ಅನಂತ ಮೂಡಿತ್ತಾಯ | Aug 04, 2012
ಅಪ್ಪಟ ಭಾರತೀಯ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಉಳಿಸಿ ಬೆಳೆಸುವ ಸದುದ್ದೇಶ ದಿಂದ, ವರುಷದ ಹಿಂದೆ ಪಾಂಬೂರಿ ನಲ್ಲಿ ಹುಟ್ಟಿಕೊಂಡ "ಪರಿಚಯ' ಸಂಸ್ಥೆ, ಇತ್ತೀಚೆಗೆ ಸಂಯೋಜಿಸಿದ ಅಷ್ಟಾವಧಾನ ಕಾರ್ಯಕ್ರಮ ಶಂಕರಪುರ ಚರ್ಚ್ ಸಭಾಂಗಣದಲ್ಲಿ ಸುಂದರವಾಗಿ ಅನಾವರಣ ಗೊಂಡಿತು. ಪ್ರತಿಭೆ, ಪಾಂಡಿತ್ಯ, ಧಾರಣಾ ಶಕ್ತಿ, ಸಮಯಸ್ಫೂರ್ತಿಗಳ ಸಂಗಮ ಕಲೆ ಅವಧಾನ. ಎಂಟು ಮಂದಿ ಪೃತ್ಛಕರು
ಒಡ್ಡುವ ಕಠಿನ ಸವಾಲುಗಳಿಗೆ ಸಮರ್ಪಕ ವಾಗಿ ಉತ್ತರವನ್ನು ನೀಡುವುದೇ ಅಷ್ಟಾವ ಧಾನ ಕಲೆ. ಕನ್ನಡ - ಹಿಂದಿ - ಕೊಂಕಣಿ ಮೂರು ಭಾಷೆಗಳಲ್ಲಿ ಅಷ್ಟಾವಧಾನ ನಡೆಸಬಲ್ಲ ಹೆಸರಾಂತ ಶತಾವಧಾನಿ ಆರ್. ಗಣೇಶ್ ಅವರ ಗರಡಿಯಲ್ಲಿ ರೂಪುಗೊಂಡ, ಮುಂಡ್ಕೂರಿನ ಶಿಕ್ಷಕ ಉಮೇಶ್ ಗೌತಮ್ ನಾಯಕ್ ಈಗಾಗಲೇ ಕೊಂಕಣಿ, ಹಿಂದಿ, ಕನ್ನಡ ಭಾಷೆಗಳಲ್ಲಿ ಅನೇಕ ಅಷ್ಟಾವಧಾನ ಕಾರ್ಯಕ್ರಮಗಳನ್ನು ನಿರ್ವಹಿಸಿ ಜನಪ್ರಿಯ ರಾಗಿದ್ದು ಶಂಕರಪುರದಲ್ಲಿ ನೆರೆದ ಶಿರ್ವ -ಪಾಂಬೂರು-ಎಲ್ಲೂರು ಪರಿಸರದ ಕಲಾಸಕ್ತರಿಗೆ ಅವಧಾನ ಕಲೆಯನ್ನು ಪರಿಚಯಿಸುವುದರಲ್ಲಿ ಯಶಸ್ವಿಯಾದರು.

