Sunday, May 19, 2013
Last Updated: 12:53:09 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಂದಾನೇನs ಇದುರು ನಿಂದಾನೇನs
    • ಸೀತಾರಾಮುದಲ್ಲಿ ನಟಿಸುವ ಅವಕಾಶ ಸಿಗುವ ತನಕ ಶಂಕರ್‌ಗೆ ಕರ್ನಾಟಕಕ್ಕೆ ಬರುವ ಯೋಚನೆಯಿರಲಿಲ್ಲ.

      • ಗೋಪಾಲ್‌ ವಾಜಪೇಯಿ | Aug 05, 2012

        (ಕಳೆದ ರವಿವಾರದ ಮುಂದುವರಿಕೆ)

        ಸೀತಾರಾಮುದಲ್ಲಿ ನಟಿಸುವ ಅವಕಾಶ ಸಿಗುವ ತನಕ ಶಂಕರ್‌ಗೆ ಕರ್ನಾಟಕಕ್ಕೆ ಬರುವ ಯೋಚನೆಯಿರಲಿಲ್ಲ. ಸೀತಾರಾಮು ತೆರೆಕಂಡ ಮೇಲೆ ಈ ಗಂಧದ ಗುಡಿಯಲ್ಲಿ ವಾಸ್ತವ್ಯ ಹೂಡದೆ ಅನ್ಯ ವಿಧಿ ಇರಲಿಲ್ಲ. ಶಂಕರ್‌ ಒಬ್ಬ ನಟನಾಗಿ, ಒಬ್ಬ ನಿರ್ದೇಶಕನಾಗಿ ಕನ್ನಡಿಗರಿಗೆ ಹೆಚೆØಚ್ಚು ಇಷ್ಟವಾಗತೊಡಗಿದರು. ಆಮೇಲೆ ತಮ್ಮದೇ ಚಿತ್ರಗಳನ್ನು ನಿರ್ದೆಶಿಸತೊಡಗಿದರು. ತುಂಬ ಬಿಝಿ ನಟರಾಗಿ ದಿನೇ ದಿನೇ ಎತ್ತರಕ್ಕೆ ಏರತೊಡಗಿದರು. ಆದರೂ ಕಾಲು ನೆಲಕ್ಕಂಟಿಸಿಕೊಂಡೇ ಉಳಿದರು ವಿನಾ, ತಲೆ ತಿರುಗಿಸಿಕೊಳ್ಳಲಿಲ್ಲ. ತಾವೊಬ್ಬ ರಂಗಭೂಮಿ ನಟ ಎಂಬುದನ್ನು, ರಂಗಕರ್ಮಿ ಎಂಬುದನ್ನು ಮರೆಯಲಿಲ್ಲ. ರಂಗಭೂಮಿಯ ಗೆಳೆಯರನ್ನು ಮರೆಯಲಿಲ್ಲ. ಸಂಕೇತ್‌ ನಾಟಕ ತಂಡ ಕಟ್ಟಿ, ಹೊಸ ಹೊಸ ಪ್ರಯೋಗಗಳನ್ನು ಮಾಡತೊಡಗಿದರು.

        ನೋಡಿ ಸ್ವಾಮಿ, ನಾವಿರೋದು ಹೀಗೆ ನಾಟಕದೊಂದಿಗೆ ಅವರು ಹುಬ್ಬಳ್ಳಿಗೆ ಬಂದಾಗ ಅಲ್ಲಿಯ ರಂಗಮಂದಿರದಲ್ಲಿ ಸೆಟ್‌, ಲೈಟ್‌ ಅಂತ ಓಡಾಡುತ್ತಲೇ ನನ್ನ ಜೊತೆ ಮಾತಾಡಿದ್ದರು. ಆಗೀಗ ಬೆಂಗಳೂರಿನÇÉೋ ಮತ್ತೆÇÉೋ ಗುಂಪಿನಲ್ಲಿ ಕಂಡ ನನ್ನತ್ತ ಸಸ್ನೇಹ ನಗೆಯೊಂದನ್ನು ಚೆಲ್ಲಿ, ಹೇಗಿದ್ದೀರಿ ಎಂದು ಕಣ್ಣÇÉೇ ಕೇಳುತ್ತಿದ್ದರು. ಧಾರವಾಡದಲ್ಲಿ ಮಿಂಚಿನ ಓಟದ ಚಿತ್ರೀಕರಣದ ನಂತರ ಅವರ ಭೇಟಿ ಅಪರೂಪವಾಗತೊಡಗಿತು.

        ಆ ನಂತರ ತಮ್ಮ ಅಭಿನಯಕ್ಕಷ್ಟೇ ಅಲ್ಲ, ಸಜ್ಜನಿಕೆ, ಸಮಯ ಪರಿಪಾಲನೆಗಳಿಗೆ ಮತ್ತೂಂದು ಹೆಸರೆನಿಸಿದ ಶಂಕರ್‌ ಅತ್ಯಲ್ಪಕಾಲದÇÉೇ ಜನಮಾನಸದಲ್ಲಿ ನೆಲೆನಿಂತರು. ಅವರೊಂದಿಗೆ ಹೆಚ್ಚು ಸೃಜನಾತ್ಮಕವಾಗಿ, ಅರ್ಥಪೂರ್ಣವಾಗಿ ನಾನು ಕಳೆದ ಅವಧಿಯೆಂದರೆ 1988-89ರ ವರ್ಷ.

        ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಅಧಿಕಾರಸೂತ್ರವನ್ನು ಹಿಡಿದವರಿಗೆ ನಾಟಕ, ಸಾಹಿತ್ಯ, ಸಂಗೀತಗಳೆಲ್ಲ ಬರ್ಷಣ (ಅಲರ್ಜಿ). ಇಂಥವುಗಳಲ್ಲಿ ತೊಡಗಿಕೊಂಡವರಿಗೆ ಸಿಗುತ್ತಿದ್ದ ಕರಿನೀರಿನ ಶಿಕ್ಷೆ ಎಂದರೆ ಬೆಂಗಳೂರಿಗೆ ವರ್ಗಾವಣೆ. ನಾನು ಹಾಗೆ ಶಿಕ್ಷೆಗೊಳಗಾಗಿ ಈ ವಿಚಿತ್ರ ನಗರಿಗೆ ಬಂದಿಳಿದಾಗ ನನ್ನ ಕೊರಗನ್ನು ಕಳೆದು ಸಂತಸದಿಂದ ಇಟ್ಟದ್ದು ರಂಗಭೂಮಿಯ ಗೆಳೆಯರೇ.

        ಬೆಳಕಿನ ಮುದ್ದಣ್ಣನ ರೂಮಿನಲ್ಲಿದ್ದುಕೊಂಡು ಸಂತ್ಯಾಗ ನಿಂತಾನ ಕಬೀರ ನಾಟಕ ಅನುವಾದಿಸಿ ಮುಗಿಸಿದ ಹೊಸತಿನÇÉೇ ಗೆಳೆಯ ನಾಗಾಭರಣರ ಕರೆ ಬಂತು. ಆಗ ಸಂತ ಶಿಶುನಾಳ ಶರೀಫ ಚಿತ್ರದ ಪೂರ್ವಸಿದ್ದತೆ ನಡೆದಿತ್ತು. ಭರಣರ ಭೇಟಿಗೆ ಹೋದ ನಾನು ಸಂತದ ಸಂಭಾಷಣೆ ಬರೆಯುವ ಕಾಯಕಕ್ಕೆ ನಿಲ್ಲಬೇಕಾಯಿತು. ಗಾಯಕ ಸಿ. ಅಶ್ವತ್ಥ್ ಪರಿಚಯ ನನಗಾದದ್ದು ಆಗಲೇ. ಚಿತ್ರ ಮುಗಿದು ಡಬ್ಬಿಂಗ್‌ಹಂತದಲ್ಲಿ¨ªಾಗ ನಾನು ಸಂಜೆಗಳನ್ನು ಸಂಕೇತ್‌ ಸ್ಟುಡಿಯೋದಲ್ಲಿ ಕಳೆಯತೊಡಗಿದೆ.

