್ಕಳನ್ನು  ಮತ್ತೆ  ಹೊಸ್ತಿಲಿಂದ ಹೊರಗೆ ಕಾಲಿಡದಂತೆ, ಅಡುಗೆ ಮನೆಗೆ ಮೀಸಲಾಗುವಂತೆ ಮಾಡುವ ಸಂಸ್ಕೃತಿ ಯಾವ ಧರ್ಮದ ಫ‌ಲಶ್ರುತಿ ? ಇಂದಿನ ರಾಜಕಾರಣದಲ್ಲಿ  ಧರ್ಮವಿರದೆ, ಧರ್ಮದೊಳಗೆ ಕಾಜಕಾರಣ ಮಾಡುವ ಆ ತಂತ್ರಗಾರಿಕೆಯಲ್ಲಿ  ಮತ್ತೆ  ಮತ್ತೆ  ಹೆಣ್ಣನ್ನೇ ಬಲಿ ನೀಡುತ್ತಿರುವ ಹುನ್ನಾರ ಸರ್ವಾಧಿಕಾರದ ಫ‌ಲಶ್ರುತಿ ಅಥವಾ ಮೂರ್ಖತನದ ಪರಮಾವಧಿ. ಇಲ್ಲಿ  ನಡೆಯುತ್ತಿರುವ ವಿದ್ಯಮಾನಗಳಲ್ಲಿ  ನೇರವಾಗಿ ನರಳುವ ಹೆಣ್ಣಿನಂತೆಯೇ ಗಂಡು ಕೂಡ ನರಳುತ್ತಿದ್ದಾನೆ. ಸಂಕಟ, ತಲ್ಲಣಗಳನ್ನು  ಅನುಭವಿಸುತ್ತಿದ್ದಾನೆ ಎನ್ನುವುದು  ಶೌರ್ಯದ, ಧೈರ್ಯದ ಮುಖವಾಡ ಹೊತ್ತ ಪುರುಷವರ್ಗಕ್ಕೆ ಅರಿವಾಗದಿರುವುದು ಶೋಚನೀಯ. ಈ ದುರವಸ್ಥೆ  ಇಂದಿನ ಯುವಜನತೆಗೆ ಒದಗಿರುವುದು ರಾಜಕಾರಣದ ಅಧರ್ಮದ  ಫ‌ಲಶ್ರುತಿ. ಕೌಟುಂಬಿಕ ಜವಾಬ್ದಾರಿ ತಿಳಿಯದ, ಧರ್ಮ, ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ  ಎನ್ನುವ ಹೆಸರಲ್ಲಿ  ಶಿಕ್ಷಣದ ಹಾದಿಯನ್ನು  ಅರ್ಧದಲ್ಲೇ ಬಿಟ್ಟು ಬಂದು ನಿರುದ್ಯೋಗಿಗಳಾಗಿರುವ ದೊಡ್ಡ  ದೊಡ್ಡ  ಯುವಕರ ತಂಡಗಳಿಗೆ ಧರ್ಮ ರಕ್ಷಣೆಯ, ಧರ್ಮ ಜಾಗೃತಿಯ, ಶೌರ್ಯ ಧೈರ್ಯದ ಠಕ್ಕು  ಹೆಸರುಗಳು. ಅಧಿಕಾರದ ಗದ್ದುಗೆ ಪಡೆಯಲು ನೆರವಾದ ಈ ತಂಡಗಳು ಈಗ ನಿರುದ್ಯೋಗಿಗಳು. ಅಂಥವರಿಗೆ ಕೊಡಮಾಡಿರುವ ಗುಪ್ತ ಉದ್ಯೋಗಗಳ ಪರಿಣಾಮಗಳೇ ನಾವು ಇಂದು ಕಾಣುತ್ತಿರುವ ಹೆಣ್ಣಿನ ವರ್ತಮಾನವನ್ನು  ಕಸಿದುಕೊಳ್ಳುವ ಘಟನೆಗಳು. ಕುಟುಂಬದೊಳಗಿನ ದೌರ್ಜನ್ಯಗಳಿಂದ ತೊಡಗಿ, ಸಾಮಾಜಿಕವಾಗಿಯೂ ಅವು ಪ್ರಕಟಗೊಳ್ಳುತ್ತಿರುವ ಪ್ರಕ್ರಿಯೆಗಳು ಮಾತ್ರ ದಿಗ್ಭ್ರಮೆ ಹುಟ್ಟಿಸುತ್ತವೆ.

