Saturday, May 18, 2013
Last Updated: 2:07:02 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೂಚಿಪುಡಿ ಗ್ರಾಮದ ಕಲಾಸಂತ
    • ಕೂಚಿಪುಡಿಯಲ್ಲಿ ವೆಂಪಟಿ ಚಿನ್ನ ಸತ್ಯಂ

      • Udayavani | Aug 05, 2012

        ಕಳೆದ ಸುಮಾರು ನೂರು ವರ್ಷಗಳಲ್ಲಿ  ಭಾರತೀಯ ಪರಂಪರೆಯಲ್ಲಿ ಅಸಾಧಾರಣ ಕಲಾವಿದರು ಮೂಡಿಬಂದಿದ್ದಾರೆ. ಕಥಕ್‌ನಲ್ಲಿ ಬಿರ್ಜು ಮಹಾರಾಜ್‌, ಒಡಿಸ್ಸಿಯಲ್ಲಿ ಕೇಲು ಚರಣ ಮಹಾಪಾತ್ರ ,
        ಕೂಚಿಪುಡಿಯಲ್ಲಿ  ವೆಂಪಟಿ ಚಿನ್ನ ಸತ್ಯಂ...

        ಕಲಾಸಂತನಂತೆ ಬದುಕಿದ ವೆಂಪಟಿ ಚಿನ್ನ ಸತ್ಯಂ

        ಇತ್ತೀಚೆಗೆ ನಮ್ಮನ್ನಗಲಿದರೂ  ಕೂಚಿಪುಡಿ ಕಲೆ ಇರುವವರೆಗೆ ಅವರು ಕಲಾರಸಿಕರ ನೆನಪಲ್ಲಿ ಅಮರರಾಗಿರುತ್ತಾರೆ...

        ಕೂಚಿಪುಡಿ ನೃತ್ಯ ಪ್ರಕಾರಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ಕೆಲವೇ ಕೆಲವರಲ್ಲಿ ಒಬ್ಬರಾಗಿರುವ ವೆಂಪಟಿ ಚಿನ್ನ ಸತ್ಯಂ ಇತ್ತೀಚೆಗೆ ನಮ್ಮನ್ನಗಲಿದಾಗ ಅವರು ನಮ್ಮ ಶಾಂಭವಿ ಸ್ಕೂಲ್‌ ಆಫ್ ಡ್ಯಾನ್ಸ್‌ನು° ಉದ್ಘಾಟಿಸಲು ಆಗಮಿಸಿದ ಕ್ಷಣಗಳು ನನಗೆ ನೆನಪಾದವು. ಗಾಲಿಕುರ್ಚಿಯಲ್ಲಿ ಕೂರಿಸಿ ಹಿಂದೊಬ್ಬರು ದೂಡಿಕೊಂಡು ಬರುತ್ತಿದ್ದಾಗ ಅವರು ಒಮ್ಮೆ ತಮ್ಮ ಪಾದಗಳನ್ನು ನೆಲಕ್ಕೆ ಸ್ಪರ್ಶಿಸಬಾರದೆ ಅಂತ ನನಗೆ ಅನ್ನಿಸಿತು. ಕೂಚಿಪುಡಿ ಕಲೆಗೆ ಹೊಸ ಆಯಾಮ ಹಾಗೂ ಸ್ವರೂಪ ತಂದುಕೊಟ್ಟ ಆ ಮಹಾನ್‌ ಕಲಾವಿದನ ಹೆಜ್ಜೆ ಗುರುತುಗಳು ನಮ್ಮ ನೆಲದಲ್ಲಿಯೂ ಮೂಡಲಿ ಎಂಬುದು ನಾನು ತವಕಿಸುತ್ತಿದ್ದೆ.

