Thursday, May 23, 2013
Last Updated: 1:03:06 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಿಯಲ್‌ ಎಸ್ಟೇಟ್‌
    • ಚುನಾವಣಾ ಪ್ರಚಾರಕ್ಕೆ ಕಾಳಧನ
      • Udayavani | Aug 05, 2012

        ಹೊಸದಿಲ್ಲಿ : ಅಕ್ರಮವಾಗಿ ಗಳಿಸಿದ ಹಣವನ್ನು ಭಾರತದಲ್ಲಿ ರಿಯಲ್‌ ಎಸ್ಟೇಟ್‌ ಮತ್ತು ಚುನಾವಣಾ ಪ್ರಚಾರ ಸಹಿತ ವಿವಿಧ ದಾರಿಗಳ ಮೂಲಕ ಚಲಾವಣೆ ಮಾಡಲಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವರದಿಯೊಂದು ತಿಳಿಸಿದೆ.

        ಬ್ರಹ್ಮಾಂಡ ಭ್ರಷ್ಟಾಚಾರ ಕಾಳಧನ ಸೃಷ್ಟಿಗೆ ಮತ್ತು ಬಚ್ಚಿಡಲು ನೆರವಾಗುತ್ತದೆ. ರಿಯಲ್‌ ಎಸ್ಟೇಟ್‌, ಶೈಕ್ಷಣಿಕ ಕಾರ್ಯಕ್ರಮಗಳು, ಸಮಾಜ ಸೇವೆ ಮತ್ತು ಚುನಾವಣೆ ಪ್ರಚಾರ ಮೂಲಕ ಈ ಕಾಳಧನ ಚಲಾವಣೆಗೆ ಬರುತ್ತದೆ. ಬಂಡವಾಳ ನಿಯಂತ್ರಣದಿಂದ ಪಾರಾಗುವ ಸಲುವಾಗಿ ಕಂಪೆನಿಗಳು ವ್ಯವಹಾರ ಆಧಾರಿತ ಹಣ ಚಲುವೆ ಮಾಡುತ್ತಿವೆ ಎಂದು ಅಂತಾರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಕಾರ್ಯತಂತ್ರ ವರದಿ-2012ರಲ್ಲಿ ಹೇಳಲಾಗಿದೆ.

        2011ರ ಕುರಿತಾಗಿರುವ ವರದಿಯನ್ನು ಕಳೆದ ಮಾರ್ಚ್‌ನಲ್ಲಿ ಪ್ರಕಟಿಸಲಾಗಿದೆ. ಭಾರತವನ್ನು ದೇಶೀಯ ಮತ್ತು ವಿದೇಶಿ ಉಗ್ರರು ಗುರಿಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ವರದಿಯಲ್ಲಿದೆ. ಅಂತೆಯೇ ಎಪ್ರಿಲ್‌ 2010ರಿಂದ ಮಾರ್ಚ್‌ 2011ರ ನಡುವಣ 86 ಲಕ್ಷ ಉಗ್ರ ನಿಗ್ರಹ ಹಣಕಾಸು ಮತ್ತು 20,698 ಶಂಕಿತ ವಹಿವಾಟು ವರದಿಯ ಉಲ್ಲೇಖವಿದೆ.

        ಉತ್ತಮವಾಗಿ ಅಭಿವೃದ್ಧಿ ಹೊಂದಿರುವ ಔಪಚಾರಿಕ ಮತ್ತು ಅನೌಪಚಾರಿಕ ಹಣಕಾಸು ವ್ಯವಸ್ಥೆಯನ್ನೊಳಗೊಂಡಿರುವ ಭಾರತ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿರುವ ಆರ್ಥಿಕತೆಯ ಪ್ರಾದೇಶಿಕ ಹಣಕಾಸು ಕೇಂದ್ರ. ಭಾರತದ ವಿಶಾಲ ಅನೌಪಚಾರಿಕ ಆರ್ಥಿಕತೆ, ಹಣ ವರ್ಗಾವಣೆ ವ್ಯವಸ್ಥೆ, ಅಭದ್ರ ಗಡಿಗಳು, ವ್ಯಾಪಕ ಭ್ರಷ್ಟಾಚಾರ ಮತ್ತು ಜಟಿಲ ತೆರಿಗೆ ಹಾಗೂ ಕರೆನ್ಸಿ ನಿಯಂತ್ರಣ ವ್ಯವಸ್ಥೆ ಆರ್ಥಿಕ ಅಪರಾಧಗಳಿಗೆ, ಹಣ ಚಲುವೆ ಮತ್ತು ಉಗ್ರರ ಹಣಕಾಸು ನೆರವಿಗೆ ದೊಡ್ಡ ಮಟ್ಟದಲ್ಲಿ ಯೋಗದಾನ ನೀಡುತ್ತಿವೆ ಎಂದು ವರದಿ ಹೇಳಿದೆ.

        ತೆರಿಗೆ ಕಳ್ಳತನ ಮತ್ತು ಆರ್ಥಿಕ ಅಪರಾಧಗಳಿಂದ ಸಿಗುವ ಗಳಿಕೆ ಹಣ ಚಲುವೆ ಮಾಡುವವರ ಮುಖ್ಯ ಮೂಲಗಳು. ಇದರ ಜತೆಗೆ ಮಾದಕವಸ್ತು ಸಾಗಾಟ ಮತ್ತು ಮಾನವ ಕಳ್ಳ ಸಾಗಾಟ, ಅಂತಾರಾಷ್ಟ್ರೀಯ ವ್ಯವಸ್ಥಿತ ಅಪರಾಧ, ಅಕ್ರಮ ವ್ಯವಹಾರ ಮತ್ತು ಭ್ರಷ್ಟಾಚಾರವೂ ಹಣ ಚಲುವೆಯ ಮೂಲಗಳು ಎಂದು ವರದಿ ತಿಳಿಸಿದೆ.

        ಭಾರತದ ಹೆರಾಯ್ನ ಸಾಗಾಟದಾರರ ಲಾಭದ ಹಣ ಬ್ಯಾಂಕ್‌ ಖಾತೆಗಳು, ಹವಾಲ ಜಾಲ ಮತ್ತು ಹಣ ವರ್ಗಾವಣೆ ಕಂಪೆನಿಗಳ ಮೂಲಕ ಮರಳಿ ಭಾರತಕ್ಕೆ ಬರುತ್ತಿದೆ. ದೇಶದೊಳಗಿರುವ ಹಲವು ಚಿಕ್ಕಪುಟ್ಟ ಸ್ವತಂತ್ರ ಭಯೋತ್ಪಾದಕ ಸಂಘಟನೆಗಳು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆಗೆ ಸಂಬಂಧ ಇರಿಸಿಕೊಂಡಿವೆ ಎಂದು ವರದಿ ಬೆಟ್ಟು ಮಾಡಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus