ಹೊಸದಿಲ್ಲಿ : ಬೆಲೆಯೇರಿಕೆ, ಕುಂಠಿತಗೊಂಡ ಆರ್ಥಿಕ ಅಭಿವೃದ್ಧಿ , ಅಸ್ಸಾಂ ಹಿಂಸಾಚಾರದಂತಹ ವೈವಿಧ್ಯಮಯ ಅಸ್ತ್ರಗಳು ವಿಪಕ್ಷದ ಬತ್ತಳಿಕೆಯಲ್ಲಿರುವುದರಿಂದ ಬುಧವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನ ಕಾವೇರಲಿರುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ.ಕಳೆದ ಎಂಟು ವರ್ಷಗಳಿಂದ ಸರಕಾರದ ಸಂಕಟಗಳನ್ನು ನಿವಾರಿಸುತ್ತಿದ್ದ ಪ್ರಣವ್ ಮುಖರ್ಜಿ ನಿರ್ಗಮನದಿಂದ ಖಾಲಿಯಾಗಿದ್ದ ಲೋಕಸಭೆಯ ನಾಯಕನ ಸ್ಥಾನಕ್ಕೆ ಬಂದಿರುವ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಪಾಲಿಗೆ ತಿಂಗಳು ಪೂರ್ತಿ ನಡೆಯಲಿರುವ ಅಧಿವೇಶನ ಅಗ್ನಿಪರೀಕ್ಷೆಯಾಗಲಿದೆ.ದೇಶಕ್ಕೆ ಅಂಟಿದ ಕಳಂಕ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬಣ್ಣಿಸಿರುವ ಅಸ್ಸಾಂನ ಕೋಮುಗಲಭೆ ಮತ್ತು ಅಮರನಾಥ ತೀರ್ಥ ಯಾತ್ರಿಕರ ಸಾವು ಕಾಂಗ್ರೆಸ್ ಮತ್ತು ವಿಪಕ್ಷದ ನಡುವೆ ಮಾತಿನ ಸಮರಕ್ಕೆ ಕಾರಣವಾಗಲಿದೆ.ತಮಿಳುನಾಡಿನಲ್ಲಿ ಇತ್ತೀಚೆಗೆ ರೈಲಿಗೆ ಬೆಂಕಿ ಹತ್ತಿಕೊಂಡಿರುವ ಘಟನೆ ಸಹಿತ ಕಳೆದ ಕೆಲವು ಸಮಯದಿಂದ ಸಂಭವಿಸಿರುವ ರೈಲು ಅಪಘಾತಗಳು, ಪುಣೆಯ ಸರಣಿ ಬಾಂಬ್ ಸ್ಫೋಟ ವಿಪಕ್ಷ ಬತ್ತಳಿಕೆಯಲ್ಲಿರುವ ಇತರ ಅಸ್ತ್ರಗಳು.ದೇಶದ ಕೆಲವು ಭಾಗದಲ್ಲಿ ಮಳೆ ಕೈಕೊಟ್ಟು ಬರದ ಕರಾಳ ಛಾಯೆ ಆವರಿಸಿರುವುದು ಕೂಡ ಚರ್ಚೆಗೆ ಬರಲಿದೆ. ಎಡಪಕ್ಷಗಳು ಆಹಾರ ಭದ್ರತಾ ಮಸೂದೆ, ಛತ್ತೀಸ್‌ಗಢದ ಆದಿವಾಸಿಗಳ ಹತ್ಯೆ ಮತ್ತು ಮಣೇಸರ್‌ನ ಮಾರುತಿ ಸ್ಥಾವರದ ಹಿಂಸಾಚಾರಗಳನ್ನು ಹಿಡಿದುಕೊಂಡು ಸರಕಾರದ ಮೇಲೆ ದಾಳಿ ಮಾಡಲು ಸಿದ್ಧವಾಗಿವೆ.