ಮೈಥಿಲೀ ಮಿತ್ರಾ | Aug 03, 2012
ಮಹಿಳೆಯರು ಭಾವನಾತ್ಮಕತೆ, ಸಂವೇದನಾಶೀಲತೆ ಹೊಂದಿರುವುದು ಹೆಚ್ಚು . ಮಹಿಳೆಯರಲ್ಲಿ ಸೃಜನಶೀಲತೆ ಮೇಳೈಸಿದಾಗ ಅಡುಗೆಯಲ್ಲೂ , ಅಡುಗೆ ಮನೆಯಲ್ಲೂ ಸೃಜನಶೀಲತೆ ಪಡಿಮೂಡುತ್ತದೆ.
ಅಡುಗೆಯನ್ನು ಕಲಾತ್ಮಕಗೊಳಿಸಲು, ಸುಲಭವಾಗಿಸಲು, ಆರೋಗ್ಯಪೂರ್ಣವಾಗಿಸಲು ಹತ್ತುಹಲವು ಸಲಹೆ ಸೂಚನೆಗಳು ಇಲ್ಲಿವೆ. ಮಹಿಳಾಮಣಿಗಳ ವ್ಯಕ್ತಿತ್ವದ ಮೆರುಗು ಹೆಚ್ಚಿಸಲು ಅಡುಗೆ ಮನೆಯಲ್ಲಿ ಕೌಶಲವೂ ಸಹಕಾರಿ ಅಲ್ಲವೇ?!

.ಚೀಸ್ ತುಂಡುಗಳನ್ನು ಗ್ರೇಟ್ ಮಾಡಿದ (ತುರಿದ) ಬಳಿಕ ಗ್ರೇಟರನ್ನು ಸುಲಭವಾಗಿ ತೊಳೆಯಲು ಹಸಿ ಆಲೂಗಡ್ಡೆಯನ್ನು ಚೀಸ್ ಗ್ರೇಟ್ ಮಾಡಿದ ಬಳಿಕ, ತುರಿದರೆ ಅಂಟಾಗಿರುವ ಚೀಸ್ ಗ್ರೇಟರ್ ಸುಲವಾಗಿ ಶುಭ್ರವಾಗುತ್ತದೆ.
.ಆಲೂಗಡ್ಡೆಯನ್ನು ಸಿಪ್ಪೆ ಸಹಿತ ಉಪಯೋಗಿಸಿದಾಗ ಅದು ವಾತಹರ ಗುಣವನ್ನು ಹೊಂದಿರುತ್ತದೆ. ಜೊತೆಗೆ ಖನಿಜಾಂಶಗಳೂ ಬೇಯಿಸುವಾಗ ನಷ್ಟವಾಗುವುದಿಲ್ಲ. ಆದರೆ ಸಿಪ್ಪೆ ಸಹಿತ ಆಲೂಗಡ್ಡೆಯನ್ನು ಉಪಯೋಗಿಸುವಾಗ ಮೊದಲು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಉಪ್ಪು ನೀರಿನಲ್ಲಿ ನೆನೆಸಿಟ್ಟು ತೊಳೆಯುವುದೂ ಹಿತಕರ. ಬಳಿಕ ಸಿಪ್ಪೆ ಸಹಿತ ಆಲೂಗಡ್ಡೆಯನ್ನು ಹೆಚ್ಚಿ ಅದನ್ನು ಉಪ್ಪು ನೀರಿನಲ್ಲಿ 15 ನಿಮಿಷ ನೆನೆಸಬೇಕು. ಇದರಿಂದ ಆಲೂಗಡ್ಡೆ ಬೇಗನೆ ಬೇಯುತ್ತದೆ. ಜೊತೆಗೆ ಕಂದು ಬಣ್ಣ ಪಡೆಯುವುದಿಲ್ಲ. ಆಲೂಗಡ್ಡೆಯನ್ನು ಬಳಸಿ ಮಾಡುವ ಖಾದ್ಯಗಳಿಗೆ ಇಂಗು ಅಥವಾ ಶುಂಠಿ, ಬೆಳ್ಳುಳ್ಳಿಯ ಪೇಸ್ಟ್ ಇತ್ಯಾದಿಗಳನ್ನು ಬಳಸಿದರೆ ಆಲೂಗಡ್ಡೆಯ ಸೇವನೆಯಿಂದ ಉಂಟಾಗುವ ವಾಯುಪ್ರಕೋಪ ಶಮನವಾಗುತ್ತದೆ. ಬೇಯಿಸಿದ ಆಲೂಗಡ್ಡೆ ಮಲಬದ್ಧತೆಯನ್ನು ಉಂಟುಮಾಡಿದರೆ ಹಸಿ ಆಲೂಗಡ್ಡೆ (ಚಿಕ್ಕದು) ಇಡಿಯಾಗಿ ಸೇವಿಸಿದರೆ ಮಲಬದ್ಧತೆ ನಿವಾರಕ !