        ಸಂಸ್ಕೃತಿಯ ರಕ್ಷಕರಿಗೆ ಸಂಸ್ಕೃತಿ ಶ್ರೇಷ್ಠವಾದುದು ಎಂಬ ನಂಬಿಕೆ ದೃಢವಾಗಿದ್ದರೆ ಅದನ್ನು  ರಕ್ಷಿಸಲು ಬಾಹ್ಯ ಶಕ್ತಿಗಳ ಅಗತ್ಯವಿಲ್ಲ  ಎಂಬ ಅರಿವೂ ಇರಬೇಕಲ್ಲವೆ? ಸಂಸ್ಕೃತಿ ಧರ್ಮಗಳ ರಕ್ಷಣೆಯಲ್ಲಿ  ಹಿಂಸೆ, ಕ್ರೌರ್ಯಗಳು ವಿಜೃಂಭಿಸುವುದಾದರೆ, ಅಂತಹ ಅಮಾನವೀಯ ಸಂಸ್ಕೃತಿ, ಧರ್ಮ ಶ್ರೇಷ್ಠವಾಗಲು ಹೇಗೆ ಸಾಧ್ಯ ? ಸನಾತನ ಸಂಸ್ಕೃತಿಯಲ್ಲಿ  ಹೆಣ್ಣಿನ ಸ್ಥಾನಮಾನಗಳ ಕುರಿತಾಗಿ ಶ್ರೇಷ್ಠವಾದ ವಿಚಾರಗಳಿವೆ ಎನ್ನುವವರಿಗೂ ಆಕೆಗೆ  ಆಕೆಯದ್ದೇ  ಆದ ಹಕ್ಕುಗಳನ್ನು , ಸ್ವಾತಂತ್ರ್ಯವನ್ನು  ನೀಡಲಾಗದಿರುವ ಇಂದಿನ ವಸ್ತುಸ್ಥಿತಿ ನಮ್ಮ  ಧರ್ಮದ, ಸಂಸ್ಕೃತಿಯ ವಿಡಂಬನೆ ಅಲ್ಲವೇ? ಇತ್ತೀಚಿನ ದಿನಗಳಲ್ಲಿ  ನಡೆಯುತ್ತಿರುವ ಹೆಣ್ಣುಮಗುವಿನ ಭ್ರೂಣಹತ್ಯೆ, ಬಾಲ್ಯವಿವಾಹ, ಹೆಣ್ಣುಮಕ್ಕಳ ಮಾರಾಟ, ಯುವತಿಯರ ನಾಪತ್ತೆ, ಮಹಿಳೆಯರ ಆತ್ಮಹತ್ಯೆ, ಅಪ್ರಾಪ್ತ  ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ, ಮರ್ಯಾದಾ ಹತ್ಯೆಗಳು, ಪಬ್‌ ದಾಳಿ, ಯುವಜನತೆಯ ಸಂತಸದ ಕ್ಷಣಗಳನ್ನು  ಹೊಸಕಿ ಹಾಕಿರುವ ಮೊನ್ನೆಮೊನ್ನೆಯಷ್ಟೇ ನಡೆದ ಬರ್ತ್‌ಡೇ ಪಾರ್ಟಿಯ ಮೇಲಿನ ದಾಳಿಗಳು ಏನನ್ನು  ಸೂಚಿಸುತ್ತವೆ ? ಇಷ್ಟೇ ಸಾಲದೆನ್ನುವಂತೆ ಶಿಕ್ಷಣ ಪಡೆಯುತ್ತಿರುವ ಹೆಣ್ಣುಮಕ್ಕಳು ಶಾಲಾ -ಕಾಲೇಜುಗಳಿಗೆ ಹೋಗದಂತೆ, ಉದ್ಯೋಗಕ್ಕೆ  ಸೇರದಂತೆ, ನೀಡುವ ಮಾನಸಿಕ, ದೈಹಿಕ ಹಿಂಸೆಗಳು ದಾಖಲಾಗದೇ ಉಳಿದು ಹೆಣ್ಣಿನ ಸಬಲೀಕರಣವನ್ನು  ಮೂಲದಲ್ಲೇ ಹೊಸಕಿಬಿಡುವ ಅದೆಷ್ಟೋ ಸಂದರ್ಭಗಳು ವರ್ತಮಾನದಲ್ಲಿ  ನಿತ್ಯವೆನ್ನುವಂತೆ ನಡೆಯುತ್ತಿರುವುದು ಯಾರಿಗೂ ತಿಳಿಯದ ರಹಸ್ಯವೇನೂ ಅಲ್ಲ . ಇವೆಲ್ಲವೂ ಇಂದಿನ ಪುರುಷ ಸಮಾಜದ ಬಹುತೇಕ  ಮನಸ್ಸುಗಳ ಅವಿವೇಕವನ್ನು , ಮೂರ್ಖತೆಯನ್ನು, ವಿಕೃತ ಕಾಮವನ್ನು , ಅಹಂಕಾರ ಪ್ರತಿಷ್ಠೆಗಳನ್ನು , ಅಸೂಯೆಯನ್ನು  ಪ್ರಕಟಿಸುವ ರೀತಿಗಳು ತಮ್ಮ  ತಮ್ಮ  ಮನೆಯ ಹೆಣ್ಣುಮಕ್ಕಳ  ಶಿಕ್ಷಣದ ಹಕ್ಕನ್ನು  ಕಿತ್ತುಕೊಳ್ಳುವ, ಅವರ ಅರಿವಿನ ದಾರಿಗೆ ಬೇಲಿ ಹಾಕುವ ಮೂಲಕ ಹೆಣ್ಣನ್ನು  ತೊತ್ತನ್ನಾಗಿಯೇ ಉಳಿಸುವ ವ್ಯವಸ್ಥೆ  ಒಂದೆಡೆಯಾದರೆ, ಉನ್ನತ ವಿದ್ಯಾಭ್ಯಾಸ ಮಾಡುವ ಹೆಣ್ಣುಮಕ್ಕಳ ಬದುಕಿನ ಶೈಲಿಯನ್ನು  ಪ್ರಶ್ನಿಸುವ, ಪ್ರತಿಭಟಿಸುವ ಮೂಲಕ ಸಂಸ್ಕೃತಿಯ, ಧರ್ಮದ ರಕ್ಷಣೆ ಮಾಡಲು ನೈತಿಕ ಹೊಣೆ ಹೊತ್ತಿರುವ ಬಹುತೇಕ ಯುವ ಜನಾಂಗ ವಿಜೃಂಭಿಸುತ್ತಿರುವುದು ಇಂದಿನ ರಾಜಕಾರಣದ ಹಿನ್ನೆಲೆಯಲ್ಲಿ  ಎನ್ನುವುದು ರಾಜಕೀಯದ ನೈತಿಕ ಅಧಃಪತನಕ್ಕೆ  ಸಾಕ್ಷಿ.  ಇಂತಹ ಯುವಜನಾಂಗಕ್ಕೆ  ತಮ್ಮ  ಬದುಕಿನ ಭವಿಷ್ಯಕ್ಕೆ  ವಿಕಾಸದ ಹಾದಿ ಇಲ್ಲ  ಎನ್ನುವ ನಿರಾಶೆ, ಉತ್ತಮ ಉದ್ಯೋಗಾವಕಾಶಗಳಿಲ್ಲದಿರುವ ಅಭದ್ರತೆ, ಆರ್ಥಿಕ ಸಬಲತೆಯ ಕೊರತೆಗಳಿಂದಾಗಿ ಕತ್ತಲು ಕವಿದ ಭವಿಷ್ಯಕ್ಕೆ  ಅಂಜುವ, ಕೀಳರಿಮೆಯಿಂದ ನರಳುವ ಸ್ಥಿತಿ ಉಂಟಾಗಿದೆ. ಆದ್ದರಿಂದಲೇ ಇವರು ಸ್ವಾತಂತ್ರ್ಯದ ಹಕ್ಕಿಗಳಂತೆ ಹಾರಾಡುವ, ಉನ್ನತ ವಿದ್ಯಾಭ್ಯಾಸ ಪಡೆಯುತ್ತಿರುವ, ಉನ್ನತ ಸ್ಥಾನಮಾನಗಳಲ್ಲಿರುವ  ಹೆಣ್ಣುಗಳ ಸುಖ ಸಂತೋಷವನ್ನು  