ವೇಣಿ | Aug 03, 2012
ಹೆಸರಾಂತ ಸಂಸ್ಥೆಯೊಂದರ ಉನ್ನತ ಉದ್ಯೋಗಿ ಯುವತಿಯೊಬ್ಬಳು ಭೇಟಿಯಾಗಿದ್ದರು. ಮೊದಲು ಪರಿಚಯ, ಭೇಟಿ, ಮಾತುಕತೆ, ಮಾತಾಡುತ್ತಿದ್ದಂತೆ ನಾನು ಹೇಳಿದ್ದೆ. ""ನಿಮ್ಮ ಕೂದಲು ಕೇರಳದವರ ತಲೆಗೂದಲಿನ ಹಾಗಿದೆ'.
""ಕೇರಳದವರ ಕೂದಲೆಂದರೆ?'
""ಒಳ್ಳೆಯ ಆರೋಗ್ಯವಂತ ಕೂದಲು, ಕಡುಗಪ್ಪು ಬಣ್ಣ , ಹೊಳಪು. ಕೇರಳದವರ ಕೂದಲು ಹಾಗೆ ಇರ್ತದೆ'.
""ನನ್ನಮ್ಮ ಕೇರಳದವರು. ನಾನು ಕನ್ನಡ ಚೆನ್ನಾಗಿ ಕಲಿತಿದ್ದೇನೆ. ಮಲಯಾಳವೂ ಮಾತಾಡ್ತೇನೆ'.

ನಂತರ ಅವರೇ ಹೇಳಿದ ಪ್ರಕಾರ ಸೊಂಪಾಗಿ, ಕಪ್ಪಾಗಿದ್ದ ವಿಪುಲ ಕೂದಲು ಈಗೀಗ ವಿಪರೀತ ತೆಳ್ಳಗಾಗಿದೆ. ದಿನ ದಿನ ಕೂದಲು ಉದುರುತ್ತಿದೆ. ಹೇಗೆ ಅದನ್ನು ತಡೆಯುವುದೆಂದೇ ಗೊತ್ತಾಗ್ತಿಲ್ಲವೆಂದರು.
ಅಚ್ಚ ಕಪ್ಪಿನ, ಆರೋಗ್ಯವಂತ ಕೂದಲು ಕೇರಳೀಯರದೆಂದರೆ ಅದೇನೂ ಉತ್ಪ್ರೇಕ್ಷೆಯಲ್ಲ. ದಟ್ಟವಾಗಿ ಬೆಳೆಯುವ ಕೂದಲು ಕಂಡವರನ್ನು ಆಕರ್ಷಿಸುತ್ತದೆ. ಪ್ರತಿ ಹೆಣ್ಮಗಳೂ ತನ್ನ ಕೂದಲು ಉದುರಿ ಹೋಗುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುತ್ತಿದ್ದರೆ ಮಲಬಾರಿ ಹೆಣ್ಮಕ್ಕಳ ಕೂದಲು ಹೇರಳವಾಗಿ ಲಕಲಕಿಸುತ್ತಿರುತ್ತದೆ. ಇವತ್ತಿಗೆ ಮಾರುಕಟ್ಟೆಯಿಡೀ ತರಹೇವಾರಿ ಶ್ಯಾಂಪೂಗಳು, ಸಾಬೂನುಗಳೇ ತುಂಬಿವೆ. ಬಾಟಲಿಯ ಮೇಲೆ ನಾಲ್ಕು ನೆಲ್ಲಿಕಾಯಿ, ಎರಡು ಲೋಳೆಸರ, ದಾಸವಾಳದ ಚಿತ್ರ ಹಾಕಿ ಆಯು ಪ್ರಾಕೃತಿಕವೆಂದು ಎತ್ತಿ ತೋರಿಸುತ್ತಾರೆ. ಹರ್ಬಲ್ ಶ್ಯಾಂಪೂಗಳು ಮನೆ ಮನೆಗಳಲ್ಲಿ ತುಂಬಿ ಕಂಪೆನಿಗಳಿಗೆ ಶುಕ್ರದೆಸೆ ತಂದಿರುವುದೂ ಹೌದು. ಆದರೆ, ಇದೇಕೆ ಎಳೆವಯಸ್ಸಿನಲ್ಲಿಯೇ ತಲೆಗೂದಲು ಉದುರಿ ಹೋಗುತ್ತದೆ? ತಾಜಾ ನೆಲ್ಲಿಕಾಯಿ ಸತ್ವ, ಲೋಳೆಸರದ ರಸ, ದಾಸವಾಳದ ರಸ ಹಾಕಿ ತಲೆ ತೊಳೆದರೆ ಕೂದಲು ಬೆಳೆಯಬೇಕು. ಅದು ಸಹಜ. ಬದಲಾಗಿ ದಿನೇದಿನೇ ಕೂದಲಿನ ಗಾತ್ರ ಕಿರಿದಾಗುತ್ತಿದೆ. ಬಾಚಿ ಕ್ಲಿಪ್ ಹಾಕಿ ಹೇರಳವಾಗಿ ಕಾಣುವಂತೆ ಅಗಲವಾಗಿ ಹರಡಬೇಕೇ ವಿನಹ ವಿಪುಲ ಕೇಶ ಕಡಿಮೆ. ಹೊಳೆ ಹೊಳೆಯುವ ಕಪ್ಪಾದ, ಆರೋಗ್ಯವಾದ ಕೂದಲಿರಬೇಕು.