.ತೂಕ ಕಡಿಮೆ ಇರುವ ಮಕ್ಕಳಿಗೆ ಮಣ್ಣಿಯ ಜೊತೆಗೆ ಬೇಯಿಸಿದ ಆಲೂಗಡ್ಡೆಯ ತುಂಡನ್ನು , ಸಿಪ್ಪೆ ತೆಗೆದು ಕಿವುಚಿ ನೀಡಿದರೆ ತೂಕವೃದ್ಧಿಯಾಗುತ್ತದೆ. ಅಥವಾ ಬೇಯಿಸಿದ ತೊಗರಿಬೇಳೆಯ ಸಾರನ್ನು ಮಣ್ಣಿಯ ಜೊತೆಗೆ ಬೆರೆಸಿದರೂ ಹಿತಕರ. ಒಂದು ವರ್ಷದ ಬಳಿಕ ಮಕ್ಕಳಿಗೆ ತೂಕ ಕಡಿಮೆ ಇರುವಾಗ 4 ಒಣದ್ರಾಕ್ಷೆ , ಗೋಡಂಬಿ, ಬಾದಾಮಿ 2, ಅಂಜೂರ 1 ಇವೆಲ್ಲವನ್ನೂ ರಾತ್ರಿ ತೊಳೆದು, ನೀರಲ್ಲಿ ನೆನೆಸಿ, ಬೆಳಿಗ್ಗೆ ಆ ನೀರಿನ ಸಹಿತ ಅರೆದು ಬಳಿಕ ಹಾಲು, ಜೇನು ಬೆರೆಸಿ ಕುಡಿಯಲು ನೀಡಿದರೆ ಪುಷ್ಟಿಕರ ಜೊತೆಗೆ ಉತ್ತಮ ಮೆದುಳಿನ ಟಾನಿಕ್ ಕೂಡ ಹೌದು!
.ಘಮಘಮ ಮೆತ್ತನೆಯ ದೋಸೆಯೆಂದರೆ ಪುಟ್ಟ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯಂದಿರಿಗೆಲ್ಲಾ ಅಚ್ಚುಮೆಚ್ಚು.
.ಬೆಚ್ಚಗಿನ ನೀರಲ್ಲಿ ಅಕ್ಕಿಯನ್ನು ನೆನೆಸಿ, ಬಳಿಕ ಎಳೆ ತೆಂಗಿನಕಾಯಿಯ ತುರಿಯನ್ನು ಬೆರೆಸಿ ನೀರುದೋಸೆ (ತೆಳ್ಳಂದೋಸೆ) ತಯಾರಿಸಿದರೆ ತೆಳ್ಳಗಾಗಿಯೂ, ಮೃದುವಾಗಿಯೂ, ರುಚಿಕರವೂ ಆಗಿರುತ್ತದೆ.
