ಆಸ್ಟಿನ್ ಸಂತೋಷ್ | Aug 04, 2012
ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಪ್ರಥಮವಾಗಿ ಯಕ್ಷಗಾನವನ್ನು ಪರಿಚಯಿಸಿದ ಕೀರ್ತಿ ಬಹ್ರೈನ್ ಕನ್ನಡಿಗರಿಗೆ ಸಲ್ಲುತ್ತದೆ. ಬಹುಶಃ ಕನ್ನಡ ನಾಡಿನ ಯಕ್ಷಗಾನ ದಿಗ್ಗಜರಲ್ಲಿ ಬಹುತೇಕ ಮಂದಿ ಬಹ್ರೈನ್ ದೇಶದಲ್ಲಿ ಬಣ್ಣ ತೊಟ್ಟಿದ್ದಾರೆ ಅಥವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಬಹ್ರೈನ್‌ನಲ್ಲಿ ಒಂದು ಸುಸಜ್ಜಿತ ಯಕ್ಷಗಾನದ ತಂಡವಿದೆ ಹಾಗೂ ಕಳೆದ 12 ವರ್ಷಗಳಿಂದ ಈ ಕಲಾವಿದರ ತಂಡ ಕನ್ನಡ ಸಂಘದ ಆಶ್ರಯದಲ್ಲಿ ಉತ್ಕೃಷ್ಟ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರೆ ಹುಬ್ಬೇರಿಸಬೇಕಿಲ್ಲ.
ಈ ಸುಸಜ್ಜಿತ ಸಂಘಟನೆಯ ಹಿನ್ನೆಲೆಯನ್ನು ನೋಡಿದಾಗ ಅಲ್ಲಿ ಎದ್ದು ಕಾಣುವ ಹೆಸರು ರಮೇಶ್ ಮಂಜೇಶ್ವರ್ ಅವರದ್ದು. ಸ್ವತಃ ಕಲಾವಿದರೂ ಆಗಿರುವ ರಮೇಶ್ ಅವರು ಕಳೆದ 30 ವರ್ಷಗಳಿಂದ ಬಹ್ರೈನ್‌ನಲ್ಲಿ ನೆಲೆಸಿದ್ದಾರೆ. ಬಹ್ರೈನ್‌ನಲ್ಲಿ ಒಂದು ಸುಸಜ್ಜಿತ ಯಕ್ಷಗಾನ ತಂಡವನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಯಕ್ಷಗಾನ ತಂಡವನ್ನು ಕಟ್ಟುವ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಹಿರಿಯ ಕಲಾವಿದ ಶ್ರೀನಿವಾಸ ಭಟ್, ಧರ್ಮಸ್ಥಳದಲ್ಲಿ ತರಬೇತಿ ಪಡೆದ ಮೋಹನ್ ಎಡನೀರು ಮುಂತಾದವರ ಕಲಾ ನಿರ್ದೇಶನದೊಂದಿಗೆ ಬೆಳೆಯುತ್ತಾ ಯಕ್ಷಗಾನ ತಂಡ ರಮೇಶ್ ಮಂಜೇಶ್ವರ ಅವರ ಉಸ್ತುವಾರಿ ಯೊಂದಿಗೆ 13ನೇ ವರ್ಷಕ್ಕೆ ಕಾಲಿಟ್ಟಿದೆ. ಬಹುಶಃ ಇಂದು ಬಹ್ರೈನ್‌ನ ಯಕ್ಷಗಾನ ಕಲಾವಿದರು ಅದ್ಭುತ ಕಾರ್ಯಕ್ರಮಗಳನ್ನು ನೀಡುವಲ್ಲಿ ಯಶಸ್ವಿ ಯಾಗಿದ್ದರೆ ಅದರ ಹಿಂದೆ ರಮೇಶ್ ಅವರ ತನು-ಮನ-ಧನದ ಸಹಕಾರ ಸಾಕಷ್ಟಿದೆ.
ಅಂದಹಾಗೆ ಬಹ್ರೈನ್ ದೇಶಕ್ಕೆ ಭೇಟಿ ನೀಡಿರುವ ಯಕ್ಷಗಾನ ದಿಗ್ಗಜರು, ಗಣ್ಯರು ಹಾಗೂ ವಿದ್ವಾಂಸರ ಪಟ್ಟಿಯೂ ಸಾಕಷ್ಟು ಉದ್ದವಿದೆ. ದಿ| ಶೇಣಿ ಗೋಪಾಲಕೃಷ್ಣ ಭಟ್, ದಿ| ಎಂ. ಎಂ. ಹೆಗ್ಡೆ, ದಿ| ಶಂಭು ಹೆಗ್ಡೆ, ದಿ| ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ದಿ| ಕಾಳಿಂಗ ನಾವಡ, ಪಕಳಕುಂಜ ಕೃಷ್ಣ ನಾಯಕ್, ಪ್ರೊ| ಅಮೃತ ಸೋಮೇಶ್ವರ, ಕುಂಬಳೆ ಸುಂದರ ರಾವ್, ಮಿಜಾರು ಅಣ್ಣಪ್ಪ, ಡಾ| ಕೋಳ್ಯೂರು ರಾಮಚಂದ್ರ ರಾವ್, ಕೆ. ಗೋವಿಂದ ಭಟ್, ಪೊಲ್ಯ ಲಕ್ಷಿ$¾àನಾರಾಯಣ ಆಳ್ವ, ಪ್ರೊ| ಪ್ರಭಾಕರ ಜೋಶಿ, ಪುತ್ತೂರು ಶ್ರೀಧರ ಭಂಡಾರಿ ಮುಂತಾದವರು ಬಹ್ರೈನ್‌ಗೆ ಭೇಟಿ ನೀಡಿರುವುದು ಈಗ ಇತಿಹಾಸ.
ಉಡುಪಿ ಕಲಾರಂಗ, ಶ್ರೀಕೃಷ್ಣ ಯಕ್ಷಸಭಾ, ಕದ್ರಿ ಮುಂತಾದ ಪ್ರಮುಖ ಸಂಘಟನೆಗಳ ಸದಸ್ಯರೂ ಆಗಿರುವ ಮಂಜೇಶ್ವರ್ ಅವರಿಗೆ ಯಕ್ಷಗಾನದಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ. ಕುಂಬ್ಳೆ ಸುಂದರ ರಾವ್ ಅವರ ಒಡನಾಟದಿಂದಾಗಿ ಆ ಆಸಕ್ತಿ ಹೆಚ್ಚುತ್ತಾ ಹೋಯಿತು. ಯಕ್ಷಗಾನದ ತನ್ನ ಈ ಯಶೋಗಾಥೆಯಲ್ಲಿ ಕಳೆದ 12 ವರ್ಷಗಳಿಂದ ಸಹಕಾರ ನೀಡಿದ ಸರ್ವರನ್ನೂ ಕೃತಜ್ಞತೆಯಿಂದ ಸ್ಮರಿಸುವ ರಮೇಶ್ ಮಂಜೇಶ್ವರ್ ಅವರು, ತಂಡದ ಮೊದಲ ದಿನಗಳಲ್ಲಿನ ಪ್ರೋತ್ಸಾಹಕ್ಕಾಗಿ ವಿಶ್ವನಾಥ ಅಮೀನ್, ಕೆ. ಸಿ. ಉದ್ಯಾವರ, ದೂಮಣ್ಣ ರೈ, ಶ್ರೀನಿವಾಸ ಭಟ್, ಮೋಹನ್ ಎಡನೀರು, ರಮೇಶ್ ರಾಮಚಂದ್ರನ್ ಮುಂತಾದವರನ್ನೂ, ಸರ್ವ ಕಲಾವಿದ ಮಿತ್ರರನ್ನೂ ಸ್ಮರಿಸುತ್ತಾರೆ.
ಬಹ್ರೈನ್‌ನ ಪ್ರಖ್ಯಾತ ಸಂಸ್ಥೆಯೊಂದರಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿರುವ ರಮೇಶ್ ಅವರು ಬಹ್ರೈನ್‌ನಲ್ಲಿ ಯಕ್ಷಗಾನ ಕಲೆಯನ್ನು ಈ ಮಟ್ಟಕ್ಕೇರಿಸುವಲ್ಲಿ ಪಟ್ಟ ಶ್ರಮ ಅಭಿನಂದನೀಯ. ರಮೇಶ್ ಮಂಜೇಶ್ವರ್ ಅವರ ನಾಯಕತ್ವದಿಂದಾಗಿಯೇ ಯಕ್ಷಗಾನ ತಂಡವು ಈ ಮಟ್ಟಕ್ಕೆ ಬೆಳೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸದಾ ಕನ್ನಡ ಸಂಘದ ಆಶ್ರಯದಲ್ಲೇ ಬೆಳೆದು ಬಂದ, ಕಾರ್ಯಕ್ರಮ ನೀಡಿದ ಯಕ್ಷಗಾನ ತಂಡವು ನಡೆದು ಬಂದ ದಾರಿ, ಯಕ್ಷಗಾನ ತಂಡಗಳಿಗೊಂದು ಮಾದರಿ. ಹಿಮ್ಮೇಳ, ಮುಮ್ಮೇಳಗಳೆಲ್ಲದರಲ್ಲೂ ನುರಿತ ಕಲಾವಿದರನ್ನು ಹೊಂದಿರುವ ತಂಡದಲ್ಲಿ ಮಹಿಳಾ ಕಲಾವಿದರೂ ಇರುವುದು ತಂಡದ ಘನತೆಯನ್ನು ಹೆಚ್ಚಿಸಿದೆ.
ಹೊರನಾಡಿನಲ್ಲಿ ಯಕ್ಷಗಾನದ ಬಾವುಟವನ್ನು ಗಗನದೆತ್ತರಕ್ಕೆ ಹಾರಿಸಿದ ರಮೇಶ್ ಮಂಜೇಶ್ವರ್ ಅವರನ್ನು ಬಹ್ರೈನ್ ಹಾಗೂ ಕರ್ನಾಟಕದಲ್ಲಿ ಹತ್ತು ಹಲವು ಸಂಘಟನೆಗಳು ಗೌರವಿಸಿವೆ, ಸಮ್ಮಾನಿಸಿವೆ. ಕನ್ನಡ ಸಂಘದ ಉಪ ಮನೋರಂಜನಾ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹಲವು ವರ್ಷಗಳ ಸೇವೆ ಸಲ್ಲಿಸಿದ ರಮೇಶ್ ಮಂಜೇಶ್ವರ ಅವರನ್ನು ಯಕ್ಷಗಾನಕ್ಕೆ ಸಲ್ಲಿಸಿದ ಸೇವೆಗಾಗಿ "ಸಂಭ್ರಮ -2008' ಕಾರ್ಯಕ್ರಮದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಮ್ಮಾನಿಸಿದ್ದರು. ಅದೇ ವರ್ಷ ಕನ್ನಡ ಸಂಘಕ್ಕೆ ಸಲ್ಲಿಸಿದ ಅಪರಿಮಿತ ಸೇವೆ ಗಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಲೂ ರಮೇಶ್ ಮಂಜೇಶ್ವರ್ ಗೌರವಿಸಲ್ಪಟ್ಟಿದ್ದರು.
ಹೊರನಾಡಿನಲ್ಲಿ ಯಕ್ಷಗಾನದ ಕಂಪನ್ನು ಪಸರಿ ಸಿದ ಇವರನ್ನು ಇನ್ನಷ್ಟು ಗೌರವಗಳು ಅರಸಿ ಬರಲಿ. ಇವರಿಂದ ಯಕ್ಷಗಾನಕ್ಕೆ ಇನ್ನಷ್ಟು ಸೇವೆ ಸಲ್ಲಲಿ.