        ನಾನು ಅವರ ನೇರ ಶಿಷ್ಯೆಯಲ್ಲ. ಆದರೆ, ಅವರ ಕಲಾ ಪ್ರತಿಭೆಯನ್ನು ಏಕಲವ್ಯನಂತೆ ನೋಡುತ್ತ ನನ್ನೊಡನೆ ಅವರ‌ನ್ನು ಆವಾಹಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿದ್ದೆ. ನಾನು ಕೂಚಿಪುಡಿ ಗ್ರಾಮದಲ್ಲೇ ಕೆಲವಾರು ಶ್ರೇಷ್ಠ ಗುರುಗಳಲ್ಲಿ ಈ ನೃತ್ಯವನ್ನು ಕಲಿತಿದ್ದರೂ ವೆಂಪಟಿ ಚಿನ್ನ ಸತ್ಯಂ ಅವರಲ್ಲಿ ಕಲಿಯಬೇಕೆಂಬುದು ನನ್ನ ಮಹದಾಸೆಯಾಗಿತ್ತು. ಹಾಗೆ ಒಮ್ಮೆ ಚೆನ್ನೈಗೆ ಹೋಗಿ, ಅವರ ಬಳಿ ನನ್ನ ಆಸೆಯನ್ನು ತೋಡಿಕೊಂಡಾಗ, ಅವರು ನನ್ನ ನೃತ್ಯವನ್ನು ನೋಡಿ, ""ನಿನಗೀಗಾಲೇ ಕಲೆ ಸಿದ್ಧಿಸಿದೆ. ಅದನ್ನೇ ಬೆಳೆಸಿಕೊಳ್ಳಮ್ಮ. ನನ್ನಲ್ಲಿ ಕಲಿಯಲೇಬೇಕೆಂಬ ಅಗತ್ಯವೇನೂ ಇಲ್ಲ. ನನ್ನ ಆಶೀರ್ವಾದ ನಿನ್ನ ಮೇಲೆ ಸದಾ ಇದೆ' ಎಂದು ನನ್ನನ್ನು ಕಳುಹಿಸಿಕೊಟ್ಟರು.

        ಒಮ್ಮೆ ಹೈದ್ರಾಬಾದ್‌ನಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ್ದ ಕೂಚಿಪುಡಿ ಉತ್ಸವದಲ್ಲಿ ವಿಶ್ವದ ಶ್ರೇಷ್ಠ ಕೂಚಿಪುಡಿ ಕಲಾವಿದರು ಭಾಗವಹಿಸಿದ್ದರು. ನಾನೂ ಹೋಗಿದ್ದೆ.  ನನ್ನ ನೃತ್ಯ ಪ್ರದರ್ಶನವನ್ನು ಚಿನ್ನ ಸತ್ಯಂ ತುಂಬಾ ಮೆಚ್ಚಿಕೊಂಡರು. ಅದು ನನ್ನ ಜೀವನದ ತಿರುವಿನ ಕ್ಷಣವೆಂದು ಭಾವಿಸಿದ್ದೇನೆ. ಅಲ್ಲದೆ, ಅಲ್ಲಲ್ಲಿ ನನ್ನ ಬಗ್ಗೆ ಚಿನ್ನ ಸತ್ಯಂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂಬುದನ್ನೂ ನಾನು ಕೇಳಿದ್ದೇನೆ. ಅದು ನನ್ನ ಪಾಲಿಗೆ ಆಶೀರ್ವಾದವೆಂದೇ ತಿಳಿದಿದ್ದೇನೆ.
        .
        ಕೂಚಿಪುಡಿ ಗ್ರಾಮದಿಂದ ಅಮೆರಿಕದವರೆಗೆ ಚಾಚಿಕೊಂಡ ಈ ನೃತ್ಯ ಕಲೆಯ ಇತಿಹಾಸವನ್ನು ಗಮನಿಸಿದಾಗ ಅಚ್ಚರಿಯೆನಿಸುತ್ತದೆ. ಆಂಧ್ರದ ಶ್ರೀಕಾಕುಳಂ ದೇವಸ್ಥಾನದ ಆಸುಪಾಸಿನಲ್ಲಿ ಸುಮಾರು 300 ದೇವದಾಸಿ ಕುಟುಂಬಗಳಿದ್ದವು. ದೇವಸ್ಥಾನದಲ್ಲಿ ನೃತ್ಯಾರಾಧನೆ ಅವರ ಮುಖ್ಯ ಕಸುಬು. ಆದರೆ, ಅವರ ಮುಂದಿನ ತಲೆಮಾರಿನವರು ತಾವು ದೇವದಾಸಿ ವಂಶಸ್ಥರು ಎಂದು ಹೇಳಿಕೊಳ್ಳಲು ಇಷ್ಟಪಡದೆ ಸಮಾಜದ ಬೇರೆ ಬೇರೆ ವರ್ಗಗಳಲ್ಲಿ ಚದುರಿಹೋಗಿ ಪ್ರಚಾರದಿಂದ ಮರೆಯಾದರು. ಆದರೆ, ಕೂಚಿಪುಡಿಯೆಂಬುದು ನೃತ್ಯವನ್ನೇ ಉಸಿರಾಗಿಸಿಕೊಂಡ ಒಂದು ಹಳ್ಳಿ. ನಿರಂತರ ನೂಪುರ ನಿನಾದ ಹೊಮ್ಮಿಸುವ ಹತ್ತು-ಹದಿನೈದು ಮನೆತನಗಳು ಅಲ್ಲಿ ನೆಲೆಸಿದ್ದವು. ಸಿದ್ಧೇಂದ್ರ ಯೋಗಿಗಳೆಂಬವರು ಆ ನೃತ್ಯ ಪ್ರಕಾರದ ಆದಿಗುರುಗಳು. ಸಿದ್ಧೇಂದ್ರ ಯೋಗಿಯವರ "ಭಾಮಾ ಕಲಾಪಂ' ಅಪಾರ ಜನಮೆಚ್ಚುಗೆ ಗಳಿಸಿತ್ತು. ಒಮ್ಮೆ ಆಂಧ್ರದ ರಾಜ ಅಬ್ದುಲ್‌ ಹಸನ್‌ ಇವರ ನೃತ್ಯ ವೈಖರಿಯನ್ನು ಕಂಡು, ಮೆಚ್ಚಿ ಕೂಚಿಪುಡಿ ಹಳ್ಳಿಯನ್ನೇ ಉಂಬಳಿಯಾಗಿ ನೀಡಿದನೆಂದು ಇತಿಹಾಸದಲ್ಲಿ ಉಲ್ಲೇಖವಿದೆ. ಹಾಗಾಗಿ, ವೇದಾಂತಂ ಮಹಾನ್‌ಕಾಳಿ, ಪಸುಮರಿ¤, ಭಗವಾತುಲ, ವೆಂಪಟಿ ಮುಂತಾದ ಹನ್ನೊಂದು ಮನೆತನಗಳು ಕೂಚಿಪುಡಿ ನೃತ್ಯ ಕಲೆಯನ್ನೇ ಬದುಕಾಗಿಸಿಕೊಂಡು ಬಾಳುವಂತಾಯಿತು.

