ಸುಮಾರು 60ರ ದಶಕದ ಮೊದಲ ಭಾಗದಲ್ಲಿ ಯಕ್ಷಗಾನದ ತೀವ್ರ ಸೆಳೆತಕ್ಕೆ ನಾನು ಒಳಗಾದೆನೆಂಬುದು ನೆನಪು. ಆ ಕಾಲಕ್ಕೆ ಖ್ಯಾತನಾಮ ವೇಷಧಾರಿಗಳ ಹಲವು ವೇಷಗಳನ್ನೂ ಅನೇಕ ಭಾಗವತರ ಹಾಡುಗಾರಿಕೆಯನ್ನು ಕಂಡು -ಕೇಳಿರುವುದು ಸ್ಮತಿಪಠಲದಲ್ಲಿ ಸದಾ ಹಚ್ಚಹಸಿರು. ಯಕ್ಷಗಾನಕ್ಕೊಂಡು ವಿಶಿಷ್ಟ ಧಾಟಿ ಇದೆ. ವಾಡಿಕೆಯಲ್ಲಿ ಅದನ್ನು ಮಟ್ಟು ಎನ್ನುವುದು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಆ ಧಾಟಿ ಕಣ್ಮರೆಯಾಗಿದೆ. ಭಾಗವತರು ಕೃತಕ ಸ್ವರದಲ್ಲಿ ಹಾಡುವುದು, ನಾಲ್ಕೈದು ಅಥವಾ ಹೆಚ್ಚು ಬಾರಿ ಹೇಳುವುದು ಅಥವಾ ಪುನರಾವರ್ತನೆ ಮಾಡುವುದು, ಆ ವೇಳೆಗೆ ವೇಷಧಾರಿ ಪದದ ಸ್ಥಾಯಿ ಭಾವಕ್ಕೆ ಹೊರತಾಗಿ ಶಬ್ದಕ್ಕೆ ಸೀಮಿತವಾದ ಅರ್ಥದಂತೆ ಅಭಿನಯಿಸುವುದು, ಒಟ್ಟು ಪ್ರದರ್ಶನದ ಸಂಯೋಜನೆಯಲ್ಲಿ ಏನೋ ಗೊಂದಲವಿರುವುದು ಭಾಸವಾಗುತ್ತದೆ.
ಇದರಲ್ಲೇನೋ ತಾಂತ್ರಿಕ ದೋಷ ನುಸುಳಿದೆ ಎಂಬುದನ್ನು ಸದಭಿರುಚಿಯ ಪ್ರೇಕ್ಷಕ ಸುಲಭ ದಲ್ಲಿ ಗುರುತಿಸಬಹುದಾಗಿದೆ ಹಾಗೂ ಸೂತ್ರ ಧಾರರಂತಿರಬೇಕಾದ ಭಾಗವತರಿಂದಲೇ ಇದು ಆರಂಭವಾಗುತ್ತದೆ ಎನ್ನುವುದು ಎದ್ದು ಕಾಣು ತ್ತಿದೆ. ಈ ತಾಂತ್ರಿಕ ದೋಷವನ್ನು ನಿವಾರಿಸುವ ಪ್ರಯತ್ನ ಮಾಡದಿದ್ದಲ್ಲಿ ತಪ್ಪೇ ಸರಿ ಎಂಬ ಭ್ರಮೆ ಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
ಯಕ್ಷಗಾನದ ಪದಗಳು ಛಂದೋಬದ್ಧ ವಾಗಿವೆ. ಪದಗಳ ರಚನೆಯಲ್ಲಿ ಛಂದಸ್ಸನ್ನು ತಾಳಕ್ಕೆ ಕೂರಿಸಲಾಗಿದೆ. ಅಕ್ಷರ ಕಾಲಕ್ಕೆ ಗಮಕ ಗಳನ್ನು ಈಗ ತರುತ್ತಾ ಇಲ್ಲ. ಛಂದಸ್ಸಿಗೆ ಅತೀತ ವಾಗಿ 2-3 ಬಾರಿ ಹೇಳುತ್ತಾರೆ. ಈ ಅಭ್ಯಾಸ ವ್ಯಾಪಕವಾಗಿದೆ. ಹಾಗಾಗಿ ಮರಳಿ ಛಂದೋ ಬದ್ಧ ಹಾಗೂ ತಾಳಬದ್ಧ ಗಮಕದಿಂದ ನಡೆಸುವ ದಾರಿಯನ್ನು ಹೇಳಿಕೊಡಬೇಕಾದ ಅನಿವಾರ್ಯತೆ ಇದೆ. ಈ ವಿಚಾರದಲ್ಲಿ ತಜ್ಞರಾದ ಡಾ| ರಾಘವ ನಂಬಿಯಾರ್ ಅವರ ಸಲಹೆ ಮೇರೆಗೆ, ಅವರ ನೇತೃತ್ವದಲ್ಲಿ ಖ್ಯಾತ ಯಕ್ಷ ಶಿಕ್ಷಕ ಗುಂಡ್ಮಿ ಸದಾನಂದ ಐತಾಳರ ಮತ್ತು ತಜ್ಞ ಬನ್ನಂಜೆ ನಾರಾಯಣರ ಸಹಯೋಗದಲ್ಲಿ "ಛಂದಸ್ಸು-ತಾಳ-ಗಾಯನ' ಶಿಬಿರವನ್ನು ಈಚೆಗೆ ಬ್ರಹ್ಮಾವರದ ನಾರಾಯಣ ಗುರು ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಮೊದಲಾಗಿ ಭಾಗವತರನ್ನು ಸಹಜ ಸ್ವರದಿಂದ ಹಾಡಲು ಪ್ರೇರೇಪಿಸ ಲಾಯಿತು. ತಾಳದ ಸ್ವರೂಪ ಹಾಗೂ ಅಕ್ಷರ ಗಳ ನಡಿಗೆ ಇವುಗಳನ್ನು ವಿವರವಾಗಿ ಮೂಲಕ ತೋರಿಸಿಕೊಡಲಾಯಿತು. ಪದದ ಆಶಯ ರಾಗದ ಸ್ವರೂಪದಲ್ಲಿ ಹೇಗೆ ಪ್ರತಿಬಿಂಬಿತವಾಗುತ್ತದೆ ಎಂಬುದನ್ನು ತೋರಿಸಿಕೊಡಲಾಯಿತು.ಛಂದಸ್ಸಿನ ಮಾತ್ರಾಗಣ, ಅಂಶಗಣಗಳನ್ನು ವಿವರವಾಗಿ ತಿಳಿಸಿಕೊಟ್ಟು ಗಣಗಳಿಗೂ ತಾಳಕ್ಕೂ ಇರುವ ಸಂಬಂಧವನ್ನು ತಿಳಿಸಿಕೊಡಲಾಯಿತು. ಅಲ್ಲದೆ ಇವೆಲ್ಲ ವನ್ನು ಎಲ್ಲಾ ತಾಳಗಳ ಸಂದರ್ಭಗಳಿಗೆ ಅನ್ವಯಿಸಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿ ಕೊಡಲಾಯಿತು. ಈ ಎಲ್ಲಾ ಅಂಶಗಳನ್ನು ಶಿಬಿರಾರ್ಥಿಗಳು ಮನವರಿಕೆ ಮಾಡಿ ಕೊಂಡರಲ್ಲದೆ ಅತ್ಯಾಸಕ್ತಿಯಿಂದ ಅನುಷ್ಠಾನಿಸಿ ತೋರಿಸಿರುವುದು ಆಶಾದಾಯಕವಾದ ವಿಚಾರ.