ಪಡುಬಿದ್ರೆಯ ರಾಘವೇಂದ್ರ ರಾವ್ (ನಿಷೇಧಾಕ್ಷರಿ), ಅವಧಾನಿಗಳಿಗೆ ಮಳೆಗಾಲದ ರೌದ್ರ ರಮಣೀಯತೆ ಕುರಿತು ನಿರ್ದಿಷ್ಟ ಛಂದಸ್ಸಿನಲ್ಲಿ ಪದ್ಯ ರಚಿಸಲು ಹೇಳಿದರು. ನಾಲ್ಕು ಸುತ್ತುಗಳಲ್ಲಿ ಅಕ್ಷರ ನಿಷೇಧದ ಅಡೆತಡೆಗಳನ್ನು ಸಮರ್ಥವಾಗಿ ನಿಭಾಯಿಸಿ ಸುಂದರ ಪದ್ಯವೊಂದನ್ನು ಅವಧಾನಿಗಳು ರಚಿಸಿದರು. ನಿಟ್ಟೆ ವಾಸು ದೇವ ಭಟ್ (ದತ್ತಪದಿ) "ಮೋಡ', "ಅಂಬ್ರೆಲ್ಲಾ', "ಸುಂಕ' ಮತ್ತು "ಮಾಂಸ' ಈ ಪದಗಳನ್ನು ಬಳಸಿ ಕವನವೊಂದನ್ನು ರಚಿಸಲು ಸವಾಲೊಡ್ಡಿದಾಗ, ಅವಧಾನಿಗಳು ಅರ್ಥಪೂರ್ಣ ಪದ್ಯಗಳನ್ನು ರಚಿಸಿ ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದರು. ಜನಪ್ರಿಯ ಸುಗಮ ಸಂಗೀತ ಕಲಾವಿದ ಚಂದ್ರಶೇಖರ ಕೆದ್ಲಾಯರು (ಆಶುಕೀರ್ತನೆ) ಮೋಹನರಾಗ - ರೂಪಕ ತಾಳದಲ್ಲಿ, ಭ್ರಷ್ಟಾಚಾರ ನಿರ್ಮೂಲನೆಗಾಗಿ ಶ್ರೀಕೃಷ್ಣನನ್ನು ಬೇಡುವ ಕೀರ್ತನೆಯನ್ನು ರಚಿಸಲು ಪಂಥಾಹ್ವಾನ ನೀಡಿದಾಗ ಕೂಡಲೇ ಅರ್ಥ ಪೂರ್ಣ ಕೀರ್ತನೆಯೊಂದನ್ನು ರಚಿಸಿ, ಇಂಪಾಗಿ ಹಾಡಿದರು. ಎನ್. ಎಂ. ಹೆಗಡೆ (ಸಮಸ್ಯೆ) ಅವರು ಒಡ್ಡಿದ, "ಚಂದ್ರನು ಅಮಾವಾಸ್ಯೆ ದಿನ ಹೊಳೆ ಹೊಳೆದು ಬೆಳಗಿದ' ಈ ಸಮಸ್ಯೆಯನ್ನು ನೀಡಿ ವಾರ್ಧಕ ಷಟ³ದಿ ಯಲ್ಲಿ ಕವನ ರಚಿಸಬೇಕೆಂಬ ಸವಾಲಿಗೆ ಅವಧಾನಿಗಳು ಸಮರ್ಥವಾಗಿ ಉತ್ತರಿಸಿದರು. ಯಕ್ಷಗಾನ ಕವಿ, ಅರ್ಥಧಾರಿ ಶ್ರೀಧರ ಡಿ.ಎಸ್. (ಭಾವಗೀತೆ - ರಾಗಸಂಯೋಜನೆ - ಗಾಯನ) ತಾವು ರಚಿಸಿ ತಂದ ಸೂರ್ಯೋದಯದ ವರ್ಣನೆ, ಮಳೆರಾಯನ ಆರ್ಭಟ ಕುರಿತ ಭಾವಗೀತೆಯನ್ನು ಓದಿ ಮುಗಿಸುವಷ್ಟರಲ್ಲಿ ಅದಕ್ಕೆ ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದ ಅವಧಾನಿಗಳು ಚಪ್ಪಾಳೆಗೆ ಪಾತ್ರ ರಾದರು. ಯುವ ಕವಯಿತ್ರಿ ಕು| ಅಂಬಿಕಾ (ಆಶುಕವಿತೆ) ಏಸುಕ್ರಿಸ್ತ, ಪರಿಚಯ ಸಂಸ್ಥೆ ಹಾಗೂ ಗಣಿಧೂಳಿನ ಕುರಿತು ಆಶು ಕವಿತೆ ರಚಿಸಿ ಹಾಡಲು ಸವಾಲು ನೀಡಿದಾಗ, ಸುಂದರ ಕವನಗಳನ್ನು ರಚಿಸಿ ಹಾಡಿದರು.
ಅವಧಾನಿಗಳ ಏಕಾಗ್ರತೆಯನ್ನು ಭಂಗ ಪಡಿಸುವ "ಸಂಖ್ಯಾಬಂಧ'ದಲ್ಲಿ ಶಿರ್ವದ ದೇವೇಂದ್ರ ನಾಯಕ್, ಅವಧಾನದ ಕ್ರಿಯೆಗಳು ನಡೆಯುತ್ತಿರುವಂತೆ, ಸಂಖ್ಯಾ ಬಂಧವನ್ನೊಂದು ನೀಡಿ ಸವಾಲೆಸೆದಾಗ, ಅದಕ್ಕೂ ಅವಧಾನಿಗಳು ಸಮರ್ಪಕವಾಗಿ ಉತ್ತರಿಸಿದರು.
ಅವಧಾನಿಗಳ ಇತರ ಪೃತ್ಛಕರ ಸವಾಲು ಗಳಿಗೆ ಗಂಭೀರವಾಗಿ ಉತ್ತರಿಸಲು ಯೋಚಿಸು ತ್ತಿರುವಾಗಲೇ ಅವರ ಏಕಾಗ್ರತೆಯನ್ನು ಶಿಥಿಲಗೊಳಿಸಲು ಯತ್ನಿಸಿದ ಕೆ.ಎಸ್. ಶ್ರೀಧರ ಮೂರ್ತಿ (ಅಪ್ರಸ್ತುತ ಪ್ರಸಂಗಿ) ಕೇಳಿದ ವಿನೋದದ ಪ್ರಶ್ನೆಗಳಿಗೆ ಶಾಂತ, ವಿನೋದ ಪೂರ್ಣವಾಗಿ ಉತ್ತರಿಸಿ ತನ್ನ ಧಾರಣಾ ಶಕ್ತಿಯ ಆಳವನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅವಧಾನಿ ಗಳು ತಮ್ಮ ಅಸಾಧಾರಣ ಧಾರಣಾ ಶಕ್ತಿ ಯಿಂದ, ತಾವು ರಚಿಸಿದ ಎಲ್ಲ ಪದ್ಯ ಗಳನ್ನು ಮತ್ತು ಭಾವಾರ್ಥಗಳನ್ನು ಹೇಳಿ ಅನ್ವಯವನ್ನು ವಿವರಿಸಿದರು. ಪೃತ್ಛಕರು ತಾವು ಹಾಕಿದ ನಿಬಂಧನೆಗಳಿಗೆ ಅನುಗುಣ ವಾಗಿ ರಚಿಸಿ ತಂದ ಪದ್ಯಗಳನ್ನು ಓದಿದರು.
ಒಟ್ಟಿನಲ್ಲಿ ಪರಿಸರದ ಅನೇಕ ಆಸಕ್ತ ರಿಗೆ, ಅಪರೂಪದ ಶ್ರೇಷ್ಠ ಭಾರತೀಯ ಕಲೆಯೊಂದರ ಪರಿಚಯ ಮಾಡಿಸುವಲ್ಲಿ ಈ ಅಷ್ಟಾವಧಾನ ಯಶಸ್ವಿಯಾಯಿತು. ಅನುಭವಗಳ ಹಿನ್ನೆಲೆಯಲ್ಲಿ ಸಮರ್ಥವಾಗಿ ಅನಾವರಣಗೊಳಿಸಿದ ಈ ಕಾರ್ಯಕ್ರಮ ವನ್ನು ಉಳಿಸಿ ಬೆಳೆಸಿ, ಮುಂದಿನ ತಲೆಮಾರಿಗೆ ಪರಿಚಯಿಸುವ ಇನ್ನಷ್ಟು ಪ್ರಯತ್ನಗಳು ಆಗಬೇಕಿದೆ. ಕಾರ್ಯಕ್ರಮವನ್ನು ಸಮರ್ಥ ವಾಗಿ ಸಂಘಟಿಸಿದ "ಪರಿಚಯ'ದ ಪ್ರಕಾಶ್ ನೊರೊನ್ಹಾ, ಅನಿಲ್ ಡೇಸಾ, ವಿನ್ಸೆಂಟ್ ಆಲ್ವಾ, ಹಿರಿಯ ಪತ್ರಕರ್ತ ಪುಂಡಲೀಕ ಮರಾಠೆ, ಮಾರ್ಗದರ್ಶನ ನೀಡಿದ ಕೆ.ಎಸ್. ಶ್ರೀಧರಮೂರ್ತಿ ಅಭಿನಂದನಾರ್ಹರು.