ಎಸ್‌ವಿ | Aug 04, 2012
ಸುಮಾರು ಐದು ದಶಕಗಳಿಗೂ ಅಧಿಕ ಕಾಲ ಬಡಗುತಿಟ್ಟು ರಂಗಸ್ಥಳವನ್ನು ತನ್ನ ಪುಂಡು ವೇಷಗಳ ಮೂಲಕ ಅಲಂಕರಿಸಿದ ಕಲಾವಿದ ವಾಲೂ¤ರು ಕುಷ್ಟ ಮಡಿವಾಳರ ನಿಧನದಿಂದ ಬಡಗುತಿಟ್ಟಿನ ಮಟಪಾಡಿ ಶೈಲಿಯ ಹಿರಿಯ ಪ್ರಾತಿನಿಧಿಕ ಕೊಂಡಿಯೊಂದು ಕಳಚಿ ದಂತಾಗಿದೆ. ಹಾರಾಡಿ ರಾಮ ಗಾಣಿಗರೊಂದಿಗೆ ರಂಗಸ್ಥಳ ಹಂಚಿಕೊಂಡ ಮಡಿವಾಳರಿಗೆ ಸ್ವತಃ ರಾಮಗಾಣಿಗರೇ ಶಹಬ್ಟಾಸ್‌ಗಿರಿ ನೀಡಿದ್ದರು.ಜಾನುವಾರುಕಟ್ಟೆ ಭಾಗವತರ ಏರು ಶ್ರುತಿಯ "ಉತ್ತಮ ಮಣಿಪುರದರಸನ ಚಾವಡಿ ಹತ್ತು ಸಾವಿರ ಕಂಬದಿ' ಪದ್ಯಕ್ಕೆ ಹಿರಿಯಡ್ಕ ಗೋಪಾಲರಾಯರ ಏರುಮದ್ದಳೆಯಲ್ಲಿ ಮಡಿವಾಳರು ಪುಂಡುವೇಷದ ಬಬ್ರುವಾಹನನಾಗಿ ಹಾಕುತ್ತಿದ್ದ ಮಂಡಿ ಮತ್ತು ದಿಗಿಣ ಇನ್ನು ನೆನಪು ಮಾತ್ರ.

ಕುಂದಾಪುರ ತಾಲೂಕಿನ ವಾಲೂ¤ರು ಎಂಬಲ್ಲಿ 1941ರಲ್ಲಿ ಜನಿಸಿದ ಕುಷ್ಟ ಮಡಿವಾಳರು ಚಿಕ್ಕಂದಿ ನಿಂದಲೇ ಯಕ್ಷಗಾನದ ಮೇಲೆ ವಿಶೇಷ ಆಸಕ್ತಿ ತಳೆದರು. ಇವರನ್ನು ಹಿರಿಯ ಕಲಾವಿದ ವಂಡ್ಸೆ ಮುತ್ತ ಗಾಣಿಗರು ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿಸಿದರು. ಆಗ ಮಂದಾರ್ತಿ ಮೇಳ ದಲ್ಲಿ ಹಾರಾಡಿ ರಾಮ ಗಾಣಿಗ, ಕುಷ್ಟಗಾಣಿಗ, ನಾರಾಯಣ ಗಾಣಿಗ ಮುಂತಾದ ಹಾರಾಡಿ ಶೈಲಿಯ ಕಲಾವಿದರಿದ್ದರೆ, ಮಾರಣಕಟ್ಟೆ ಮೇಳದಲ್ಲಿ ವೀರಭದ್ರ ನಾಯಕರು, ಶ್ರೀನಿವಾಸ ನಾಯಕರು, ಚಂದು ನಾಯಕರಂಥ ಮೇರು ಕಲಾವಿದರಿದ್ದರು. ಮಂದಾರ್ತಿ ಮೇಳದಲ್ಲಿ ಶೇಷಗಿರಿ ಕಿಣಿ, ಜಾನುವಾರುಕಟ್ಟೆ ಮುಂತಾದ ಭಾಗವತರು, ಮಾರಣಕಟ್ಟೆ ಮೇಳದಲ್ಲಿ ದಾಸ ಭಾಗವತರು ಮೆರೆಯುತ್ತಿದ್ದ ಕಾಲವದು. ತನ್ನ 11ನೇ ವಯಸ್ಸಿನಲ್ಲಿ ಗುರು ವೀರಭದ್ರ ನಾಯಕರ ಗರಡಿಗೆ ಶಿಷ್ಯನಾಗಿ ಸೇರಿ ಕಲೆಯನ್ನು ಪರಿಪೂರ್ಣವಾಗಿ ಸಿದ್ಧಿಸಿಕೊಂಡ ಇವರನ್ನು ವೀರಭದ್ರ ನಾಯಕರ ಉತ್ತರಾಧಿಕಾರಿಯನ್ನಾಗಿ ಗುರುತಿಸ ಲಾಗಿದೆ. ಎರಡೂ ಮೇಳಗಳಲ್ಲಿದ್ದ ಹಾರಾಡಿಯ ಗಾಣಿಗ ಕಲಾವಿದರು, ಉಡುಪಿ ಬಸವ, ಶಿರಿಯಾರ ಮಂಜು, ಕುಂಜಾಲು ರಾಮಕೃಷ್ಣ, ಕೊರ್ಗು ಹಾಸ್ಯಗಾರ, ಹಳ್ಳಾಡಿ ಮಂಜಯ್ಯ ಶೆಟ್ಟಿ ಮುಂತಾದ ಕಲಾವಿದರೊಂದಿಗೆ ಮಡಿವಾಳರು ಪರಿಪೂರ್ಣ ಕಲಾವಿದರಾಗಿ ಬೆಳೆದರು.