        ಅದೊಂದು ದಿನ ಗೆಳೆಯ ಸೂರಿ (ಎಸ್‌. ಸುರೇಂದ್ರನಾಥ್‌) ""ಶಂಕರ್‌ ಈ ಸಂಜೆ ನಿನ್ನನ್ನ ಭೇಟಿಯಾಗ್ಬೇಕಂತೆ. ಚಿತ್ರಕಲಾ ಪರಿಷತ್ತಿಗೆ ಬಾ' ಎಂದು ಸಂದೇಶ ಕಳುಹಿಸಿದ. ಆಗ ಗಿರೀಶ್‌ ಕಾರ್ನಾಡರ ನಾಗಮಂಡಲ ನಾಟಕವನ್ನು ಸಂಕೇತ್‌ ತಂಡಕ್ಕಾಗಿ ನಿರ್ದೆಶಿಸುತ್ತಲಿದ್ದರು ಶಂಕರ್‌ ಮತ್ತು ಸುರೇಂದ್ರನಾಥ್‌. ಅದನ್ನೊಂದು ಅಭೂತಪೂರ್ವ ಪ್ರಯೋಗವನ್ನಾಗಿ ಮಾಡುವ ಹಂಬಲ ಶಂಕರ್‌ಗೆ. ಚಿತ್ರಕಲಾ ಪರಿಷತ್ತಿನ ಬಯಲೇ ಅವರ ರಂಗ ವೇದಿಕೆ.

        ನನ್ನನ್ನು ಆತ್ಮೀಯವಾಗಿಯೇ ಬರಮಾಡಿಕೊಂಡ ಶಂಕರ್‌, ""ನೀವು ಹಾಡುಗಳನ್ನೂ ಬರೀತೀರಿ ಅಂತ ನನಗೆ ಗೊತ್ತೇ ಇರಲಿಲ್ಲ ನೋಡಿ. ತುಂಬಾ ಚೆನ್ನಾಗಿ ಬರೀತೀರಂತೆ ನೀವು. ಅಶ್ವತ್ಥ್ ಸಾರ್‌ ಹೇಳಿದ್ರು ಈ ಪ್ರಯೋಗಕ್ಕೆ ದಯವಿಟ್ಟು ಒಂದಷ್ಟು ಒಳ್ಳೆಯ ಹಾಡುಗಳನ್ನು ಬರೆದುಕೊಡಿ ಸಾರ್‌' ಅಂತ ಸ್ಕ್ರಿಪ್ಟ್ ಕೈಗಿತ್ತು, ಗಟ್ಟಿಯಾಗಿ ಕೈ ಹಿಡಿದರು. (ಆಹಾ, ಅದೆಂಥ ಸಸ್ನೇಹ ಹಸ್ತಲಾಘವ ಅದು!) ಎÇÉೆಲ್ಲಿ ಹಾಡುಗಳು ಬೇಕು ಎಂಬುದನ್ನೂ ವಿವರಿಸಿದರು.

        ಒಮ್ಮೆಲೇ ಆ ಕೆಲಸವನ್ನು ಒಪ್ಪುವುದು ಕಷ್ಟದ ಕೆಲಸವೇ. ಆದರೂ, ಅವರ ದನಿಯಲ್ಲಿನ ಪ್ರೀತಿ, ಜತೆಗೆ ನನ್ನ ಹೆಸರನ್ನು ಶಿಫಾರಸು ಮಾಡಿದ್ದ ಗುರು ಸಿ. ಅಶ್ವತ್ಥ್ ಅವರ ಮೇಲಿನ ಗೌರವಗಳು ನನ್ನನ್ನು ಒಪ್ಪುವಂತೆ ಮಾಡಿಬಿಟ್ಟವು.