.ಉದ್ದಿನ ಬೇಳೆ ಮತ್ತು ಅಕ್ಕಿ ಬೆರೆಸಿ ತಯಾರಿಸಿದ ದೋಸೆ ಹಿಟ್ಟಿಗೆ ರಾತ್ರಿ 1-2 ಚಮಚ ಶುದ್ದ ಎಳ್ಳೆಣ್ಣೆ ಬೆರೆಸಿದರೆ ದೋಸೆ ಮೃದುವಾಗಿ ಪರಿಮಳಯುತವಾಗುತ್ತದೆ.
.ಯಾವುದೇ ದೋಸೆಗೆ ಅರೆಯುವಾಗ ದೋಸೆ ಮೃದುವಾಗಬೇಕಿದ್ದರೆ 1-2 ಚಮಚ ಬೇಯಿಸಿದ ಅನ್ನವನ್ನು ಅರೆಯುವಾಗ ಬೆರೆಸಿದರೆ ದೋಸೆ ಮೃದುವಾಗಿಯೂ ರುಚಿಕರವಾಗಿಯೂ ಇರುತ್ತದೆ.
* ರವಾದೋಸೆ ತಯಾರಿಸುವಾಗ ಸಮಪ್ರಮಾಣದಲ್ಲಿ ರವೆ (ಚಿರೋಟಿ ರವೆ), ಮೈದಾ, ಅಕ್ಕಿಹಿಟ್ಟು ಬೆರೆಸಿದ ದೋಸೆ ತೆಳ್ಳಗೆ, ರುಚಿಕರವಾಗಿರುತ್ತದೆ. ಇದಕ್ಕೆ ಜೀರಿಗೆ, ಕೊತ್ತಂಬರಿ ಸೊಪ್ಪು , ಈರುಳ್ಳಿ , ಹಸಿಮೆಣಸು ಅರೆದು ಬೆರೆಸಿದರೆ ಇನ್ನಷ್ಟು ರುಚಿಕರ!
* ಮಕ್ಕಳಿಗಾಗಿಯೇ ಗ್ರೀನ್ ದೋಸೆ ಇಲ್ಲಿದೆ! ಮಳೆಗಾಲದಲ್ಲಿ ಇದು ಆರೋಗ್ಯ ರಕ್ಷಕವೂ ಹೌದು. ಅಕ್ಕಿ ಮತ್ತು ಉದ್ದಿನಬೇಳೆ ನೆನೆಸಿ ತಯಾರಿಸುವ ದೋಸೆಗೆ ಅರೆಯುವಾಗ ಬಿಳಿದಾಸವಾಳದ ಗಿಡದ ತಾಜಾ ಎಲೆಗಳನ್ನು ತೊಳೆದು ಬೆರೆಸಬೇಕು. ರಾತ್ರಿ ಅರೆದಿಟ್ಟರೆ ಮರುದಿನ ಸ್ಪಾಂಜಿನಂತಹ ಮೆದುವಾದ, ಗ್ರೀನ್ ದೋಸೆ ತಯಾರು. ಇದು ಮಳೆಗಾಲದಲ್ಲಿ ಮಕ್ಕಳ ಕೈಕಾಲುಗಳಲ್ಲಿ ಮಳೆಯ ನೀರಿನಿಂದ ಉಂಟಾಗುವ ಕಜ್ಜಿ , ತುರಿಕೆ, ಗಂಧೆಗಳನ್ನು ನಿವಾರಣೆ ಮಾಡುತ್ತದೆ. ಜೊತೆಗೆ ರುಚಿಕರವೂ, ಆಕರ್ಷಕ ಬಣ್ಣವನ್ನೂ ಹೊಂದಿದ್ದು , ಔಷಧ ಒಲ್ಲದ ಮಕ್ಕಳಿಗೆ, ಇಂತು ಔಷಧರೂಪೀ ಆಹಾರವನ್ನು ನೀಡಬಹುದು. ಮಕ್ಕಳಿಗೆ ಮಾತ್ರವಲ್ಲ , ಎಲ್ಲಾ ವಯಸ್ಸಿನವರಿಗೂ ಇದು ಹಿತಕರ.
.ಮಧುಮೇಹಿಗಳಿಗೆ ಪಥ್ಯಾಹಾರ ಮುಖ್ಯ. ರಾಗಿ ಉತ್ತಮ ಆಹಾರ. ರಾಗಿಯನ್ನು ವಿವಿಧ ರೀತಿಯಲ್ಲಿ ದೋಸೆಗಳಲ್ಲಿ ಬಳಸಬಹುದು.
ರುಬ್ಬಿದ ಉದ್ದಿನ ಬೇಳೆಯ ಹಿಟ್ಟಿಗೆ ರಾಗಿಹಿಟ್ಟು ಬೆರೆಸಿ ಉಪ್ಪು , ಜೀರಿಗೆ, ಮೆಣಸಿನ ಚೂರುಗಳನ್ನು ಬೆರೆಸಿ ದೋಸೆ ಮಾಡಿದರೆ ರುಚಿಕರ. ಜೊತೆಗೆ ಈರುಳ್ಳಿ, ಟೊಮ್ಯಾಟೋ ಕೊತ್ತಂಬರಿ ಸೊಪ್ಪನ್ನು ಬೆರೆಸಬಹುದು. ಅಥವಾ ಕಾಯಿತುರಿ, ಕರಿಬೇವಿನ ಸೊಪ್ಪು ಬೆರೆಸಿಯೂ ಈ ಹಿಟ್ಟಿನ ದೋಸೆ ತಯಾರಿಸಬಹುದು.
ನೀರಿನಲ್ಲಿ ರಾಗಿಹಿಟ್ಟು , ಗೋಧಿಹಿಟ್ಟು , ಗೋಧಿರವೆ, ಉಪ್ಪು , ಮೆಣಸಿನ ಚೂರು, ಮಜ್ಜಿಗೆ ಸ್ವಲ್ಪ ಬೆರೆಸಿ ದೋಸೆಯ ಹಿಟ್ಟಿನ ಹದಕ್ಕೆ ತರಬೇಕು. ಈ ದೋಸೆಯು 3 ಬಗೆಯ ಹಿಟ್ಟನ್ನು ಹೊಂದಿರುವುದರಿಂದ ರುಚಿಕರವೂ ಆಗಿರುತ್ತದೆ.
ರಾಗಿಹಿಟ್ಟು , ಸೋಯಾ ಹಿಟ್ಟು ಹಾಗೂ ಸ್ವಲ್ಪ ಮೈದಾ ಬೆರೆಸಿ ಮೊಸರು, ನೀರು, ಉಪ್ಪು ಸೇರಿಸಿ ದೋಸೆ ಹಿಟ್ಟು ಕಲಸಬೇಕು. ಇದಕ್ಕೆ ಸಾಸಿವೆ, ಕರಿಬೇವು, ಜೀರಿಗೆಯಿಂದ ತುಪ್ಪದಲ್ಲಿ ಒಗ್ಗರಣೆ ಹಾಕಿ, ಹಸಿ ಕೊತ್ತಂಬರಿ ಸೊಪ್ಪು ಹೆಚ್ಚಿ ಹಾಕಬೇಕು. ಈ ದೋಸೆಯ ವೈವಿಧ್ಯದೊಂದಿಗೆ ಇಂಗಿನ ಚಟ್ನಿ , ಪುದೀನಾ ಚಟ್ನಿ ಅಥವಾ ಕರಿಬೇವಿನ ಚಟ್ನಿಪುಡಿ, ಬೆಳ್ಳುಳ್ಳಿಯ ಚಟ್ನಿಪುಡಿ ಅಥವಾ ಶುಂಠಿ ಬೆರೆಸಿ ತಯಾರಿಸಿದ ಕಾಯಿತುರಿ ಚಟ್ನಿ ದೋಸೆಯ ರುಚಿಯನ್ನು ಹೆಚ್ಚಿಸುತ್ತದೆ.
