ಹೊಸದಿಲ್ಲಿ : ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೀನಾಯ ಹಿನ್ನಡೆ ಅನುಭವಿಸಲಿದೆ ಹಾಗೂ ಅದರ ಸ್ಥಾನಗಳ ಸಂಖ್ಯೆ ಎರಡಂಕೆಗೆ ಇಳಿಯಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಆಡ್ವಾಣಿ ಹೇಳಿದ್ದಾರೆ.2014ರ ಲೋಕಸಭಾ ಚುನಾವಣೆಯಲ್ಲಿ 1952ರಿಂದೀಚೆಗಿನ ಮಹಾ ಸೋಲಿಗೆ ಕಾಂಗ್ರೆಸ್ ಗುರಿಯಾದರೂ ಆಶ್ಚರ್ಯ ಪಡಬೇಕಿಲ್ಲ ಎಂದವರು ಹೇಳಿದ್ದಾರೆ.ಮುಂದಿನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಾಲಿಗೆ 1952ರಿಂದೀಚೆಗೆ ಅತ್ಯಂತ ಹೀನಾಯವಾಗಿದ್ದರೆ ನನಗೆ ಆಶ್ಚರ್ಯವಾಗಲಿಕ್ಕಿಲ್ಲ. ಇದು ಕಾಂಗ್ರೆಸ್‌ನ ಗಳಿಕೆ ನೂರಕ್ಕಿಂತ ಕಡಿಮೆಯಾದ ಅಥವಾ ಎರಡಂಕೆಗೆ ಇಳಿದ ಮೊದಲ ಫಲಿತಾಂಶವಾಗಬಹುದು ಎಂದು ಬ್ಲಾಗ್‌ನಲ್ಲಿ ಆಡ್ವಾಣಿ ಬರೆದಿದ್ದಾರೆ.ಕರ್ನಾಟಕದ ಗೊಂದಲಗಳಿಂದಾಗಿ ಬಿಜೆಪಿ ಪ್ರತಿಷ್ಠೆಗೆ ಧಕ್ಕೆಯಾಗಿದ್ದರೂ ಕಾಂಗ್ರೆಸ್‌ಗೆ ಆಗುವ ನಷ್ಟ ಬಿಜೆಪಿ ಪಾಲಿಗೆ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಸಮೀಕ್ಷೆಗಳಿಂದ ತಿಳಿದು ಬಂದಿದೆ ಎಂದವರು ಹೇಳಿದ್ದಾರೆ.ಆಡ್ವಾಣಿ ಬ್ಲಾಗ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ರಾಜೀವ್ ಶುಕ್ಲ , ಅನ್ಯ ರಾಜಕೀಯ ಪಕ್ಷಗಳ ಬಗ್ಗೆ ನಾಯಕರು ಹೇಳಿಕೆ ನೀಡುವ ಅಗತ್ಯವಿಲ್ಲ. ಅವರು ತಮ್ಮ ಪಕ್ಷದ ಪರಿಸ್ಥಿತಿಯನ್ನು ನೋಡಿಕೊಂಡರೆ ಸಾಕು. ಇತಿಹಾಸ ಪುನರಾವರ್ತನೆಯಾಗಲಿದೆ ಹಾಗೂ ಜನರು ಬಿಜೆಪಿಯ ಆಕಾಂಕ್ಷೆಗಳಿಗೆ ತಣ್ಣೀರು ಸುರಿಯಲಿದ್ದಾರೆ ಎಂದಿದ್ದಾರೆ.ಕಾಂಗ್ರೆಸ್‌ನ ಗಾಂಧಿ ಪರಿವಾರದ ಭದ್ರಕೋಟೆಗಳಾಗಿರುವ ರಾಯ್‌ಬರೇಲಿ ಮತ್ತು ಅಮೇಠಿಯನ್ನೊಳಗೊಂಡಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶನ್ನು ಉದಾಹರಿಸಿ ಆಡ್ವಾಣಿ ಕಾಂಗ್ರೆಸ್‌ನ ಅವನತಿಯ ಭವಿಷ್ಯ ನುಡಿದಿದ್ದಾರೆ.ಇದೇ ವೇಳೆ ಅವರು ತೃತೀಯ ರಂಗ ಸರಕಾರ ರಚಿಸುವ ಸಾಧ್ಯತೆಯನ್ನು ನಿರಾಕರಿಸಿದ್ದಾರೆ. ಕಳೆದ ಸುಮಾರು ಎರಡೂವರೆ ದಶಕದ ರಾಜಕೀಯ ಚಿತ್ರಣವನ್ನು ಅವಲೋಕಿಸಿದರೆ ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲವಿಲ್ಲದೆ ಯಾವ ಪಕ್ಷವೂ ಸರಕಾರ ರಚಿಸುವುದು ಅಸಾಧ್ಯ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಎರಡೂ ಪಕ್ಷಗಳ ಬೆಂಬಲವನ್ನು ಹೊಂದಿರುವ ಕಾಂಗ್ರೆಸೇತರ ಮತ್ತು ಬಿಜೆಪಿಯೇತರ ಪ್ರಧಾನಮಂತ್ರಿ ಆಗುವ ಸಾಧ್ಯತೆಯಿರಬಹುದಾದರೂ ಇಂತಹ ಸರಕಾರ ಸ್ಥಿರವಾಗಿರದು ಎಂದಿದ್ದಾರೆ.