Udayavani | Aug 05, 2012
ಪಲ್ಲೆಕೆಲೆ : 'ಮೈಕ್ರೋಮ್ಯಾಕ್ಸ್ ಕಪ್' ಸರಣಿಯಲ್ಲಿ ಆತಿಥೇಯ ಶ್ರೀಲಂಕಾವನ್ನು ಅಂತಿಮ ಪಂದ್ಯದಲ್ಲೂ ಮಣಿಸಿದ ಭಾರತ 4-1 ಸರಣಿ ಜಯದೊಂದಿಗೆ ಐಸಿಸಿ ಏಕದಿನ ರಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ.

ಶನಿವಾರ ನಡೆದ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ 20 ರನ್ ಅಂತರದ ಜಯ ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಧೋನಿ ಪಡೆ 7 ವಿಕೆಟಿಗೆ 294 ರನ್ ಪೇರಿಸಿದರೆ, ಶ್ರೀಲಂಕಾ 45.4 ಓವರ್‌ಗಳಲ್ಲಿ 274ಕ್ಕೆ ಆಲೌಟ್ ಆಯಿತು.

61 ರನ್ನಿಗೆ 5 ವಿಕೆಟ್ ಹಾರಿಸಿದ ಇರ್ಫಾನ್ ಪಂದ್ಯಶ್ರೇಷ್ಠ ಹಾಗೂ ವಿರಾಟ್ ಕೊಹ್ಲಿ ಸರಣಿಶ್ರೇಷ್ಠರಾಗಿ ಮೂಡಿಬಂದರು.

ಭಾರತವಿನ್ನು ಈ ಪ್ರವಾಸದಲ್ಲಿ ಏಕೈಕ ಟಿ-20 ಪಂದ್ಯ ಆಡಬೇಕಿದ್ದು, ಇದು ಮಂಗಳವಾರ ಇದೇ ಅಂಗಳದಲ್ಲಿ ಸಾಗಲಿದೆ.

ಈ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತವು ಗೌತಮ್ ಗಂಭೀರ್, ಮನೋಜ್ ತಿವಾರಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಅಮೋಘ ಬ್ಯಾಟಿಂಗ್‌ನಿಂದ 7 ವಿಕೆಟಿಗೆ 294 ರನ್ ಗಳಿಸಿತ್ತು.

ಗಂಭೀರ್ ಮತ್ತು ತಿವಾರಿ 4ನೇ ವಿಕೆಟಿಗೆ ಶತಕದ ಜತೆಯಾಟವೊಂದನ್ನು ದಾಖಲಿಸಿದರೆ, ಕೊನೆಯ ಹಂತದಲ್ಲಿ ಸಿಡಿದು ನಿಂತ ಧೋನಿ 38 ಎಸೆತಗಳಿಂದ 58 ರನ್ ಬಾರಿಸಿ ತಂಡದ ಮೊತ್ತವನ್ನು ಮುನ್ನೂರರ ಗಡಿ ಸಮೀಪಕ್ಕೆ ತಂದು ನಿಲ್ಲಿಸಿದರು.

ಶನಿವಾರ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿ ಯಂನಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ಈಗಾಗಲೇ ಸರಣಿ ವಶಪಡಿಸಿಕೊಂಡಿದ್ದರಿಂದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹವಾಗ್ ಅವರಿಗೆ ವಿಶ್ರಾಂತಿ ನೀಡಿತು. ಇವರ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಆರಂಭಿಕನಾಗಿ ಇಳಿದರು. ಆದರೆ ಸರಣಿಯಲ್ಲಿ ದೊರಕಿದ ಈ ಮೊದಲ ಅವಕಾಶವನ್ನು ಸಮರ್ಥ ರೀತಿಯಲ್ಲಿ ಬಳಸಿ ಕೊಳ್ಳಲು ಅವರಿಂದಾಗಲಿಲ್ಲ. 17 ಎಸೆತಗಳಿಂದ 9 ರನ್ ಮಾಡಿ ಪೆರೆರ ಎಸೆತದಲ್ಲಿ ಲೆಗ್ ಬಿಫೋರ್ ಆದರು. ಆಗ ಭಾರತ 6ನೇ ಓವರ್‌ನಲ್ಲಿ 29 ರನ್ ಮಾಡಿತ್ತು.

ವಿರಾಟ್ ಕೊಹ್ಲಿ ಅವರನ್ನು ಕೂಡಿಕೊಂಡ ಗಂಭೀರ್ ದ್ವಿತೀಯ ವಿಕೆಟಿಗೆ 48 ರನ್ ಒಟ್ಟುಗೂಡಿಸಿದರು. ತಂಡದ ಸ್ಕೋರ್ 77ಕ್ಕೆ ತಲುಪಿದಾಗ ನುವಾನ್‌ಪ್ರದೀಪ್ ಈ ಜೋಡಿ ಮುರಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ ಇಲ್ಲಿ 35 ಎಸೆತಗಳಿಂದ 23 ರನ್ ಗಳಿಸಿ ಲೆಗ್ ಬಿಫೋರ್ ಆದರು.

ರೋಹಿತ್ ಶರ್ಮ ಅವರ ವೈಫಲ್ಯ 5ನೇ ಪಂದ್ಯದಲ್ಲೂ ಮುಂದುವರಿಯಿತು. ಪ್ರದೀಪ್ ಎಸೆತವೊಂದನ್ನು ಲೆಗ್‌ಸೈಡ್‌ನತ್ತ ಬಾರಿಸಲು ಯತ್ನಿಸುವ ವೇಳೆ ರೋಹಿತ್ ಶರ್ಮ ಅವರ ಆಫ್ಸ್ಟಂಪ್ ಎಗರಿ ಹೋಯಿತು. ಮುಂಬೈಕರ್ ಗಳಿಕೆ ನಾಲ್ಕೇ ರನ್. ಅಲ್ಲಿಗೆ ಭಾರತದ ಸ್ಥಿತಿ 3ಕ್ಕೆ 87.

ತಿವಾರಿ ಸವಾರಿ

ಹಿಂದಿನ ಪಂದ್ಯದಲ್ಲಿ ಬೌಲಿಂಗ್ ಮೂಲಕ ಭಾರತದ ರಕ್ಷಣೆಗೆ ನಿಂತಿದ್ದ ಮನೋಜ್ ತಿವಾರಿ ಇಲ್ಲಿ ಬ್ಯಾಟಿಂಗ್‌ಮೂಲಕ ಆಪದಾºಂಧವನ ಪಾತ್ರವನ್ನು ಚೊಕ್ಕವಾಗಿ ನಿಭಾಯಿಸಿದರು. ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಗಂಭೀರ್‌ಗೆ ತಿವಾರಿಯಿಂದ ಅತ್ಯುತ್ತಮ ಬೆಂಬಲ ಲಭಿಸಿತು. ಇವರು 4ನೇ ವಿಕೆಟಿಗೆ 110 ರನ್ ಒಟ್ಟುಗೂಡಿಸಿ ಭಾರತದ ಸ್ಥಿತಿಯನ್ನು ಸುಧಾರಿಸಿದರು. ತಿವಾರಿ ಕಾಣಿಕೆ 65 ರನ್. ಇದು ಭಾರತೀಯ ಸರದಿಯ ದ್ವಿತೀಯ ಸರ್ವಾಧಿಕ ಗಳಿಕೆ. 68 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 6 ಬೌಂಡರಿ ಒಳಗೊಂಡಿತ್ತು.

ಗಂಭೀರ್ ಆಟದ ವೈಖರಿಯನ್ನು ಕಂಡಾಗ ಸರಣಿಯಲ್ಲಿ ಎರಡನೇ ಶತಕ ಬಾರಿಸುತ್ತಾರೆಂದೇ ಭಾವಿಸಲಾಗಿತ್ತು. ಆದರೆ ಇದಕ್ಕೆ ಸೇನಾನಾಯಕೆ ಅಡ್ಡಿಯಾದರು. 99 ಎಸೆತಗಳಿಂದ 88 ರನ್ ಮಾಡಿದ್ದ ಗಂಭೀರ್ ಅವರನ್ನು ಮಾಲಿಂಗ ಕೈಗೆ ಕ್ಯಾಚ್ ಕೊಡಿಸಿದರು. ಎಡಗೈ ಆರಂಭಿಕನ ಬ್ಯಾಟಿನಿಂದ 7 ಬೌಂಡರಿ ಸಿಡಿದಿತ್ತು.
61 ರನ್ನಿಗೆ 5 ವಿಕೆಟ್ ಹಾರಿಸಿದ ಇರ್ಫಾನ್ ಪಂದ್ಯಶ್ರೇಷ್ಠ ಹಾಗೂ ವಿರಾಟ್ ಕೊಹ್ಲಿ ಸರಣಿಶ್ರೇಷ್ಠರಾಗಿ ಮೂಡಿಬಂದರು.
ಭಾರತವಿನ್ನು ಈ ಪ್ರವಾಸದಲ್ಲಿ ಏಕೈಕ ಟಿ-20 ಪಂದ್ಯ ಆಡಬೇಕಿದ್ದು, ಇದು ಮಂಗಳವಾರ ಇದೇ ಅಂಗಳದಲ್ಲಿ ಸಾಗಲಿದೆ.