        ಚಿನ್ನ ಸತ್ಯಂ ಅವರು ಪ್ರಸಿದ್ಧ ವೆಂಪ‌ಟಿ ಮನೆತನದಲ್ಲಿ ಜನಿಸಿದವರು. ಅವರ ಅಣ್ಣ ಪೆದ್ದ ಸತ್ಯಂ ಆಗಲೇ ಕೂಚಿಪುಡಿ ನೃತ್ಯವನ್ನು ಒಲಿಸಿಕೊಂಡು ತೆಲುಗು ಸಿನೆಮಾಗಳಿಗೆ ಕಲಾ ನಿರ್ದೇಶನ ನೀಡಿದ್ದರು. ಅವರು ತಂಜಾವೂರು, ಮದರಾಸುಗಳಿಗೆ ಆಗಾಗ ಹೋಗಿ ಬರುತ್ತಿದ್ದರು. ಕೊರಿಯಾಗ್ರಫಿ ಅಳವಡಿಕೆಯ ಮೂಲಕ ಕೂಚಿಪುಡಿಗೆ ಹೊಸ ಸ್ವರೂಪ ತರಲು ಪ್ರಯತ್ನಿಸಿದ್ದರು.

        ಕೂಚಿಪುಡಿಗೆ ವಿಶ್ವಮಟ್ಟದ ಘನತೆಯನ್ನು ತಂದುಕೊಡುವ ಕನಸಿನೊಂದಿಗೆ ಚಿನ್ನ ಸತ್ಯಂ ಕೂಚಿಪುಡಿಯ ಗ್ರಾಮದಿಂದ ಮದರಾಸಿಗೆ ಬಂದಿಳಿದಾಗ ಅವರ ಕೈಯಲ್ಲಿ ಹಣವಿರಲಿಲ್ಲ ; ಆದರೆ, ಹೃದಯದಲ್ಲಿ ಕಲೆಯ ಚೇತನವಿತ್ತು. ಅಷ್ಟರಲ್ಲಿಯೇ ವಿಶ್ವ ಪ್ರಸಿದ್ಧಿ ಪಡೆದ ರುಕ್ಮಿಣೀದೇವಿ ಅರುಂಡೇಲ್‌ರ ಕಲಾಕ್ಷೇತ್ರದ ಮೂಲಕ ಭರತನಾಟ್ಯ ಮನೆಮನೆಯಲ್ಲಿ ಪ್ರಸಿದ್ಧಿ ಪಡೆದಿತ್ತು. ಇಂಥ ಸವಾಲುಗಳ ನಡುವೆಯೂ ಚಿನ್ನ ಸತ್ಯಂ ಕೂಚಿಪುಡಿ ಕಲೆಯನ್ನು ಜನಪ್ರಿಯಗೊಳಿಸುವ ಕಾಯಕಕ್ಕೆ ಹಿಂದೇಟು ಹಾಕಲಿಲ್ಲ. ಭರತನಾಟ್ಯ ಕಲಿಯಲು ಹೋಗುತ್ತಿದ್ದ ತೆಲುಗು ಮಂದಿಯ ಮನೆಮನೆಗೆ ತೆರಳಿ ಕೂಚಿಪುಡಿ ಕಲಿಯುವಂತೆ ಪ್ರೇರೇಪಿಸಿದರು.

        ಜೊತೆಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಉಚಿತವಾಗಿ ಕೂಚಿಪುಡಿ ನೃತ್ಯಶಿಕ್ಷಣವನ್ನು ಧಾರೆಯೆರೆದರು. ಹಳ್ಳಿಯ ಕಲೆಯಲ್ಲಿದ್ದ ಒರಟು, ದೊರಗುಗಳನ್ನೆಲ್ಲ ತಿದ್ದಿತೀಡಿ ಅದನ್ನು ನವೀನವಾಗಿ ಮರು ರೂಪಿಸಿದರು. ತಪಸ್ವಿಯಂತೆ ಶ್ರಮಿಸಿ ಚೆನ್ನೈನಲ್ಲಿ ಕೂಚಿಪುಡಿ ಆರ್ಟ್‌ ಅಕಾಡೆಮಿಯನ್ನು ಸ್ಥಾಪಿಸಿದರು. ಒಂದು ಕಾಲದಲ್ಲಿ ಕೂಚಿಪುಡಿಯನ್ನು ಪ್ರಸಿದ್ಧಿಗೊಳಿಸಲು ಮನೆಮನೆಗೆ ತೆರಳುತ್ತಿದ್ದ ಚಿನ್ನ ಸತ್ಯಂರವರ ಆರ್ಟ್‌ ಅಕಾಡೆಮಿಗೆ ದೇಶವಿದೇಶದಿಂದ ಸಾವಿರಾರು ಮಂದಿ ಕೂಚಿಪುಡಿ ನೃತ್ಯಕಲಾಸಕ್ತರು ಆಗಮಿಸತೊಡಗಿದರು. ಹೇಮಾಮಾಲಿನಿ, ಮೀನಾಕ್ಷಿ ಶೇಷಾದ್ರಿ, ಹೇಮಾ ಚೌಧುರಿ, ಪದ್ಮಶ್ರೀ ಶೋಭಾ ನಾಯ್ಡು , ಮಂಜು ಭಾರ್ಗವಿ, ಪ್ರಭಾ ರಮೇಶ್‌ ಮುಂತಾದವರು ಚಿನ್ನ ಸತ್ಯಂರ ಹೆಸರಾಂತ ಶಿಷ್ಯವರ್ಗದಲ್ಲಿ ಕೆಲವರು. ಇವತ್ತು ಅಮೆರಿಕದಲ್ಲಿ ಕೂಚಿಪುಡಿಗೆ ಭಾರತೀಯ ಕಲೆಗಳಲ್ಲಿ ಪ್ರಮುಖ ಸ್ಥಾನವಿದ್ದು ಅಮೆರಿಕದಲ್ಲಿರುವ ಕೂಚಿಪುಡಿ ಕಲಾವಿದರು ಚಿನ್ನ ಸತ್ಯಂರವರ ಶಿಷ್ಯರೇ ಎಂದು ಹೇಳಿದರೂ ಅತಿಶಯವಲ್ಲ. ದೇವಸ್ಥಾನದಿಂದ ಮರೆಯಾದ ದೇವದಾಸಿ ಕುಲದ ಸುಂದರಿಯರು ಅಮೆರಿಕಕ್ಕೆ ಬಂದರೋ ಎಂದು ಭಾಸವಾಗುವಂತೆ ಅಲ್ಲಿ ಕೂಚಿಪುಡಿ ನರ್ತಕಿಯರ ತಂಡವಿದೆ. ಅಮೆರಿಕಕ್ಕೆ ತೆರಳಿದಾಗಲೆಲ್ಲ ಚಿನ್ನ ಸತ್ಯಂರಿಗೆ ಎಲ್ಲಿಲ್ಲದ ಗೌರವ.

        ಅವರ ಗುರುತ್ವದಲ್ಲಿ ಕಲಾವಿದರಾಗಿ ಅರಳಿದ ಎಷ್ಟೋ ಮಂದಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಬಹುಶಃ
        ಅಮೆರಿಕದಲ್ಲಿ ತಮ್ಮ 50-60 ವಿದ್ಯಾರ್ಥಿಗಳೊಂದಿಗೆ ಬಸ್ಸು ಮಾಡಿಕೊಂಡು ಪಟ್ಟಣ-ಪಟ್ಟಣ ತಿರುಗುತ್ತ ಪ್ರದರ್ಶನ ನೀಡಿದ ಭಾರತೀಯ ಕಲಾವಿದರು ಇವರೊಬ್ಬರೇ ಎನ್ನಬಹುದು. ಅವರ ಶ್ರೀನಿವಾಸ ಕಲ್ಯಾಣ, ಕ್ಷೀರಸಾಗರ ಮಥನ, ರವೀಂದ್ರನಾಥ ಠಾಕೂರ್‌ರವರ ಚಾಂಡಾಲಿಕಾ ಕಥಾನಕಗಳು ದೇಶವಿದೇಶಗಳಲ್ಲಿ ಅಪಾರ ಜನಪ್ರಿಯತೆ ಪಡೆದವು.

        ಅಂಥ ಪ್ರಸಿದ್ಧಿಯ ಕಲಾವಿದರಾದರೂ ಅವರು ತಮ್ಮ ಹಳ್ಳಿಯನ್ನು ಮರೆಯಲ್ಲಿಲ್ಲ. ಅಲ್ಲಿನ ಬಾಲತ್ರಿಪುರ ಸುಂದರಿ ದೇವಾಲಯದಲ್ಲಿ ನೂರೆಂಟು ಕರಣಗಳ ಕೆತ್ತನೆಯನ್ನು ಮಾಡಿಸಿ ಮರುನಿರ್ಮಿಸುವ ಮೂಲಕ ಕಲಾಭಿವ್ಯಕ್ತಿಯ ಸಾಧ್ಯತೆಯನ್ನು ವಿಸ್ತರಿಸಿದರು. ಅವರ ಸರಳ ವ್ಯಕ್ತಿತ್ತದಿಂದ ನಾನು ತುಂಬ ಕಲಿತುಕೊಂಡಿದ್ದೇನೆ. ತಮ್ಮ ತಂಡದೊಂದಿಗೆ ಹೋದಾಗಲೆಲ್ಲ ವಿಐಪಿ ಗೌರವವನ್ನು ಬಯಸದೆ ತಮ್ಮವರೊಂದಿಗೇ ಉಳಿದುಕೊಳ್ಳುವ ಸಹೃದಯತೆ ಅವರಲ್ಲಿತ್ತು.

        ಕಲೆ ತನಗೆ ಪುನರುತ್ಥಾನವನ್ನು ಬಯಸಿದಾಗಲೆಲ್ಲ ಪ್ರತಿಭಾವಂತ ಕಲಾವಿದರನ್ನು ತಾನೇ ರೂಪಿಸುತ್ತದೆ. ಕಳೆದ ನೂರು ವರ್ಷಗಳಲ್ಲಿ ಅಂಥ ಅಸಾಧಾರಣ ಕಲಾವಿದರು ಮೂಡಿಬಂದಿದ್ದಾರೆ. ಕಥಕ್‌ನಲ್ಲಿ ಬಿರ್ಜು ಮಹಾರಾಜ್‌, ಒಡಿಸ್ಸಿಯಲ್ಲಿ ಕೇಲು ಚರಣ ಮಹಾಪಾತ್ರ , ಕೂಚಿಪುಡಿಯಲ್ಲಿ  ವೆಂಪಟಿ ಚಿನ್ನ ಸತ್ಯಂ...

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus