Udayavani | Aug 05, 2012
ನಾನೊಂದು ಕವಿತೆ ಬರೆದಿದ್ದೇನೆ, ಓದಿ ತಿದ್ದಿ ಅಂತಲೋ ನಾನು ಕತೆ ಬರೆಯಬೇಕು ಅಂದುಕೊಂಡಿದ್ದೇನೆ, ಹೇಗೆ ಬರೆಯುವುದು ಹೇಳಿ ಅಂತಲೋ ಆಗಷ್ಟೇ ಲೇಖಕರಾಗಲು ಹೊರಟವರು ಹಿರಿಯ ಲೇಖಕರನ್ನು ಕೇಳುವುದುಂಟು. ಹಿರಿಯ ಲೇಖಕರು ಉದಯೋನ್ಮುಖ ಬರಹಗಾರರಿಗೆ ಸಲಹೆ ಸೂಚನೆಗಳನ್ನು ನೀಡಿ, ಅವರು ಬರೆದದ್ದನ್ನು ತಿದ್ದುವುದೂ ಉಂಟು. ಒಬ್ಬ ಲೇಖಕನನ್ನು ರೂಪಿಸುವಲ್ಲಿ ಇಂಥ ತಿದ್ದುವಿಕೆಗಳಾಗಲಿ ಸಲಹೆಗಳಾಗಲಿ ಅಷ್ಟೇನೂ ಉಪಯೋಗಕ್ಕೆ ಬರುವುದಿಲ್ಲ ಎಂಬುದು ನನ್ನ ನಂಬಿಕೆ. ಆರಂಭದಲ್ಲಿ ಹಿರಿಯರು ಆಡುವ ಪ್ರೋತ್ಸಾಹದ ಮಾತುಗಳ್ಳೋ ಮೆಚ್ಚುಗೆಯ ನುಡಿಗಳ್ಳೋ ಹೊಸದಾಗಿ ಬರೆಯಲು ಹೊರಟವರಿಗೆ ಸ್ಪೂರ್ತಿಯಾಗಬಹುದು. ಅವರು ಬರೆವಣಿಗೆಯನ್ನು ಮುಂದುವರಿಸುವುದಕ್ಕೆ ಪ್ರೇರೇಪಣೆ ಆಗಬಹುದು. ಆದರೆ ಸಂವೇದನೆಯನ್ನು ತಿದ್ದುವ, ಸೂಕ್ಷ್ಮಜ್ಞರನ್ನಾಗಿಸುವ. ಗ್ರಹಿಕೆಯನ್ನು ರೂಪಿಸುವ ಕೆಲಸವನ್ನು ಒಬ್ಬ ವ್ಯಕ್ತಿ ಮಾಡುವುದು ಕಷ್ಟ. ಅದನ್ನು ಆಯಾ ಕಾಲದ ಸಂದರ್ಭವೇ ಮಾಡುತ್ತದೆ. ಹಾಗೆ ಮಾಡದೇ ಹೋದರೆ ಆ ಲೇಖಕ ಜೊಳ್ಳಾಗುತ್ತಾನೆ.
ಒಂದು ಕಾಲದ ಸಾಹಿತ್ಯಿಕ, ರಾಜಕೀಯ ಮತ್ತು ಸಾಮಾಜಿಕ ಪರಿಸರ, ಹೇಗೆ ಲೇಖಕರ ಮನಸ್ಸನ್ನು ಮತ್ತು ಓದುಗರ ಮನಸ್ಸನ್ನು ರೂಪಿಸುತ್ತಾ ಹೋಗುತ್ತದೆ ಅನ್ನುವುದನ್ನು ಗಮನಿಸಿ. ಭಾರತ ಸ್ವತಂತ್ರವಾಗುತ್ತಿದ್ದಂತೆ ನಮಗೆ ಆಂತರಿಕ ಸಮಸ್ಯೆಗಳು ಗೋಚರಿಸತೊಡಗಿದವು. ಅಲ್ಲಿಯ ತನಕ ಎಲ್ಲದಕ್ಕೂ ಬ್ರಿಟಿಷರನ್ನು ದೂರಬಹುದಾಗಿತ್ತು. ಅವರ ದಬ್ಟಾಳಿಕೆ, ಆಳ್ವಿಕೆ, ಒಡೆದು ಆಳುವ ನೀತಿ, ದುರಾಸೆ, ಕೊಳ್ಳೆಹೊಡೆಯುವ ಗುಣ, ವಸಾಹತುಶಾಹಿ ನಿಲುವುಗಳನ್ನು ಬೈದುಕೊಂಡು ನೆಮ್ಮದಿಯಾಗಿದ್ದವರ ಕಣ್ಣಿಗೆ, ಬ್ರಿಟಿಷರು ತೊಲಗುತ್ತಿದ್ದಂತೆ ನಮ್ಮ ಜಾತೀಯತೆ, ವರ್ಗಸಂಘರ್ಷ, ಧಾರ್ಮಿಕ ಅಸಹನೆಗಳು ಕಾಣತೊಡಗಿದವು. ಹೊರಗಿನ ಶತ್ರುವಿಗಿಂತ ಈ ಒಳರೋಗಗಳೇ ಅಪಾಯಕಾರಿ ಅನ್ನಿಸತೊಡಗಿ ಲೇಖಕರು ಅವುಗಳನ್ನು ನೀಗಿಕೊಳ್ಳುವ ಉಪಾಯಗಳನ್ನು ಹುಡುಕತೊಡಗಿದರು. ನವೋದಯದ ಬರಹಗಳು ಇಂಗ್ಲಿಷ್ ಸಾಹಿತ್ಯದ ತೆಳು ಅನುಕರಣೆಯಂತೆ ಕಾಣಿಸತೊಡಗಿತು. ನಮ್ಮ ಉದ್ಧಾರ ನಮಗೆ ಮುಖ್ಯವಾಗುತ್ತಾ ಬಂತು. ಎರಡು ದೆಸೆಗಳ ಸಂಘರ್ಷವನ್ನು ಕುವೆಂಪು ಮುಂತಾದವರು ಹಿಡಿಯಲು ಯತ್ನಿಸಿದರು. ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೇ ದೇವಿ ಎನ್ನುವ ಕೂಗು ಕ್ರಮೇಣ ಮಾಸುತ್ತಾ ಹೋಗಿ, ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಎಂದು ಹಾಡಬೇಕಾದ ಅನಿವಾರ್ಯತೆ ಬಂತು. ಕಟ್ಟುವೆವು ನಾವು ಹೊಸನಾಡೊಂದನು ಎಂಬ ಆವೇಶ, ನಾಡದೇವಿಯೇ ಕಂಡ ನಿನ್ನ ಮ‚ಡಿಲಲ್ಲಿ ಎಂಥ ದೃಶ್ಯ ಎಂಬ ವಿಷಾದದಲ್ಲಿ ಕೊನೆಗೊಂಡಿತು. ಬ್ರಿಟಿಷರು ತೊಲಗುವುದಿಲ್ಲ ಎಂದು ಹತಾಶನಾಗಿದ್ದ ಕವಿಯೇ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ ಎಂದು ಹಪಹಪಿಸುವಂತಾಯಿತು.
ಈ ಮಧ್ಯೆ ನಾಡು ಕೂಡ ವೈವಿಧ್ಯಮಯ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡಿತು. ಪ್ರಜಾಪ್ರಭುತ್ವದ ಗೂಡಿನೊಳಗೇ ಕಮ್ಯುನಿಸಮ್ ಉಸಿರಾಡಿತು, ಲೋಹಿಯಾ ಬಂದರು. ಸಮಾನತೆಯ ಕೂಗು ಕೇಳಿಸಿತು. ಕೊನೆಗೆ ಸಂವಿಧಾನವೇ ನಮ್ಮನ್ನು ಕಾಪಾಡುವ ಏಕೈಕ ಅಸ್ತ್ರ ಎಂದು ಗೊತ್ತಾಗುತ್ತಿದ್ದಂತೆ, ಕಾನೂನಿನ ಬಗ್ಗೆ ಗೌರವ ಮೂಡಿತು. ಎಲ್ಲ ಅಸಮಾನತೆ, ಬಡತನ ಮತ್ತು ಅವಮಾನವನ್ನು ತೊಡೆಯಲು ಕಾನೂನನ್ನು ಬಳಸಬಹುದು ಎನ್ನುವುದು ತಿಳಿಯುತ್ತ ಬಂತು.
ಈ ಕಾಲಘಟ್ಟದ ಸ್ಥಿತ್ಯಂತರಗಳಲ್ಲಿ ಹುಟ್ಟಿಕೊಂಡ ಕೃತಿಗಳು, ಆಯಾ ಲೇಖಕರು ಅನುಭವಿಸಿದ ತಲ್ಲಣಗಳ ಪ್ರತಿರೂಪದಂತಿದ್ದವು. ಅರಸೊತ್ತಿಗೆಯನ್ನು ಮೆಚ್ಚಿಕೊಂಡು ಬರೆದ ಗಳಗನಾಥರ ದಾರಿಯಲ್ಲಿಯೇ, ರಾಜರುಗಳನ್ನು ವೈಭವೀಕರಿಸಿದ ತರಾಸುಬ್ಬರಾಯರೂ ಕೊನೆಗೆ ದುರ್ಗಾಸ್ತಮಾನ ಬರೆದರು. ಅನಕೃ ಸಾಮಾಜಿಕ ಕಾದಂಬರಿಗಳ ಕಡೆಗೆ ಹೊರಳಿದರು. ಈ ಮಧ್ಯೆ ಭೈರಪ್ಪನವರು ಎರಡು ಸಂಸ್ಕೃತಿಗಳ, ಅವುಗಳ ನಡುವಿನ ದ್ವಂದ್ವದ ಚಿತ್ರಣ ಕೊಟ್ಟರು. ಅನಂತಮೂರ್ತಿ ನಾರಣಪ್ಪನ ಹೆಣವನ್ನಿಟ್ಟುಕೊಂಡು ಎರಡು ಮನಸ್ಥಿತಿಗಳ ವಿಶ್ಲೇಷಣೆ ಮಾಡಿದರು. ತುಘಲಕ್ ಆಧುನಿಕ ಆಡಳಿತದ ವ್ಯಂಗ್ಯವನ್ನು ಎತ್ತಿತೋರಿತು. ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗ ಹಳ್ಳಿಯ ಹೊಟ್ಟೆಯ ಹುಣ್ಣಿಗೆ ಹಿಡಿದ ಕನ್ನಡಿಯಂತಿತ್ತು. ಅಡಿಗರು ರಾಜಕೀಯವನ್ನು ವಿಡಂಬನೆ ಮಾಡುತ್ತಲೇ, ತನ್ನದೇ ಆದ ರಾಮರಾಜ್ಯದ ಭ್ರಮೆಯಲ್ಲಿರುವವರಂತೆ ಬರೆದರು. ಕಂಬಾರರು ದೇಸೀತನವೇ ಅಂತಿಮ ಎಂದು ಸಾರಲು ಹೊರಟವರಂತೆ ಕಂಡರು. ಇವರೆಲ್ಲರ ಮಧ್ಯೆ ಕೇವಲ ಕಾವ್ಯಕ್ಕೆ ನಿಷ್ಠರಾಗಿದ್ದವರು ಬೇಂದ್ರೆ, ಕತೆಗೆ ನಿಷ್ಠರಾಗಿದ್ದವರು ಕಾರಂತ, ಪ್ರಕಾರಕ್ಕೆ ನಿಷ್ಠರಾಗಿದ್ದವರು ಮಾಸ್ತಿ.
ಆ ಕಾಲಘಟ್ಟದ ಲೇಖಕರಿಗೆ ವಸ್ತುವಿನ ಕೊರತೆ ಇಲ್ಲದಂತೆ ಮಾಡಿದ್ದು ಪರಿಸರವೇ. ಅಲ್ಲಿ ಒಳಗುದಿಯಿತ್ತು, ತಲ್ಲಣಗಳಿದ್ದವು, ಹಪಹಪಿಯಿತ್ತು, ಒಳಗೊಳಗೇ ಹೊಗೆಯಾಡುವ ಅಸಮಧಾನವಿತ್ತು.
ಹೇಳಿಕೊಳ್ಳಲೇಬೇಕಾದ ಅನಿವಾರ್ಯವೂ ಇತ್ತು. ದಾಸ್ಯಮುಕ್ತರಾಗುತ್ತಿದ್ದಂತೆ ನಮ್ಮ ದೇಶವನ್ನು ಕಟ್ಟುವ ಹಾಗೇ, ನಮ್ಮ ಸಾಹಿತ್ಯವನ್ನೂ ಕಟ್ಟಬೇಕಾಗಿತ್ತು. ಥೇಮ್ಸ್ ನದಿಯ ಬಣ್ಣನೆಯನ್ನು ಕೇಳಿಸಿಕೊಂಡ ಕಿವಿಗಳಿಗೆ ತುಂಗಾನದಿಯ ಪಿಸುಮಾತನ್ನು ಕೇಳಿಸುವ ಸವಾಲು ಕವಿಗಳಿಗೆ ಎದುರಾಯಿತು. ಹೀಗಾಗಿ ಎಲ್ಲಾ ಪ್ರಕಾರಗಳನ್ನೂ ಲೇಖಕರು ತಮ್ಮದು ಎಂದು ಭಾವಿಸಿಕೊಂಡರು, ಬರೆಯುತ್ತಾ ಹೋದರು.
ಆಗಷ್ಟೇ ದೇಶ ಅಕ್ಷರಸ್ಥವಾಗುತ್ತಾ ನಡೆದಿತ್ತು. ಓದಲು ಕಲಿತವರಿಗೆ ಓದುವ ತವಕ. ಓದಲ್ಲದೇ ಮತ್ತೂಂದು ಕಲಿಕೆಯ ಹಾದಿಯೇ ಇಲ್ಲದ ಸ್ಥಿತಿ. ಹೀಗಾಗಿ ಒಬ್ಬೊಬ್ಬ ಲೇಖಕರನ್ನೂ ಓದುಗರು ಆಸ್ಥೆಯಿಂದ, ಪ್ರೀತಿಯಿಂದ, ಹಂಬಲದಿಂದ ಓದಿಕೊಂಡರು. ಬರೆಯುವವರು ಹುಮ್ಮಸ್ಸಿನಿಂದ ಬರೆದರು. ಇಡೀ ದೇಶವೇ ಇದೀಗ ಮಾತಾಡಲು ಶುರುಮಾಡಿದೆಯೇನೋ ಎಂಬಂತೆ, ಯೋಚಿಸಲು ಆರಂಭಿಸಿದೆಯೇನೋ ಎಂಬಂತೆ ಗೋಚರಿಸತೊಡಗಿತು. ಆ ಪ್ರಖರ ಅಕ್ಷರಬೆಳಕಿನಲ್ಲಿ ಕುಂದುಕೊರತೆಗಳು ಕಾಣದಾದವು.
ಈಗ ಅಂಥ ಯಾವ ಪ್ರಲೋಭನೆಗಳೂ ಇಲ್ಲ. ಓದುವುದು ಹೆಮ್ಮೆಯ ಸಂಗತಿಯಾಗಿ ಉಳಿದಿಲ್ಲ. ಬರೆಯುವುದು ಅನಿವಾರ್ಯವಲ್ಲ. ಅಭಿವ್ಯಕ್ತಿಗೆ ನೂರೆಂಟು ಮಾರ್ಗಗಳಿವೆ. ಇಂಥ ಹೊತ್ತಲ್ಲಿ ಒಬ್ಬ ಲೇಖಕ ಹೇಗೆ, ಏನು, ಯಾಕೆ, ಯಾವಾಗ ಬರೆಯಬೇಕು ಎಂಬುದೇ ದೊಡ್ಡ ಸವಾಲು. ಇಲ್ಲಿ ತಿದ್ದುವವರು ಯಾರು, ತಿಳಿಹೇಳುವವರು ಯಾರು ಎಂಬ ಕುರಿತೇ ಗೊಂದಲ. ಯಾರ ಮಾತು ಕೇಳಬೇಕು ಎಂಬುದೇ ಉತ್ತರವಿರದ ಪ್ರಶ್ನೆ. ಯಾರನ್ನು ಅನುಸರಿಸಬೇಕು, ಯಾರ ಥರ ಬರೆಯಬೇಕು ಎಂಬುದೇ ಸವಾಲು.
ಇಂಥ ಹೊತ್ತಲ್ಲಿ ನೆನಪಾಗುವುದು ಲೆಡರರ್ ಎಂಬ ಅಧಿಕಾರಿ ಬರೆದ ಒಂದು ಪುಟ್ಟ ಪ್ರಸಂಗ. ಅವನು ಚೀನಾದ ಚುಂಗ್‌ಕಿಂಗ್ ಎಂಬಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಆಗಿನ್ನೂ ಅವನಿಗೆ ಹದಿಹರೆಯ. ಅನೇಕ ಗೆಳೆಯರು. ಮೋಜು, ಸುತ್ತಾಟ, ವಾರಾಂತ್ಯದಲ್ಲಿ ಮದ್ಯ ಸೇವನೆಯೇ ಖಯಾಲಿಯಾಗಿದ್ದ ಅವನಿಗೆ ಬರೆಯುವ ಹುಚ್ಚು.
ಆದರೆ ಹೇಗೆ ಬರೆಯಬೇಕು ಎಂದು ಹೇಳಿಕೊಡುವವರು ಯಾರೂ ಇರಲಿಲ್ಲ.
(ಮುಂದಿನದು ಮುಂದಿನ ರವಿವಾರ)