ಕೆಡಿಸುವ ಪ್ರವೃತ್ತಿಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ ಎಂದರೆ ತಪ್ಪಲ್ಲ . ಇಂತಹ ಯುವಕರೇ ಹೆಚ್ಚಾಗಲು ಸಮಾಜದಲ್ಲಿರುವ ಅನಕ್ಷರತೆ, ಅಜ್ಞಾನ, ಬಡತನ, ಮೂಢನಂಬಿಕೆಗಳ ಹಿರಿಯರು ಕಾರಣರಾದಂತೆ, ಇವರನ್ನು  ನೈತಿಕ ಪೊಲೀಸರೆಂದು ಕರೆದು ಗೌರವಿಸುವ ರಾಜಕಾರಣವೂ ಕಾರಣವಲ್ಲವೇ? ಅತ್ಯಾಚಾರ, ಅನಾಚಾರ, ಅಪ್ರಾಮಾಣಿಕತೆ, ಭ್ರಷ್ಟಾಚಾರಗಳನ್ನೇ ತಮ್ಮ  ನಡವಳಿಕೆಯನ್ನಾಗಿಸಿಕೊಂಡ ರಾಜಕಾರಣ ಪಟ್ಟವೇರಲು ಸಾಧ್ಯವಾದುದು ನೈತಿಕ ಪೊಲೀಸರೆನ್ನುವ ದಂಡುಗಳಿಂದಲೇ ಆಗಿರುವುದರಿಂದ ಇವರೆಲ್ಲರೂ ಇಂದು ಉಗುಳಲಾಗದ, ನುಂಗಲಾಗದ ಬಿಸಿತುಪ್ಪವಾಗಿದ್ದಾರೆ ಎಂದರೆ ಸುಳ್ಳಲ್ಲ . ಶಾಲಾ-ಕಾಲೇಜುಗಳ ಬಳಿಯೇ ಬಾರ್‌ ರೆಸ್ಟೋರೆಂಟ್‌ಗಳನ್ನು  ತೆರೆಯಲು ಪರವಾನಗಿ ಕೊಡುವ, ಮಾಧ್ಯಮ ವಾಹಿನಿಗಳ ನಗ್ನ  ಖಾಸಗೀತನಕ್ಕೆ  ಕಡಿವಾಣ ಹಾಕಲಾಗದ, ಮೂಢ‌ನಂಬಿಕೆಗಳ ಮೂಟೆಯನ್ನೇ ದೈವ ಸಾಕ್ಷಾತ್ಕಾರಕ್ಕೆ  ದಾರಿ ಎನ್ನುವ ಈ ವರ್ತಮಾನದಲ್ಲಿ  ನಮ್ಮ  ಸಂವಿಧಾನ ಎನ್ನುವುದು ಅಡವಿಟ್ಟ  ಆಸ್ತಿಯಾಗಿದೆ. ನಮ್ಮ  ಪೊಲೀಸ್‌ ಇಲಾಖೆಯ ನಡವಳಿಕೆ, ರಾಜಕಾರಣಿಗಳ ಸೇವೆ ಮಾಡುವ ಅಧಿಕಾರಿಗಳ ಸೇವಕತನ, ಸರ್ವಾಧಿಕಾರಿ ಧೋರಣೆಯ ಅವಿವೇಕ ರಾಜಕಾರಣ, ಯಥಾ ರಾಜಾ ತಥಾ ಪ್ರಜಾ ಎನ್ನುವ ಯುವಜನತೆ, ಮಾನವೀಯ ಗುಣಗಳುಳ್ಳ  ಹಿರಿಯರ ಜಡತ್ವ , ತಾಟಸ್ಥ é ಗಳೇ ಕಾರಣಗಳಾಗಿ ಹೆಣ್ಣಿನ ವರ್ತಮಾನ ಆತಂಕದ, ತಲ್ಲಣದ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ.

        ಆಧುನಿಕ ಮಹಿಳೆಗೆ ಹಿಂದಿನ ಮಹಿಳೆಯರಿಗೆ ಇದ್ದಂತೆಯೇ ಆತಂಕಗಳ ಸ್ಥಿತಿ ಇದ್ದೇ ಇದೆ. ರೂಪಗಳು ಮಾತ್ರ ಬೇರೆ ಬೇರೆ. ಶಿಕ್ಷಣ, ಆರ್ಥಿಕ ಭದ್ರತೆ, ಉದ್ಯೋಗ, ಇವಿಷ್ಟೇ  ಆಕೆಯ ಸಬಲೀಕರಣಕ್ಕೆ , ಸ್ವರಕ್ಷಣೆಗೆ  ಸಾಲದಾಗಿವೆ. ಆಧುನಿಕ ಬದುಕಿನ ಸಂಕೀರ್ಣತೆಯನ್ನು , ಸ್ವೀಕರಿಸುವುದಕ್ಕೆ , ಅನುಭವಿಸುವುದಕ್ಕೆ   ಆಕೆಯ ಸಂಗಾತಿಯಾದ ಪುರುಷ ಬದಲಾಗಿಲ್ಲ  ಎನ್ನುವ ಅರಿವು ಆಕೆಯ ಎಚ್ಚರದಲ್ಲಿರಬೇಕು. ವಾಸ್ತವವನ್ನು   ಅರಿತುಕೊಳ್ಳುವ ಮತ್ತು  ಅದನ್ನು  ಧನಾತ್ಮಕವಾಗಿ ಬದಲಾಯಿಸಿಕೊಳ್ಳಲು  ಆಕೆಯ ಹೋರಾಟ ಇನ್ನೂ  ಮುಂದುವರಿಯಬೇಕಾಗಿದೆ. ಆಕೆಗೆ  ಸಾಂವಿಧಾನಿಕವಾದ ಹಕ್ಕು , ಕರ್ತವ್ಯಗಳ ಬಗೆಗಿನ ಅರಿವು ಹಿಂದಿಗಿಂತ ಇಂದಿನ ವರ್ತಮಾನದಲ್ಲಿ  ಅನಿವಾರ್ಯವಾದ ಅಗತ್ಯವಾಗಿದೆ. ಹೆಣ್ಣು  ತನ್ನನ್ನು  ತಾನು ಮಾನಸಿಕವಾಗಿ  ಗಟ್ಟಿಗೊಳಿಸಬೇಕಾಗಿದೆ. ಹಾಗೆಯೇ ಇನ್ನೊಬ್ಬ  ಹೆಣ್ಣಿಗೆ  ನೆರವು, ಧೈರ್ಯ, ಸಾಂತ್ವನ ನೀಡಬೇಕಾಗಿದೆ. ಹೆಣ್ಣು   ಗಂಡಿನ ಲಿಂಗ ತಾರತಮ್ಯ ಭಾವಗಳು ನೈತಿಕತೆಯ ಭಿನ್ನ  ನೆಲೆಗಳು. ವಿಲಕ್ಷಣ ರೂಪಗಳೊಂದಿಗೆ  ಆಕೆಯನ್ನು  ಸಾಂವಿಧಾನಿಕ ನೆಲೆಯಲ್ಲಿ  ನಡೆಸುವ ಪರಂಪರೆಯನ್ನು  ಇನ್ನಷ್ಟು  ಸಶಕ್ತವಾಗಿ ಮಾಡಬೇಕಾಗಿದೆ. ಜತೆಗೆ ಈ ಹೋರಾಟವನ್ನು ರಾಜಕೀಯದ ಸೋಂಕಿಲ್ಲದೆ ಹೆಣ್ಣಿನ  ಸಾಮೂಹಿಕ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಬೇಕಾದ ಕೌಶಲ ಹಾಗೂ ತಂತ್ರಗಾರಿಕೆಯನ್ನು  ಹುಟ್ಟುಹಾಕಬೇಕಾಗಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus