ಚೇತನ್ ನಾಡಿಗೇರ್ | Aug 04, 2012
ನನ್ ಭಾಷೇಲಿ ಹೇಳಿದ್ರೆ ಬೇಜಾರ್ ಮಾಡ್ಕೊತೀರಾ. ಸುಮ್ನೆ ಹೋಗ್ರಲೋ ...

ಬೇರೆ ಸಂದರ್ಭವಾಗಿದ್ದರೆ ಚಂದ್ರು ಅಲಿಯಾಸ್ "ಸ್ವಯಂವರ' ಚಂದ್ರು ಪ್ರತಿಕ್ರಿಯಿಸುವ ರೀತಿ ಬೇರೆ ಇತ್ತು. ಆದರೆ, ಅಂದು ಕೂಗಾಡುವ ಹಾಗಿರಲಿಲ್ಲ. ತಮ್ಮ ಭಾಷೆಯಲ್ಲಿ ಹೇಳುವ ಹಾಗಿರಲಿಲ್ಲ. ಎದುರಿಗೆ ಮಾಧ್ಯಮದವರು, ಪಕ್ಕಕ್ಕೆ ಶಿವರಾಜ್‌ಕುಮಾರ್ ಹಾಗೂ "ಕಡ್ಡಿಪುಡಿ' ಚಿತ್ರತಂಡದವರು. ಚಂದ್ರು ಹಲ್ಲು ಕಚ್ಚಿಕೊಂಡರು, ಸುತ್ತುವರೆದಿದ್ದ ಜನರನ್ನು ತಾಳ್ಮೆಯಿಂದಲೇ ಹೊರಗೆ ಕಳುಹಿಸಿದರು.
ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಮತ್ತು ಭಾನುವಾರಗಳಂದು ರಶೊ ರಶ್ಶು. ಆದರೆ, ಅವತ್ತು ಗುರುವಾರ. ಆದರೂ ಬನಶಂಕರಿ ದೇವಸ್ಥಾನ, ದೇವಸ್ಥಾನದ ಆವರಣ, ಎದುರಿಗಿರುವ ರಸ್ತೆಗಳು ... ಎಲ್ಲವೂ ಫುಲ್ಲು. ಶಿವರಾಜ್‌ಕುಮಾರ್ ಚಿತ್ರದ ಮುಹೂರ್ತವೊಂದು ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತದೆ ಎಂದರೆ ಜನ ಬರದೇ ಇರುತ್ತಾರಾ? ತುಂಬಿ ತುಳುಕುವಷ್ಟು ಜನ.
ಅವರನ್ನೆಲ್ಲಾ ಕಳುಹಿಸಿ, ಪತ್ರಿಕಾಗೋಷ್ಠಿಗೆ ಬರುವಷ್ಟರಲ್ಲಿ ನಿರ್ದೇಶಕ ಸೂರಿ ಮತ್ತು ನಿರ್ಮಾಪಕ ಚಂದ್ರುಗೆ ಸಾಕುಸಾಕಾಗಿತ್ತು. ಆದರೂ ನಗುಮೊಗದಿಂದಲೇ ಪತ್ರಿಕಾಗೋಷ್ಠಿ ಶುರು ಮಾಡಿದರು. ಸೂರಿ ಮಾತು ಶುರು ಮಾಡುವುದಕ್ಕೆ ಮುಂಚೆಯೇ ಬಂತೊಂದು ಪ್ರಶ್ನೆ. "ಕಡ್ಡಿಪುಡಿ' ಎಂದರೇನು ಮತ್ತು ಈ ಚಿತ್ರಕ್ಕೆ ಆ ಹೆಸರು ಯಾಕೆ ಎಂದು. ಸೂರಿ ವಿವರಿಸಿದರು. "ರೌಡಿಸಂನಲ್ಲಿ ನಿಕ್‌ನೇಮ್‌ಗಳು ಸಹಜ. ಪಾಯಸ, ರೆಕ್ಕೆ, ಗಿಣಿ, ತೂತು ಮಡಿಕೆ ... ಇನ್ನೂ ಎಷ್ಟೋ ವಿಚಿತ್ರ ಹೆಸರುಗಳನ್ನ ನಾನೇ ಕೇಳಿದ್ದೇನೆ. ಕಡ್ಡಿಪುಡಿ ಅಂಥದ್ದೊಂದು ಹೆಸರು. ಇಲ್ಲಿ ಹೀರೋ ಹೆಸರು ಆನಂದ. ಅವನ ಅಜ್ಜಿ ಕಡ್ಡಿಪುಡಿ ಮಾರಿ¤ರ್ತಾರೆ. ಹಾಗಾಗಿ ಅವನನ್ನೂ ಜನ ಕಡ್ಡಿಪುಡಿ ಅಂತಲೇ ಗುರುತಿಸ್ತಾರೆ' ಎಂಬ ವಿವರಣೆ ಸೂರಿಯಿಂದ ಬಂದು.x
ಉತ್ತರ ಬಂದರೂ, ಈ ಕಡೆ ತೃಪ್ತಿಯಾದಂತೆ ಕಾಣಲಿಲ್ಲ. ಅದ್ಯಾಕೆ? ಇದೇನು? ಅದೆಷ್ಟು ಸರಿ? ಎಂಬಂಥ ಪ್ರಶ್ನೆಗಳು ಬರುತ್ತಲೇ ಇದ್ದವು. ಸೂರಿ ಕೆಂಡದ ಮೇಲೆ ನಿಂತಂತೆ ಕಂಡುಬಂದರು.
ಅಷ್ಟರಲ್ಲೊಂದು ಪವಾಡ ನಡೆಯಿತು. ಸಾಮಾನ್ಯವಾಗಿ ಸೂರಿ ತಮ್ಮ ಚಿತ್ರದ ಕಥೆಗಳನ್ನು ಹೇಳುವುದಿಲ್ಲ ಅಥವಾ ಇದುವರೆಗೂ ಹೇಳಿಲ್ಲ. ಮೊದಲ ಬಾರಿಗೆ ಸೂರಿ ಅದೇನಾಗುತ್ತೋ ಆಗಲಿ ಎಂದು ಕಥೆ ಹೇಳಿಬಿಟ್ಟರು. "ಇಲ್ಲಿ ನಾಯಕನ ಪಾತ್ರ ಅದೆಷ್ಟು ಕ್ರೂರವೋ, ಅಷ್ಟೇ ಮುಗ್ಧ. ಇಲ್ಲಿ ನಾಯಕ-ನಾಯಕಿ ಇಬ್ಬರೂ ಅದ್ಭುತವಾಗಿ ಪ್ರೀತಿಸುತ್ತಾರೆ.
ಅಂಥವರ ಜೊತೆಗೆ ಈ ವ್ಯವಸ್ಥೆಯ ಕರಾಳ ಮುಖ ಹೇಗೆ ಆಟ ಆಡುತ್ತೆ ಎಂಬುದು ಚಿತ್ರದ ಕಥೆ' ಎಂದರು ಸೂರಿ. ಶಿವರಾಜ್‌ಕುಮಾರ್ ಅವರಿಗೆ ಈ ಚಿತ್ರದಲ್ಲಿ ಬಹಳ ಇಷ್ಟವಾಗಿದ್ದು ಇಲ್ಲಿನ ಹೊಸತನ. "ಸೂರಿ ಚಿತ್ರಗಳನ್ನು ನೋಡಿಕೊಂಡು ಬಂದೋನು ನಾನು. ಪ್ರತಿ ಚಿತ್ರದಲ್ಲೂ ಏನಾದರೂ ಹೊಸತನ ಮಾಡಿಕೊಂಡೇ ಬಂದಿದ್ದಾರೆ.
ಈ ಚಿತ್ರದಲ್ಲಿ ಸಾಕಷ್ಟು ಹೊಸತನ ಇದೆ. ಅದರಲ್ಲೂ ನನ್ನ ಪಾತ್ರ ಖುಷಿಯಾಯಿತು. ನನ್ನ ಹತ್ತಿರ ಬರೋರು ಹೆಚ್ಚಾಗಿ "ಅಣ್ಣ ತಂಗಿ' ಅಥವಾ ರೌಡಿಸಂ ಶೇಡ್ ಇರೋ ಪಾತ್ರಗಳನ್ನ ತರೋರು. ಸೂರಿ ಬೇರೆ ತರಹದ ಪಾತ್ರ ತಂದಿದ್ದಾರೆ. ಇಲ್ಲಿ ಪ್ರೀತಿ ಮತ್ತು ಕ್ರೌರ್ಯ ಎರಡೂ ಬ್ಯಾಲೆನ್ಸ್ ಆಗಿದೆ. ನಟಿಸೋಕೆ ತುಂಬಾ ಅವಕಾಶ ಇದೆ. ಚಿತ್ರದಲ್ಲಿ ನನ್ನ ಹೆಸರು ಆನಂದ್. ಒಂಥರಾ ರಾ ಆಗಿರೋ ಆನಂದ್‌ನ ಈ ಚಿತ್ರದಲ್ಲಿ ನೋಡ್ತೀರಿ' ಎಂದರು ಶಿವಣ್ಣ.
ಬರೀ ಸ್ಟುಡಿಯೋಗಳಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ರಾಧಿಕಾ ಪಂಡಿತ್‌ಗೆ, ಈ ಚಿತ್ರದಲ್ಲಿ ಗಾಂಧಿ ಬಜಾರ್‌ನಂಥ ಸ್ಥಳದಲ್ಲಿ, ಅಷ್ಟೊಂದು ಜನರ ಮಧ್ಯೆ ಫೋಟೋ ಶೂಟ್ ಮಾಡಿದ್ದೇ ಖುಷಿಯಾಯಿತಂತೆ. ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದೇನೆ ಎಂದರು.
ರಂಗಾಯಣ ರಘು ಪದೇಪದೇ ಸೂರಿ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿಪಟ್ಟರು. ಒಂದು ವರ್ಷದಿಂದ ಶಿವಣ್ಣ ಅವರ ಮನೆಗೆ ಈ ಚಿತ್ರದ ಸಲುವಾಗಿ ಓಡಾಡುತ್ತಿದ್ದರೂ ಶಿವಣ್ಣ ಇದುವರೆಗೂ ಚಿತ್ರದ ಅಡ್ವಾನ್ಸ್ ಕೂಡಾ ತೆಗೆದುಕೊಂಡಿಲ್ಲ ಎಂದು "ಸ್ವಯಂವರ' ಚಂದ್ರು ಖುಷಿಪಟ್ಟರು. ಶಿವರಾಜ್‌ಕುಮಾರ್‌ರ ಇಷ್ಟು ಚಿತ್ರಗಳಲ್ಲಿ ಕೇಳದಷ್ಟು ಇಲ್ಲಿನ ಹಾಡುಗಳು ಫ್ರೆಶ್ ಆಗಿರುತ್ತದೆ ಎಂದು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಖುಷಿಪಟ್ಟರು. ಸತ್ಯ ಹೆಗಡೆ ಬದಲು ಇದೇ ಮೊದಲ ಬಾರಿಗೆ ಸೂರಿ ಚಿತ್ರಕ್ಕೆ ಛಾಯಾಗ್ರಾಹಕರಾಗಿರುವ "ಮುಂಗಾರು ಮಳೆ' ಕೃಷ್ಣ, ಸೂರಿ ಮತ್ತು ಶಿವಣ್ಣ ಜೊತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಪಟ್ಟರು.