ಸುದೀರ್ಘ 55 ವರ್ಷಗಳ ಕಾಲ ಮಾರಣಕಟ್ಟೆ, ಮಂದಾರ್ತಿ, ಕಮಲಶಿಲೆ, ಗೋಳಿ ಗರಡಿ, ಕೊಲ್ಲೂರು, ಅಮೃತೇಶ್ವರಿ, ರಂಜದಕಟ್ಟೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಮಡಿವಾಳರ ಪುಂಡುವೇಷದ ಗಂಡುಗಾರಿಕೆ ಅಸಾಧಾರಣವಾದುದು. ಬಬ್ರುವಾಹನ, ಲವ ಕುಶ, ಪ್ರಸೇನ, ಅಭಿಮನ್ಯು ಮೊದಲಾದ ವೇಷಗಳಲ್ಲಿ ಇವರು ಮೂಡಿಸಿದ ಶೌರ್ಯದ ಛಾಪು ಇಂದಿಗೂ ಹಸಿರಾಗಿದೆ. ಮಂದಾರ್ತಿ ಮೇಳದಲ್ಲಿ ಕುಷ್ಟ ಮಡಿವಾಳ ಮತ್ತು ಗೋಪ ಮಡಿವಾಳರ ಜೋಡಿ ಮೂರನೇ ವೇಷಗಳಾದ ಲವ-ಕುಶ, ರುಕಾ¾ಂಗ-ಶುಭಾಂಗ, ಮೈಂದ- ದ್ವಿಜ ವೇಷಗಳು ಅಪಾರ ಜನಮನ್ನಣೆ ಪಡೆದಿದ್ದವು. ಮದನಾಕ್ಷಿ, ಮೀನಾಕ್ಷಿ, ಭ್ರಮರಕುಂತಳೆ, ಪದ್ಮಗಂಧಿ ಮುಂತಾದ ಗಂಡುಕಳೆಯ ಹೆಣ್ಣು ವೇಷಗಳಲ್ಲೂ ದಾಖಲಾರ್ಹ ಸಾಧನೆ ಮಾಡಿ¨ªಾರೆ. ದೇವೇಂದ್ರ, ಧರ್ಮರಾಯ, ಕೌರವನಂತಹ ಪೀಠಿಕೆಯ ವೇಷಗಳನ್ನು ರಂಗದ ಕಾವು ಉಳಿಸಿಕೊಂಡು ಅವರು ನಿರ್ವಹಿಸುತ್ತಿದ್ದ ರೀತಿ ಇತರರಿಗೆಅನುಕರಣೀಯ.
ಪತ್ನಿ, ನಾಲ್ಕು ಮಕ್ಕಳನ್ನು ಅಗಲಿರುವ ಮಡಿವಾಳರು ಎಲೆ ಮರೆಯ ಕಾಯಿಯಂತೆ ಬದುಕಿದವರು. ಯಾವುದೇ ಪ್ರಶಸ್ತಿ -ಸಮ್ಮಾನಗಳಿಗೆ ಹಾತೊರೆದವರಲ್ಲ. ಕಳೆದ ವರ್ಷ ಉಡುಪಿಯಲ್ಲಿ ಮಡಿವಾಳ ಸಮಾಜದವರು ಗುರು ಮಾಚಿದೇವ ಸಂಸ್ಥೆಯ ಆಶ್ರಯದಲ್ಲಿ ನೀಡಿದ ಸಮ್ಮಾನವೇ ಅವರಿಗೆ ದೊರೆತ ಕೊನೆಯ ಸಮ್ಮಾನವಾಗಿತ್ತು. ಅಂದಿನ ಯಕ್ಷಗಾನ ಪ್ರದರ್ಶನದಲ್ಲಿ ಅವರು ಚಿಕ್ಕ ಪಾತ್ರವೊಂದನ್ನು ಕೂಡ ನಿರ್ವಹಿಸಿದ್ದರು.