        ಶರೀಫದ ಚಿತ್ರೀಕರಣ ಸಂದರ್ಭದಲ್ಲಿ ಕಾರ್ನಾಡರು ನಾಗಮಂಡಲದ ಕರಡನ್ನು ತಿದ್ದುತ್ತಲಿದ್ದುದರಿಂದ ಆ ಕಥೆ ನನಗೆ ಗೊತ್ತಿತ್ತು. ಆಗೀಗ ಗಿರೀಶ್‌ ಅದರ ಬಗ್ಗೆ ಅಲ್ಲಿ ಚರ್ಚಿಸಿದ್ದೂ ಇತ್ತಲ್ಲ. ನಾಲ್ಕು ನಾಲ್ಕು ಸಲ ಆ ಹಸ್ತಪ್ರತಿಯನ್ನು ಓದಿದೆ. ಆದರೂ ಅದೇನೋ ಅಳುಕು. ಶಂಕರರಂಥ ಪ್ರತಿಭಾವಂತ, ಅಶ್ವತ್ಥ್ ಅವರಂಥ ರಾಗಸಂಯೋಜಕ ಅವರ ನಿರೀಕ್ಷೆಗೆ ತಕ್ಕಂತೆ ನಾನು ಹಾಡುಗಳನ್ನು ಬರೆಯಬÇÉೆನೆ ಎಂಬ ಅನುಮಾನ. ಹೀಗಾಗಿ ಸ್ವಲ್ಪ ನಡುಕ ಹುಟ್ಟಿದ್ದೂ ನಿಜ.

        ಏನಾದರಾಗಲಿ ಅಂತ, ಹೀಂಗಿದ್ದಳೊಬ್ಬಳು ಹುಡುಗೀ ಎಂಬ ಹಾಡು ಬರೆದು ಮುಗಿಸಿದೆ. ಮತ್ತೆ ಮತ್ತೆ ನನಗೆ ನಾನೇ ಓದಿ ನೋಡಿದೆ. ಆ ಹಾಡು ಏನೋ ಒಂದು ರೀತಿ ಖುಷಿ ಕೊಟ್ಟಿತು. ನನಗೆ ಸ್ವಲ್ಪ ಧೈರ್ಯ ಬಂತು. ಇನ್ನೂ ಒಂದೆರಡು ಹಾಡು ಬರೆದು ಮುಗಿಸಿದೆ.

        "ಅವನ್ನು ನೋಡಿ, ಚೆನ್ನಾಗಿವೇರೀ ಲಯದÇÉೇ ಇವೆ' ಅಂತ ಸಿ. ಅಶ್ವತ್ಥ್.

        "ಹಾಗಿದ್ರೆ ಕಂಪೋಸಿಂಗ್‌ ಯಾವಾಗ ಮಾಡ್ತೀರೀ ಗುರುವೇ' ಅಂತ ಶಂಕರ್‌.

        "ಎÇÉಾ ಹಾಡುಗಳೂ ಮುಗೀಲಿ' ಅಂತ ಸುರೇಂದ್ರ

        ನಾಲ್ಕಾರು ದಿನಗಳÇÉೇ ಎಲ್ಲ ಹಾಡುಗಳೂ ಮುಗಿದವು. ಶಂಕರ್‌ ಅವನ್ನು ನೋಡಿ "ಅದ್ಭುತವಾಗಿದೆ ಸಾರ್‌' ಅಂತ ಕುಣಿಯತೊಡಗಿದರೆ, "ಏನು ಅದ್ಭುತ? ಮಣ್ಣಾಂಗಟ್ಟಿ ಮೀಟರಿಗೆ ಬರೀರಿ ಅಂದ್ರೆ ಕಿಲೋಮೀಟರಿಗೆ ಬರೆದಿ¨ªಾರೆ' ಅಂತ ಅಶ್ವತ್ಥ್ .

        ನಾನು ಕುಗ್ಗಿಹೋದೆ. ಹೀಗೆ ಕಾಲೆಳೆಯೋದು ಅಶ್ವತ್ಥ್ ಸ್ಟೆçಲ… ಕಣೋ ಅಂತ ಸುರೇಂದ್ರ ಆಗ ಸಮಾಧಾನಿಸದಿದ್ದರೆ ನಾನು ಪೂರ್ತಿ ಕುಸಿದುಬಿಡುತ್ತಿ¨ªೆನೇನೋ.

        ಎಲ್ಲ ಹಾಡುಗಳೂ ಮುಗಿದ ಮೇಲೆ, ""ನಮ್ಮ ಫಾರ್ಮ್ ಹೌಸ್‌ನಲ್ಲೇ ಕಂಪೋಸಿಂಗ್‌ ಆಗಿಬಿಡ್ಲಿ ಗುರುವೇ ಅಂತ ಶಂಕರ್‌ ಅಭಿಪ್ರಾಯಕ್ಕೆ, ನೀವು ಎಲ್ಲಂತೀರೋ ಅಲ್ಲಿ ಒಟ್ಟು ವ್ಯವಸ್ಥೆ ಅಂದ್ರೆ', ವಾತಾವರಣ "ಚೆನ್ನಾಗಿರಬೇಕು, ಅಷ್ಟೇ' ಅಂತ ನಕ್ಕರು ಅಶ್ವತ್ಥ್.

        ನೀವು ನಂಬುತ್ತೀರೋ ಇಲ್ಲವೋ, ಆ ಕಾಲಕ್ಕೆ ತುಂಬ ಬೇಡಿಕೆಯಲ್ಲಿದ್ದ ಶಂಕರ್‌ ಅಂಥ ಒಬ್ಬ ಸ್ಟಾರ್‌ ನಮ್ಮನ್ನೆಲ್ಲ ತಮ್ಮ ಮೆಟಾಡೋರ್‌ ವಾಹನದಲ್ಲಿ ಹೇರಿಕೊಂಡು, ಸಂಕೇತ್‌ ಸ್ಟುಡಿಯೋ ಆವರಣದಿಂದ ತಾವೇ ಡ್ರೈವ್‌ ಮಾಡಿಕೊಂಡು, ಎನ್ನಾರ್‌ ಕಾಲನಿಯ ಅಶ್ವತ್ಥ್ ಅವರ ಮನೆಗೆ ಬಂದು, ಅವರ ಹಾರ್ಮೊನಿಯಮ್ಮನ್ನು ತಾವೇ ಒಳಗಿಂದ ತಂದು ವ್ಯಾನಿನಲ್ಲಿಟ್ಟು, ದಾರಿಯಲ್ಲಿ ಅಲ್ಲಲ್ಲಿ ಒಂದೆರಡು ಅಂಗಡಿಗಳ ಎದುರು ನಿಲ್ಲಿಸಿ, ಯಾವುದೇ ಎಗ್ಗು-ಸಿಗ್ಗಿಲ್ಲದೆ ತಾವೇ ಅಂಗಡಿಗೆ ಹೋಗಿ ಸಿಗರೇಟು ಇತ್ಯಾದಿ ಸಾಮಗ್ರಿಗಳನ್ನು ಕೊಂಡುಕೊಂಡು, ಹೊಸೂರು ರಸ್ತೆಯ ಸಿಂಗಸಂದ್ರದ ತಮ್ಮ ಫಾರ್ಮ್ ಹೌಸ್‌ಗೆ ಕರೆದೊಯ್ದಿದ್ದರು.

        ಅಲ್ಲಿ ಇಳಿಯುತ್ತಿದ್ದಂತೆಯೇ, ""ವೆಲ… ಕಂ ಗೋವಾ ವೆಲ… ಕಂ' ಅಂತ ಶಿವರಾಜ್‌ ಓಡಿ ಬಂದು ನನ್ನ ಕೈಕುಲುಕಿದರು. ಈ ಶಿವರಾಜ್‌ಸದಾ ಹಸನ್ಮುಖೀ. ಒಣಗಿದ ಮರವನ್ನೂ ಮಾತಾಡಿಸಿ, ಅದು ಮತ್ತೆ ಚಿಗುರುವಂತೆ ಮಾಡಬಲ್ಲ ಸ್ನೇಹಜೀವಿ. ನನಗೆ 1974ರಷ್ಟು ಹಿಂದಿನಿಂದಲೂ ಆತ್ಮೀಯ. ಉತ್ತರ ಕನ್ನಡ ಜಿÇÉೆಯ ಸಿ¨ªಾಪುರದಲ್ಲಿ ಒಂದು ನಾಟಕ ಸಂದರ್ಭದಲ್ಲಿ ಅವರ ಮೊದಲ ಭೇಟಿ ನನಗೆ.

        "ಆಂ! ಗೋವಾನಾ? ಏನ… ಸಾರ… ಹಂಗಂದ್ರೆ?' ಎಂಬ ಶಂಕರ್‌ ಜಿಜ್ಞಾಸೆಗೆ ನಾನು, "ಅದು ನನ್ನ ಹೆಸರಿನ ಹೃಸ್ವರೂಪ. ನನ್ನ ಕಾವ್ಯನಾಮವೂ ಅದೇ', ಅಂತ ವಿವರಣೆ ಕೊಟ್ಟೆ. ತಗೋ, ಅಂದಿನಿಂದ ನನ್ನನ್ನು ಶಂಕರ್‌ ಗೋವಾ ಅಂತಲೇ ಕರೆಯೋದಕ್ಕೆ ಶುರು ಮಾಡಿದರು. ಅವರು ಕರೆಯುತ್ತಿದ್ದ ರೀತಿ ಹ್ಯಾಗಿರುತ್ತಿತ್ತೆಂದರೆ  ಒಮ್ಮೆ ನೀವು ಕರೆಗಂಟೆಯ ಟಿಂಗ್‌-ಟಾಂಗ್‌ ಲಯವನ್ನು ನೆನಪಿಸ್ಕೊಳ್ಳಿ, ನಿಮಗೇ ಗೊತ್ತಾಗುತ್ತದೆ.

        ನಾವೆÇÉಾ ಅಲ್ಲಿಳಿದ ಮೇಲೆ, ಎಲ್ಲರಿಗೂ ಒಂದಷ್ಟು ಕುರುಕಲು ತಿಂಡಿ-ಕಾಫಿ ಕೊಟ್ಟು, ಅಲ್ಲಿಯ ಏರ್ಪಾಟಿಗೆ ನಿಂತರು ಶಂಕರ್‌. ತಾವೇ ಒಳಗೆ ಹೋಗಿ ನಾಲ್ಕಾರು ಗಾದಿಗಳನ್ನು ಹೊತ್ತು ತಂದು, ಆ ಹುಲ್ಲುಗಾವಲಿನ ಅಂಗಳದಲ್ಲಿ ಹಾಕಿ, ಅವುಗಳ ಮೇಲೆ ಶುಭ್ರ ಬಿಳಿ ಮೆದುವಾಸು ಹೊದಿಸಿ, ಆತುಕೊಳ್ಳಲು ಅಲ್ಲಲ್ಲಿ ಲೋಡುಗಳನ್ನು ಇಟ್ಟು, ಸುತ್ತ ಒಂದಷ್ಟು ಮಂದ ಬೆಳಕು ಬೀರುವ ಕಂದೀಲುಗಳನ್ನು ಇರಿಸಿ, ನಟ್ಟ ನಡುವೆ ಅಶ್ವತ್ಥ್ ಅವರು ಕೂರಲು ವಿಶೇಷ ಆಸನ ಹಾಕಿ, ""ಹೂಂ, ಶುರು ಹಚೊRಳ್ಳಿ ಸಾರ್‌' ಅಂತ ಒಂದು ನಗೆ ಚೆಲ್ಲಿದರು.

        ಅಶ್ವತ್ಥ್ ಆ ವ್ಯವಸ್ಥೆಯಿಂದ ಸುಪ್ರಸನ್ನರಾದರು. ಮೂಡಿಗೆ ಬಂದು ಒಂದೊಂದೇ ಒಂದೊಂದೇ ಟ್ಯೂನನ್ನು ಕೇಳಿಸತೊಡಗಿದರು. ಎರಡು ರಾತ್ರಿ ಅಂಥದೇ "ವಾತಾವರಣ'ದಲ್ಲಿ ಕಂಪೋಸಿಂಗ್‌ ನಡೆದು, ಅಶ್ವತ್ಥ್ ಸ್ಪರ್ಶದಿಂದ ಹೊಸ ರೂಪ ಪಡೆದು ನಿಂತವು ನನ್ನ ಹಾಡುಗಳು. ಶಂಕರ್‌ ಅಂತೂ ಹಾಡಿದ್ದೇ ಹಾಡಿದ್ದು, ಕುಣಿದದ್ದೇ ಕುಣಿದದ್ದು ಅದರಲ್ಲೂ ಶಂಕರ್‌ ಇಷ್ಟಪಟ್ಟ ಹಾಡೆಂದರೆ-

        ಅದs ಗ್ವಾಡಿ, ಅದs ಸೂರು... ದಿನವೆÇÉಾ ಬೇಜಾರು

        ತಿದಿಯೊತ್ತಿ ನಿಟ್ಟುಸಿರು, ಎದಿಯಾsಗ ಚುರು ಚುರು

        ಬಂದಾನೇನs ಇದುರು ನಿಂದಾನೇನs

        ಈ ಕಂಪೋಸಿಂಗ್‌ ನಡೆಯುತ್ತಿ¨ªಾಗ ಬಾಯಿಗೆ ಹಾಕಿಕೊಳ್ಳಲು ಆಗಾಗ ಒಂದಷ್ಟು ಬಿಸಿ ಬಿಸಿ ಪಕೋಡಾ, ಒಂದಷ್ಟು ಕಾಂಗ್ರೆಸ್‌ ಕಡಲೆ ಬೀಜ, ಒಂದಷ್ಟು ಚೌ ಚೌ ಅಂತ ಒಂದರ ನಂತರ ಒಂದು ತಂದು ಇಡುತ್ತಲೇ
        ಇರುತ್ತಿದ್ದರು ಅತಿಥಿಪ್ರಿಯ ಶಂಕರ್‌.

        ಆನಂತರ ಹಾಡುಗಳ ಸಮೇತ ತಾಲೀಮು. ಅಲ್ಲಲ್ಲಿ ಸಣ್ಣ-ಪುಟ್ಟ ತಿದ್ದುಪಡಿಗಳು, ಸೇರ್ಪಡೆಗಳು.
        ಮುಂದಿನ ಹತ್ತು ದಿನ ಅಬ್ಟಾ ಚಿತ್ರಕಲಾ ಪರಿಷತ್ತಿನ ಬಯಲಿನಲ್ಲಿ ನಾಗಮಂಡಲವೆಂಬ ಮಾಯಾಲೋಕವನ್ನೇ ತೆರೆದಿಟ್ಟರು ಶಂಕರ್‌. ಜನಕ್ಕೆ ನನ್ನ ಹಾಡುಗಳು ಇಷ್ಟವಾದವು. ಸ್ವತಃ ಗಿರೀಶ ಕಾರ್ನಾಡರೆ ಹಾಡುಗಳ ಬಗ್ಗೆ ಪ್ರಶಂಸಿಸಿ ನನ್ನನ್ನು ಅಭಿನಂದಿಸಿದರು.

        ಮುಂದೆ, 1972ರಲ್ಲಿ ಈ ಹಾಡುಗಳ ಒಂದು ಕ್ಯಾಸೆಟ… ಹೊರಬಂತು. ಈ ಪೈಕಿ ಮಾಯಾದೋ ಮನದ ಭಾರಾ ಹಾಡನ್ನು ನನ್ನ ಅನುಮತಿ ಸಹಿತ ನಾಗಮಂಡಲ ನಾಟಕದ 2005ರ ಆವೃತ್ತಿಯಲ್ಲೂ, 2008ರಲ್ಲಿ ಹೊರಬಂದ ತಮ್ಮ ಸಮಗ್ರ ನಾಟಕ ಸಂಪುಟದಲ್ಲೂ ಗಿರೀಶರು ಬಳಸಿಕೊಂಡರು.

        ಇರಲಿ. ನಾನು ಬರೆದ ಆ ಹಾಡುಗಳು ಈಗಲೂ ರಂಗಪ್ರಿಯರಿಗೆ ನೆನಪಿವೆಯಲ್ಲ ಅದು ದೊಡ್ಡದು.
        ಹೀಗೆ ಅವು ನೆನಪಿನಲ್ಲಿ ಉಳಿಯುವ ಹಾಡುಗಳಾಗಿ ನಿಂತದ್ದಕ್ಕೆ ಶಂಕರ್‌ ಅವರ ಒತ್ತಾಸೆ, ಮತ್ತು ಅಶ್ವತ್ಥ್ ಅವರ ರಾಗಸಂಯೋಜನೆಯೇ ಕಾರಣ.ಅಶ್ವತ್ಥ್ ರಾಗಸಂಯೋಜನೆ ಮಾಡಿದ ಕೊನೆಯ ನಾಟಕ ಈ ನಾಗಮಂಡಲ.

        ಆ ನಂತರ, ಶಂಕರ್‌ ಅವರ ಫಾರ್ಮ್ ಹೌಸ್‌ಗೆ ನಾನು ನಿತ್ಯದ ಅತಿಥಿಯಾದೆ. ಸಂಜೆ ಸಂಕೇತ್‌ ಸ್ಟುಡಿಯೋದಲ್ಲಿ ಕೂತಿರುತ್ತಿದ್ದ ನನ್ನನ್ನು ಶಂಕರ್‌, ಬನ್ನಿ ಗೋವಾ, ಫಾಮ… ಹೌಸ್‌ಗೆ ಹೋಗೋಣ ಬನ್ನಿ ಎಂದು ಕರೆಯುತ್ತಿದ್ದರು. ರಾತ್ರಿ ಎರಡರ ತನಕ ಏನಾದರೂ ಮಾಡುತ್ತಲೇ ಇರುತ್ತಿದ್ದ ಶಂಕರ್‌ ಮತ್ತೆ ಬೆಳಗಿನ ಐದೂವರೆಗಾಗಲೇ ಎದ್ದು, ಶೂಟಿಂಗ್‌ ಸ್ಪಾಟ್‌ಗೆ ಹೋಗಲು ಅಣಿಯಾಗಿಬಿಡುತ್ತಿದ್ದರು. ನಾನವರ ಗೆಸ್ಟ್‌ ರೂಮಿನಲ್ಲಿನ್ನೂ ಸಕ್ಕರೆ ನಿ¨ªೆಯಲ್ಲಿರುತ್ತಿದ್ದ ಸಮಯದಲ್ಲಿ, ಶಂಕರ್‌ ತಮ್ಮ ಡ್ರೈವರ್‌ ನಿಂಗಣ್ಣನಿಗೆ, ಈ ಸಾರು ಎದ್ದು ಕಾಫಿ ಕುಡಿದ ಮೇಲೆ, ಅವರ ರೂಮಿಗೆ ಡ್ರಾಪ್‌ ಕೊಡಬೇಕು ನಿಂಗಣ್ಣಾ ಅಂತ ಹೇಳಿದ್ದನ್ನು ಎಷ್ಟೋ ಸಲ ಕೇಳಿದ್ದೇನೆ. ಅದೆಂಥ ಕಾಳಜಿ ಅವರದು! ಬಂಕಾಪುರದ ನಿಂಗಣ್ಣ ಹಾಗೆಯೇ ಮಾಡುತ್ತಿದ್ದ. ಈ ನಿಂಗಣ್ಣ ಶಂಕರ್‌ ಜತೆಯೇ ಆ ಅವಘಡದಲ್ಲಿ ಅಸು ನೀಗಿದ, ಪಾಪ!

        (ಅಪೂರ್ಣ)

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus