ಪ್ರೊ| ಎಸ್. ವಿ. ಉದಯಕುಮಾರ ಶೆಟ್ಟಿ | Aug 04, 2012
ಬಡಗುತಿಟ್ಟು ಯಕ್ಷಗಾನ ರಂಗವನ್ನು ತನ್ನ ಬಣ್ಣದ ವೇಷದ ಆರ್ಭಟದಿಂದ ಆಳುತ್ತ ಅರುವತ್ತು ದಶಕಗಳಿಗೂ ಅಧಿಕ ಕಾಲ ಕಲಾಸೇವೆಗೈದ ಬಣ್ಣದ ವೇಷಧಾರಿ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯನವರ ಮಕ್ಕಳು- ಮೊಮ್ಮಕ್ಕಳಿಂದ ಸ್ಥಾಪನೆಯಾದ "ಬಣ್ಣದ ಸಕ್ಕಟ್ಟು ಪ್ರತಿಷ್ಠಾನ'ದ ಈ ಸಾಲಿನ ಪ್ರಶಸ್ತಿಗೆ ಸುಮಾರು 73 ವರ್ಷದ ಹಿರಿಯ ಕಲಾವಿದ, ಸಕ್ಕಟ್ಟಿನವರ ಒಡನಾಡಿ ಜಂಬೂರು ರಾಮಚಂದ್ರಯ್ಯನವರು ಆಯ್ಕೆಯಾಗಿ¨ªಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೌಕೂರಿನಲ್ಲಿ ಆಗಸ್ಟ್ 12ರಂದು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ. ಕಾರ್ಯಕ್ರಮಕ್ಕೆ ಮುನ್ನ ಪಣಂಬೂರಿನ ಮಕ್ಕಳ ಮೇಳದ "ಸುದರ್ಶನ ವಿಜಯ' ಹಾಗೂ ಅನಂತರ ಬಡಗುತಿಟ್ಟಿನ ಆಹ್ವಾನಿತ ಕಲಾವಿದರಿಂದ "ವಿದ್ಯುನ್ಮತೀ ಕಲ್ಯಾಣ' ಯಕ್ಷಗಾನ ಪ್ರದರ್ಶನ ಸಹಿತ ದಿನವಿಡಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಮುಂತಾದ ಘಟಾನುಘಟಿ ಕಲಾವಿದರೊಂದಿಗೆ ರಂಗಸ್ಥಳ ಹಂಚಿಕೊಂಡು ದೀರ್ಘಕಾಲ ಕಲಾಸೇವೆ ಮಾಡಿದವರು ರಾಮಚಂದ್ರ ಶ್ಯಾನುಭೋಗರು.ಸಕ್ಕಟ್ಟಿನವರ ಬಣ್ಣದ ವೇಷಕ್ಕೆ ಇವರ ಜೊತೆ ವೇಷ ರಂಗಕ್ಕೆ ರಂಗು ನೀಡುತಿದ್ದ ಕಾಲವೊಂದಿತ್ತು. ಸಕ್ಕಟ್ಟಿನವರ ಘಟೋತ್ಕಚನಿಗೆ ಇವರ ಅಭಿಮನ್ಯು, ಶೂರ್ಪನಖೆಗೆ ಲವಕುಶ, ಕಾಲಜಂಘನಿಗೆ ಚಿತ್ರಕೇತ ಮುಂತಾದ ಮೂರನೇ ವೇಷಗಳು ಒಂದು ಕಾಲದಲ್ಲಿ ಜನಜನಿತವಾಗಿತ್ತು. ಈ ಜೋಡಿಗಾಗಿ ನಿತ್ಯವೂ "ಕನಕಾಂಗಿ ಕಲ್ಯಾಣ' ಪ್ರಸಂಗವನ್ನು ಆಗಿನ ಪ್ರೇಕ್ಷಕರು ಬಯಸುತ್ತಿದ್ದರಂತೆ. ಹಿರಿಯ ಕಲಾವಿದರಾದ ಕುಂಜಾಲು ಶೇಷಗಿರಿ ಕಿಣಿ, ಜಾನುವಾರುಕಟ್ಟೆ ಕಾಮತರು, ಗುಂಡ್ಮಿ ರಾಮಚಂದ್ರ ನಾವಡರು, ಗೋರ್ಪಾಡಿ ವಿಠಲ ಪಾಟೀಲರು, ನೀಲಾವರ ರಾಮಕೃಷ್ಣಯ್ಯ, ಮತ್ಯಾಡಿ ನರಸಿಂಹ ಶೆಟ್ಟಿ, ನೆಲ್ಲೂರು ಮರಿಯಪ್ಪಆಚಾರ್, ಹಿರಿಯಡ್ಕ ಗೋಪಾಲ ರಾವ್, ಚೆಂಡೆಕಿಟ್ಟು, ಹುಂಚದಕಟ್ಟೆ ಶ್ರೀನಿವಾಸ ಆಚಾರ್ ಮುಂತಾದ ಕುಂಜಾಲು ಪರಂಪರೆಯ ಹಿಮ್ಮೇಳಕ್ಕೆ ಹೆಜ್ಜೆ ಹಾಕಿದ ಇವರು ಶುದ್ಧ ನಡುತಿಟ್ಟಿನ ಪ್ರಾತಿನಿಧಿಕ ಕಲಾವಿದರು. ನಡುತಿಟ್ಟಿನ ಯಕ್ಷಲೋಕಕ್ಕೆ ಮಹಾನ್ ಕಲಾವಿದರನ್ನು ನೀಡಿದ ಶಿರಿಯಾರ-ಹಳ್ಳಾಡಿ ಪರಿಸರದವರೇ ಆದ ಇವರಿಗೆ ಪರಿಸರದ ಪ್ರಭಾವವೇ ಕಲಾವಿದನಾಗಿ ಬೆಳೆಯುವಲ್ಲಿ ಸಹಕರಿಸಿತು.
ಉಡುಪಿ ತಾಲೂಕು ಶಿರಿಯಾರ ಗ್ರಾಮದ ಜಂಬೂರು ಎಂಬ ಪುಟ್ಟ ಹಳ್ಳಿಯಲ್ಲಿ ಮಂದರ್ತಿ ಮೇಳದ ಆಗಿನ ಸಂಗೀತಗಾರರಾದ ಶ್ರೀನಿವಾಸ ಶ್ಯಾನುಭೋಗ ಮತ್ತು ಲಕ್ಷ್ಮೀ ಅಮ್ಮನವರ ಪುತ್ರನಾಗಿ ಜನಿಸಿದರು. ಸಾೖಬರಕಟ್ಟೆ ಮತ್ತು ಬಾರಕೂರುಗಳಲ್ಲಿ ಎರಡನೇ ತರಗತಿ ವಿದ್ಯಾಭ್ಯಾಸ ಮಾಡಿ ತನ್ನ 16ನೇ ವಯಸ್ಸಿನಲ್ಲಿ ಮಂದರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಕೇಳಿ ತಿಳಿ -ನೋಡಿ ಕಲಿ ಎಂಬುದನ್ನೇ ವೃತ್ತಿ ಬದುಕಿಗೆ ಪಾಠವಾಗಿರಿಸಿಕೊಂಡು ರಂಗಸ್ಥಳವನ್ನೇ ಪಾಠ ಶಾಲೆಯಾಗಿ ಮಾಡಿಕೊಂಡು ಕಲಿತವರು. ಪರಂಪರೆಯ ಪ್ರೌಢ ಪ್ರತಿನಿಧಿಯಂತೆ ಕಾಣುವ ಇವರು ದೈತ್ಯ ಪ್ರತಿಭೆಯ ವಿಶಿಷ್ಟ ಕಲಾವಿದರು. ಚಿಕ್ಕ ಪ್ರಾಯದÇÉೇ ತಂದೆಯನ್ನು ಕಳೆದುಕೊಂಡ ಬಳಿಕ ಹಾರಾಡಿ ಪರಂಪರೆಯ ಹಿರಿಯ ಕಲಾವಿದರ ಒಡನಾಡಿಯಾಗಿ, ಅವರ ಮಾರ್ಗದರ್ಶನ ದಲ್ಲಿ ಪರಿಪೂರ್ಣ ಕಲಾವಿದರಾಗಿ ಬೆಳೆದರು.