.ಶ್ಯಾವಿಗೆಯನ್ನು ಕೆಂಪಗೆ ಹುರಿದು, ಆರಿದ ಬಳಿಕ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಟ್ಟರೆ ದೀರ್ಘಕಾಲ ಬಾಳಿಕೆಗೆ ಬರುವುದು. ಅಂತೆಯೇ ದಿಢೀರ್ ಆಗಿ ಖಾದ್ಯ, ಪಾಯಸ ತಯಾರಿಸಲು ಸಹಕಾರಿ.
.ಶ್ಯಾವಿಗೆಯನ್ನು ಮೊದಲು ತುಪ್ಪದಲ್ಲಿ ಹುರಿದು ಬಳಿಕ ಶ್ಯಾವಿಗೆಯ ಉಸ್ಲಿ , ಪಾಯಸ ಅಥವಾ ಪಲಾವ್‌ಗಳಿಗೆ ಉಪಯೋಗಿಸಿದರೆ ಪರಿಮಳವೂ ಹೆಚ್ಚುತ್ತದೆ ಹಾಗೂ ಶ್ಯಾವಿಗೆ ಮುದ್ದೆಯಾಗದೆ ಉದುರು ಉದುರಾಗಿರುತ್ತದೆ.
.ಏಲಕ್ಕಿಯನ್ನು ಕೆಂಪು ಕಲ್ಲುಸಕ್ಕರೆಯೊಂದಿಗೆ ಬೆರೆಸಿ ಹುಡಿ ಮಾಡಿಟ್ಟರೆ ಪಾಯಸ, ಸಿಹಿತಿಂಡಿಗಳಿಗೂ ಬಳಸಬಹುದು. ಪುಡಿ ಮಾಡಲೂ ಸುಲಭ. ಗಾಳಿಯಾಡದ ಪುಟ್ಟ ಡಬ್ಬದಲ್ಲಿ ಸಂಗ್ರಹಿಸಿದರೆ ಹೆಚ್ಚು ಕಾಲ ಬಾಳಿಕೆಗೆ ಬರುತ್ತದೆ. ಅಂತೆಯೇ ಶೀತ ಕೆಮ್ಮು ಉಂಟಾದಾಗ ನೀರಿಗೆ 2 ಲವಂಗ ಬೆರೆಸಿ, ಕುದಿಸಿ ಬಳಿಕ ಸೋಸಿ, ಆ ನೀರಿಗೆ 2-3 ಚಿಟಿಕೆ ಏಲಕ್ಕಿ, ಕೆಂಪುಕಲ್ಲು , ಸಕ್ಕರೆ ಹುಡಿ ಬೆರೆಸಿ ಸೇವಿಸಿದರೆ ಕೆಮ್ಮು ಕಫ ಕರಗುತ್ತದೆ.
.ಏಲಕ್ಕಿಯ ಸಿಪ್ಪೆಯನ್ನು ಬಿಸುಡದೆ ಚಹಾ ತಯಾರಿಸುವಾಗ ಬಳಸಿದರೆ ಪರಿಮಳಯುಕ್ತ ಚಹಾ ರೆಡಿ. ಇದರೊಂದಿಗೆ ಶುಂಠಿ, ದಾಲಿcàನಿ ಬೆರೆಸಿಯೂ ಚಹಾ ತಯಾರಿಸಿದರೆ ಪಚನಕ್ರಿಯೆಗೆ ಉತ್ತಮ.
.ಕುಡಿಯುವ ನೀರಿಗೆ ಏಲಕ್ಕಿ ಸಿಪ್ಪೆ ಹಾಕಿದರೆ ಕುಡಿಯುವ ನೀರು ಪರಿಮಳಯುಕ್ತವಾಗುತ್ತದೆ.