ಯಕ್ಷಗಾನದ ಪುಂಡು ವೇಷಗಳಲ್ಲಿ ವಿಶೇಷ ಸಾಧನೆ ಮಾಡಿದ ಇವರ ಸುಧನ್ವ, ಬಬ್ರುವಾಹನ, ಲವಕುಶ, ಚಿತ್ರಕೇತ, ಕೃಷ್ಣ, ಕಮಲಧ್ವಜ ಮುಂತಾದ ವೇಷಗಳು ಬಹುಪ್ರಸಿದ್ಧಿ ಪಡೆದಿದ್ದವು. "ಕೃಷ್ಣಾರ್ಜುನ ಕಾಳಗ'ದ ಹಾರಾಡಿ ರಾಮ ಗಾಣಿಗರ ಅರ್ಜುನನೆದುರು ಅಭಿಮನ್ಯು ವಾಗಿ, "ಲವಕುಶ'ದ ವಿಭೀಷಣನೆದುರು ಲವಕುಶರಾಗಿ, "ಜಾಂಬವತಿ ಕಲ್ಯಾಣ'ದ ಜಾಂಬವ ನೆದುರು ಪ್ರಸೇನನಾಗಿ ಪ್ರಸಿದ್ಧಿ ಪಡೆದಿದ್ದರು. ಪುರಾಣ ಲೋಕದ ಪೋಷಕ ಪಾತ್ರಗಳು, ಪುರುಷ ವೇಷ ಹಾಗೂ ಎರಡನೇ ವೇಷವನ್ನೂ ನಿರ್ವಹಿಸಿ ಗೆಲುವು ಕಂಡವರು ರಾಮಚಂದ್ರಯ್ಯನವರು. ಅವರ ಧರ್ಮರಾಯ, ಕೌರವ, ದೇವೇಂದ್ರ ವಸಿಷ್ಠ, ಮುಂತಾದ ಪೋಷಕ ಪಾತ್ರಗಳು, "ರಾಮಾಂಜನೇಯ'ದ ರಾಮ, ಚಿತ್ರಸೇನ, ಜಮದಗ್ನಿ, ಲವಣಾಸುರ ಶತ್ರುಘ್ನ, ಅಂಗಾರವರ್ಮ ಮುಂತಾದ ಎರಡನೇ ವೇಷಗಳು ಸಹ ಅಷ್ಟೇ ಪ್ರಸಿದ್ಧಿ ಪಡೆದಿದ್ದವು. ಇವೆಲ್ಲವೂ ಅವರ ರಂಗದಲ್ಲಿನ ಗರಿಷ್ಠ ಮಟ್ಟದ ಕಲಾಭಿವ್ಯಕ್ತಿ, ಪಾತ್ರನಿಷ್ಠವಾದ ನಾಟ್ಯ, ಅಭಿನಯಶೀಲತೆ, ಮೇಲಾಗಿ ಸಾಹಿತ್ಯ ಶುದ್ಧಿಗೆ ಕನ್ನಡಿ ಹಿಡಿದಿದ್ದವು.
ನಿರಂತರ 25 ವರ್ಷ ಮಂದರ್ತಿ ಮೇಳದಲ್ಲಿ ಸೇವೆ ಸಲ್ಲಿಸಿದ ರಾಮಚಂದ್ರಯ್ಯನವರು ಮಾರಣಕಟ್ಟೆ, ಅಮೃತೇಶ್ವರಿ, ಕಮಲಶಿಲೆ, ಹಾಲಾಡಿ, ಪೆರ್ಡೂರು, ಗುಂಡಬಾಳ ಮೇಳಗಳಲ್ಲದೇ ಶಂಭು ಹೆಗಡೆ ಯವರ ಒಡನಾಡಿಯಾಗಿ ಇಡಗುಂಜಿ ಮೇಳದಲ್ಲಿ ತಿರುಗಾಟ ನಡೆಸಿದ 12 ವರ್ಷಗಳ ಸಹಿತ ಒಟ್ಟು ಸುಮಾರು 60 ವರ್ಷಗಳ ನಿರಂತರ ಕಲಾ ಯಾತ್ರೆ ನಡೆಸಿದ್ದಾರೆ. ಶ್ಯಾನುಭೋಗರನ್ನು ಅಂದಿನ ಪ್ರಧಾನಿ ರಾಜೀವ ಗಾಂಧಿಯವರು ತಿರುವಾಯೂರಿನಲ್ಲಿ ಸಮ್ಮಾನಿಸಿ¨ªಾರೆ. ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ, ಮಂದರ್ತಿ ಕ್ಷೇತ್ರದ ಸಮ್ಮಾನದ ಸಹಿತ ಹಲವಾರು ಸಮ್ಮಾನ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
ಸಕ್ಕಟ್ಟಿನವರೊಂದಿಗೆ ದೀರ್ಘಕಾಲ ಕಲಾ ವ್ಯವಸಾಯಗೈದ ಶ್ಯಾನುಭೋಗರ ಆಯ್ಕೆ ಸಕ್ಕಟ್ಟು ಪ್ರಶಸ್ತಿಗೆ ಇನ್ನಷ್ಟು ಘನತೆ ಗೌರವ ತಂದಿದೆ.